Russia Coup: ಕಳೆದ ವರ್ಷ ವ್ಯಾಗ್ನರ್ ಗುಂಪಿಗೆ 1 ಬಿಲಿಯನ್ ಡಾಲರ್ ನೀಡಿದ್ವಿ; ರಷ್ಯಾ ಅಂತರ್ಯುದ್ಧದ ಬಗ್ಗೆ ಪುಟಿನ್ ಹೇಳಿದ್ದಿಷ್ಟು
Jun 27, 2023 07:58 PM IST
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
- Russia Wagner coup: ರಷ್ಯಾ ಸೈನ್ಯವು ವ್ಯಾಗ್ನರ್ ದಂಗೆಯನ್ನು ನಿಲ್ಲಿಸಿತು. ಸೇನೆ ಜೊತೆ ಕೈಜೋಡಿಸಿದ ಭದ್ರತಾ ಪಡೆಗಳು ಅಂತರ್ಯುದ್ಧವನ್ನು ತಪ್ಪಿಸಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸುವೆ. ಒಂದು ವೇಳೆ ಈ ದಂಗೆ ಸಫಲವಾಗಿದ್ದರೆ, ರಷ್ಯಾದ ಶತ್ರುಗಳು ನಮ್ಮ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು ಎಂದು ಪುಟಿನ್ ಹೇಳಿದ್ದಾರೆ.
ಮಾಸ್ಕೊ: ರಷ್ಯಾದಲ್ಲಿ ಆಂತರಿಕ ದಂಗೆ ಅಂತ್ಯವಾಗಿದ್ದು, ನಾಪತ್ತೆಯಾಗಿದ್ದಾರೆಂದು ಹೇಳಲಾಗಿದ್ದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ಪ್ರತ್ಯಕ್ಷರಾಗಿದ್ದರು. ರಷ್ಯಾದಲ್ಲಿ ಆಂತರಿಕ ಪ್ರಕ್ಷುಬ್ಧತೆಯಂತಹ ಯಾವುದೇ ಪ್ರಯತ್ನಗಳನ್ನು ವಿಫಲಗೊಳಿಸಲಾಗುವುದು ಎಂದು ಹೇಳಿದ್ದರು. ಇಂದು ಮತ್ತೆ ವ್ಯಾಗ್ನರ್ ವಿರುದ್ಧ ಕಿಡಿಕಾರಿದ್ದಾರೆ.
ರಷ್ಯಾ ಕಳೆದ ವರ್ಷ ವ್ಯಾಗ್ನರ್ ಗುಂಪಿಗೆ 1 ಬಿಲಿಯನ್ ಡಾಲರ್ (100 ಕೋಟಿ ಡಾಲರ್ ) ಪಾವತಿಸಿತ್ತು. ಮೇ 2022 ಮತ್ತು ಮೇ 2023 ರ ನಡುವೆ ವ್ಯಾಗ್ನರ್ ಪಡೆ ಮತ್ತು ಅದರ ಮುಖ್ಯಸ್ಥ ಪ್ರಿಗೋಜಿನ್ಗೆ ಸಂಬಳ ಮತ್ತು ಪ್ರೋತ್ಸಾಹಕ ಬಹುಮಾನಗಳಾಗಿ ಒಂದು ಬಿಲಿಯನ್ ಡಾಲರ್ ನೀಡಿದ್ದೆವು. ಈ ಹಣವನ್ನು ಹೇಗೆ ಖರ್ಚು ಮಾಡಲಾಗಿದೆ ಎಂದು ಅಧಿಕಾರಿಗಳು ತನಿಖೆ ಮಾಡುತ್ತಾರೆ ಎಂದರು.
ರಷ್ಯಾ ಸೇನೆಗೆ ಥ್ಯಾಂಕ್ಸ್ ಹೇಳಿದ ಪುಟಿನ್
ರಷ್ಯಾ ಸೈನ್ಯವು ವ್ಯಾಗ್ನರ್ ದಂಗೆಯನ್ನು ನಿಲ್ಲಿಸಿತು. ಸೇನೆ ಜೊತೆ ಕೈಜೋಡಿಸಿದ ಭದ್ರತಾ ಪಡೆಗಳು ಅಂತರ್ಯುದ್ಧವನ್ನು ತಪ್ಪಿಸಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸುವೆ. ಒಂದು ವೇಳೆ ಈ ದಂಗೆ ಸಫಲವಾಗಿದ್ದರೆ, ರಷ್ಯಾದ ಶತ್ರುಗಳು ನಮ್ಮ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು ಎಂದು ಪುಟಿನ್ ಹೇಳಿದ್ದಾರೆ. ಇನ್ನು, ಬೇಸರ, ಕೋಪದ ಹೊರತಾಗಿಯೂ ರಷ್ಯಾ ವ್ಯಾಗ್ನರ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಕೈಬಿಟ್ಟಿದ್ದು, ಅವರ ಭಾರೀ ಶಸ್ತ್ರಾಸ್ತ್ರಗಳನ್ನು ಮಾಸ್ಕೋದ ಪಡೆಗಳಿಗೆ ವರ್ಗಾಯಿಸಲಾಗುತ್ತದೆ ಎಂದು ರಷ್ಯಾ ಹೇಳಿದೆ.
