logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rishi Sunak Fined: ಸೀಟ್‌ ಬೆಲ್ಟ್‌ ಧರಿಸದೇ ಕಾರು ಪ್ರಯಾಣ; ಯುಕೆ ಪ್ರಧಾನಿ ರಿಷಿ ಸುನಕ್‌ಗೆ ದಂಡ ವಿಧಿಸಿದ ಪೊಲೀಸರು-ವಿಡಿಯೋ ಇಲ್ಲಿದೆ

Rishi Sunak fined: ಸೀಟ್‌ ಬೆಲ್ಟ್‌ ಧರಿಸದೇ ಕಾರು ಪ್ರಯಾಣ; ಯುಕೆ ಪ್ರಧಾನಿ ರಿಷಿ ಸುನಕ್‌ಗೆ ದಂಡ ವಿಧಿಸಿದ ಪೊಲೀಸರು-ವಿಡಿಯೋ ಇಲ್ಲಿದೆ

HT Kannada Desk HT Kannada

Jan 21, 2023 10:05 AM IST

google News

ಯುಕೆ ಪ್ರಧಾನಿ ಮಂತ್ರಿ ರಿಷಿ ಸುನಕ್‌

  • Rishi Sunak fined: ಯುಕೆ ಪ್ರಧಾನಮಂತ್ರಿ ರಿಷಿ ಸುನಕ್‌ ಅವರು ಸೋಷಿಯಲ್‌ ಮೀಡಿಯಾ ವಿಡಿಯೋ ತಯಾರಿಸಲು ಸಂಚಾರಿ ನಿಯಮ ಉಲ್ಲಂಘಿಸಿದ್ದರು. ಲಂಕಾಶೈರ್‌ ಪೊಲೀಸರು ನಿಯಮಾನುಸಾರ ಕ್ರಮ ಕೈಗೊಂಡು ಜಗತ್ತಿನ ಗಮನಸೆಳೆದಿದ್ದಾರೆ.

ಯುಕೆ ಪ್ರಧಾನಿ ಮಂತ್ರಿ ರಿಷಿ ಸುನಕ್‌
ಯುಕೆ ಪ್ರಧಾನಿ ಮಂತ್ರಿ ರಿಷಿ ಸುನಕ್‌ (Owen Humphreys/Pool Photo via AP)

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಯುಕೆ ಪ್ರಧಾನಮಂತ್ರಿ ರಿಷಿ ಸುನಕ್‌ಗೆ ಲಂಕಾಶೈರ್‌ ಪೊಲೀಸರು ದಂಡ ವಿಧಿಸಿದ್ದಾರೆ. ಸೋಷಿಯಲ್‌ ಮೀಡಿಯಾ ವಿಡಿಯೋ ಶೂಟಿಂಗ್‌ ಸಂದರ್ಭದಲ್ಲಿ ಅವರು ಸೀಟ್‌ ಬೆಲ್ಟ್‌ ಧರಿಸಿರಲಿಲ್ಲ. ಇದನ್ನು ಗಮನಿಸಿದ ಲಂಕಾಶೈರ್‌ ಪೊಲೀಸರು ಈ ಕ್ರಮ ಜರುಗಿಸಿದ್ದಾರೆ.

