Sudan conflict: ಸಂಘರ್ಷ ಪೀಡಿತ ಸುಡಾನ್‌ನಿಂದ ಕೆಲವು ಭಾರತೀಯರನ್ನು ಸುರಕ್ಷಿತವಾಗಿ ಕರೆತಂದ ಸೌದಿ ಅರೇಬಿಯಾ
Apr 23, 2023 07:35 AM IST
Sudan conflict: ಸಂಘರ್ಷ ಪೀಡಿತ ಸುಡಾನ್‌ನಿಂದ ಕೆಲವು ಭಾರತೀಯರನ್ನು ಸುರಕ್ಷಿತವಾಗಿ ಕರೆತಂದ ಸೌದಿ ಅರೇಬಿಯಾ
ಸೇನೆ ಮತ್ತು ಅರೆಸೇನೆ ಸಂಘರ್ಷದಲ್ಲಿ (Sudan conflict ) ಸುಡಾನ್‌ನಲ್ಲಿ ಸಿಲುಕಿರುವ ವಿದೇಶಿಗರ ರಕ್ಷಣೆಗೆ ಚಾಲನೆ ದೊರಕಿದೆ. ಭಾರತ ಸೇರಿದಂತೆ ಇತರ 12 ದೇಶಗಳ ಸುಮಾರು 66 ಪ್ರಜೆಗಳನ್ನೂ ಕರೆತರಲಾಗಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.
ಸುಡಾನ್: ಸೇನೆ ಮತ್ತು ಅರೆಸೇನೆ ಸಂಘರ್ಷದಲ್ಲಿ (Sudan conflict ) ಸುಡಾನ್‌ನಲ್ಲಿರುವ ಜನರು ಜೀವಭಯದಿಂದ ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಜನರು ತಮ್ಮ ದೇಶಗಳಿಗೆ ಹಿಂತುರುಗಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಸಂಘರ್ಷಪೀಡಿತ ಸುಡಾನ್‌ನಿಂದ ವಿದೇಶಿ ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಸೇರಿದಂತೆ 150 ಕ್ಕೂ ಹೆಚ್ಚು ಜನರನ್ನು ಸುಡಾನ್‌ನಿಂದ ರಕ್ಷಿಸಲಾಗಿದೆ ಮತ್ತು ಜೆಡ್ಡಾಕ್ಕೆ ಆಗಮಿಸಿದ್ದಾರೆ ಎಂದು ಸೌದಿ ವಿದೇಶಾಂಗ ಸಚಿವಾಲಯ (Saudi Arabia) ತಿಳಿಸಿದೆ. ಸೈನ್ಯದ ಇತರ ಶಾಖೆಗಳ ಬೆಂಬಲದೊಂದಿಗೆ ಸೌದಿ ಅರೇಬಿಯಾದ ನೌಕಾ ಪಡೆಗಳು ನಾಗರಿಕರ ಮೊದಲ ಹಂತದ ಘೋಷಿತ ಸ್ಥಳಾಂತರಿಸುವಿಕೆ ನಡೆಸಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.
91 ಸೌದಿ ನಾಗರಿಕರು ಸುರಕ್ಷಿತವಾಗಿ ಆಗಮಿಸಿದ್ದಾರೆ. ಭಾರತ ಸೇರಿದಂತೆ ಇತರ 12 ದೇಶಗಳ ಸುಮಾರು 66 ಪ್ರಜೆಗಳನ್ನೂ ಕರೆತರಲಾಗಿದೆ. ಕುವೈತ್, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್, ಟುನೀಶಿಯಾ, ಪಾಕಿಸ್ತಾನ, ಬಲ್ಗೇರಿಯಾ, ಬಾಂಗ್ಲಾದೇಶ, ಫಿಲಿಪೈನ್ಸ್, ಕೆನಡಾ ಮತ್ತು ಬುರ್ಕಿನಾ ಫಾಸೊದ ನಾಗರಿಕರನ್ನು ಸಹ ಸ್ಥಳಾಂತರಿಸಲಾಗಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.