ರಷ್ಯಾ ಆಂತರಿಕ ದಂಗೆ
ರಷ್ಯಾ-ಉಕ್ರೇನ್ ಯುದ್ಧದ ನಡುವೆ ರಷ್ಯಾದಲ್ಲಿ ಆಂತರಿಕ ದಂಗೆ ಭುಗಿಲೆದ್ದಿತ್ತು. ರಷ್ಯಾ ವಿರುದ್ಧವೇ ಅಲ್ಲಿನ ಖಾಸಗಿ ಸೇನಾ ಪಡೆ ವ್ಯಾಗ್ನರ್ ಬಂಡಾಯವೆದ್ದಿತ್ತು. ಉಕ್ರೇನ್ನಲ್ಲಿ ರಷ್ಯಾ ಪರವಾಗಿ ಹೋರಾಡುತ್ತಿದ್ದ ಯೆವ್ಗೆನಿ ಪ್ರಿಗೊಜಿನ್ ನೇತೃತ್ವದ ವ್ಯಾಗ್ನರ್ ಪಡೆ ರಷ್ಯಾದ ರಕ್ಷಣಾ ವ್ಯವಸ್ಥೆಯ ವಿರುದ್ಧವೇ ತಿರುಗಿ ಬಿದ್ದಿತ್ತು. ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಈ ದಂಗೆಯನ್ನು "ದೇಶದ್ರೋಹ" ಎಂದು ಖಂಡಿಸಿದ್ದರು. ಎಂದಿಗೂ ಕಂಡಿರದ "ಕಠಿಣ ಶಿಕ್ಷೆ" ನೀಡುವ ಎಚ್ಚರಿಕೆ ನೀಡಿದ್ದರು. ರಷ್ಯಾ ಸರ್ಕಾರ ಮತ್ತು ವ್ಯಾಗ್ನರ್ ನಾಯಕ ಯೆವ್ಗೆನಿ ಪ್ರಿಗೊಜಿನ್ ನಡುವೆ ನಡೆದ ಸಂಧಾನ ಸಭೆಯಲ್ಲಿ ದಂಗೆ ಕೈಬಿಡುವುದಾಗಿ ಪ್ರಿಗೊಜಿನ್ ಒಪ್ಪಿಕೊಂಡಿದ್ದರು. ಆದರೆ ಇದಕ್ಕೆ ಪ್ರಮುಖ ಕಾರಣ ಪುಟಿನ್ ಆಪ್ತರೂ ಆಗಿರುವ ಬೆಲರೂಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ. ಬೆಲರೂಸ್ ಅಧ್ಯಕ್ಷ ಕೂಡ ಈ ಸಂಧಾನ ಸಭೆಯಲ್ಲಿ ಭಾಗಿಯಾಗಿ ಮಾತುಕತೆ ನಡೆಸಿದ್ದರು.
ಬೆಲಾರಸ್ನಲ್ಲಿ ವ್ಯಾಗ್ನರ್ ಮುಖ್ಯಸ್ಥ
ದೇಶ ತೊರೆದರೆ ಮಾತ್ರ ಪ್ರಿಗೊಜಿನ್ ವಿರುದ್ಧ ಸಶಸ್ತ್ರ ದಂಗೆಯ ಆರೋಪವನ್ನು ಕೈಬಿಡುವುದಾಗಿ ಷರತ್ತು ವಿಧಿಸಲಾಗಿತ್ತು. ಹೀಗಾಗಿ ಪ್ರಿಗೊಜಿನ್ ರಷ್ಯಾ ತೊರೆದು ಬೆಲಾರಸ್ಗೆ ಪಲಾಯನ ಮಾಡಿದ್ದಾರೆ. ಬೆಲಾರಸ್ನಲ್ಲಿ ಪ್ರಿಗೊಜಿನ್ಗೆ ಆಶ್ರಯ ನೀಡಲು ಸಂಧಾನ ಸಭೆಯಲ್ಲಿ ಲುಕಾಶೆಂಕೊ ಒಪ್ಪಿಕೊಂಡಿದ್ದರು. ಹಾಗೆಯೇ ತನ್ನ ವ್ಯಾಗ್ನರ್ ಪಡೆಗೆ ಉಕ್ರೇನ್ಗೆ ಮರಳಿ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದಾರೆ.