logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Wagner Group: ವ್ಯಾಗ್ನರ್‌ ದಂಗೆ; ರಷ್ಯಾ ಅಧ್ಯಕ್ಷರ ಪದಚ್ಯುತಿ ಮಾಡುವೆ ಎಂದ ಪ್ರಿಗೊಜಿನ್‌, ಇದು ವಿಶ್ವಾಸಘಾತುಕತನ ಎಂದ ಪುಟಿನ್‌

Wagner Group: ವ್ಯಾಗ್ನರ್‌ ದಂಗೆ; ರಷ್ಯಾ ಅಧ್ಯಕ್ಷರ ಪದಚ್ಯುತಿ ಮಾಡುವೆ ಎಂದ ಪ್ರಿಗೊಜಿನ್‌, ಇದು ವಿಶ್ವಾಸಘಾತುಕತನ ಎಂದ ಪುಟಿನ್‌

Umesh Kumar S HT Kannada

Jun 24, 2023 03:29 PM IST

google News

ವ್ಯಾಗ್ನರ್‌ ಗ್ರೂಪ್‌ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ವರ್ಸಸ್‌ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌

  • Wagner Group: ಉಕ್ರೇನ್‌ ವಿರುದ್ಧ ಸಮರ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ಅನಿರೀಕ್ಷಿತವಾಗಿ ತವರುನೆಲದಲ್ಲೇ ತೀಕ್ಷ್ಣ ವಿರೋಧ ವ್ಯಕ್ತವಾಗಿದೆ. ಅವರ ಆಪ್ತವಲಯದಲ್ಲಿದ್ದ ಯೆವ್ಗೆನಿ ಪ್ರಿಗೊಜಿನಿ ತಿರುಗಿಬಿದ್ದಿದ್ದು, ವ್ಯಾಗ್ನರ್‌ ಗ್ರೂಪ್‌ ದಂಗೆಗೆ ಕಾರಣರಾಗಿದ್ದಾರೆ. ಈ ವೇಳೆ, ಪ್ರಿಗೊಜಿನಿ ಮತ್ತು ಪುಟಿನ್‌ ಹೇಳಿಕೆ ವಿವರ ಇಲ್ಲಿದೆ.

ವ್ಯಾಗ್ನರ್‌ ಗ್ರೂಪ್‌ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ವರ್ಸಸ್‌ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌
ವ್ಯಾಗ್ನರ್‌ ಗ್ರೂಪ್‌ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ವರ್ಸಸ್‌ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌

ರಷ್ಯಾ- ಉಕ್ರೇನ್‌ ಸಮರ (Russia-Ukraine War) ಮುಂದುವರಿದಿರುವಾಗಲೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಆಂತರಿಕವಾಗಿ ಪದಚ್ಯುತರಾಗುವ ಆತಂಕ ಎದುರಾಗಿದೆ. ಅವರಿಗೆ ಸವಾಲು ಒಡ್ಡಿರುವುದು ಬೇರಾರೂ ಅಲ್ಲ, ಅವರ ಆಪ್ತರಾಗಿದ್ದ, ಆಗಾಗ್ಗೆ “ಪುಟಿನ್‌ʼಸ್‌ ಷೆಫ್‌” ಎಂದು ಕರೆಯಿಸಿಕೊಳ್ಳುತ್ತಿದ್ದ ಯೆವ್ಗೆನಿ ಪ್ರಿಗೊಜಿನ್.

ಯೆವ್ಗೆನಿ ಪ್ರಿಗೊಜಿನ್ ಅವರು ವ್ಯಾಗ್ನರ್‌ ಗ್ರೂಪ್‌ ಅನ್ನು ನಿರ್ವಹಿಸುತ್ತಿದ್ದು, ಅದು ಅರೆಖಾಸಗಿ ರಕ್ಷಣಾಪಡೆಯಾಗಿ ಪುತಿನ್‌ರ ವಿಶ್ವಾಸ ಗಳಿಸಿತ್ತು. ಯೆವ್ಗೆನಿ ಪ್ರಿಗೊಜಿನ್‌ ನೇತೃತ್ವದ ಪಡೆಯಲ್ಲಿ 25,000 ಯೋಧರಿದ್ದಾರೆ. ರಷ್ಯಾ ಸೇನಾಪಡೆಯ ಹೆಲಿಕಾಪ್ಟರ್‌ ಹೊಡೆದುರುಳಿಸಿರುವ ವ್ಯಾಗ್ನರ್‌ ಗ್ರೂಪ್‌ ಈಗ ಜಗತ್ತಿನ ಗಮನಸೆಳೆದಿದೆ. ಇದರ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್‌, ರಷ್ಯಾದ ಮಿಲಿಟರಿ ನಾಯಕತ್ವವನ್ನು ಉರುಳಿಸುವುದಾಗಿ ಘೋಷಿಸಿರುವುದು ವ್ಲಾಡಿಮಿರ್ ಪುಟಿನ್‌ಗೆ ತಲೆನೋವಾಗಿ ಪರಿಣಮಿಸಿದೆ.