ಸಂಚಾರಿ ನಿಯಮ ಪ್ರಕಾರ, ಈ ಉಲ್ಲಂಘನೆಗೆ 100 ಪೌಂಡ್‌ (ಅಂದಾಜು 10,000 ರೂ.) ದಂಡ ಪಾವತಿಸಬೇಕು. ಲಂಕಾಶೈರ್‌ ಪೊಲೀಸರು ತಮ್ಮ ಹೇಳಿಕೆಯಲ್ಲಿ ಸುನಕ್‌ ಅವರ ಹೆಸರು ಉಲ್ಲೇಖಿಸದೆಯೇ ಲಂಡನ್‌ನ 42 ವರ್ಷದ ವ್ಯಕ್ತಿ ಸೀಟ್‌ ಬೆಲ್ಟ್‌ ಧರಿಸದೇ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ. ಅವರಿಗೆ ಷರತ್ತುಬದ್ಧ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಲಂಕಾಶೈರ್‌ ಪೊಲೀಸರ ಹೇಳಿಕೆ ಹೀಗಿದೆ - ಸೋಷಿಯಲ್‌ ಮೀಡಿಯಾದಲ್ಲಿ ಪ್ರಸಾರವಾಗಿರುವ ಒಂದು ವಿಡಿಯೋದಲ್ಲಿರುವ ದೃಶ್ಯದ ಪ್ರಕಾರ, ಲಂಕಾಶೈರ್‌ನಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಪ್ರಯಾಣಿಕರ ಸೀಟಿನಲ್ಲಿದ್ದ ವ್ಯಕ್ತಿ ಸೀಟ್‌ ಬೆಲ್ಟ್‌ ಧರಿಸದೇ ಇರುವುದು ಗಮನಕ್ಕೆ ಬಂದಿದೆ. ಇಂದು (ಜನವರಿ 20, ಶುಕ್ರವಾರ) ನಾವು ಅವರಿಗೆ ಷರತ್ತುಬದ್ಧ ದಂಡ ವಿಧಿಸಿದ್ದೇವೆ.

ಯುಕೆ ಪ್ರಧಾನಮಂತ್ರಿ ರಿಷಿ ಸುನಕ್‌ ಅವರು ತಮ್ಮ ಈ ಕೃತ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಕುರಿತು ರಿಷಿ ಸುನಕ್‌ ಅವರ ವಕ್ತಾರರು ಹೇಳಿರುವುದು ಹೀಗೆ - ರಿಷಿ ಸನುಕ್‌ ಅವರು ಚಲಿಸುತ್ತಿರುವ ಕಾರಿನಲ್ಲಿ ಇನ್‌ಸ್ಟಾಗ್ರಾಂ ವಿಡಿಯೋ ಸಲುವಾಗಿ ಸೀಟ್‌ ಬೆಲ್ಟ್‌ ತೆಗೆದಿದ್ದರು. ಉತ್ತರ ಇಂಗ್ಲೆಂಡ್‌ ಪ್ರವಾಸದಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಇದು ನಿರ್ಧಾರ ತೆಗೆದುಕೊಳ್ಳುವಲ್ಲಿ ಆಗಿರುವ ಸಣ್ಣ ಲೋಪವಾಗಿತ್ತು.

ರಿಷಿ ಸುನಕ್‌ ಅವರ ಈ ವಿಡಿಯೋವನ್ನು ಪಾಲಿಟಿಕ್ಸ್‌ ಯುಕೆ ಶೇರ್‌ ಮಾಡಿದೆ.

ಸರ್ಕಾರದ ಇತ್ತೀಚಿನ ಸುತ್ತಿನ ಲೆವೆಲಿಂಗ್‌ ಅಪ್‌ ಫಂಡ್ಸ್‌ ವಿಚಾರ ಪ್ರಮೋಟ್‌ ಮಾಡುವ ಸಲುವಾಗಿ ರಿಷಿ ಸುನಕ್‌ ವಿಡಿಯೋ ರೆಕಾರ್ಡ್‌ ಮಾಡಿದ್ದರು. ಈ ವಿಡಿಯೋವನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್‌ ಮಾಡಿದ್ದರು. ಅಂದಾಜು ಒಂದು ನಿಮಿಷದ ವಿಡಿಯೋ ಚಲಿಸುತ್ತಿರುವ ಕಾರಿನಲ್ಲಿ ರೆಕಾರ್ಡ್‌ ಆಗಿದೆ. ಪೊಲೀಸ್‌ ಬೈಕ್‌ಗಳು ಪ್ರಧಾನಿಯವರ ಕಾರಿನ ನಡುವೆ ಅಂತರ ಕಾಯ್ದುಕೊಂಡು ಸಮೀಪಿಸಿವೆ. ಕೂಡಲೇ ನಿಯಮ ಪಾಲನೆ ವಿಚಾರದಲ್ಲಿ ಎಚ್ಚರಿಸಿದ ಪೊಲೀಸರು ದಂಡ ವಿಧಿಸಿದ್ದರು.

