7 ದಿನಗಳ ಹಿಂದೆ ಸ್ಟೇಷನರಿ ಸಾಮಗ್ರಿಗಳ ಕಂಪನಿ ಡೊಮ್ಸ್ ಐಪಿಒ ಮೇಲೆ 15000 ರೂ ಹೂಡಿಕೆ ಮಾಡಿದ್ದರೆ, ಇಂದು ಅದು 25000 ರೂ
Dec 20, 2023 02:46 PM IST
ಡೊಮ್ಸ್ ಇಂಡಸ್ಟ್ರೀಸ್ ಷೇರುವಹಿವಾಟು ಇಂದು ಶುರುವಾಗಿದ್ದು, ಮೊದಲ ದಿನವೇ ಹೂಡಿಕೆದಾರರಿಗೆ ಶೇಕಡ 77 ಲಾಭವನ್ನು ಒದಗಿಸಿದೆ.
ಭಾರತದಲ್ಲಿ ಬಹುಶಃ ಡೊಮ್ಸ್ ಸ್ಟೇಷನರಿ ಸಾಮಗ್ರಿಗಳನ್ನು ಬಳಸದವರೇ ಇಲ್ಲ. ಈ ಕಂಪನಿ ಷೇರುಪೇಟೆ ಪ್ರವೇಶಿಸಿದ್ದು, ಡಿಸೆಂಬರ್ 13ರ ತನಕ ಐಪಿಒ ಖರೀದಿಗೆ ಚಂದಾದಾರಿಕೆ ಸಲ್ಲಿಸಲು ಅವಕಾಶ ನೀಡಿತ್ತು. ಡಿಸೆಂಬರ್ 15ಕ್ಕೆ ಷೇರುಗಳ ಹಂಚಿಕೆಯಾಗಿದ್ದು, ಇಂದು (ಡಿ.20) ಷೇರುಪೇಟೆಯಲ್ಲಿ ಮೊದಲ ವಹಿವಾಟು ನಡೆಸಿತು. ಒಂದೇ ವಾರದಲ್ಲಿ ಹೂಡಿಕೆದಾರರಿಗೆ ಶೇ.77 ಲಾಭ ಒದಗಿಸಿತು.
ಭಾರತದ ಅತಿದೊಡ್ಡ ಸ್ಟೇಷನರಿ ಸಾಮಗ್ರಿಗಳ ಕಂಪನಿ ಡೊಮ್ಸ್ ಇಂಡಸ್ಟ್ರಿ (DOMS Industries) ಭಾರತೀಯ ಷೇರುಪೇಟೆ ಪ್ರವೇಶಿಸಿದ್ದು, ಇಂದು (ಡಿ.20) ಮೊದಲ ವಹಿವಾಟಿನಲ್ಲೇ ತನ್ನ ಐಪಿಒ ದರಕ್ಕಿಂತ ಶೇಕಡ 77.2 ಹೆಚ್ಚು ದರಕ್ಕೇರಿ ಗಮನಸೆಳೆದಿದೆ.
ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ನಲ್ಲಿ ಡೊಮ್ಸ್ ಇಂಡಸ್ಟ್ರೀಸ್ ಷೇರುಗಳ ವಹಿವಾಟು ಇಂದು (ಡಿ.20) ಶುರುವಾಗಿದೆ. ಈ ಕಂಪನಿಯ ಷೇರುಗಳ ಮುಖಬೆಲೆ 10 ರೂಪಾಯಿ ಇದ್ದು, ಐಪಿಒ ದರ 750 ರೂಪಾಯಿಯಿಂದ 790 ರೂಪಾಯಿ ನಿಗದಿಯಾಗಿತ್ತು. ಇಂದು ಇವು ಎನ್‌ಎಸ್‌ಇ ಮತ್ತು ಬಿಎಸ್‌ಇನಲ್ಲಿ 1,400 ರೂಪಾಯಿಗೆ ಲಿಸ್ಟ್ (ವಹಿವಾಟು ಶುರುಮಾಡಿದೆ) ಆಗಿದೆ.
