logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rajasthan Exit Polls: ಅಶೋಕ್‌ ಗೆಹ್ಲೋಟ್‌ ಕೈತಪ್ಪಲಿದೆಯಂತೆ ರಾಜಸ್ಥಾನ; ಭಗ್ನವಾಗಲಿದೆಯೇ ಐದನೇ ಬಾರಿ ಮುಖ್ಯಮಂತ್ರಿಯಾಗುವ ಕನಸು

Rajasthan Exit Polls: ಅಶೋಕ್‌ ಗೆಹ್ಲೋಟ್‌ ಕೈತಪ್ಪಲಿದೆಯಂತೆ ರಾಜಸ್ಥಾನ; ಭಗ್ನವಾಗಲಿದೆಯೇ ಐದನೇ ಬಾರಿ ಮುಖ್ಯಮಂತ್ರಿಯಾಗುವ ಕನಸು

Praveen Chandra B HT Kannada

Nov 30, 2023 08:38 PM IST

google News

ಅಶೋಕ್‌ ಗೆಹ್ಲೋಟ್‌

    • Rajasthan Exit Polls Result: ಈ ಬಾರಿ ಮತ್ತೆ ರಾಜಸ್ಥಾನದ ಆಡಳಿತ ನಡೆಸುವ ಅಶೋಕ್‌ ಗೆಹ್ಲೋಟ್‌ ಕನಸು ಭಗ್ನವಾಗಲಿದೆಯೇ? ಹೌದು ಎನ್ನುತ್ತಿವೆ 9ರಲ್ಲಿ ಎಂಟು ಚುನಾವಣಾ ಮತಗಟ್ಟೆ ಸಮೀಕ್ಷೆಗಳು. ಈ ಬಾರಿ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇರುವುದಾಗಿ ಬಹುತೇಕ ಸಮೀಕ್ಷೆಗಳಿಂದ ತಿಳಿದುಬಂದಿದೆ.
ಅಶೋಕ್‌ ಗೆಹ್ಲೋಟ್‌
ಅಶೋಕ್‌ ಗೆಹ್ಲೋಟ್‌ (HT_PRINT)

ಬೆಂಗಳೂರು: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಮತ್ತೆ ರಜಪೂತರು ಆಳಿದ ನಾಡಿನ ಚುಕ್ಕಾಣಿ ಹಿಡಿಯುವ ಕನಸಿನಲ್ಲಿದ್ದಾರೆ. ಆದರೆ, ಇಂದು ಪ್ರಕಟಗೊಂಡ ಬಹುತೇಕ ಚುನಾವಣಾ ಮತಗಟ್ಟೆ ಸಮೀಕ್ಷೆಗಳು ಅವರ ಕನಸನ್ನು ಹುಸಿಗೊಳಿಸಿವೆ. ಒಂಬತ್ತರಲ್ಲಿ 8 ಸಮೀಕ್ಷೆಗಳು ಈ ಬಾರಿ ಅಶೋಕ್‌ ಗೆಹ್ಲೋಟ್‌ ಅಧಿಕಾರಕ್ಕೆ ಬರೋದು ಡೌಟ್‌ ಎಂಬ ಸೂಚನೆ ನೀಡಿವೆ.

ಇಂದು ಬಿಡುಗಡೆಯಾದ ಚುನಾವಣಾ ಮತಗಟ್ಟೆ ಫಲಿತಾಂಶಗಳನ್ನು ನೋಡಿದರೆ ರಾಜಸ್ಥಾನದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ. ಕಳೆದ ಮೂರು ದಶಕಗಳಿಂದ ಪ್ರತಿಯೊಂದು ಚುನಾವಣೆಯಲ್ಲೂ ಬಿಜೆಪಿಯನ್ನು ಹೊರಗಿಟ್ಟಿದ್ದ ಕಾಂಗ್ರೆಸ್‌ ಈ ಬಾರಿ ಸೋಲುವ ಸಾಧ್ಯತೆಯಿದೆ. ರಾಜಸ್ಥಾನದಲ್ಲಿ ನವೆಂಬರ್‌ 25ರಂದು ಒಂದೇ ಹಂತದಲ್ಲಿ ಮತದಾನವಾಗಿದೆ. ಇಲ್ಲಿಯವರೆಗೆ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರುವ ಅಶೋಕ್‌ ಗೆಹ್ಲೋಟ್‌ಗೆ ಈ ಬಾರಿ ಆತಂಕವಿದೆ. ಒಟ್ಟು 9 ಮತಗಟ್ಟೆ ಸಮೀಕ್ಷೆಗಳಲ್ಲಿ 8 ಸಮೀಕ್ಷೆಗಳು ಅಶೋಕ್‌ ಗೆಹ್ಲೋಟ್‌ ವಿರುದ್ಧವಾಗಿವೆ.

