logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Digital Jagathu: ವಿಶ್ವಾಸ ಕಳೆದುಕೊಳ್ಳಬೇಡಿ, ನಂಬಿಕೆ ದ್ರೋಹ ಬೇಡ; ಡಿಜಿಟಲ್‌ ಟ್ರಸ್ಟ್‌ ತಂತ್ರಜ್ಞಾನಕ್ಕೆ ಹೆಚ್ಚಿದ ಬೇಡಿಕೆ

Digital Jagathu: ವಿಶ್ವಾಸ ಕಳೆದುಕೊಳ್ಳಬೇಡಿ, ನಂಬಿಕೆ ದ್ರೋಹ ಬೇಡ; ಡಿಜಿಟಲ್‌ ಟ್ರಸ್ಟ್‌ ತಂತ್ರಜ್ಞಾನಕ್ಕೆ ಹೆಚ್ಚಿದ ಬೇಡಿಕೆ

Praveen Chandra B HT Kannada

Sep 07, 2023 06:05 PM IST

google News

ಡಿಜಿಟಲ್‌ ಟ್ರಸ್ಟ್‌ ತಂತ್ರಜ್ಞಾನಕ್ಕೆ ಹೆಚ್ಚಿದ ಬೇಡಿಕೆ

    • Digital Trust Technology: ಆನ್‌ಲೈನ್‌ ಜಗತ್ತಿನಲ್ಲಿ ಈಗ ಟ್ರೆಂಡಿಂಗ್‌ನಲ್ಲಿರುವುದು ನಂಬಿಕೆ. ವಿಶ್ವಾಸ ಕಳೆದುಕೊಳ್ಳಲು ಯಾರೂ ಬಯಸುವುದಿಲ್ಲ. ಗ್ರಾಹಕರ ನಂಬಿಕೆ ಕಳೆದುಕೊಂಡರೆ ಉಳಿಗಾಲವಿಲ್ಲ ಎಂದು ಎಲ್ಲರಿಗೂ ಅರ್ಥವಾಗಿದೆ. ಏನಿದು ಡಿಜಿಟಲ್‌ ಟಸ್ಟ್‌ ಟೆಕ್ನಾಲಜಿ, ಯಾಕೆ ಇದಕ್ಕೆ ಮಹತ್ವ ಎಂದು ಇಂದಿನ ಡಿಜಿಟಲ್‌ ಜಗತ್ತು ಅಂಕಣದಲ್ಲಿ ತಿಳಿದುಕೊಳ್ಳೋಣ.
 ಡಿಜಿಟಲ್‌ ಟ್ರಸ್ಟ್‌ ತಂತ್ರಜ್ಞಾನಕ್ಕೆ ಹೆಚ್ಚಿದ ಬೇಡಿಕೆ
ಡಿಜಿಟಲ್‌ ಟ್ರಸ್ಟ್‌ ತಂತ್ರಜ್ಞಾನಕ್ಕೆ ಹೆಚ್ಚಿದ ಬೇಡಿಕೆ