ಷೇರುಪೇಟೆಯಲ್ಲಿ ತನ್ನ ಮೊದಲ ದಿನದ ವಹಿವಾಟಿನಲ್ಲಿ ಡೊಮ್ಸ್ ಷೇರು ಬೆಲೆ (DOMS Share Price) ಬಿಎಸ್‌ಇನಲ್ಲಿ 1408.60 ರೂಪಾಯಿಯಂತೆ, ಎನ್‌ಎಸ್‌ಇನಲ್ಲಿ 1,406.30 ರೂಪಾಯಿಯಂತೆ ವಹಿವಾಟು ನಡೆಸುತ್ತಿದೆ. ಅಪರಾಹ್ನ 1.10ರ ಸುಮಾರಿಗೆ ಡೊಮ್ಸ್‌ನ ಮಾರುಕಟ್ಟೆ ಬಂಡವಾಳ 8536.87 ಕೋಟಿ ರುಪಾಯಿಗೆ ಏರಿತ್ತು.
ಡೊಮ್ಸ್ ಐಪಿಒ ಚಂದಾದಾರಿಕೆ ಅವಧಿ ಡಿಸೆಂಬರ್ 13ಕ್ಕೆ ಕೊನೆಗೊಂಡಿತ್ತು. ಐಪಿಒ ದರ ಮಟ್ಟವನ್ನು 750 ರೂಪಾಯಿಯಿಂದ 790 ರೂಪಾಯಿಗೆ ನಿಗದಿ ಮಾಡಲಾಗಿತ್ತು. ಐಪಿಒ ಲಾಟ್ ಗಾತ್ರ 18 ಷೇರುಗಳದ್ದಾಗಿದ್ದು, ಹೆಚ್ಚುವರಿ ಷೇರುಗಳು ಬೇಕಾದರೆ ಮತ್ತೆ 18ರ ಲಾಟ್ ಅನ್ನು ಖರೀದಿಸಲು ಚಂದಾದಾರಿಕೆ ಅರ್ಜಿ ಸಲ್ಲಿಸಬೇಕಾಗಿತ್ತು. ಮೂರು ದಿನಗಳ ಅವಧಿಯಲ್ಲಿ ನಿಗಿದಯಾದ ಷೇರುಗಳಿಗಿಂತ 93.52 ಪಟ್ಟು ಹೆಚ್ಚು ಹೂಡಿಕೆ ಬಿಡ್ ಸಲ್ಲಿಕೆಯಾಗಿದ್ದವು. ಡಿಸೆಂಬರ್ 15ರಂದು ಷೇರುಗಳನ್ನು ಹಂಚಿಕೆ ಮಾಡಲಾಗಿತ್ತು. ಗ್ರೇ ಮಾರ್ಕೆಟ್‌ನಲ್ಲಿ ಬೇಡಿಕೆಗೆ ಅನುಗುಣವಾಗಿ ಅದರ ಷೇರು ಮೌಲ್ಯ ಏರುತ್ತ ಸಾಗಿತ್ತು.
ವಿಶೇಷ ಎಂದರೆ 1,200 ಕೋಟಿ ರೂಪಾಯಿ ಹೂಡಿಕೆ ಸಂಗ್ರಹಿಸುವುದಕ್ಕಾಗಿ ಡೊಮ್ಸ್ ಪ್ರಯತ್ನಿಸಿತ್ತು. ಆದರೆ ಮಾರುಕಟ್ಟೆಯಲ್ಲಿ ಅದಕ್ಕೆ ಸಿಕ್ಕ ಪ್ರತಿಸ್ಪಂದನೆ ಅಭೂತಪೂರ್ವವಾದುದು. 65,000 ಕೋಟಿ ರೂಪಾಯಿ ಮೌಲ್ಯದ ಚಂದಾದಾರಿಕೆ ಬಿಡ್ ಸಲ್ಲಿಕೆಯಾಗಿದ್ದವು!
ಡೊಮ್ಸ್ ಇಂಡಸ್ಟ್ರೀಸ್ ಐಪಿಒದಲ್ಲಿ ಶೇ.75 ಷೇರುಗಳನ್ನು ಅರ್ಹ ಸಾಂಸ್ಥಿಕ ಖರೀದಿದಾರರಿಗೆ, ಶೇ.15 ರಷ್ಟು ಸಾಂಸ್ಥಿಕ ಹೂಡಿಕೆದಾರರಿಗೆ ಮತ್ತು ಶೇ.10 ರಷ್ಟು ಚಿಲ್ಲರೆ ಹೂಡಿಕೆದಾರರಿಗೆ ಮೀಸಲಿಟ್ಟಿತ್ತು. ಇನ್ನು ಉದ್ಯೋಗಿ ಮೀಸಲಾತಿ ಭಾಗದಲ್ಲಿ ಬಿಡ್ ಮಾಡುವ ಅರ್ಹ ಉದ್ಯೋಗಿಗಳಿಗೆ ಪ್ರತಿ ಈಕ್ವಿಟಿ ಷೇರಿನ ದರದಲ್ಲಿ 75 ರೂಪಾಯಿ ರಿಯಾಯಿತಿಯನ್ನೂ ನೀಡಿತ್ತು.
