RBI Digital Rupee: ನಾಳೆಯಿಂದ ಬೆಂಗಳೂರು ಸೇರಿದಂತೆ ನಾಲ್ಕು ನಗರಗಳಲ್ಲಿ ರಿಟೇಲ್ ಡಿಜಿಟಲ್ ರೂಪಾಯಿ ಆರಂಭ, ಏನಿದು ಹೊಸ ಕರೆನ್ಸಿ?
Nov 30, 2022 01:30 PM IST
RBI Digital Rupee: ನಾಳೆಯಿಂದ ಬೆಂಗಳೂರು ಸೇರಿದಂತೆ ನಾಲ್ಕು ನಗರಗಳಲ್ಲಿ ರಿಟೇಲ್ ಡಿಜಿಟಲ್ ರೂಪಾಯಿ ಆರಂಭ, ಏನಿದು ಹೊಸ ಕರೆನ್ಸಿ?
- RBI digital rupee pilot: ಬೆಂಗಳೂರು, ಮುಂಬಯಿ, ನವದೆಹಲಿ, ಭುವನೇಶ್ವರ ನಗರಗಳಲ್ಲಿ ನಾಳೆ ಈ ರಿಟೇಲ್ ಟಿಜಿಟಲ್ ರೂಪಾಯಿಗೆ ಆರ್‌ಬಿಐ ಪ್ರಾಯೋಗಿಕವಾಗಿ ಚಾಲನೆ ನೀಡಲಿದೆ.
ಬೆಂಗಳೂರು: ಉದ್ಯಾನನಗರಿ ಬೆಂಗಳೂರು ಸೇರಿದಂತೆ ನಾಲ್ಕು ನಗರಗಳಲ್ಲಿ ನಾಳೆಯಿಂದ ಭಾರತದ ಅಧಿಕೃತ ಡಿಜಿಟಲ್ ರೂಪಾಯಿಯನ್ನು ಪ್ರಾಯೋಗಿಕವಾಗಿ ಚಲಾವಣೆಗೆ ತರಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಉದ್ದೇಶಿಸಿದೆ. ಬೆಂಗಳೂರು, ಮುಂಬಯಿ, ನವದೆಹಲಿ, ಭುವನೇಶ್ವರ ನಗರಗಳಲ್ಲಿ ನಾಳೆ ಈ ರಿಟೇಲ್ ಟಿಜಿಟಲ್ ರೂಪಾಯಿಗೆ ಆರ್‌ಬಿಐ ಪ್ರಾಯೋಗಿಕವಾಗಿ ಚಾಲನೆ ನೀಡಲಿದೆ. ಮುಂದಿನ ದಿನಗಳಲ್ಲಿ ಇತರೆ ನಗರಗಳಿಗೂ ವಿಸ್ತರಿಸಲಾಗುವುದು ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.
ಈಗಾಗಲೇ ಸಗಟು ಮಟ್ಟದಲ್ಲಿ ಡಿಜಿಟಲ್ ಕರೆನ್ಸಿಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ನಾಳೆಯಿಂದ ರಿಟೇಲ್ ವಲಯದಲ್ಲಿಯೂ ಡಿಜಿಟಲ್ ಕರೆನ್ಸಿಯನ್ನು ಚಲಾವಣೆಗೆ ತರಲು ಉದ್ದೇಶಿಸಲಾಗಿದೆ. ಖಾಸಗಿ ಕ್ರಿಪ್ಟೊ ಕರೆನ್ಸಿಗೆ ಭಾರತದಲ್ಲಿ ನಿರ್ಬಂಧ ವಿಧಿಸಲಾಗಿದೆ. ಆದರೆ, ಭಾರತದ ಡಿಜಿಟಲ್ ಕರೆನ್ಸಿಯು ಕಾನೂನುಬದ್ಧ, ವಿಶ್ವಾಸಾರ್ಹ, ಸುರಕ್ಷಿತ ವಹಿವಾಟಿನ ಭರವಸೆ ನೀಡಿದೆ.
ಡಿಜಿಟಲ್ ರೂಪಾಯಿಯು ಗ್ರಾಹಕರು ಮತ್ತು ವ್ಯಾಪಾರಿಗಳ ಆಪ್ತ ಬಳಕೆದಾರರ ಗುಂಪು(CUG)ಗಳಲ್ಲಿ ಆಯ್ದ ಕಡೆಗಳಲ್ಲಿ ಆರ್‌ಬಿಐ ಪ್ರಾಯೋಗಿಕ ಮಾದರಿಯಲ್ಲಿ ಆರಂಭಿಸುತ್ತಿದೆ. ಇದು ಡಿಜಿಟಲ್ ಟೋಕನ್ ಮಾದರಿಯಲ್ಲಿರಲಿದೆ.
ಏನಿದು ಡಿಜಿಟಲ್ ರೂಪಾಯಿ?
