logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Telangana Result: ತೆಲಂಗಾಣ ಫಲಿತಾಂಶದ ಟ್ರೆಂಡ್ ನೋಡಿ ಸೋಲೊಪ್ಪಿದ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್‌

Telangana Result: ತೆಲಂಗಾಣ ಫಲಿತಾಂಶದ ಟ್ರೆಂಡ್ ನೋಡಿ ಸೋಲೊಪ್ಪಿದ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್‌

HT Kannada Desk HT Kannada

Dec 03, 2023 05:17 PM IST

google News

ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ (ಕಡತ ಚಿತ್ರ)

  • ತೆಲಂಗಾಣದ ಮತಗಟ್ಟೆ ಸಮೀಕ್ಷೆಯ ಫಲಿತಾಂಶ ಪ್ರಕಟವಾದ ಬೆನ್ನಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಈಗ ಫಲಿತಾಂಶದ ಟ್ರೆಂಡ್ ನೋಡಿ ಸೋಲೊಪ್ಪಿಕೊಂಡಿದ್ದಾರೆ. 

ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ (ಕಡತ ಚಿತ್ರ)
ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ (ಕಡತ ಚಿತ್ರ) (HT)

ತೆಲಂಗಾಣದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು ಸೋಲು ಖಚಿತವಾಗುತ್ತಿರುವಂತೆ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಸೋಲು ಒಪ್ಪಿಕೊಂಡಿದೆ. ಸತತ ಮೂರನೇ ಅವಧಿಗೆ ಅಧಿಕಾರ ಚುಕ್ಕಾಣಿ ಹಿಡಿಯಬೇಕು ಎಂಬ ಮುಖ್ಯಮಂತ್ರಿ ಕೆಸಿಆರ್ ಮತ್ತು ಅವರ ತಂಡದ ಕನಸು ನನಸಾಗಲಿಲ್ಲ.

ಕಾಮರೆಡ್ಡಿ ಕ್ಷೇತ್ರದಲ್ಲಿ 19 ಸುತ್ತುಗಳ ಮತ ಎಣಿಕೆ ಪೈಕಿ 16 ಸುತ್ತುಗಳ ಮತ ಎಣಿಕೆ (ಸಂಜೆ 5 ಗಂಟೆಗೆ) ಬಳಿಕ ಕೆಸಿಆರ್‌ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರೇವಂತ ರೆಡ್ಡಿ ಇಬ್ಬರೂ ಬಿಜೆಪಿ ಅಭ್ಯರ್ಥಿ ಕಾಟಿಪಳ್ಳಿ ವೆಂಕಟರಮಣ ರೆಡ್ಡಿ ವಿರುದ್ಧ ಹಿನ್ನಡೆ ಅನುಭವಿಸಿದ್ದಾರೆ. ಆದಾಗ್ಯೂ ಗಜ್ವೇಲ್‌ನಲ್ಲಿ ಕೆಸಿಆರ್ ಮುನ್ನಡೆ ಸಾಧಿಸಿದ್ದಾರೆ.

ಸೋಲು ಅಂಗೀಕರಿಸಿದ ಬಿಆರ್‌ಎಸ್ ನಾಯಕ ಕೆಟಿಆರ್‌

ತೆಲಂಗಾಣ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ ಫಲಿತಾಂಶದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಬಿಆರ್‌ಎಸ್‌ ನಾಯಕ ಕೆಟಿ ರಾಮರಾವ್‌, ಈಗ ಪೂರ್ಣ ಫಲಿತಾಂಶ ಘೋಷಣೆಗೆ ಮೊದಲೇ ಸೋಲು ಒಪ್ಪಿಕೊಂಡಿದ್ದಾರೆ.

ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ಅವರು ಸೋಲನ್ನು ಒಪ್ಪಿಕೊಂಡಿದ್ದು, ಸತತ ಎರಡು ಅವಧಿಗೆ ಸರ್ಕಾರಕ್ಕಾಗಿ ತೆಲಂಗಾಣ ಜನತೆಗೆ ಧನ್ಯವಾದ ಹೇಳಿದ್ದಾರೆ.

“ಬಿಆರ್‌ಎಸ್‌ ಪಾರ್ಟಿಗೆ ಸತತ ಎರಡು ಅವಧಿಗೆ ಆಡಳಿತದ ಅವಕಾಶ ನೀಡಿದ ತೆಲಂಗಾಣ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಂದು ಫಲಿತಾಂಶದ ಬಗ್ಗೆ ಬೇಸರವಾಗಿಲ್ಲ, ಆದರೆ ಇದು ನಮಗೆ ಅನಿರೀಕ್ಷಿತವಾಗಿದ್ದು, ಖಂಡಿತವಾಗಿಯೂ ನಿರಾಶೆಯಾಗಿದೆ. ಆದರೆ ನಾವು ಇದನ್ನು ನಮ್ಮ ಹೆಜ್ಜೆಯಲ್ಲಿ ಕಲಿಕೆಯಾಗಿ ತೆಗೆದುಕೊಳ್ಳುತ್ತೇವೆ ಮತ್ತು ಪುಟಿದೇಳುತ್ತೇವೆ ಎಂದು ಕೆಟಿಆರ್‌ ಹೇಳಿಕೊಂಡಿದ್ದಾರೆ.