ಇಂದಿನ ಮತಗಟ್ಟೆ ಸಮೀಕ್ಷೆಗಳಲ್ಲಿ ರಿಪಬ್ಲಿಕ್‌ ಟಿವಿ-ಮ್ಯಾಟ್ರಿಜ್‌ ಪ್ರಕಾರ ಬಿಜೆಪಿಯು ರಾಜಸ್ಥಾನದಲ್ಲಿ 115-130 ಸೀಟುಗಳನ್ನು ಗೆಲ್ಲಲಿದೆ ಎಂದಿದೆ. ಇದೇ ಸಮಯದಲ್ಲಿ ಟೈಮ್ಸ್‌ ನೌ-ಇಟಿಜಿ ಮತಗಟ್ಟೆ ಸಮೀಕ್ಷೆಯ ಪ್ರಕಾರ ಬಿಜೆಪಿಯು 108-128 ಸ್ಥಾನಗಳನ್ನು ಗೆಲ್ಲಲಿದೆ. ರಾಜಸ್ಥಾನದಲ್ಲಿ 200ರಲ್ಲಿ 199 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಕಾಂಗ್ರೆಸ್‌ ಮುಖಂಡ ಮತ್ತು ಎಂಎಲ್‌ಎ ಗುರ್‌ಪ್ರೀತ್‌ ಸಿಂಗ್‌ ಕೂನಾರ್‌ ಅವರ ನಿಧನದ ಹಿನ್ನಲೆಯಲ್ಲಿ ಕರನ್‌ಪುರ್‌ ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆದಿಲ್ಲ.

ಜನ್ ಕಿ ಬಾತ್, ಪಿ-ಮಾರ್ಕ್ ಮತ್ತು TV9 ಭಾರತ್ ವರ್ಷ್-ಪೋಲ್‌ಸ್ಟ್ರಾಟ್ ಮುಂತಾದ ಸಮೀಕ್ಷೆಗಳೂ ಬಿಜೆಪಿ ಪರವಾಗಿಯೇ ಇವೆ. ಇವೆಲ್ಲವೂ ಬಿಜೆಪಿಗೆ ಕನಿಷ್ಠ 100 ಸ್ಥಾನಗಳನ್ನು ಗೆಲ್ಲುವ ಫಲಿತಾಂಶವನ್ನು ನೀಡಿವೆ. ಇವುಗಳಲ್ಲಿ ಜನ್‌ ಕೀ ಬಾತ್‌ ಮತ್ತು ಪಿ ಮಾರ್ಕ್‌ ಪ್ರಕಾರ ಬಿಜೆಪಿಯು 120ಕ್ಕಿಂತ ಹೆಚ್ಚಿನ ಸೀಟುಗಳನ್ನು ತನ್ನದಾಗಿಸಿಕೊಳ್ಳಲಿದೆ. ಎಬಿಪಿ ನ್ಯೂಸ್-ಸಿ ವೋಟರ್ ಮತ್ತು ದೈನಿಕ್ ಭಾಸ್ಕರ್ ಕೂಡ ಬಿಜೆಪಿಗೆ ದೊಡ್ಡ ಗೆಲುವು ದೊರಕುವ ಸೂಚನೆ ನೀಡಿವೆ.

