Border Dispute: ಗಡಿ ವಿವಾದ ಸಂಬಂಧ ನಾಳೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲಿರುವ ಸಿಎಂ ಶಿಂಧೆ.. ಏನದು?
Dec 26, 2022 09:17 PM IST
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ
- ಕರ್ನಾಟಕದ ವಿವಾದಿತ ಗಡಿ ಪ್ರದೇಶಗಳಲ್ಲಿ ವಾಸಿಸುವವರಿಗೆ ಒಗ್ಗಟ್ಟು ವ್ಯಕ್ತಪಡಿಸುವ ನಿರ್ಣಯವನ್ನು ನಾಳೆ (ಮಂಗಳವಾರ) ರಾಜ್ಯ ವಿಧಾನಸಭೆಯಲ್ಲಿ ಮಂಡಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ನವದೆಹಲಿ: ಕರ್ನಾಟಕದ ವಿವಾದಿತ ಗಡಿ ಪ್ರದೇಶಗಳಲ್ಲಿ ವಾಸಿಸುವವರಿಗೆ ಒಗ್ಗಟ್ಟು ವ್ಯಕ್ತಪಡಿಸುವ ನಿರ್ಣಯವನ್ನು ನಾಳೆ (ಮಂಗಳವಾರ) ರಾಜ್ಯ ವಿಧಾನಸಭೆಯಲ್ಲಿ ಮಂಡಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ರಾಷ್ಟ್ರ ರಾಜಧಾನಿಗೆ ತಮ್ಮ ಭೇಟಿಯನ್ನು ಟೀಕಿಸಿ, ಮರಾಠಿ ಮಾತನಾಡುವ ಕರ್ನಾಟಕದ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ವಿರುದ್ಧ ಕಿಡಿಕಾರಿದರು. ನಾವು ಇತರರಿಂದ ಯಾವುದೇ ಪಾಠಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಗಡಿ ಪ್ರದೇಶಗಳಲ್ಲಿ ವಾಸಿಸುವವರ ಜೊತೆ ನಾವು ದೃಢವಾಗಿ ನಿಲ್ಲುತ್ತೇವೆ. ಈ ಕುರಿತು ನಾಳೆ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸುತ್ತೇವೆ ಎಂದರು.
ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಕುರಿತು ನಿರ್ಣಯಕ್ಕೆ ವಿರೋಧ ಪಕ್ಷಗಳು ಒತ್ತಾಯಿಸಿದ ಸಮಯದಲ್ಲಿ ಶಿಂಧೆ ಅವರು ವೀರ್ ಬಾಲ್ ದಿವಸ್ ಆಚರಣೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿದ್ದರು.
ಯಾವುದೇ ತೀರ್ಪು ನೀಡುವ ಮೊದಲು ಠಾಕ್ರೆ ಅವರು ದೆಹಲಿಗೆ ಭೇಟಿ ನೀಡಿದ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು. ಗುರು ಗೋವಿಂದ್ ಸಿಂಗ್ ಅವರ ಮಕ್ಕಳಾದ ಜೋರಾವರ್ ಸಿಂಗ್ ಮತ್ತು ಫತೇ ಸಿಂಗ್ ಅವರ ತ್ಯಾಗವನ್ನು ಸ್ಮರಿಸಲು ಕೇಂದ್ರ ಸರ್ಕಾರ ಆಯೋಜಿಸಿರುವ ವೀರ್ ಬಾಲ್ ದಿವಸ್ ಆಚರಣೆಯಲ್ಲಿ ಭಾಗವಹಿಸಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಶಿಂಧೆ ಹೇಳಿದರು. ಹಿಂದಿನ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ಮಹಾರಾಷ್ಟ್ರದ ಕರ್ನಾಟಕದ ಗಡಿಯಲ್ಲಿರುವ ಹಳ್ಳಿಗಳಲ್ಲಿ ಕೆಲವು ಸರ್ಕಾರಿ ಯೋಜನೆಗಳನ್ನು ನಿಲ್ಲಿಸಿದೆ ಎಂದು ಹೇಳಿದ್ದಾರೆ.