ರಾಮರಾವ್ ಅವರು ತೆಲಂಗಾಣದಲ್ಲಿ ಸ್ಪಷ್ಟವಾಗಿ ಸರ್ಕಾರ ರಚಿಸಲು ಮುಂದಾಗಿರುವ ಕಾಂಗ್ರೆಸ್ ಪಕ್ಷವನ್ನು ಅಭಿನಂದಿಸಿದರು.

" ತೆಲಂಗಾಣದ ಜನಾದೇಶವನ್ನು ಗೆದ್ದ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು. ನಿಮಗೆ ಶುಭವಾಗಲಿ ಎಂದು ಹಾರೈಸುತ್ತೇನೆ" ಎಂದು ಬಿಆರ್‌ಎಸ್ ನಾಯಕ ಕೆಟಿ ರಾಮರಾವ್‌ ಹೇಳಿದರು.

ಬೈಬೈ ಕೆಸಿಆರ್ ಘೋ‍ಷಣೆ ಕೂಗುತ್ತಿರುವ ಕಾಂಗ್ರೆಸಿಗರು

ಇದೇ ವೇಳೆ, ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಕಚೇರಿ ಎದುರು ಸಂಭ್ರಮಾಚರಣೆ ತೀವ್ರಗೊಂಡಿದೆ. ಪಕ್ಷದ ನಾಯಕರು, ಕಾರ್ಯಕರ್ತರು ಬೈಬೈ ಕೆಸಿಆರ್ ಘೋ‍ಷಣೆ ಕೂಗುತ್ತಿದ್ದಾರೆ.

ಮುಂದಿನ ವರ್ಷದ ಲೋಕಸಭೆ ಚುನಾವಣೆಯ ಕಾರಣ ತೆಲಂಗಾಣ ಚುನಾವಣಾ ಫಲಿತಾಂಶ ಕಾಂಗ್ರೆಸ್‌ ಮಟ್ಟಿಗೆ ಪ್ರಮುಖವಾದುದು. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷ ದಕ್ಷಿಣದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಭದ್ರಪಡಿಸಲಿದೆ.

ಕರ್ನಾಟಕದಲ್ಲಿ ಭರ್ಜರಿ ಬಹುಮತದ ಗೆಲುವು ಪಡೆದ ಕಾಂಗ್ರಸ್ ಅದೇ ಹುಮ್ಮಸ್ಸಿನಲ್ಲಿ ತೆಲಂಗಾಣ ಚುನಾವಣೆಯನ್ನು ಎದುರಿಸಿತ್ತು. ಕಾಂಗ್ರೆಸ್ ಪಕ್ಷದ ಗ್ಯಾರೆಂಟಿಗಳು ಚುನಾವಣಾ ಅಭಿಯಾನದ ದಿಶೆಯನ್ನು ಬದಲಾಯಿಸಿದವು ಎಂದು ಹೇಳಲಾಗುತ್ತಿದೆ.

ಮತಗಟ್ಟೆ ಸಮೀಕ್ಷೆ ಫಲಿತಾಂಶಗಳ ಬಗ್ಗೆ ಕೆಟಿ ರಾಮ ರಾವ್ ಗರಂ

ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆಟಿ ರಾಮ ರಾವ್‌ ಗುರುವಾರ (ನ.30) ತೆಲಂಗಾಣ ವಿಧಾನಸಭೆ ಮತಗಟ್ಟೆ ಸಮೀಕ್ಷೆ ಫಲಿತಾಂಶಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸತತ ಮೂರನೇ ಅವಧಿಗೆ 70ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರ ಚುಕ್ಕಾಣಿ ತನ್ನ ಬಳಿಯೇ ಉಳಿಸಿಕೊಳ್ಳಲಿದೆ ಎಂದು ಪ್ರತಿಪಾದಿಸಿದರು.

ಅಷ್ಟೇ ಅಲ್ಲ, ಎಕ್ಸಿಟ್ ಪೋಲ್‌ಗಳ ಹೆಸರಿನಲ್ಲಿ, ಉಪಟಳ ಕೊಡುವವರು ಮತ್ತು ಅಸಂಬದ್ಧತೆಯನ್ನು ಸೃಷ್ಟಿಸುವವರಿಗೆ ಎಚ್ಚರಿಕೆ ನೀಡುತ್ತೇನೆ. ನಿಮ್ಮ ಮುಖದ ಮೇಲೆ ಮೊಟ್ಟೆ ಬೀಳಲಿದೆ ಮತ್ತು ನಿಮ್ಮ ಖ್ಯಾತಿಗೆ, ವಿಶ್ವಾಸಾರ್ಹತೆಗೆ ಅಪಾಯ ಎದುರಾಗಲಿದೆ ಎಂದು ಕೆಟಿ ರಾಮರಾವ್ ಎಚ್ಚರಿಸಿದ್ದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