ಡೊಮ್ಸ್ ಇಂಡಸ್ಟ್ರೀಸ್ ಗ್ರೂಪ್‌ನಲ್ಲಿ ಕ್ಯಾನ್ಸನ್ ಎಸ್‌ಎಎಸ್, ಕ್ಲಾಪ್‌ಜಾಯ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್, ಡೇಲರ್ ರೌನಿ ಲಿಮಿಟೆಡ್, ಡಿಕ್ಸನ್ ಕಮರ್ಷಿಯಾಲಿಜಡೋರಾ ಎಸ್‌ಎ ಡಿ ಸಿವಿ, ಡಿಕ್ಸನ್ ಟಿಕೊಂಡೆರೋಗಾ ಕಂಪನಿ, ಇನ್ಕ್ಸನ್ ಪೆನ್ಸ್ & ಸ್ಟೇಷನರಿ ಪ್ರೈವೇಟ್ ಲಿಮಿಟೆಡ್, ಫಿಲಾ ಅರ್ಜೆಂಟೀನಾ ಎಸ್.ಎ, ಫಿಲಾ ಆರ್ಟ್ ಮತ್ತು ಕ್ರಾಫ್ಟ್ ಲಿಮಿಟೆಡ್, ಫಿಲಾ ಕಾನ್ಸನ್ ಡು ಬ್ರಸಿಲ್ ಪ್ರೊಡೊಕ್ಟೋಸ್ ಡೆ ಆರ್ಟೆಸ್ ಎ ಎಸ್ಕೋಲರ್ ಎಲ್‌ಟಿಡಿಎ, ಎಫ್‌ಐಎಲ್‌ಎ ಚಿಲಿ ಎಲ್‌ಟಿಡಿಎ, ಫಿಲಾ ಡಿಕ್ಸನ್ ಸ್ಟೇಷನರಿ (ಕುನ್ಶನ್) ಕಂ., ಲಿಮಿಟೆಡ್, ಫಿಕ್ಸಿ ಅಡ್ಹೆಸಿವ್ಸ್ ಪ್ರೈವೇಟ್ ಲಿಮಿಟೆಡ್, ಜೋಹಾನ್ ಫ್ರೋಸ್ಚೆಸ್ ಲೈರಾ ಬ್ಲೆಸ್ಟಿಫ್ಟ್ ಫ್ಯಾಬ್ರಿಕ್ ಜಿಎಂಬಿಎಚ್ & ಕಂಪನಿ. ಕೆಜಿ, ಕಿಕಾ ವಿ-ಕಾಮ್ ಪ್ರೈವೇಟ್ ಲಿಮಿಟೆಡ್, ಪೊಟಿ. ಲೈರಾ ಅಕ್ರೆಲಕ್ಸ್, ಸೇಂಟ್ ಕತ್ಬರ್ಟ್ಸ್ ಮಿಲ್ ಲಿಮಿಟೆಡ್, ಮತ್ತು ಯುನಿರೈಟ್ ಪೆನ್ಸ್ ಮತ್ತು ಪ್ಲಾಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್‌ಗಳು ಒಳಗೊಂಡಿವೆ.
ಸಂತೋಷ್ ರಸಿಕ್ಲಾಲ್ ರವೇಶಿಯಾ, ಸಂಜಯ್ ಮನ್ಸುಖಲಾಲ್ ರಜನಿ, ಕೇತನ್ ಮನ್ಸುಖಲಾಲ್ ರಜನಿ, ಚಾಂದಿನಿ ವಿಜಯ್ ಸೋಮಯ್ಯ, ಮತ್ತು ಫಿಲಾ ಈ ಡೊಮ್ಸ್ ಇಂಡಸ್ಟ್ರಿಯ ಪ್ರೊಮೋಟರ್‌ಗಳು ಅಥವಾ ಪ್ರವರ್ತಕರು.