ನೀವು ಕಾಯಂ ಆಗಿ ಯಾವುದಾದರೂ ಅಂಗಡಿಗೆ ಹೋಗುತ್ತಿರಬಹುದು. ಯಾವತ್ತೋ ನಿಮಗೆ ಈ ಅಂಗಡಿಯಾತ ತೂಕದಲ್ಲಿ ಮೋಸ ಮಾಡುತ್ತಿದ್ದಾನೆ, ಕಳಪೆ ವಸ್ತುಗಳನ್ನು ನೀಡುತ್ತಾನೆ ಎಂಬ ಒಂದು ಅಪನಂಬಿಕೆ ಬಂದರೆ ಮತ್ತೆ ಆ ಅಂಗಡಿಗೆ ಹೋಗುವ ಬಗ್ಗೆ ಹಿಂದೆಮುಂದೆ ಯೋಚಿಸುವಿರಿ. ನೀವು ಪ್ರತಿನಿತ್ಯ ಆ ಅಂಗಡಿಗೆ ಹೋಗುವುದನ್ನು ನೋಡಿ ನಿಮ್ಮ ಆಪ್ತರು "ಹೇ, ಅಲ್ಲಿಗ್ಯಾಕೆ ಹೋಗ್ತಿ, ಅವ ಖದೀಮ, ತುಂಬಾ ಮೋಸ ಮಾಡ್ತಾನೆ" ಎಂದು ಅವರ ಅನುಭವ ಹಂಚಿಕೊಂಡರೆ ನೀವು ಅಂಗಡಿ ಬದಲಾಯಿಸುವ ಕುರಿತು ಗಂಭೀರವಾಗಿ ಆಲೋಚಿಸುವಿರಿ. ಕೆಲವೊಂದು ಹಳೆಯ ದಿನಸಿ ಅಂಗಡಿಗಳು, ಚಿನ್ನದಂಗಡಿಗಳು, ಹೋಟೆಲ್‌ಗಳು ಈಗಲೂ ಗ್ರಾಹಕರ ವಿಶ್ವಾಸ ಉಳಿಸಿಕೊಂಡಿರುವುದು ಇದೇ ಟ್ರಸ್ಟ್‌ ಕಾರಣದಿಂದ. ಇನ್ನು ಕೆಲವು ಇಂತಹ ವ್ಯವಹಾರಗಳ ಬಗ್ಗೆ ಜನರು "ಇವನ ಅಪ್ಪ ಇದ್ದಾಗ ಎಲ್ಲವೂ ಚೆನ್ನಾಗಿತ್ತು, ಇವನಿಗೆ ಹಣದ ಮೇಲೆ ಕಣ್ಣು, ಏನೂ ಚೆನ್ನಾಗಿಲ್ಲ" ಎಂದು ಹೇಳುವುದನ್ನು ಕೇಳಿರಬಹುದು. ವ್ಯವಹಾರದಲ್ಲಿ ನಂಬಿಕೆ ತುಂಬಾ ಅಗತ್ಯ ಎಂದು ಹೇಳುವುದು ಇದೇ ಅಗತ್ಯ.

ಈಗ ಆನ್‌ಲೈನ್‌ ವ್ಯವಹಾರ ಅಧಿಕವಾಗಿದೆ. ಆನ್‌ಲೈನ್‌ ವ್ಯವಹಾರದಲ್ಲಿಯೂ ನಂಬಿಕೆ, ವಿಶ್ವಾಸಕ್ಕೆ ಹೆಚ್ಚು ಮಹತ್ವ ಬರುತ್ತಿದೆ. ಡಿಜಿಟಲ್‌ ಟ್ರಸ್ಟ್‌ ಟೆಕ್ನಾಲಜಿ ಕುರಿತು ಎಲ್ಲರೂ ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಡಿಜಿಟಲ್‌ ಟ್ರಸ್ಟ್‌ ಅರ್ಥವಾಗಬೇಕೆಂದರೆ ಮೇಲಿನ ಉದಾಹರಣೆಯ ಆನ್‌ಲೈನ್‌ ವರ್ಷನ್‌ ನೋಡೋಣ.

