Rishi Sunak: ಯುಕೆ-ಚೀನಾ ವಿದೇಶಾಂಗ ಸಂಬಂಧದ "ಸುವರ್ಣ ಯುಗ" ಅಂತ್ಯ: ಡ್ರ್ಯಾಗನ್ ರಾಷ್ಟ್ರಕ್ಕೆ ರಿಷಿ ಸುನಕ್ ಸಂದೇಶ!
Nov 29, 2022 08:00 AM IST
ರಿಷಿ ಸುನಕ್ (ಸಂಗ್ರಹ ಚಿತ್ರ)
- ವಿದೇಶಾಂಗ ನೀತಿಯ ಕುರಿತಾದ ತಮ್ಮ ಮೊದಲ ಪ್ರಮುಖ ಭಾಷಣದಲ್ಲಿ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಬ್ರಿಟನ್ ಮತ್ತು ಚೀನಾ ನಡುವಿನ "ಸುವರ್ಣ ಯುಗ" ಅಂತ್ಯವಾಗಿದೆ ಎಂದು ಹೇಳಿರುವುದು ಜಾಗತಿಕವಾಗಿ ಗಮನ ಸೆಳೆದಿದೆ. ಚೀನಾ ಜೊತೆಗಿನ ನಮ್ಮ ವಿದೇಶಾಂಗ ನೀತಿಯನ್ನು ಪರಿಷ್ಕರಿಸುವ ಸಮಯ ಇದೀಗ ಬಂದಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮಾರ್ಮಿಕವಾಗಿ ಹೇಳಿದ್ದಾರೆ.
ಲಂಡನ್: ವಿದೇಶಾಂಗ ನೀತಿಯ ಕುರಿತಾದ ತಮ್ಮ ಮೊದಲ ಪ್ರಮುಖ ಭಾಷಣದಲ್ಲಿ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಬ್ರಿಟನ್ ಮತ್ತು ಚೀನಾ ನಡುವಿನ "ಸುವರ್ಣ ಯುಗ" ಅಂತ್ಯವಾಗಿದೆ ಎಂದು ಹೇಳಿರುವುದು ಜಾಗತಿಕವಾಗಿ ಗಮನ ಸೆಳೆದಿದೆ. ಲಂಡನ್‌ನ ಗಿಲ್ಡ್‌ಹಾಲ್‌ನಲ್ಲಿ ನಡೆದ ಲಾರ್ಡ್ ಮೇಯರ್ ಔತಣಕೂಟದಲ್ಲಿ ಭಾಷಣ ಮಾಡಿದ ರಿಷಿ ಸುನಕ್, ಚೀನಾದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಟೀಕಿಸಿದರು.
ಚೀನಾ ಜೊತೆಗಿನ ನಮ್ಮ ವಿದೇಶಾಂಗ ನೀತಿಯನ್ನು ಪರಿಷ್ಕರಿಸುವ ಸಮಯ ಇದೀಗ ಬಂದಿದೆ. ಚೀನಾದ ಸರ್ವಾಧಿಕಾರಿ ಆಡಳಿತ, ಬ್ರಿಟನ್‌ನ ಮೌಲ್ಯಗಳು ಮತ್ತು ಆಸಕ್ತಿಗೆ ವ್ಯವಸ್ಥಿತ ಸವಾಲೊಡ್ಡುತ್ತಿದೆ ಎಂದು ರಿಷಿ ಸುನಕ್ ಅಭಿಪ್ರಾಯಪಟ್ಟಿದ್ದಾರೆ.
ವ್ಯಾಪಾರವು ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗೆ ಕಾರಣವಾಗುತ್ತದೆ ಎಂಬ ನಿಷ್ಕಪಟ ಕಲ್ಪನೆಯೊಂದಿಗೆ, ಬ್ರಿಟನ್-ಚೀನಾ ನಸುವಿನ ರಾಜತಾಂತ್ರಿಕ ಸಂಬಂಧದ 'ಸುವರ್ಣ ಯುಗ'ಕ್ಕೆ ನಾವು ನಾಂದಿ ಹಾಡಿದ್ದೇವು. ಆದರೆ ಚೀನಾ ನಮ್ಮ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತಿರುವುದನ್ನು ನಾವು ಗುರುತಿಸುತ್ತಿದ್ದೇವೆ ಎಂದು ರಿಷಿ ಸುನಕ್ ಹೇಳಿದ್ದಾರೆ.
ನಮ್ಮ ಆರ್ಥಿಕ ಭದ್ರತೆಯನ್ನು ರಕ್ಷಿಸುವ ಬಗ್ಗೆ ದೀರ್ಘಾವಧಿಯ ದೃಷ್ಟಿಕೋನವನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ. ಆದರೆ ಚೀನಾದೊಂದಿಗೆ ಈ ಮೊದಲಿನ ಆರ್ಥಿಕ ಹಾಗೂ ರಾಜತಾಂತ್ರಿಕ ಸಂಬಂಧ ಹೊಂದಲು ಸಾಧ್ಯವಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತಿದ್ದೇನೆ ಎಂದು ರಿಷಿ ಸುನಕ್ ಹೇಳಿದ್ದಾರೆ. ರಿಷಿ ಸುನಕ್ ಅವರ ಈ ಖಡಕ್ ಮಾತುಗಳು ಜಾಗತಿಕವಾಗಿ ಗಮನ ಸೆಳೆದಿವೆ.
