logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Shiv Sena Vs Shiv Sena: ಶಿವಸೇನೆ Vs ಶಿವಸೇನೆ: ಸುಪ್ರೀಂಕೋರ್ಟ್‌ನಲ್ಲಿ ಠಾಕ್ರೆ ಬಣಕ್ಕೆ ಹಿನ್ನಡೆ!

Shiv Sena VS Shiv Sena: ಶಿವಸೇನೆ VS ಶಿವಸೇನೆ: ಸುಪ್ರೀಂಕೋರ್ಟ್‌ನಲ್ಲಿ ಠಾಕ್ರೆ ಬಣಕ್ಕೆ ಹಿನ್ನಡೆ!

HT Kannada Desk HT Kannada

Sep 27, 2022 08:03 PM IST

google News

ಸಂಗ್ರಹ ಚಿತ್ರ

    • ಮಹತ್ವದ ಬೆಳವಣಿಗೆಯೊಂದರಲ್ಲಿ ನೈಜ ಶಿವಸೇನೆ ಯಾವುದು ಎಂದು ನಿರ್ಧರಿಸುವ ಹಕ್ಕು ಚುನಾವಣಾ ಆಯೋಗಕ್ಕೆ ಇದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಈ ಮೂಲಕ ನೈಜ ಶಿವಸೇನೆ ಯಾವುದು ಎಂದು ನಿರ್ಧರಿಸಲು ಚುನಾವಣಾ ಆಯೋಗಕ್ಕೆ ಅವಕಾಶ ನೀಡಬಾರದು ಎಂದು ವಾದಿಸಿದ್ದ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬಣಕ್ಕೆ ಹಿನ್ನಡೆಯಾಗಿದೆ. ನೈಜ ಶಿವಸೇನಾ ಯಾವುದು ಎಂಬುದನ್ನು ನಿರ್ಧರಿಸುವುದರಿಂದ ಚುನಾವಣಾ ಆಯೋಗವನ್ನು ತಡೆಯಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (ANI)

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ನೈಜ ಶಿವಸೇನೆ ಯಾವುದು ಎಂದು ನಿರ್ಧರಿಸುವ ಹಕ್ಕು ಚುನಾವಣಾ ಆಯೋಗಕ್ಕೆ ಇದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಈ ಮೂಲಕ ನೈಜ ಶಿವಸೇನೆ ಯಾವುದು ಎಂದು ನಿರ್ಧರಿಸಲು ಚುನಾವಣಾ ಆಯೋಗಕ್ಕೆ ಅವಕಾಶ ನೀಡಬಾರದು ಎಂದು ವಾದಿಸಿದ್ದ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬಣಕ್ಕೆ ಹಿನ್ನಡೆಯಾಗಿದೆ.

ನೈಜ ಶಿವಸೇನಾ ಯಾವುದು ಎಂಬುದನ್ನು ನಿರ್ಧರಿಸುವುದರಿಂದ ಚುನಾವಣಾ ಆಯೋಗವನ್ನು ತಡೆಯಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಸುಪ್ರೀಂಕೋರ್ಟ್‌ನ ಈ ತೀರ್ಪು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣಕ್ಕೆ ದೊರೆತ ದೊಡ್ಡ ಗೆಲುವು ಎಂದೇ ವಿಶ್ಲೇಷಿಸಲಾಗಿದೆ. ತನ್ನ ವಾದಕ್ಕೆ ಹಿನ್ನಡೆಯಾಗಿರುವುದು ಠಾಕ್ರೆ ಬಣದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಬಹುದು.

ನೈಜ ಶಿವಸೇನೆ ಮತ್ತು ಅದರ ಚಿಹ್ನೆಯು ತನ್ನದು ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣ ಪ್ರತಿಪಾದಿಸಿದೆ. ಆದರೆ ಇದನ್ನು ಚುನಾವಣಾ ಆಯೋಗ ನಿರ್ಧರಿಸದಂತೆ ತಡೆಯಬೇಕು ಎಂದು ಉದ್ಧವ್ ಠಾಕ್ರೆ ಬಣವು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತ್ತು. ಆದರೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ, ಠಾಕ್ರೆ ಬಣದ ವಾದವನ್ನು ತಿರಸ್ಕರಿಸಿತು.