ನೀವು ತುಂಬಾ ಚೆನ್ನಾಗಿ ಉಪ್ಪಿನಕಾಯಿ ಮಾಡುವಿರಿ. ನಿಮ್ಮ ಅಪ್ಪೆಮಿಡಿ ಉಪ್ಪಿನಕಾಯಿ ಊರಲ್ಲಿಯೇ ಫೇಮಸ್‌. ಉಪ್ಪಿನಕಾಯಿ ಮಾರಾಟ ಮಾಡಲು ಒಂದು ಇಕಾಮರ್ಸ್‌ ಅಂಗಡಿ ಇಡುವಿರಿ. ಬೇಡಿಕೆ ಹೆಚ್ಚುತ್ತದೆ. ಉಪ್ಪಿನಕಾಯಿ ತಯಾರಿಸಲು ಹಲವು ಕೆಲಸಗಾರರನ್ನು ಇಟ್ಟುಕೊಳ್ಳುವಿರಿ. ಊರು ಪರಊರಿನಿಂದ ಉಪ್ಪಿನ ಕಾಯಿಗೆ ಜನರು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡುವಿರಿ. ಕೆಲವು ತಿಂಗಳು ಎಲ್ಲವೂ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತದೆ. ಫೇಸ್‌ಬುಕ್‌ ಪೇಜ್‌, ಇನ್‌ಸ್ಟಾಗ್ರಾಂ ಪೇಜ್‌, ಗೂಗಲ್‌ ಬಿಸ್ನೆಸ್‌ ಪೇಜ್‌ ಎಲ್ಲದರಲ್ಲಿಯೂ ಜನರ ಅಭಿಪ್ರಾಯ ಚೆನ್ನಾಗಿರುತ್ತದೆ. ಬರುಬರುತ್ತ ರಾಯರ ಕುದುರೆ ಕತ್ತೆ ಆಯ್ತು ಎಂಬಂತೆ ನೀವು ಗ್ರಾಹಕರ ವಿಶ್ವಾಸದ ಕುರಿತು ಆಲೋಚಿಸುವುದಿಲ್ಲ. ಆರ್ಡರ್‌ ಮಾಡಿದವರಿಗೆ ಸರಿಯಾದ ಸಮಯಕ್ಕೆ ಉಪ್ಪಿನಕಾಯಿ ತಲುಪುವುದಿಲ್ಲ. ಗ್ರಾಹಕರು ಫೇಸ್‌ಬುಕ್‌ ಪೇಜ್‌ನಲ್ಲಿ, ಗೂಗಲ್‌ ಬಿಸ್ನೆಸ್‌ನಲ್ಲಿ ರಿವ್ಯೂ ಬರೆಯಲು ಆರಂಭಿಸುತ್ತಾರೆ. ಉಪ್ಪಿನಕಾಯಿ ತಲುಪಿಲ್ಲ, ರಿಫಂಡ್‌ ಮಾಡಿಲ್ಲ, ಉಪ್ಪಿನಕಾಯಿ ಗುಣಮಟ್ಟ ಚೆನ್ನಾಗಿಲ್ಲ ಎಂದೆಲ್ಲ ಗ್ರಾಹಕರ ದೂರುಗಳ ಸುರಿಮಳೆಯೇ ಆಗುತ್ತದೆ. ದಿನದಿಂದ ದಿನಕ್ಕೆ ಆರ್ಡರ್‌ ಕಡಿಮೆಯಾಗುತ್ತ ಹೋಗುತ್ತದೆ. ಒಮ್ಮೆ ಕಳೆದುಕೊಂಡ ನಂಬಿಕೆಯನ್ನು ಪುನರ್‌ ಸ್ಥಾಪಿಸುವುದು ಕಷ್ಟ. ಆನ್‌ಲೈನ್‌ ಸಹವಾಸ ಬೇಡ ಎಂದು ಇಕಾಮರ್ಸ್‌ ಅಂಗಡಿ ಕ್ಲೋಸ್‌ ಮಾಡುವಿರಿ. ಆದರೆ, ಈ ಸಮಯದಲ್ಲಿ ನಿಮ್ಮ ಬ್ರಾಂಡ್‌ ಕುರಿತು ಊರಿನವರೂ ನಂಬಿಕೆ ಕಳೆದುಕೊಂಡಿರುತ್ತಾರೆ.