ರಿಷಿ ಸುನಕ್‌ ಅವರ ವಕ್ತಾರರು ಈ ವಿಚಾರವನ್ನು ದೃಢೀಕರಿಸಿದ್ದು, ಅದು ತಪ್ಪಾಗಿತ್ತು. ಅದಕ್ಕಾಗಿ ಅವರು ಕ್ಷಮೆಯಾಚಿಸಿದರು. ಸೀಟ್‌ಬೆಲ್ಟ್‌ ಧರಿಸಿಯೇ ಪ್ರಯಾಣ ಮಾಡಬೇಕು ಎಂಬ ನಿಯಮ ಪಾಲನೆಯನ್ನು ಪ್ರಧಾನಮಂತ್ರಿಯವರೂ ಅನುಸರಿಸುತ್ತಾರೆ. ಎಲ್ಲರೂ ಅನುಸರಿಸಬೇಕು ಎಂದೂ ಅವರು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ನ್ಯಾಯಸಮ್ಮತವಾದ ವೈದ್ಯಕೀಯ ವಿನಾಯಿತಿಯನ್ನು ಹೊಂದಿರದೇ ಇದ್ದಲ್ಲಿ, ಯುಕೆಯಲ್ಲಿ ವಾಹನ ಚಾಲನೆ ಮಾಡುವಾಗ ಸೀಟ್‌ಬೆಲ್ಟ್ ಧರಿಸದೆ ಪತ್ತೆಯಾದ ಪ್ರಯಾಣಿಕರಿಗೆ ತತ್‌ಕ್ಷಣವೇ 100 ಪೌಂಡ್‌ ದಂಡ ವಿಧಿಸಬಹುದು. ಅಲ್ಲದೆ ಈ ವಿಚಾರ ನ್ಯಾಯಾಲಯಕ್ಕೆ ಹೋದರೆ ಮೊತ್ತವು ದಂಡ ಮೊತ್ತವು 500 ಪೌಂಡ್‌ಗೆ ಏರುತ್ತದೆ.

ಇಂಗ್ಲೆಂಡ್‌ನಲ್ಲಿ ಹದಿನಾಲ್ಕು ವರ್ಷದೊಳಗಿನ ಮಕ್ಕಳು ಮತ್ತು ಪ್ರಯಾಣಿಕರು ವಾಹನದಲ್ಲಿ ಅಳವಡಿಸಿರುವ ಅವರ ಸೀಟ್‌ ಬೆಲ್ಟ್‌ ಧರಿಸದೇ ಇದ್ದರೆ ಅದನ್ನು ಈಡೇರಿಸುವ ಸಂಪೂರ್ಣ ಹೊಣೆಗಾರಿಕೆ ಚಾಲಕರದ್ದಾಗಿರುತ್ತದೆ. ಈ ನಿಯಮ ಕಾರು, ವ್ಯಾನ್‌ ಮತ್ತು ಇತರೆ ಸರಕು ಸಾಗಣೆ ವಾಹನಗಳಿಗೂ ಅನ್ವಯವಾಗಿದೆ. ಪೊಲೀಸರು, ಅಗ್ನಿಶಾಮಕ ಸೇವೆ ಅಥವಾ ಇತರೆ ರಕ್ಷಣಾ ವಾಹನಗಳಿಗೆ ಈ ನಿಯಮ ಅನ್ವಯವಲ್ಲ. ಅದೇ ರೀತಿ ವೈದ್ಯಕೀಯ ಕಾರಣಕ್ಕೆ ಡಾಕ್ಟರ್‌ ಟಿಪ್ಪಣಿ ನೀಡಿದ್ದರೆ ಅಂತಹ ಸನ್ನಿವೇಶದಲ್ಲೂ ಸೀಟ್‌ ಬೆಲ್ಟ್‌ ಧರಿಸದೇ ಇರುವುದು ನಿಯಮ ಉಲ್ಲಂಘನೆ ಎನಿಸಿಕೊಳ್ಳುವುದಿಲ್ಲ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