ಶಿಂಧೆ ಬಣದ ಶಾಸಕ ಅನರ್ಹತೆ ವಿಷಯ ಬಗೆಹರಿಯುವವರೆಗೂ, ಶಿವಸೇನೆಯ ನೈಜ ಮಾಲೀಕತ್ವದ ಬಗ್ಗೆ ಚುನಾವಣಾ ಆಯೋಗ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಉದ್ಧವ್ ಠಾಕ್ರೆ ತಂಡ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ ಈ ವಾದವನ್ನು ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ತಳ್ಳಿ ಹಾಕಿರುವುದು ದೇಶದ ಗಮನ ಸೆಳೆದಿದೆ.

ಈ ಮಧ್ಯೆ ಏಕನಾಥ್ ಶಿಂಧೆ ಬಣದ ಕಾನೂನು ತಂಡವು ಸುಪ್ರೀಂಕೋರ್ಟ್ ಆದೇಶದ ವಿವರಗಳೊಂದಿಗೆ, ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಕೂಡಲೇ ನೈಜ ಶಿವಸೇನೆ ಯಾವುದೆಂದು ನಿರ್ಧರಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಶಿಂಧೆ ಬಣ ಮನವಿ ಮಾಡಿಕೊಂಡಿದೆ.

ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಾಸಕರು ಜೂನ್‌ನಲ್ಲಿ ಬಂಡಾಯವೆದ್ದ ಬಳಿಕ, ಶಿವಸೇನೆ ಎರಡು ಹೋಳಾಗಿತ್ತು. ಶಿಂಧೆ ಅವರು ಬಿಜೆಪಿ ಜತೆಗೂಡಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿದ್ದರು. ಜೂನ್ 30ರಂದು ಸಿಎಂ ಆಗಿ ಹಾಗೂ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರು ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅಂದಿನಿಂದ ನೈಜ ಶಿವಸೇನೆ ಯಾವುದು ಎಂಬ ವಿಷಯದಲ್ಲಿ ವಿವಾದ ಭುಗಿಲೆದ್ದಿದೆ.

ಶಿಂಧೆ ಅವರ ಬೆಂಬಲಿಗ ಶಾಸಕರನ್ನು ಅನರ್ಹಗೊಳಿಸುವಂತೆ ಠಾಕ್ರೆ ತಂಡ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತ್ತು. ಶಾಸಕರನ್ನು ಅನರ್ಹಗೊಳಿಸಿದರೆ ಶಿಂಧೆ ಸರ್ಕಾರಕ್ಕೆ ಸಂಕಷ್ಟ ಎದುರಾಗಲಿದೆ. ಆದರೆ ನಿಯಮಾವಳಿ ಪ್ರಕಾರ ಮೂರನೇ ಎರಡಕ್ಕಿಂತ ಹೆಚ್ಚಿನ ಶಾಸಕರು ಶಿಂಧೆ ಬಣದಲ್ಲಿ ಇರುವುದರಿಂದ, ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅವರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎಂಬುದೂ ಸ್ಪಷ್ಟವಾಗಿದೆ.

55 ಶಾಸಕರ ಪೈಕಿ, 40 ಶಿವಸೇನಾ ಶಾಸಕರು ಶಿಂಧೆ ಬೆಂಬಲಕ್ಕೆ ನಿಂತಿದ್ದಾರೆ. ಹಾಗೆಯೇ ಲೋಕಸಭೆಯಲ್ಲಿರುವ ಶಿವಸೇನೆ ಸಂಸದರ ಪೈಕಿ ಬಹುತೇಕರು ಶಿಂಧೆ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ. 18 ಸಂಸದರಲ್ಲಿ 12 ಸಂಸದರು ಶಿಂಧೆ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಬಂಡಾಯ ಶಾಸಕರ ವಿರುದ್ಧ ಅನರ್ಹತೆ ಪ್ರಕರಣ ಬಾಕಿ ಇರುವುದರಿಂದ, ಅವರು ಶಿವಸೇನಾ ಚಿಹ್ನೆಯನ್ನು ಬಳಸಿಕೊಳ್ಳುವಂತೆ ಇಲ್ಲ ಎಂದು ಠಾಕ್ರೆ ಬಣ ವಾದಿಸಿದೆ. ಆದರೆ ಸುಪ್ರೀಂಕೋರ್ಟ್, ಈ ಎರಡನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿದೆ. ಪಕ್ಷಾಂತರ, ವಿಲೀನ ಮತ್ತು ಅನರ್ಹತೆಗೆ ಸಂಬಂಧಿಸಿದ ಸಾಂವಿಧಾನಿಕ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್, ಆಗಸ್ಟ್ 23ರಂದು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಚನೆ ಮಾಡಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