ಡಿಜಿಟಲ್‌ ಟ್ರಸ್ಟ್‌ ಕುರಿತು ನಿಮಗೆ ಹೆಚ್ಚು ಉದಾಹರಣೆಯ ಅಗತ್ಯ ಇರುವುದಿಲ್ಲ. ಏಕೆಂದರೆ ನೀವು ಈಗಾಗಲೇ ಹಲವು ಕಂಪನಿಗಳ ಬಗ್ಗೆ, ಪ್ರಾಡಕ್ಟ್‌ಗಳ ಬಗ್ಗೆ ಆನ್‌ಲೈನ್‌ನಲ್ಲಿ ದೂರು, ರಿವ್ಯೂ ಬರೆದಿರಬಹುದು. ಫ್ಲಿಪ್‌ಕಾರ್ಟ್‌, ಅಮೆಜಾನ್‌ ಇತ್ಯಾದಿಗಳಲ್ಲಿ ಪ್ರಾಡಕ್ಟ್‌ ಖರೀದಿಸಿದ ಬಳಿಕ ಇಷ್ಟ ಆಗದೆ ಇದ್ದರೆ ಕಡಿಮೆ ಸ್ಟಾರ್‌ ಕೊಟ್ಟು ಬೈದಿರಬಹುದು. ಗ್ರಾಹಕರು ಈ ರೀತಿ ಕೆಟ್ಟ ರಿವ್ಯೂ ಬರೆಯಬಾರದು, ಕಡಿಮೆ ಸ್ಟಾರ್‌ ನೀಡಬಾರದು ಎಂದಾದರೆ ಡಿಜಿಟಲ್‌ ಟ್ರಸ್ಟ್‌ ಅತ್ಯಂತ ಅಗತ್ಯವಾಗಿರುತ್ತದೆ. ಆನ್‌ಲೈನ್‌ ಜಗತ್ತಿನಲ್ಲಿ ವ್ಯವಹಾರ ಮಾಡುವಾಗ ಗ್ರಾಹಕರಿಗೆ ಸುರಕ್ಷತೆಯ ಭಾವನೆ ಉಂಟಾಗಬೇಕು, ನಂಬಿಕೆ, ವಿಶ್ವಾಸರ್ಹತೆ ಉಂಟಾಗಬೇಕು. ಗ್ರಾಹಕರಿಗೆ ಉತ್ತಮ ಅನುಭವ ದೊರಕಬೇಕು. ಇದು ಕೇವಲ ದೊಡ್ಡ ದೊಡ್ಡ ವ್ಯವಹಾರಗಳಿಗೆ ಸೀಮಿತವಲ್ಲ. ನೀವು ಫೇಸ್‌ಬುಕ್‌ ಪೇಜ್‌ ಮಾಡಿ ಹೆಚ್ಚು ಜನರನ್ನು ಹೊಂದಬೇಕಾದರೆ ಫೇಸ್‌ಬುಕ್‌ ಬಳಕೆದಾರರಿಗೆ ನಿಮ್ಮ ಪೇಜ್‌ ಬಗ್ಗೆ ನಂಬಿಕೆ, ವಿಶ್ವಾಸರ್ಹತೆ ಉಂಟಾಗಬೇಕು. ಇದೇ ರೀತಿ ನೀವು ಯೂಟ್ಯೂಬ್‌ ಚಾನೆಲ್‌ ಆರಂಭಿಸಿದರೆ ಸಬ್‌ಸ್ಕ್ರೈಬರ್‌ಗೆ ನಿಮ್ಮ ಚಾನೆಲ್‌ ಬಗ್ಗೆ ಭರವಸೆ, ನಂಬಿಕೆ ಉಂಟಾಗಬೇಕು. ಈಗ ಆನ್‌ಲೈನ್‌ ವಂಚನೆಗಳು ಹೆಚ್ಚಾಗಿರುವುದರಿಂದ ನಂಬಿಕೆಗೆ ಹೆಚ್ಚಿನ ಮಹತ್ವವಿದೆ.

ನೀವು ಗೂಗಲ್‌ ಮ್ಯಾಪ್‌ ಬಳಸುತ್ತಿರಿ. ಎಲ್ಲಾದರೂ ಆ ಮ್ಯಾಪ್‌ ನಿಮ್ಮನ್ನು ನಿಗದಿತ ಸ್ಥಳದ ಬದಲು ಬೇರೆ ಸ್ಥಳಕ್ಕೆ ಕೊಂಡೊಯ್ದರೆ ಮುಲಾಜಿಲ್ಲದೆ ಮತ್ತೆ ಗೂಗಲ್‌ ಮ್ಯಾಪ್‌ ಬಳಸುವ ಕುರಿತು ಎರಡು ಸಲ ಯೋಚಿಸುವಿರಿ. ಇದರ ಬದಲು "ಅಣ್ಣಾ, ಗಣಪತಿ ದೇವಸ್ಥಾನಕ್ಕೆ ಎಲ್ಲಿ ಹೋಗಬೇಕು" ಎಂದು ದಾರಿಯಲ್ಲಿ ವಾಹನ ನಿಲ್ಲಿಸಿ ಅಲ್ಲಿರುವವರಲ್ಲಿ ದಾರಿ ಕೇಳುವಿರಿ.