ಕಾಗದದ ಕರೆನ್ಸಿ ಮತ್ತು ನಾಣ್ಯಗಳ ಮಾದರಿಯಲ್ಲಿ ಅದೇ ಮುಖಬೆಲೆಯಲ್ಲಿ ಡಿಜಿಟಲ್ ರೂಪಾಯಿಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. ಮಧ್ಯವರ್ತಿ ಬ್ಯಾಂಕುಗಳ ಮೂಲಕ ಇದನ್ನು ವಿತರಣೆ ಮಾಡಲಾಗುವುದು. ಇದರಲ್ಲಿ ಭಾಗಿಯಾಗುವ ಬ್ಯಾಂಕುಗಳು ಮತ್ತು ಮೊಬೈಲ್ ಫೋನ್ ಗಳು ಮತ್ತು ಸಾಧನಗಳಲ್ಲಿ ನೀಡುವ ಡಿಜಿಟಲ್ ವ್ಯಾಲೆಟ್ ಮೂಲಕ ಇಆರ್ ಎಸ್-ಆರ್ ನ ವಹಿವಾಟು ನಡೆಯುತ್ತದೆ.
ಯಾವ ಬ್ಯಾಂಕ್‌ಗಳಲ್ಲಿ ಲಭ್ಯ?
ಆರ್‌ಬಿಐ ಮೂಲಕ ಒಪ್ಪಂದ ಮಾಡಿಕೊಂಡ ನಾಲ್ಕು ಬ್ಯಾಂಕ್‌ಗಳ ಮೂಲಕ ಡಿಜಿಟಲ್ ರೂಪಾಯಿ ವಹಿವಾಟು ನಡೆಯಲಿದೆ. ಆರಂಭಿಕವಾಗಿ ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್, ಮತ್ತು ಐಡಿಎಫ್‌ಸಿ ಬ್ಯಾಂಕ್‌ಗಳು ಡಿಜಿಟಲ್ ರೂಪಾಯಿ ಸೇವೆ ನೀಡಲಿವೆ. ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್, ಎಚ್‌ಡಿಎಫ್‌ಸಿ, ಕೋಟಕ್ ಮಹೀಂದ್ರ ಬ್ಯಾಂಕ್‌ಗಳಲ್ಲಿ ಮುಂದಿನ ದಿನಗಳಲ್ಲಿ ಈ ಸೇವೆ ಲಭ್ಯವಿರಲಿದೆ.
ಡಿಜಿಟಲ್ ರೂಪಾಯಿ ಬಳಸುವುದು ಹೇಗೆ?
ಡಿಜಿಟಲ್ ರೂಪಾಯಿ ವ್ಯವಹಾರ ಸೌಲಭ್ಯ ಇರುವ ಬ್ಯಾಂಕ್‌ಗಳ ಡಿಜಿಟಲ್ ವ್ಯಾಲೆಟ್ ಮೂಲಕ ಇ-ರುಪೀ ಅಥವಾ ಡಿಜಿಟಲ್ ರೂಪಾಯಿ ಬಳಸಿ ವಹಿವಾಟು ನಡೆಸಬಹುದಾಗಿದೆ. ವ್ಯಕ್ತಿಯಿಂದ ವ್ಯಕ್ತಿಗೆ, ವ್ಯಕ್ತಿಯಿಂದ ವ್ಯಾಪಾರಿಗೆ ವಹಿವಾಟು ನಡೆಸಬಹುದು. ಕ್ಯೂಆರ್‌ಕೋಡ್ ಸ್ಕ್ಯಾನ್ ಮೂಲಕ ಡಿಜಿಟಲ್ ರೂಪಾಯಿ ಬಳಸಬಹುದು.
ಈಗಿನ ಯುಪಿಐ ಪಾವತಿಯಲ್ಲಿ ನಮ್ಮ ಬ್ಯಾಂಕ್ ಅಥವಾ ವ್ಯಾಲೆಟ್‌ನಲ್ಲಿರುವ ಹಣವು ಬಳಕೆಯಾದರೆ ಡಿಜಿಟಲ್ ರೂಪಾಯಿಯಲ್ಲಿ ನೀವು ಹೊಂದಿರುವ ಡಿಜಿಟಲ್ ಕರೆನ್ಸಿ ಮೂಲಕ ವಹಿವಾಟು ನಡೆಯಲಿದೆ. ನೀವು ಹೊಂದಿರುವ ಡಿಜಿಟಲ್ ಕರೆನ್ಸಿಗೆ ಬ್ಯಾಂಕ್ ಯಾವುದೇ ಬಡ್ಡಿ ದೊರಕುವುದಿಲ್ಲ. ಆದರೆ, ವ್ಯಾಲೆಟ್‌ನಲ್ಲಿರುವ ವಿವಿಧ ಉಳಿತಾಯ ಖಾತೆಗಳಿಗೆ ಇದನ್ನು ವರ್ಗಾಯಿಸಬಹುದು ಎಂದು ಆರ್‌ಬಿಐ ತಿಳಿಸಿದೆ.