ಈ ರೀತಿ ಕರೆತಂದವರಲ್ಲಿ ರಾಜತಾಂತ್ರಿಕರು ಮತ್ತು ಸರಕಾರಿ ಅಧಿಕಾರಿಗಳು ಸೇರಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಸುಡಾನ್ ಸಂಘರ್ಷದಲ್ಲಿ ಭಾರತೀಯರ ಪರಿಸ್ಥಿತಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಅವರೊಂದಿಗೆ ಸುಡಾನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಕುರಿತು ಚರ್ಚಿಸಿದ್ದರು.
ಸುಡಾನ್ ರಾಜಧಾನಿ ಖಾರ್ಟೂಮ್ ಸೇರಿದಂತೆ ಹಲವು ನಗರಗಳಲ್ಲಿ ಗುಂಡಿನ ದಾಳಿ ಸೇರಿದಂತೆ ಭೀಕರ ಯುದ್ಧವೇ ನಡೆದಿದೆ. ಅಲ್ಲಿ ಆಹಾರ, ವಿದ್ಯುತ್ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಇದರೊಂದಿಗೆ ಅನಿರೀಕ್ಷಿತ ಗುಂಡಿನ ಸುರಿಮಳೆಯಿಂದ ಹಲವು ಜನರು ಮೃತಪಟ್ಟಿದ್ದಾರೆ.
ಆಂತರಿಕ ಕಲಹದಿಂದ ಅಕರಶಃ ನಲುಗಿರುವ ಸುಡಾನ್‌ನಿಂದ, ವಿದೇಶಿ ನಾಗರಿಕರ ಸುರಕ್ಷಿತ ಸ್ಥಳಾಂತರಕ್ಕೆ ಅಲ್ಲಿನ ಸೇನೆಯು ಅನುಮತಿ ನೀಡಿದೆ. ರಾಜಧಾನಿ ಖಾರ್ಟೌಮ್‌ನಲ್ಲಿ ಸತತ ಮೂರು ದಿನಗಳಿಂದ ಗುಂಡಿನ ಚಕಮಕಿ ನಡೆಯುತ್ತಿದ್ದು, ವಿದೇಶಿ ಪ್ರಜೆಗಳ ಸುರಕ್ಷಿತ ಸ್ಥಳಾಂತರಕ್ಕಾಗಿ ವಿಮಾನ ನಿಲ್ದಾಣಗಳನ್ನು ತೆರೆಯುವುದಾಗಿ ಸೇನೆ ಹೇಳಿತ್ತು.
ಸೇನೆಯೊಂದಿಗೆ ಕದನದಲ್ಲಿ ನಿರತವಾಗಿರುವ ಕ್ಷಿಪ್ರ ಬೆಂಬಲ ಪಡೆ(RSF)ಗಳ ನಾಯಕ ಮೊಹ್ಮದ್ ಹಮ್ದಾನ್ ದಗಾಲೊ ಜೊತೆಗಿನ ಒಪ್ಪಂದದಂತೆ ವಿದೇಶಿ ಪ್ರಜೆಗಳ ಸುರಕ್ಷಿತ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸುಡಾನ್ ಸೇನಾ ಮುಖ್ಯಸ್ಥ ಅಬ್ದೆಲ್ ಫತ್ತೆಹ್ ಅಲ್-ಬುರ್ಹಾನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು.
ಮೊದಲು ರಾಜಧಾನಿ ಖಾರ್ಟೂಮ್ ಆರಂಭವಾದ ಕಾದಾಟ, ಇದೀಗ ಇಡೀ ದೇಶಾದ್ಯಂತ ವ್ಯಾಪಿಸಿದೆ. ಸದ್ಯ ಈದ್ ಅಲ್-ಫಿತರ್ ಅಂಗವಾಗಿ ಮೂರು ದಿನಗಳ ಕದನ ವಿರಾಮವನ್ನು ಎತ್ತಿಹಿಡಿಯುವುದಾಗಿ ಉಭಯ ಬಣಗಳೂ ಘೋಷಿಸಿವೆ. ಅದರಂತೆ ಸುಡಾನ್‌ನಲ್ಲಿ ಸಿಲುಕಿರುವ ವಿದೇಶಿ ಪ್ರಜೆಗಳ ಸುರಕ್ಷಿತ ಸ್ಥಳಾಂತರಕ್ಕಾಗಿ ಉಭಯ ಬಣಗಳು ಒಪ್ಪಿಗೆ ಸೂಚಿಸಿವೆ.