ಚಂದ್ರನ ಬಳಿಕ ಸೂರ್ಯನೆಡೆ ಇಸ್ರೋ ನಡೆ; ಸೆಪ್ಟೆಂಬರ್ ಮೊದಲ ವಾರದಲ್ಲೇ ಆದಿತ್ಯ-ಎಲ್1 ಉಡಾವಣೆ
Aug 27, 2023 07:45 AM IST
ಸೂರ್ಯನತ್ತ ಇಸ್ರೋ ಚಿತ್ತ (ಸಾಂಕೇತಿಕ ಚಿತ್ರ)
- Aditya L1 Mission: ಸೆಪ್ಟೆಂಬರ್ ಮೊದಲ ವಾರದಲ್ಲಿ ಆದಿತ್ಯ ಎಲ್1 ಮಿಷನ್ ಅನ್ನು ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ತಿಳಿಸಿದ್ದು, ಭಾರತದ ಮೊದಲ ಸೌರ ಮಿಷನ್ ಇದಾಗಿರಲಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡರ್ ಅನ್ನು ಇಳಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಸೂರ್ಯನತ್ತ ಚಿತ್ತ ಹರಿಸಿದೆ. ಭಾರತದ ಮೊದಲ ಸೌರ ಮಿಷನ್ ಇದಾಗಿರಲಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಆದಿತ್ಯ ಎಲ್1 ಮಿಷನ್ ಅನ್ನು ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ತಿಳಿಸಿದ್ದಾರೆ.
"ಆದಿತ್ಯ ಎಲ್1 ಉಪಗ್ರಹ ಸಿದ್ಧವಾಗಿದೆ. ಇದು ಶ್ರೀಹರಿಕೋಟಾ ತಲುಪಿದ್ದು, ಪಿಎಸ್‌ಎಲ್‌ವಿ (PSLV) ರಾಕೆಟ್ ಜೊತೆ ಸಂಪರ್ಕ ಹೊಂದಿದೆ. ಇಸ್ರೋ ಮತ್ತು ದೇಶದ ಮುಂದಿನ ಗುರಿ ಅದರ ಉಡಾವಣೆ. ಉಡಾವಣೆ ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆಯಲಿದೆ. ಎರಡು ದಿನಗಳಲ್ಲಿ ದಿನಾಂಕವನ್ನು ಪ್ರಕಟಿಸಲಾಗುವುದು" ಎಂದು ಇಸ್ರೋ ಮುಖ್ಯಸ್ಥರು ಹೇಳಿದ್ದಾರೆ.
ಹೀಗಾಗಿ ಶೀಘ್ರದಲ್ಲೇ ಇಸ್ರೋ ಆದಿತ್ಯ-ಎಲ್1 ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಉಡಾವಣೆ ಮಾಡಲಿದೆ. "ಉಡಾವಣೆಯ ನಂತರ, ಅದು ದೀರ್ಘವೃತ್ತದ ಕಕ್ಷೆಗೆ ಹೋಗುತ್ತದೆ ಮತ್ತು ಅಲ್ಲಿಂದ ಅದು L1 ಪಾಯಿಂಟ್‌ಗೆ ಪ್ರಯಾಣಿಸುತ್ತದೆ, ಇದು ಸುಮಾರು 120 ದಿನಗಳನ್ನು ತೆಗೆದುಕೊಳ್ಳುತ್ತದೆ" ಎಂದು ಸೋಮನಾಥ್ ತಿಳಿಸಿದ್ದಾರೆ.
ಏನಿದು ಆದಿತ್ಯ-ಎಲ್1 ?
ಆದಿತ್ಯ-L1 ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಸೌರ ಮಿಷನ್ ಆಗಿದೆ. ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ (15 ಲಕ್ಷ ಕಿಲೋ ಮೀಟರ್) ದೂರದಲ್ಲಿ ಲ್ಯಾಗ್ರೇಂಜ್ ಪಾಯಿಂಟ್ 1 (L1) ಇದ್ದು, ಆದಿತ್ಯ-ಎಲ್1 ಉಪಗ್ರಹವು ಈ ಎಲ್1 ಬಿಂದುವಿಗೆ ತೆರಳಲಿದೆ. ಅಲ್ಲಿ ತನ್ನ 7 ವೈಜ್ಞಾನಿಕ ಪೇಲೋಡ್ಗಳನ್ನು (ಉಪಕರಣಗಳು) ಬಳಸಿಕೊಂಡು ಸೂರ್ಯನ ಕುರಿತು ಅಧ್ಯಯನ ಮಾಡಲಿದೆ. ಇದು ನಿರಂತರವಾಗಿ ಸೂರ್ಯನನ್ನು ವೀಕ್ಷಿಸಲು ಅನುವು ಮಾಡಿಕೊಡುವ ಮೂಲಕ ವಿಜ್ಞಾನಿಗಳು ಸೌರ ಚಟುವಟಿಕೆಗಳನ್ನು ಮತ್ತು ನೈಜ ಸಮಯದಲ್ಲಿ ಬಾಹ್ಯಾಕಾಶ ಹವಾಮಾನದ ಮೇಲೆ ಅವುಗಳ ಪ್ರಭಾವವನ್ನು ಅಧ್ಯಯನ ಮಾಡಲು ಸಹಾಯ ಮಾಡಿಕೊಡುತ್ತದೆ.
ಚಂದ್ರಯಾನ-3 ಯಶಸ್ವಿ
ಆಗಸ್ಟ್ 23 ರಂದು ಚಂದ್ರಯಾನ 3 ಯಶಸ್ವಿಯಾಗಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡ್ ಮಾಡಿಸುವಲ್ಲಿ ಇಸ್ರೋ ಯಶಸ್ವಿಯಾಗಿತ್ತು. ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇದೀಗ ಮತ್ತೊಂದು ಸಾಹಸಕ್ಕೆ ಇಸ್ರೋ ಕೈ ಹಾಕಿದ್ದು, ಸೌರ ಮಿಷನ್ನೆಡೆ ಕುತೂಹಲ ಹೆಚ್ಚಾಗಿದೆ.