Ayodhya Temple: ಜನವರಿ 22ಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ, ಪ್ರಧಾನಿ ಮೋದಿ ಸ್ವೀಕರಿಸಿದರು ಆಮಂತ್ರಣ
Jan 19, 2024 11:11 AM IST
ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಅಧಿಕಾರಿಗಳಿಂದ ರಾಮಮಂದಿರದಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ಆಹ್ವಾನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ.
ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಕ್ಷಿಪ್ರವಾಗಿ ಸಾಗಿದ್ದು, 2024ರ ಜನವರಿ 22ರಂದು ಶ್ರೀ ರಾಮದೇವರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಿಗದಿಯಾಗಿದೆ. ಅಂದರೆ ರಾಮ ಮಂದಿರ ಉದ್ಘಾಟನೆ ಜನವರಿ 22ರಂದು ನಡೆಯಲಿದೆ. ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಪ್ರತಿನಿಧಿಗಳು ಇಂದು (ಅ.25) ಪ್ರಧಾನಿ ಮೋದಿ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ನವದೆಹಲಿ: ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆ 2024ರ ಜನವರಿ 22ರಂದು ನಡೆಯಲಿದೆ. ಈ ಶುಭ ಕಾರ್ಯಕ್ಕೆ ಸಂಬಂಧಿಸಿದ ಆಮಂತ್ರಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಅ.25) ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಪ್ರತಿನಿಧಿಗಳಿಂದ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಯೋಧ್ಯೆಯ ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಆಹ್ವಾನಿಸಿದೆ. ಪ್ರಧಾನಿಯವರು ಬಹಳ ಸಂತೋಷದಿಂದ ಆಹ್ವಾನ ಸ್ವೀಕರಿಸಿದರು. ಐತಿಹಾಸಿಕ ಕಾರ್ಯಕ್ರಮದ ಭಾಗವಾಗುವ ವಿಚಾರ ಪುಣ್ಯದಾಯಕ ಎಂದು ಹೇಳಿದ್ದಾಗಿ ಟ್ರಸ್ಟ್‌ನ ಜನರಲ್ ಸೆಕ್ರೆಟರಿ ಚಂಪತ್ ರೈ ತಿಳಿಸಿದರು.
"ಇಂದು ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಸದಸ್ಯರೊಂದಿಗೆ ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದೇವೆ. ಗರ್ಭಗೃಹದಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ಜನವರಿ 22 ರಂದು ಬರಬೇಕು ಎಂದು ನಾವು ಅವರನ್ನು (ಪಿಎಂ ಮೋದಿ) ಆಹ್ವಾನಿಸಿದ್ದೇವೆ. ಅವರು ನಮ್ಮ ಮನವಿಯನ್ನು ಸ್ವೀಕರಿಸಿದ್ದಾರೆ. ಜನವರಿ 22 ರಂದು 'ಪ್ರಾಣ ಪ್ರತಿಷ್ಠಾ' ದಿನಾಂಕವನ್ನು ದೃಢೀಕರಿಸಲಾಗಿದೆ" ಎಂದು ಚಂಪತ್ ರೈ ಹೇಳಿದರು.
ಕಾನೂನು ಹೋರಾಟದ ಗೆಲುವಿನ ಬಳಿಕ ನಿರ್ಮಾಣವಾಗುತ್ತಿದೆ ರಾಮಮಂದಿರ
ಸುದೀರ್ಘ ಕಾನೂನು ಹೋರಾಟದ ಗೆಲುವಿನ ನಂತರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಸುಪ್ರೀಂ ಕೋರ್ಟ್ 2019 ರಲ್ಲಿ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ಈ ದೇವಾಲಯವು ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಮುಖ ಚುನಾವಣಾ ಭರವಸೆಗಳಲ್ಲಿ ಒಂದಾಗಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ, ಸರ್ಕಾರವು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ' ಟ್ರಸ್ಟ್ ಅನ್ನು ರಚಿಸಿತು, ಇದು ದೇವಾಲಯದ ನಿರ್ಮಾಣದ ಬಗ್ಗೆ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.
ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುತ್ತಿರುವುದು ನನ್ನ ಅದೃಷ್ಟ ಎಂದ ಪ್ರಧಾನಿ ಮೋದಿ
“ಹೈಲ್ ಸಿಯಾ ರಾಮ್! ಇಂದು ಭಾವನಾತ್ಮಕ ದಿನ. ಇತ್ತೀಚೆಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕಾರಿಗಳು ನನ್ನನ್ನು ಭೇಟಿಯಾಗಲು ನನ್ನ ನಿವಾಸಕ್ಕೆ ಬಂದಿದ್ದರು. ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಅಯೋಧ್ಯೆಗೆ ಬರುವಂತೆ ಅವರು ನನ್ನನ್ನು ಆಹ್ವಾನಿಸಿದ್ದಾರೆ. ನಾನು ತುಂಬಾ ಪುಣ್ಯ ಮಾಡಿದ್ದೇನೆ. ನನ್ನ ಜೀವಿತಾವಧಿಯಲ್ಲಿ ನಾನು ಈ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುತ್ತಿರುವುದು ನನ್ನ ಅದೃಷ್ಟ, ”ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ಆಗಸ್ಟ್ 5 ರಂದು ದೇವಾಲಯದ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ನಿರ್ಮಾಣವು ತ್ವರಿತ ಗತಿಯಲ್ಲಿ ಸಾಗುತ್ತಿದೆ. 2024 ರ ಜನವರಿ 22 ರಂದು ದೇವಾಲಯದ ಗರ್ಭಗುಡಿಯಲ್ಲಿ ರಾಮ ಲಲ್ಲಾನ ವಿಗ್ರಹವನ್ನು ಸ್ಥಾಪಿಸಲಾಗುವುದು ಎಂದು ಎಎನ್‌ಐ ವರದಿ ವಿವರಿಸಿದೆ.