ಉದಯನಿಧಿ ಬಳಿಕ ಸನಾತನ ಧರ್ಮವನ್ನು ಹೆಚ್‌ಐವಿ, ಕುಷ್ಠರೋಗಕ್ಕೆ ಹೋಲಿಸಿದ ಎ ರಾಜಾ VIDEO
Sep 08, 2023 07:57 AM IST
ಉದಯನಿಧಿ ಸ್ಟಾಲಿನ್ - ಎ ರಾಜಾ
- "ಸನಾತನ ಧರ್ಮವು ಹೆಚ್‌ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ಕಳಂಕವಿದ್ದಂತೆ. ಮಲೇರಿಯಾ ಮತ್ತು ಡೆಂಗ್ಯೂಗೆ ಯಾವುದೇ ಸಾಮಾಜಿಕ ಕಳಂಕ ಇರಲಿಲ್ಲ. ಆದರೆ ಹೆಚ್‌ಐವಿ ಮತ್ತು ಕುಷ್ಠರೋಗ ಸಮಾಜಕ್ಕೆ ಕಳಂಕ ತರುವಂತದ್ದು" ಎಂದು ಎ ರಾಜಾ ಹೇಳಿಕೆ ನೀಡಿದ್ದಾರೆ.
ಚೆನ್ನೈ (ತಮಿಳುನಾಡು): ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿ ಕಾಲಿವುಡ್ ನಟ ಹಾಗೂ ತಮಿಳುನಾಡು ಯುವಜನ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದರು. ಇದೀಗ ತಮಿಳುನಾಡಿದ ಮತ್ತೊಬ್ಬ ನಾಯಕ ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಡಿಎಂಕೆ ನಾಯಕ ಎ ರಾಜಾ ಅವರು ಸನಾತನ ಧರ್ಮವನ್ನು ಹೆಚ್‌ಐವಿ, ಕುಷ್ಠರೋಗಕ್ಕೆ ಹೋಲಿಸಿದ್ದಾರೆ.
"ಉದಯನಿಧಿ ಸ್ಟಾಲಿನ್ ಅವರು ಬಹಳ ಸೌಮ್ಯವಾಗಿ ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಅವರು ಕೇವಲ ಮಲೇರಿಯಾ ಮತ್ತು ಡೆಂಗ್ಯೂಗೆ ಹೋಲಿಸಿದ್ದಾರೆ. ಆದರೆ ನಾನು ಸ್ವಲ್ಪ ಕಟುವಾಗಿ ಟೀಕಿಸುತ್ತೇನೆ. ಸನಾತನ ಧರ್ಮವು ಹೆಚ್‌ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ಕಳಂಕವಿದ್ದಂತೆ. ಮಲೇರಿಯಾ ಮತ್ತು ಡೆಂಗ್ಯೂಗೆ ಯಾವುದೇ ಸಾಮಾಜಿಕ ಕಳಂಕ ಇರಲಿಲ್ಲ. ಆದರೆ ಹೆಚ್‌ಐವಿ ಮತ್ತು ಕುಷ್ಠರೋಗ ಸಮಾಜಕ್ಕೆ ಕಳಂಕ ತರುವಂತದ್ದು" ಎಂದು ಎ ರಾಜಾ ಹೇಳಿಕೆ ನೀಡಿದ್ದಾರೆ.
"ಪ್ರಧಾನಿ ಸಭೆ ಕರೆದರೆ ಮತ್ತು ಅವರು ನನಗೆ ಅನುಮತಿ ನೀಡಿದರೆ ನಾನು ಎಲ್ಲಾ ಕ್ಯಾಬಿನೆಟ್ ಸಚಿವರಿಗೆ ಉತ್ತರಗಳನ್ನು ನೀಡಲು ಸಿದ್ಧನಿದ್ದೇನೆ. 'ಸನಾತನ ಧರ್ಮ' ಯಾವುದು ಎಂದು ನಾನು ವಿವರಿಸುತ್ತೇನೆ" ಎಂದು ಎ ರಾಜಾ ಸವಾಲು ಹಾಕಿದ್ದಾರೆ.
ಉದಯನಿಧಿ ಸ್ಟಾಲಿನ್ ಏನು ಹೇಳಿದ್ದರು?
ಇತ್ತೀಚೆಗೆ ತಮಿಳುನಾಡು ಪ್ರಗತಿಪರ ಲೇಖಕರ ಕಲಾವಿದರ ಸಂಘವು ಶನಿವಾರ ಸನಾತನ ನಿರ್ಮೂಲನೆ ಎಂಬ ವಿಷಯದ ಕುರಿತು ಚೆನ್ನೈನಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್, ಡೆಂಗ್ಯೂ, ಮಲೇರಿಯಾದಂತೆ ಸನಾತನ ಧರ್ಮವನ್ನ ನಿರ್ಮೂಲನೆ ಮಾಡಬೇಕು ಎಂದಿದ್ದರು.
"ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅದನ್ನು ರದ್ದುಗೊಳಿಸಬೇಕಾಗುತ್ತದೆ. ನಾವು ಡೆಂಗ್ಯೂ, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಇವನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು. ಸನಾತನ ಎಂಬ ಹೆಸರು ಸಂಸ್ಕೃತದಿಂದ ಬಂದಿದೆ. ಇದು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ" ಎಂದು ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದರು.
ಉದಯನಿಧಿ ಸ್ಟಾಲಿನ್ ಹೇಳಿಕೆ ಭಾರತದಲ್ಲಿ ವಿವಾದ ಸೃಷ್ಟಿಸಿದ್ದು ಹಿಂದೂ ಮುಖಂಡರು, ಬಿಜೆಪಿ ನಾಯಕರು, ಆರ್ಎಸ್ಎಸ್ ನಾಯಕರು ತಿರುಗಿ ಬಿದ್ದಿದ್ದರು. ಆದರೂ ಉದಯನಿಧಿ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳಲಿಲ್ಲ ಹಾಗೂ ಕ್ಷಮೆಯಾಚಿಸಲಿಲ್ಲ. ಬದಲಾಗಿ ಸ್ಪಷ್ಟನೆ ನೀಡಿದ್ದಾರೆ. ನಾನು ಹಿಂದುತ್ವದ ವಿರುದ್ಧ ಮಾತನಾಡಿದ್ದಲ್ಲ. ಸನಾತನ ಧರ್ಮವು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ತತ್ವವಾಗಿದೆ. ಸನಾತನ ಧರ್ಮದಿಂದ ತುಳಿತಕ್ಕೊಳಗಾದವರ ಪರವಾಗಿ ನಾನು ಮಾತನಾಡಿದ್ದೇನೆ. ಈ ವಿಚಾರದಲ್ಲಿ ಯಾವುದೇ ಕಾನೂನು ಸವಾಲನ್ನು ಎದುರಿಸಲು ಸಿದ್ಧಎಂದಿದ್ದಾರೆ.
ಎಫ್ಐಆರ್ಗೆ ಅರ್ಜಿ
ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಉದಯನಿಧಿ ಸ್ಟಾಲಿನ್ ಮತ್ತು ಎ ರಾಜಾ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ಗೆ ಅಡ್ವೋಕೇಟ್ ವಿನೀತ್ ಜಿಂದಾಲ್ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.