ಡಿಜಿಟಲ್‌ ಜಗತ್ತಿನಲ್ಲಿ ನಂಬಿಕೆ ಉಳಿಸಿಕೊಳ್ಳುವುದು ಹೇಗೆ?

ಸುರಕ್ಷತೆ: ಆನ್‌ಲೈನ್‌ ಜಗತ್ತಿನಲ್ಲಿ ಡಿಜಿಟಲ್‌ ಟ್ರಸ್ಟ್‌ ಉಳಿಸಿಕೊಳ್ಳಲು ಅತ್ಯಂತ ಅಗತ್ಯವಾಗಿರುವುದು ಸೆಕ್ಯುರಿಟಿ. ಬಳಕೆದಾರರ ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿರಬೇಕು. ಇದೇ ಕಾರಣಕ್ಕೆ ಯಾವುದೇ ಸೈಬರ್‌ ದಾಳಿಯಾಗದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಂಡು ಬಳಕೆದಾರರ ಸುರಕ್ಷತೆಗೆ ಆದ್ಯತೆ ನೀಡಬೇಕು.

ಪಾರದರ್ಶಕತೆ: ನಿಮ್ಮ ವ್ಯವಹಾರ ಕದ್ದುಮುಚ್ಚಿ ನಡೆಯೋ ವ್ಯಾಪಾರದಂತೆ ಇರಬಾರದು. ಆನ್‌ಲೈನ್‌ನಲ್ಲಿ ನಿಮ್ಮ ವ್ಯವಹಾರ ಪಾರರ್ಶಕತೆ ಹೊಂದಿರಬೇಕು. ಜನರ ಯಾವ ವಿವರ ಸಂಗ್ರಹಿಸುವಿರಿ, ಅದರ ಸುರಕ್ಷತೆ ಹೇಗೆ, ಖಾಸಗಿತನದ ಪಾಲಿಸಿಗಳೇನು ಇತ್ಯಾದಿಗಳು ಮಹತ್ವವಾದದ್ದು.

ನಂಬಿಕೆ ಉಳಿಸಿಕೊಳ್ಳುವುದು: ನೀವು ಏನು ಭರವಸೆ ನೀಡುವಿರೋ ಅದನ್ನೇ ನೀಡಿ. ಗ್ರಾಹಕರು ನಂಬಿಕೆ ಕಳೆದುಕೊಳ್ಳುವಂತೆ ಮಾಡಬೇಡಿ. ಜನರಿಗೆ ಸರಿಯಾದ ಸಮಯದಲ್ಲಿ ಪ್ರಾಡಕ್ಟ್‌ ಕಳುಹಿಸಿಕೊಡಿ. ಗ್ರಾಹಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ. ಗ್ರಾಹಕರಿಗೆ ಅನನ್ಯ ಅನುಭವ ನೀಡಿ. ನಂಬಿಕೆ ಗಳಿಸುವುದು ಮತ್ತು ಉಳಿಸುವುದು ಅತ್ಯಂತ ಅಗತ್ಯ.

ಗ್ರಾಹಕ ಅನುಭವ: ನೀವು ಆನ್‌ಲೈನ್‌ನಲ್ಲಿ ನಡೆಸುವ ವ್ಯವಹಾರವು ಗ್ರಾಹಕರಿಗೆ ಬಳಸಲು ಸುಲಭವಾಗುವಂತೆ ಇರಬೇಕು. ವೆಬ್‌ಸೈಟ್‌ ಅಥವಾ ಮೊಬೈಲ್‌ ಆಪ್‌ ಸರಿಯಾಗಿ ಬಳಸಲು ಸಾಧ್ಯವಾಗುವಂತೆ ಇರಬೇಕು. ತಕ್ಷಣ ಲೋಡ್‌ ಆಗಬೇಕು, ಪ್ರಾಡಕ್ಟ್‌ ಬುಕ್‌ ಮಾಡುವಾಗ ಹಣ ಕಟ್‌ ಆಗಿದೆ, ಬುಕ್ಕಿಂಗ್‌ ಆಗಿಲ್ಲ ಎನ್ನುವಂತೆ ಇರಬಾರದು. ಹೀಗಾದರೆ ಗ್ರಾಹಕರು ನಂಬಿಕೆ ಕಳೆದುಕೊಳ್ಳುತ್ತಾರೆ.