'ಒಂದಿಂಚಿಗೋಸ್ಕರವೂ ಹೋರಾಡುತ್ತೇವೆ'
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗಡಿ ವಿವಾದದ ಕುರಿತು ಒಂದು ಅಥವಾ ಎರಡು ದಿನಗಳಲ್ಲಿ ನಿರ್ಣಯವನ್ನು ಮಂಡಿಸಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು. ನಾವು ಒಂದಿಂಚಿಗೋಸ್ಕರವೂ ಹೋರಾಡುತ್ತೇವೆ. ಕರ್ನಾಟಕದಲ್ಲಿರುವ ಮರಾಠಿ ಭಾಷಿಕ ಜನಸಂಖ್ಯೆಗೆ ನ್ಯಾಯ ದೊರಕಿಸಿಕೊಡಲು ನಾವು ಏನು ಬೇಕಾದರೂ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದ ಹಿತಾಸಕ್ತಿ ಕಾಪಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಗಡಿ ವಿವಾದದ ನಿರ್ಣಯವನ್ನು ಕರ್ನಾಟಕ ವಿಧಾನಸಭೆ ಡಿಸೆಂಬರ್ 22ರಂದು ಸರ್ವಾನುಮತದಿಂದ ಅಂಗೀಕರಿಸಿತು. ಕರ್ನಾಟಕದ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ಹಿತಾಸಕ್ತಿಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ವಿಷಯದಲ್ಲಿ ಕರ್ನಾಟಕದ ಜನರ ಮತ್ತು ಸದಸ್ಯರೆಲ್ಲರ ಭಾವನೆಯು ಒಂದೇ ಆಗಿದ್ದು, ಇದಕ್ಕೆ ಧಕ್ಕೆ ಆದಾಗ ಎಲ್ಲರೂ ಒಗ್ಗಟ್ಟಿನಿಂದ ರಾಜ್ಯದ ಹಿತಾಸಕ್ತಿ ಹಾಗೂ ರಕ್ಷಣೆಗೆ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಬದ್ಧರಿದ್ದೇವೆ ಎಂದು ಹಾಗೂ ಮಹಾರಾಷ್ಟ್ರದ ಜನತೆಯು ಅನಾವಶ್ಯಕವಾಗಿ ಸೃಷ್ಟಿಸಿರುವ ವಿವಾದವನ್ನು ಖಂಡಿಸಿ, ರಾಜ್ಯದ ಹಿತರಕ್ಷಣೆಗೆ ಕಟುಬದ್ಧರಾಗಿರುತ್ತೇವೆ ಎಂದ ನಿರ್ಣಯ ಇದಾಗಿತ್ತು.
ಬಹಳ ಹಿಂದಿನಿಂದಲೂ ಮರಾಠಿ ಮಾತನಾಡುವ ಜನರನ್ನು ಹೊಂದಿರುವ ಕರ್ನಾಟಕದ ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಕೆಲ ಪ್ರದೇಶಗಳು ತನ್ನದೆಂದು ಹೇಳಿಕೊಂಡು ಬರುತ್ತಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕೆಲವು ಗ್ರಾಮಗಳು ಮೂಲ ಸೌಕರ್ಯಗಳ ಕೊರತೆಯಿಂದಾಗಿ ಕರ್ನಾಟಕಕ್ಕೆ ಸೇರುವ ನಿರ್ಣಯವನ್ನು ಅಂಗೀಕರಿಸಿವೆ ಎಂದು ಕರ್ನಾಟಕದ ಮುಖ್ಯಮಂತ್ರಿ ಇತ್ತೀಚೆಗೆ ಹೇಳಿಕೊಂಡ ನಂತರ ದಶಕಗಳಷ್ಟು ಹಳೆಯದಾದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಎರಡೂ ಕಡೆ ಬಿಜೆಪಿ ಅಧಿಕಾರದಲ್ಲಿದೆ. ಆದರೆ ಮಹಾರಾಷ್ಟ್ರದಲ್ಲಿ ಬಿಜೆಪಿಯು ಶಿವಸೇನೆಯ ಶಿಂಧೆ ನೇತೃತ್ವದ ಬಣದೊಂದಿಗೆ ಮೈತ್ರಿ ಹೊಂದಿದೆ.
ವಿಭಾಗ