logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tamil Nadu Reservation: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಆದಿ ದ್ರಾವಿಡರಿಗೆ ಮೀಸಲಾತಿ; ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ

Tamil Nadu Reservation: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಆದಿ ದ್ರಾವಿಡರಿಗೆ ಮೀಸಲಾತಿ; ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ

Nikhil Kulkarni HT Kannada

Apr 19, 2023 04:51 PM IST

google News

ತಮಿಳುನಾಡು ವಿಧಾನಸಭೆ

    • ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವ ಆದಿ ದ್ರಾವಿಡರಿಗೆ ಮೀಸಲಾತಿ ಕಲ್ಪಿಸಲು, ಕಾನೂನು ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಬುಧವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಪ್ರತಿಪಕ್ಷ ಎಐಎಡಿಎಂಕೆ ಈ ನಿರ್ಣಯವನ್ನು ಬೆಂಬಲಿಸಿದ್ದರೆ, ಬಿಜೆಪಿ ಸಭಾತ್ಯಾಗದ ಮೂಲಕ ವಿರೋಧಿಸಿದೆ.
ತಮಿಳುನಾಡು ವಿಧಾನಸಭೆ
ತಮಿಳುನಾಡು ವಿಧಾನಸಭೆ (HT)

ಚೆನ್ನೈ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವ ಆದಿ ದ್ರಾವಿಡರಿಗೆ ಮೀಸಲಾತಿ ಕಲ್ಪಿಸಲು, ಕಾನೂನು ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಬುಧವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.

"ಭಾರತೀಯ ಸಂವಿಧಾನದ ಅಡಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಸೇರಿದ ಜನರಿಗೆ ಮೀಸಲಾತಿ ಸೇರಿದಂತೆ ಶಾಸನಬದ್ಧ ರಕ್ಷಣೆ, ಹಕ್ಕುಗಳು ಮತ್ತು ರಿಯಾಯಿತಿಗಳನ್ನು ವಿಸ್ತರಿಸಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಕಲ್ಪಿಸಲು ಸಂವಿಧಾನಕ್ಕೆ ಅಗತ್ಯವಾದ ತಿದ್ದುಪಡಿಗಳನ್ನು ಮಾಡುವಂತೆ ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ.." ಎಂದು ವಿಧಾನಸಭೆಯಲ್ಲಿ ಪ್ರತ್ಯೇಕ ನಿರ್ಣಯ ಮಂಡಿಸಿದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಹೇಳಿದರು.

"ಎಲ್ಲಾ ಅಂಶಗಳಲ್ಲಿ ಸಾಮಾಜಿಕ ನ್ಯಾಯದ ಪ್ರಯೋಜನಗಳನ್ನು ಪಡೆಯಲು, ಆದಿ ದ್ರಾವಿಡರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಕರ್ತವ್ಯ. ಹೀಗಾಗಿ ಕೇಂದ್ರ ಸರ್ಕಾರವು ಆದಿ ದ್ರಾವಿಡರಿಗೆ ಮೀಸಲಾತಿ ಕಲ್ಪಿಸಲು ಸಹರಿಸಬೇಕು.." ಎಂದು ನಿರ್ಣಯ ಮಂಡಿಸಿದ ಬಳಿಕ ಸಿಎಂ ಎಂಕೆ ಸ್ಟಾಲಿನ್‌ ಮನವಿ ಮಾಡಿದರು.

"ಜನರು ತಮ್ಮ ಇಚ್ಛೆಯ ಧರ್ಮವನ್ನು ಅನುಸರಿಸುವ ಹಕ್ಕು ಹೊಂದಿದ್ದಾರೆ. ಆದರೆ ಜಾತಿಯ ಆಧಾರದ ಮೇಲೆ ಅವರನ್ನು ಪ್ರತ್ಯೇಕಿಸುವುದು ಸಾಮಾಜಿಕ ಅನಿಷ್ಟ ಎಂದು ಎಂಕೆ ಸ್ಟಾಲಿನ್ ಅವರು ಪ್ರತಿಪಾದಿಸಿದರು. 2022ರ ಅಕ್ಟೋಬರ್‌ನಲ್ಲಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಮೂವರು ಸದಸ್ಯರ ಆಯೋಗವನ್ನು ಉಲ್ಲೇಖಿಸಿ, ಐತಿಹಾಸಿಕವಾಗಿ ಸಮುದಾಯಕ್ಕೆ ಸೇರಿದ ಆದರೆ ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಸಿಖ್ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮಗಳಿಗೆ ಮತಾಂತರಗೊಂಡ ಹೊಸ ಸಮುದಾಯಕ್ಕೆ ಎಸ್‌ಸಿ ಸ್ಥಾನಮಾನ ನೀಡುವ ಸಾಧ್ಯತೆಯನ್ನು ಪರಿಗಣಿಸುವಂತೆ ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಆಯೋಗದಿಂದ ವರದಿ ಬಂದ ನಂತರ ಮೀಸಲಾತಿ ವಿಸ್ತರಣೆಗೆ ಸಂವಿಧಾನಕ್ಕೆ ತಿದ್ದುಪಡಿ ತರುವುದು ಸಾಧ್ಯವಿದ್ದು, ಆಯೋಗವು ಎರಡು ವರ್ಷಗಳಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ನಿರೀಕ್ಷೆಯಿದೆ ಎಂದು ಎಂಕೆ ಸ್ಟಾಲಿನ್‌ ಹೇಳಿದರು.