ಡಿಜಿಟಲ್‌ ಟ್ರಸ್ಟ್‌ ಪ್ರಯೋಜನಗಳು

ಒಮ್ಮೆ ಗ್ರಾಹಕರಿಗೆ ನಿಮ್ಮ ಸಂಸ್ಥೆ ಮೇಲೆ ನಂಬಿಕೆ ಬಂದರೆ ಗ್ರಾಹಕರ ವರ್ತನೆ ಮೇಲೆ ಪರಿಣಾಮ ಬೀರುತ್ತದೆ. ಪ್ರತಿನಿತ್ಯ ಖರೀದಿಗೆ ನಿಮ್ಮ ಆನ್‌ಲೈನ್‌ ಅಂಗಡಿಗೆ ಬರುತ್ತಾರೆ. ಇತರರಿಗೂ ಶಿಫಾರಸು ಮಾಡುತ್ತಾರೆ. ನಿಮ್ಮ ಯಶಸ್ಸಿಗೆ ಈ ಡಿಜಿಟಲ್‌ ಟ್ರಸ್ಟ್‌ ಕಾರಣವಾಗುತ್ತದೆ. ಬ್ರಾಂಡ್‌ ಮೌಲ್ಯ ಉತ್ತಮಗೊಳ್ಳುತ್ತದೆ. ಆನ್‌ಲೈನ್‌ ಜಗತ್ತಿನಲ್ಲಿ ಡಿಜಿಟಲ್‌ ಟ್ರಸ್ಟ್‌ಗೆ ಈಗ ಎಲ್ಲಿಲ್ಲದ ಮಹತ್ವ. ಇದೇ ಕಾರಣಕ್ಕೆ ಎಲ್ಲರೂ ಆನ್‌ಲೈನ್‌ನಲ್ಲಿ ಗ್ರಾಹಕರ ನಂಬಿಕೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಡಿಜಿಟಲ್‌ ಟ್ರಸ್ಟ್‌ ಹೆಚ್ಚಿಸುವಂತಹ ತಂತ್ರಜ್ಞಾನಗಳು ಈಗ ಬೇಡಿಕೆ ಪಡೆದುಕೊಳ್ಳುತ್ತಿವೆ. ಕಂಪನಿಯೊಂದಕ್ಕೆ ಅಗತ್ಯವಾದ ಡಿಜಿಟಲ್‌ ಟ್ರಸ್ಟ್‌ ವ್ಯವಸ್ಥೆಯನ್ನು ಒದಗಿಸಲು ಇಂತಹ ತಂತ್ರಜ್ಞಾನಗಳು ನೆರವಾಗುತ್ತವೆ.

ಆನ್‌ಲೈನ್‌ ಸುದ್ದಿ ಮಾಧ್ಯಮದಲ್ಲಿಯೂ ಡಿಜಿಟಲ್‌ ಟ್ರಸ್ಟ್‌ಗೆ ಹೆಚ್ಚಿನ ಮಹತ್ವವಿದೆ. ಸುಳ್ಳುಸುದ್ದಿಗಳು, ತಪ್ಪು ಮಾಹಿತಿಗಳು ಆನ್‌ಲೈನ್‌ನಲ್ಲಿ ತುಂಬುತ್ತಿರುವ ಸಂದರ್ಭದಲ್ಲಿ ಓದುಗರು ನಿಖರ ಮಾಹಿತಿ, ಸುದ್ದಿಗಳ ತಾಣಗಳಿಗೆ ಭೇಟಿ ನೀಡುತ್ತಾರೆ. ವಿಶ್ವಾಸಾರ್ಹ ಸುದ್ದಿ ಮಾಹಿತಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಪ್ರತಿನಿತ್ಯ ಓದಿ.

ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಡಿಜಿಟಲ್‌ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in , ht.kannada@htdigital.in

 

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