Retirement Age: ಸರ್ಕಾರಿ ಮೆಡಿಕಲ್ ಕಾಲೇಜು ಪ್ರೊಫೆಸರ್‌ಗಳಿಗೆ ಇನ್ನು 70ಕ್ಕೆ ನಿವೃತ್ತಿ!
Aug 20, 2022 10:24 AM IST
ನಿವೃತ್ತಿ ವಯಸ್ಸು (ಸಾಂದರ್ಭಿಕ ಚಿತ್ರ)
- Retirement Age: ವಿವಿಧ ರಾಜ್ಯಗಳಲ್ಲಿ ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸು ಏರಿಕೆ ಮಾಡುವ ಪ್ರಸ್ತಾವನೆ ಸದ್ಯ ಮುನ್ನೆಲೆಯಲ್ಲಿದೆ. ಅಸ್ಸಾಂನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಪ್ರೊಫೆಸರ್‌ಗಳು ಇನ್ನು 70ಕ್ಕೆ ನಿವೃತ್ತರಾಗಬಹುದು. ಹಾಗಾದರೆ, ಯಾವ್ಯಾವ ರಾಜ್ಯದಲ್ಲಿ ಸದ್ಯ ಈ ವಿಚಾರ ಚರ್ಚೆಯಲ್ಲಿದೆ. ಇಲ್ಲಿದೆ ಒಂದು ಕಿರುನೋಟ.
ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸು (Retirement Age) ಸದಾ ಚರ್ಚೆಯ ವಿಚಾರ. 55ರಿಂದ 58, 58ರಿಂದ 60, 60ರಿಂದ 65, 65ರಿಂದ 70 ಹೀಗೆ ನಿವೃತ್ತಿ ವಯೋಮಿತಿ ಏರುತ್ತಲೇ ಇದೆ. ಇಂತಹ ಪ್ರಸ್ತಾವನೆಗಳನ್ನು ಸರ್ಕಾರ ಅವಲೋಕಿಸಿ, ಅಂಗೀಕರಿಸುವ ವಿಚಾರಗಳು ಪದೇಪದೆ ಗಮನಸೆಳೆಯುತ್ತಿರುತ್ತದೆ. ಭಾರತ ಯುವಜನರ ದೇಶ. ಆದರೂ, ನಿವೃತ್ತಿ ವಯೋಮಿತಿ ಏರಿಸುವುದರಿಂದ ಹೊಸ ತಲೆಮಾರು ಸರ್ಕಾರಿ ಉದ್ಯೋಗ ಪ್ರವೇಶಕ್ಕೆ ಅವಕಾಶ ಸಿಗುವುದಾದರೂ ಹೇಗೆ ಎಂಬ ಪ್ರಶ್ನೆಯೂ ಮುನ್ನೆಲೆಗೆ ಪದೇಪದೆ ಬರುತ್ತಿದೆ. ಅಸ್ಸಾಂ, ಜಾರ್ಖಂಡ್, ಕೇರಳ, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಈ ವಿಚಾರ ಇತ್ತೀಚೆಗೆ ಗಮನಸೆಳೆದಿವೆ. ಈ ವಿದ್ಯಮಾನದಗಳ ಅವಲೋಕನ ಇಲ್ಲಿದೆ.
ಅಸ್ಸಾಂನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳ ಬೋಧನಾ ಸಿಬ್ಬಂದಿ ನಿವೃತ್ತಿ ವಯೋಮಿತಿ ಏರಿಕೆ
ಅಸ್ಸಾಂ ಸಚಿವ ಸಂಪುಟವು ಸರ್ಕಾರಿ ಮೆಡಿಕಲ್ ಕಾಲೇಜುಗಳ ಬೋಧನಾ ಸಿಬ್ಬಂದಿಯ ನಿವೃತ್ತಿ ವಯೋಮಿತಿಯನ್ನು 65 ರಿಂದ 70 ವರ್ಷಕ್ಕೆ ಏರಿಸುವ ತೀರ್ಮಾನ ತೆಗೆದುಕೊಂಡಿದೆ.