ಈ ವಿದ್ಯಮಾನದ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸ್ಪಂದಿಸಿದ್ದು, ವ್ಯಾಗ್ನರ್‌ ಗ್ರೂಪಿನ ಮುಖ್ಯಸ್ಥ ಪ್ರಿಗೊಜಿನ್ ಘೋಷಿಸಿದ ಸಶಸ್ತ್ರ ದಂಗೆಯಿಂದ ದೇಶವನ್ನು ರಕ್ಷಿಸುವುದಾಗಿ ಶಪಥ ಮಾಡಿದು. ಅಲ್ಲದೆ, ಈ ಗ್ರೂಪಿನ ವಿರುದ್ಧ ಅದರ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಕಠಿಣ ಕ್ರಮಗಳನ್ನು ಜರುಗಿಸುವುದಾಗಿ ಎಚ್ಚರಿಸಿದರು.

ವ್ಯಾಗ್ನರ್‌ ದಂಗೆ ವಿಶ್ವಾಸಘಾತುಕತನ ಎಂದ ವ್ಲಾಡಿಮಿರ್ ಪುಟಿನ್

ವ್ಯಾಗ್ನರ್ ದಂಗೆಗೆ ಸಂಬಂಧಿಸಿ ರಷ್ಯಾವನ್ನು ಉದ್ದೇಶಿಸಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ವ್ಯಾಗ್ನರ್‌ ಗ್ರೂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಘೋಷಿಸಿದ ಸಶಸ್ತ್ರ ದಂಗೆಯಿಂದ ದೇಶ ಮತ್ತು ಪ್ರಜೆಗಳನ್ನು ರಕ್ಷಿಸುವುದಾಗಿ ಶಪಥ ಮಾಡಿದರು.

ಉಕ್ರೇನ್‌ನಲ್ಲಿ ತನ್ನ ಯುದ್ಧದೊಂದಿಗೆ ರಷ್ಯಾ "ತನ್ನ ಭವಿಷ್ಯತ್ತಿಗಾಗಿ ಕಠಿಣ ಯುದ್ಧವನ್ನು ಹೋರಾಡುತ್ತಿರುವ" ಸಮಯದಲ್ಲಿ ಸಂಭವಿಸಿರುವ ದಂಗೆಯನ್ನು ಖಂಡಿಸಿದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, "ನಾವು ಈಗ ಎದುರಿಸಿದ್ದು ವಿಶ್ವಾಸಘಾತುಕತನ" ಎಂದು ತನ್ನ ಟಿವಿ ಭಾಷಣದಲ್ಲಿ ಹೇಳಿದರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾಷಣದ ಪ್ರಮುಖ ಅಂಶಗಳು