ನಿರ್ಣಯವನ್ನು ವಿರೋಧಿಸಿದ ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್, ಕೇಂದ್ರವು ಈ ವಿಚಾರವಾಗಿ ಈಗಾಗಲೇ ಆಯೋಗ ರಚನೆ ಮಾಡಿದ್ದು,

ಈ ಸಂದರ್ಭದಲ್ಲಿ ಇಂತದ್ದೊಂದು ನಿರ್ಣಯದ ಅವಶ್ಯಕತೆ ಇಲ್ಲ ಎಂದು ಬಲವಾಗಿ ಖಂಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್‌ ಎಂ ಅಪ್ಪಾವು, ದುರುದ್ದೇಶಪೂರಿತ ಆರೋಪಗಳನ್ನು ಮಾಡುವ ಅಗತ್ಯವಿಲ್ಲ ಎಂದು ಎಚ್ಚರಿಸಿದರು.

ನಿರ್ಣಯವನ್ನು ಮಂಡಿಸಲು ಮುಖ್ಯಮಂತ್ರಿಗೆ ಸಂಪೂರ್ಣ ಹಕ್ಕಿದೆ. ನೀವು ಅದನ್ನು ಸ್ವೀಕರಿಸುತ್ತೀರೋ ಇಲ್ಲವೋ ಎಂಬುದನ್ನು ಹೇಳಲು ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು ಎಂದು ಸ್ಪೀಕರ್ ಅವರು ಬಿಜೆಪಿ ಶಾಸಕಲಿ ವನತಿ ಶ್ರೀನಿವಾಸನ್‌ ಅವರಿಗೆ ತಾಕೀತು ಮಾಡಿದರು.

ಕೆ ಪಳನಿಸ್ವಾಮಿ ಮತ್ತು ಓ ಪನ್ನೀರಸೆಲ್ವಂ ನೇತೃತ್ವದ ಪ್ರತಿಪಕ್ಷ ಎಐಎಡಿಎಂಕೆಯ ಎರಡೂ ಬಣಗಳು ನಿರ್ಣಯಕ್ಕೆ ಒಲವು ತೋರಿದರೆ, ಬಿಜೆಪಿ ಈ ನಿರ್ಣಯವನ್ನು ವಿರೋಧಿಸಿ ಕಲಾಪದಿಂದ ಹೊರನಡೆಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವನತಿ ಶ್ರೀನಿವಾಸನ್, ವಿಧಾನಸಭೆಯ ನಿರ್ಣಯವು ಸಂವಿಧಾನಕ್ಕೆ ವಿರುದ್ಧವಾಗಿದೆ. ಏಕೆಂದರೆ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಈ ವಿಚಾರವಾಗಿ ರಿಟ್ ಸಲ್ಲಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ಜುಲೈಗೆ ಮುಂದೂಡಲಾಗಿದೆ ಎಂದು ಕಿಡಿಕಾರಿದರು.

"ಕೇಂದ್ರವು ಈಗಾಗಲೇ ಆಯೋಗವನ್ನು ರಚಿಸಿರುವಾಗ ಮತ್ತು ಪ್ರಕರಣವು ನ್ಯಾಯಾಲಯದಲ್ಲಿರುವಾಗ, ಈ ನಿರ್ಣಯವನ್ನು ಏಕೆ ಮಂಡಿಸಲಾಯಿತು ಎಂಬುದೇ ತಿಳಿಯುತ್ತಿಲ್ಲ. ಮತಾಂತರಗಳ ಹೊರತಾಗಿಯೂ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮಗಳಲ್ಲಿ ಅಸ್ಪೃಶ್ಯತೆ ಇದೆ ಎಂದು ಈ ನಿರ್ಣಯವು ಪರೋಕ್ಷವಾಗಿ ಒಪ್ಪಿಕೊಳ್ಳುತ್ತದೆಯೇ?.." ಎಂದು ವನತಿ ಶ್ರೀನಿವಾಸನ್‌ ಅವರು ಎಂಕೆ ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಗೈದರು.

ರಾಜಕೀಯ ಕಾರಣಗಳಿಗಾಗಿ ಡಿಎಂಕೆ ಸರ್ಕಾರ ಈ ನಿರ್ಣಯವನ್ನು ತಂದಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ವನತಿ ಶ್ರೀನಿವಾಸನ್‌ ಗಂಭೀರ ಆರೋಪ ಮಾಡಿದ್ದಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