ಪರಿಣತ ಡಾಕ್ಟರ್‌ಗಳ ಸೇವೆ ವೈದ್ಯ ಶಿಕ್ಷಣ ಮತ್ತು ವೈದ್ಯ ಸೇವೆಗಳಲ್ಲಿ ಲಭ್ಯವಿರಬೇಕು ಎಂಬುದು ಸರ್ಕಾರದ ತೀರ್ಮಾನಕ್ಕೆ ಬಲವಾದ ಸಮರ್ಥನೆ. ಇದನ್ನು ಅಸ್ಸಾಂನ ಜಲಸಂಪನ್ಮೂಲ ಸಚಿವ ಪಿಜುಶ್ ಹಜಾರಿಕಾ ದೃಢೀಕರಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿನ ಡಾಕ್ಟರ್‌ಗಳ ನಿವೃತ್ತಿ ವಯೋಮಿತಿ ಹೆಚ್ಚಳ
ಜಾರ್ಖಂಡ್‌ನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯಾಧಿಕಾರಿಗಳ ನಿವೃತ್ತಿ ವಯೋಮಿತಿಯನ್ನು 65ರಿಂದ 67ಕ್ಕೆ ಏರಿಕೆ ಮಾಡಲಾಗಿದೆ. ಈ ಕುರಿತ ಪ್ರಸ್ತಾವನೆಯನ್ನು ಸರ್ಕಾರ ಇತ್ತೀಚೆಗೆ ಅಂಗೀಕರಿಸಿದೆ.
ವೈದ್ಯಾಧಿಕಾರಿಗಳು ಮತ್ತು ಬೋಧಕೇತರ ವರ್ಗದ ಪರಿಣತರ ನಿವೃತ್ತಿಗೆ ಮಾತ್ರ ಇದು ಅನ್ವಯ. ಸರ್ಕಾರಿ ಆಸ್ಪತ್ರೆಗಳಲ್ಲಿ ತೀವ್ರತರದಲ್ಲಿ ವೈದ್ಯರ ಮತ್ತು ಪೂರಕ ಪರಿಣತ ಸಿಬ್ಬಂದಿ ಕೊರತೆ ಇರುವ ಕಾರಣ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಕಳೆದ ತಿಂಗಳು ಸ್ಪಷ್ಟಪಡಿಸಿದೆ.
ಒಡಿಶಾದಲ್ಲಿ ಕಾಲೇಜು ಉಪನ್ಯಾಸಕರ ವಯೋಮಿತಿ ಏರಿಕೆ
ಒಡಿಶಾದಲ್ಲಿ ಕಾಲೇಜು ಉಪನ್ಯಾಸಕರ ವಯೋಮಿತಿಯನ್ನು 62ಕ್ಕೇರಿಸುವ ಪ್ರಸ್ತಾವನೆಯನ್ನು ಅಲ್ಲಿನ ಸರ್ಕಾರ ಅಂಗೀಕರಿಸಿದೆ. ಭಾರಿ ಪ್ರಮಾಣದಲ್ಲಿ ಉಪನ್ಯಾಸಕರ ಕೊರತೆ ಇರುವ ಕಾರಣ, ವಿಧಾನಸಭೆಯ ಸ್ಥಾಯೀ ಸಮಿತಿಯ ಶಿಫಾರಸಿನ ಮೇರೆಗೆ ಈ ತೀರ್ಮಾನವನ್ನು ತೆಗೆದುಕೊಂಡಿರುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ.
ಕೆಲವು ವರ್ಷಗಳ ಹಿಂದೆ, ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಅಧ್ಯಾಪಕರ ನಿವೃತ್ತಿ ವಯಸ್ಸನ್ನು 62 ರಿಂದ 65 ಕ್ಕೆ ಹೆಚ್ಚಿಸಿದೆ. 18 ರಾಜ್ಯಗಳಲ್ಲಿ ಈಗಾಗಲೇ ಇದು ಜಾರಿಗೊಂಡಿದೆ ಎಂದು ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಇತ್ತೀಚೆಗೆ ಹೇಳಿತ್ತು.
ಕೇರಳದ ಹೋಮಿಯೋಪತಿ ಡಾಕ್ಟರ್‌ಗಳ ನಿವೃತ್ತಿ ವಯಸ್ಸು ಸುಪ್ರೀಂಕೋರ್ಟ್ ಅಂಗಳದಲ್ಲಿ..