  • "ರೋಸ್ಟೊವ್-ಆನ್-ಡಾನ್‌ನಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಅಗತ್ಯ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಇದು ಕಷ್ಟಕರವಾಗಿ ಉಳಿದಿದೆ ಮತ್ತು ವಾಸ್ತವವಾಗಿ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳ ಕೆಲಸವನ್ನು ನಿರ್ಬಂಧಿಸಲಾಗಿದೆ" ಎಂದು ಪುಟಿನ್ ರಷ್ಯನ್ನರನ್ನು ಉದ್ದೇಶಿಸಿ ಹೇಳಿದರು.
  • ದಂಗೆಯು "ನಮ್ಮ ರಾಜ್ಯತ್ವಕ್ಕೆ ಮಾರಣಾಂತಿಕ ಬೆದರಿಕೆ" ಮತ್ತು ಪ್ರತಿಕ್ರಿಯೆಯಾಗಿ “ಕಠಿಣ ಕ್ರಮ”ಗಳನ್ನು ಜರುಗಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದರು.
  • ದಂಗೆ ಸೃಷ್ಟಿಸಿದವರೆಲ್ಲರೂ ಅನಿವಾರ್ಯ ಶಿಕ್ಷೆಯನ್ನು ಅನುಭವಿಸಲಿದ್ದಾರೆ. ಸಶಸ್ತ್ರ ಪಡೆಗಳು ಮತ್ತು ಇತರ ಸರ್ಕಾರಿ ಸಂಸ್ಥೆಗಳು ಅಗತ್ಯ ಆದೇಶಗಳನ್ನು ಪಾಲಿಸಲಿವೆ.
  • ವ್ಯಾಗ್ನರ್ ಖಾಸಗಿ ಮಿಲಿಟರಿ ಕಂಪನಿಯ ಮುಖ್ಯಸ್ಥನ ಹೆಸರು ಉಲ್ಲೇಖಿಸದೆ ಮಾತನಾಡಿದ ವ್ಲಾಡಿಮಿರ್‌ ಪುಟಿನ್‌ ಅವರು, ಪ್ರಿಗೋಜಿನ್ ಅವರ ಕ್ರಮಗಳನ್ನು "ದ್ರೋಹ" ಮತ್ತು "ದೇಶದ್ರೋಹ" ಎಂದರು.
  • ಈ ದಂಗೆಯಲ್ಲಿ ಪಾಲ್ಗೊಂಡಿರುವವರು ತಮ್ಮ ಅಪರಾಧಕೃತ್ಯ ನಿಲ್ಲಿಸಿ ಶರಣಾಗಬೇಕು. ಇದು ಅತ್ಯಂತ ಘಾತುಕ ಮತ್ತು ಮಾರಣಾಂತಿಕ ಅಪರಾಧವಾಗಿದ್ದು, ದೇಶಕ್ಕೆ ಸಂಬಂಧಿಸಿ ಸರಿಯಾದ ನಡೆಯಲ್ಲ ಎಂದು ಪುಟಿನ್‌ ಹೇಳಿದರು.
  • ಸಶಸ್ತ್ರ ದಂಗೆಯ ಸಂಚು ರೂಪಿಸಿದ ಮತ್ತು ಸಂಘಟಿಸಿದವರು, ತಮ್ಮ ಒಡನಾಡಿಗಳ ವಿರುದ್ಧ ಶಸ್ತ್ರಾಸ್ತ್ರಗಳನ್ನು ಎತ್ತಿದವರು ರಷ್ಯಾಕ್ಕೆ ದ್ರೋಹ ಮಾಡಿದರು. ರಷ್ಯನ್ನರು ಅದಕ್ಕೆ ತಕ್ಕ ರೀತಿಯಲ್ಲೇ ಉತ್ತರಿಸುತ್ತಾರೆ ಎಂದು ಪುಟಿನ್‌ ಎಚ್ಚರಿಸಿದರು.

ರಷ್ಯಾ ಅಧ್ಯಕ್ಷರ ಪದಚ್ಯುತಿ ಮಾಡುವೆ ಎಂದ ಪ್ರಿಗೊಜಿನ್‌

  • ರೋಸ್ಟೊವ್-ಆನ್-ಡಾನ್‌ ನಗರವು ಸಂಪೂರ್ಣ ವ್ಯಾಗ್ನರ್‌ ಗ್ರೂಪಿನ ನಿಯಂತ್ರಣದಲ್ಲಿದೆ. ನಮ್ಮನ್ನು ತಡೆಯಲು ಯಾರೇ ಮುಂದಾದರೂ ನಿರ್ದಾಕ್ಷಿಣ್ಯವಾಗಿ ಅವರನ್ನು ನಿರ್ನಾಮ ಮಾಡಲಾಗುವುದು ಎಂದು ಪ್ರಿಗೊಜಿನ್‌ ಎಚ್ಚರಿಸಿದ್ದಾರೆ.
  • ಮಾಸ್ಕೋ ಕಡೆಗೆ ನಮ್ಮ ಪ್ರಯಾಣ ಶುರುವಾಗಿದೆ. ನಾವು 25,000 ಜನ ಇದ್ದೇವೆ. ನಾವು ಸಾಯಲು ಸಿದ್ಧರಾದವರು. ಆದರೆ ಅದಕ್ಕೂ ಮೊದಲು ರಷ್ಯಾದಲ್ಲಿ ಮಿಲಿಟರಿ ಆಡಳಿತ ಮುಕ್ತಾಯಗೊಳಿಸಿ, ಅದರ ನಾಯಕತ್ವವನು ಪದಚ್ಯುತಿಗೊಳಿಸುತ್ತೇವೆ ಎಂದು ಪ್ರಿಗೊಜಿನ್‌ ಘೋಷಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