ಎಬಿಪಿ ನ್ಯೂಸ್‌ ಕೂಡ ಬಿಜೆಪಿ ಹೆಚ್ಚು ಸ್ಥಾನಗೆಲ್ಲುವ ಸೂಚನೆ ನೀಡಿದೆ. ಎಬಿಪಿ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ 71-91 ಸೀಟುಗಳನ್ನು ಗೆಲ್ಲಬಹುದು. ಬಿಜೆಪಿ 94 ರಿಂದ 114 ಸ್ಥಾನಗಳನ್ನು ಗೆಲ್ಲಬಹುದು. ದೈನಿಕ್ ಭಾಸ್ಕರ್ ಪ್ರಕಾರ ಬಿಜೆಪಿ 98 ರಿಂದ 105 ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್‌ 95 ಸೀಟುಗಳಿಗಿಂತ ಹೆಚ್ಚು ಸ್ಥಾನ ಪಡೆಯುವುದು ಡೌಟ್‌ ಎಂದಿದೆ.

ಸದ್ಯಕ್ಕೆ ಕಾಂಗ್ರೆಸ್‌ಗೆ ಖುಷಿ ಪಡಲು ಇರುವ ಎರಡೇ ಎರಡು ಸಮೀಕ್ಷೆಗಳೆಂದರೆ ಇಂಡಿಯಾ ಟುಡೇ-ಮೈ ಆಕ್ಸಿಸ್ ಮತ್ತು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಮಾತ್ರ. ಇವುಗಳ ಪ್ರಕಾರ ಬಿಜೆಪಿ 100 ಸ್ಥಾನಗಳನ್ನು ಗೆಲ್ಲಬಹುದು. ಆಡಳಿತರೂಢ ಕಾಂಗ್ರೆಸ್‌ ಪಕ್ಷವು 86-106 ಸ್ಥಾನ ಗೆಲ್ಲಬಹುದು. ಇಂಡಿಯಾ ಟುಡೇ ಪ್ರಕಾರ ಕಾಂಗ್ರೆಸ್‌ ಪಕ್ಷವು 94-104 ಸ್ಥಾನಗಳನ್ನು ಗೆಲ್ಲಬಹುದು. ಬಿಜೆಪಿ 80-90 ಸ್ಥಾನಗಳನ್ನು ಗೆಲ್ಲಬಹುದು. ಒಟ್ಟಾರೆ 9 ಸಮೀಕ್ಷೆಗಳಲ್ಲಿ 8ರಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಹೀಗಾಗಿ ಅಶೋಕ್‌ ಗೆಹ್ಲೋಟ್‌ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಸಂಶಯ ಎನ್ನಲಾಗುತ್ತಿದೆ.

2018ರ ಚುನಾವಣೆಯಲ್ಲಿ ಬಹುಮತ ಪಡೆಯಲು ಕಾಂಗ್ರೆಸ್‌ಗೆ ಬಹುಮತ ಪಡೆಯಲು ಒಂದು ಸೀಟ್‌ ಕಡಿಮೆಯಾಗಿತ್ತು. ಕಾಂಗ್ರೆಸ್‌ 100 ಸೀಟುಗಳನ್ನು ಗೆದ್ದಿತ್ತು. ಬಿಜೆಪಿಗೆ 73 ಸೀಟುಗಳನ್ನು ಗೆಲ್ಲಲು ಸಾಧ್ಯವಾಗಿತ್ತು. 2013ರಲ್ಲಿ ಇದೇ ರಾಜಸ್ಥಾನದಲ್ಲಿ ಬಿಜೆಪಿಯು 163 ಸೀಟುಗಳನ್ನು ಪಡೆದಿತ್ತು. ರಾಜಸ್ಥಾನದಲ್ಲಿ ಒಟ್ಟು 5.25 ಕೋಟಿ ಮತದಾರರು ಇದ್ದಾರೆ. ಸುಮಾರು 1862 ಸ್ಪರ್ಧಿಗಳು ಕಣದಲ್ಲಿದ್ದರು. ಇವರಲ್ಲಿ 1.71 ಕೋಟಿ ಮತದಾರರು 18-30 ವರ್ಷದವರು. 22.61 ಲಕ್ಷ ಹೊಸ ಮತದಾರರು 18-19 ವಯಸ್ಸಿನವರು ಎನ್ನುವುದನ್ನು ಗಮನಿಸಬಹುದು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