ಕೇರಳದಲ್ಲಿ 2017ರಲ್ಲೇ ಹೋಮಿಯೋಪತಿ ಡಾಕ್ಟರ್‌ಗಳ ನಿವೃತ್ತಿ ವಯಸ್ಸನ್ನು 60ಕ್ಕೇರಿಸಲಾಗಿತ್ತು. ಎಂಬಿಬಿಎಸ್ ಡಾಕ್ಟರ್‌ಗಳ ನಿವೃತ್ತಿ ವಯಸ್ಸಿಗೆ ಸಮನಾಗಿ ಇದನ್ನು ಮಾಡಲಾಗಿತ್ತು. ಆದರೆ, ಇದೇ ರೀತಿ ಆಯುಷ್ ಡಾಕ್ಟರ್‌ಗಳ ನಿವೃತ್ತಿ ವಯೋಮಿತ ಏರಿಸುವಂತೆ ಕೋರಿ ಕೆಲವರು ಕೆಎಟಿ ಮೆಟ್ಟಿಲೇರಿದ್ದರು. ಅಲ್ಲಿ ಆಯುಷ್ ಡಾಕ್ಟರ್‌ಗಳ ನಿವೃತ್ತಿ ವಯೋಮಿತಿಯನ್ನು 60ಕ್ಕೇರಿಸಿ ತೀರ್ಪು ನೀಡಲಾಗಿತ್ತು. ಇದನ್ನು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ಅನೂರ್ಜಿತಗೊಳಿಸಿತು. ಬಳಿಕ ಇದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿಂದೀಚೆಗೆ ಬಾಕಿ ಇತ್ತು. ಕಳೆದ ತಿಂಗಳು ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಕೇರಳ ಸರ್ಕಾರಕ್ಕೆ ಈ ವಿಚಾರವಾಗಿ ತೀರ್ಮಾನಿಸುವುದಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಿತ್ತು.
ಕರ್ನಾಟಕದಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ 65ಕ್ಕೇರಿಸಲು ಕೋರ್ಟ್ ಮೊರೆ
ಸೇವೆಯನ್ನು 62 ವರ್ಷದಿಂದ 65 ವರ್ಷದ ತನಕ ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಆಗ್ರಹಿಸಿ ಕೃಷಿ ಕಾಲೇಜಿನ ಮಾಜಿ ಡೀನ್ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ‘ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 65ಕ್ಕೆ ನಿಗದಿಪಡಿಸುವುದರಿಂದ ಖಜಾನೆ ಹಾಗೂ ಇತರರ ಉದ್ಯೋಗಾವಕಾಶಗಳ ಮೇಲೆ ನೇರ ಪರಿಣಾಮ ಉಂಟಾಗುತ್ತದೆ. ಆದಾಗ್ಯೂ, ‘ಹಳೆಯ ರಕ್ತವನ್ನು ಉಳಿಸಿಕೊಳ್ಳುವುದು ಅಥವಾ ತಾಜಾ ರಕ್ತವನ್ನು ತುಂಬುವುದು ರಾಜ್ಯ ಸರ್ಕಾರ ಅಥವಾ ವಿಶ್ವವಿದ್ಯಾಲಯಗಳ ಬುದ್ಧಿವಂತಿಕೆಗೆ ಬಿಟ್ಟದ್ದು. ವಿವಿಧ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಸಾವಿರಾರು ಉದ್ಯೋಗಿಗಳು ಇದ್ದಾರೆ. ಅರ್ಜಿದಾರರ ಈಗಿನ ಪ್ರಾರ್ಥನೆಯನ್ನು ಮನ್ನಿಸಿದ್ದೇ ಆದರೆ, ಈ ಎಲ್ಲ ಉದ್ಯೋಗಿಗಳೂ ಮೂರು ವರ್ಷಗಳ ಹೆಚ್ಚುವರಿ ಅವಧಿಗೆ ಮುಂದುವರಿಯುತ್ತಾರೆ. ಆಗ ಹೊಸ ನೇಮಕಾತಿಗಳಿಗೆ ಖಾಲಿ ಹುದ್ದೆಗಳೇ ಉಳಿಯುವುದಿಲ್ಲ’ ಎಂದು ಹೇಳಿದ್ದಾಗಿ ಪ್ರಜಾವಾಣಿ ವರದಿ ಮಾಡಿತ್ತು.