ಆದಾಗ್ಯೂ ಯುಕೆ-ಚೀನಾದ ಜಾಗತಿಕ ಪ್ರಾಮುಖ್ಯತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದಿರುವ ರಿಷಿ ಸುನಕ್, ಇದಕ್ಕಾಗಿ ನಮ್ಮ ಮೌಲ್ಯಗಳನ್ನು ಬಲಿಕೊಡಲು ನಾವು ಸಿದ್ಧರಿಲ್ಲ ಎಂಬ ಸಂದೇಶವನ್ನು ಕ್ಸಿ ಜಿನ್‌ಪಿಂಗ್ ಅವರಿಗೆ ರವಾನಿಸಿದ್ದಾರೆ.
ಕೋವಿಡ್ ಲಾಕ್‌ಡೌನ್‌ಗಳ ವಿರುದ್ಧ ಚೀನಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಯುಕೆ ಪ್ರಧಾನಿ, ಚೀನಾದಲ್ಲಿ ಬಿಬಿಸಿ ವರದಿಗಾರನ ಇತ್ತೀಚಿನ ಬಂಧನವನ್ನೂ ಕಟುವಾಗಿ ಟೀಕಿಸಿದರು. ಯುಕೆಯಲ್ಲಿ ಚೀನಾ ತನ್ನ ಪ್ರಭಾವವನ್ನು ವಿಸ್ತರಿಸುವುದನ್ನು ತಡೆಯಲು, ರಾಷ್ಟ್ರೀಯ ಭದ್ರತೆ ಮತ್ತು ಹೂಡಿಕೆ ಕಾಯ್ದೆಯಡಿ ತೆಗೆದುಕೊಂಡ ಕ್ರಮಗಳನ್ನು ಇದೇ ವೇಳೆ ರಿಷಿ ಸುನಕ್ ಪಟ್ಟಿ ಮಾಡಿದರು.
ಇಂಡೋ-ಪೆಸಿಫಿಕ್‌ನಲ್ಲಿ ಬ್ರಿಟನ್‌ನ ನಿಲುವನ್ನು ಪುನರುಚ್ಚರಿಸಿದ ಸುನಕ್, 2050ರ ವೇಳೆಗೆ ಇಂಡೋ-ಪೆಸಿಫಿಕ್ ಯುರೋಪ್ ಮತ್ತು ಉತ್ತರ ಅಮೆರಿಕಾದಿಂದ ಕೇವಲ ಕಾಲು ಭಾಗದಷ್ಟು ಜಾಗತಿಕ ಬೆಳವಣಿಗೆಯನ್ನು ತಲುಪಿಸುತ್ತದೆ ಎಂದು ಹೇಳಿದರು, ಅದಕ್ಕಾಗಿಯೇ ಬ್ರಿಟನ್ ಟ್ರಾನ್ಸ್-ಪೆಸಿಫಿಕ್ ವ್ಯಾಪಾರ ಒಪ್ಪಂದಕ್ಕೆ ಸೇರಿಕೊಂಡಿತು, ಸಮಗ್ರ ಮತ್ತು ಟ್ರಾನ್ಸ್-ಪೆಸಿಫಿಕ್ ಪಾಲುದಾರಿಕೆಗಾಗಿ ಪ್ರಗತಿಶೀಲ ಒಪ್ಪಂದ (CPTPP), ಭಾರತದೊಂದಿಗೆ ಹೊಸ ಎಫ್‌ಟಿಎ ಒಪ್ಪಂದ ನಮ್ಮ ಭವಿಷ್ಯವನ್ನು ಸುಂದರಗೊಳಿಸಲಿದೆ ಎಂಬ ವಿಶ್ವಾಸ ಇರುವುದಾಗಿ ರಿಷಿ ಸುನಕ್ ಹೇಳಿದರು.
ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ಬಹು ಆಯಾಮದ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿವೆ. ಉಭಯ ರಾಷ್ಟ್ರಗಳು ದ್ವಿಪಕ್ಷೀಯ ವ್ಯಾಪಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಉಭಯ ದೇಶಗಳು ಜನವರಿ 2022ರಲ್ಲಿ FTAಗಾಗಿ ಔಪಚಾರಿಕ ಮಾತುಕತೆಗಳನ್ನು ಪ್ರಾರಂಭಿಸಲು ಒಪ್ಪಿಕೊಂಡಿದ್ದು, ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಮುನ್ನಡೆಸುವ ಗುರಿಯನ್ನು ಹೊಂದಿವೆ.
ಈ ತಿಂಗಳ ಆರಂಭದಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ರಿಷಿ ಸುನಕ್ ಭೇಟಿಯಾಗಬೇಕಿತ್ತು ಆದರೆ ಉಕ್ರೇನಿಯನ್ ಗಡಿಯ ಸಮೀಪವಿರುವ ಪೋಲಿಷ್ ಹಳ್ಳಿಯಲ್ಲಿ ಕ್ಷಿಪಣಿ ದಾಳಿಯ ನಂತರ, ನ್ಯಾಟೋ ಸದಸ್ಯ ರಾಷ್ಟ್ರಗಳ ತುರ್ತು ಸಭೆಯಲ್ಲಿ ಭಾಗವಹಿಸಲು ಸುನಕ್ ತೆರಳಿದ್ದರಿಂದ, ಇಬ್ಬರ ಭೇಟಿ ಸಾಧ್ಯವಾಗಲಿಲ್ಲ.
ವಿಭಾಗ