Telangana Elections: ತೆಲಂಗಾಣ ಚುನಾವಣೆ; ಆಡಳಿತ ವಿರೋಧಿ ಅಲೆಯ ಭೀತಿಯಲ್ಲಿ ಬಿಆರ್‌ಎಸ್, ಕಾಂಗ್ರೆಸ್‌ಗೆ ಡಿಕೆ ಶಿವಕುಮಾರ್ ಮಾರ್ಗದರ್ಶನ
Jul 26, 2023 09:15 AM IST
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್
- ಕರ್ನಾಟಕದೊಂದಿಗೆ ಗಡಿ ಹಂಚಿಕೊಂಡಿರುವ ತೆಲಂಗಾಣ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಕರ್ನಾಟಕದ ಗೆಲುವಿನ ನಂತರ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ನಾಯಕರು ಅಲ್ಲಿಯೂ ಗ್ಯಾರಂಟಿ ಭರವಸೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. (ಬರಹ: ಎಚ್.ಮಾರುತಿ)
ಕರ್ನಾಟಕಕ್ಕೆ ಹೊಂದಿಕೊಂಡಿರುವ ತೆಲಂಗಾಣದಲ್ಲಿ ವರ್ಷಾಂತ್ಯಕ್ಕೆ ವಿಧಾನಸಬೆಯ 119 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಆಡಳಿತಾರೂಢ ಭಾರತ ರಾಷ್ಟ್ರೀಯ ಸಮಿತಿ -ಬಿಆರ್‌ಎಸ್ (ಈ ಹಿಂದಿನ ತೆಲಂಗಾಣ ರಾಷ್ಟ್ರೀಯ ಸಮಿತಿ - ಟಿಆರ್‌ಎಸ್) ಪಕ್ಷ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಕರ್ನಾಟಕದ ಗೆಲುವಿನಿಂದ ಪುಟಿದೆದ್ದಿರುವ ಕಾಂಗ್ರೆಸ್ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದೆ. ಬಿಜೆಪಿ ಏದುಸಿರು ಬಿಡುತ್ತಿದ್ದು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರೊಂದಿಗೆ ಹೊಂದಾಣಿಕೆಗೆ ಪ್ರಯತ್ನ ನಡೆಸುತ್ತಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಐದು ಗ್ಯಾರಂಟಿಗಳು ಮಹತ್ವದ ಪಾತ್ರ ನಿರ್ವಹಿಸಿದ್ದವು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಗ್ಯಾರಂಟಿ ಅಷ್ಟೇ ಕಾರಣ ಎಂದು ಬಿಜೆಪಿ, ಜೆಡಿಎಸ್ ಮತ್ತು ಕೆಲವು ಮಾಧ್ಯಮಗಳು ಬಿಂಬಿಸುತ್ತಿರುವುದನ್ನು ಒಪ್ಪಲು ಆಗುವುದಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದು, ರಾಜ್ಯಾದ್ಯಂತ ಪಕ್ಷ ಸಂಘಟಿತವಾಗಿ ಕೆಲಸ ಮಾಡುತ್ತಿದೆ. 2019ರ ಚುನಾವಣೆಯಲ್ಲಿ ಗೆದ್ದ ನಂತರ ಮುಖ್ಯಮಂತ್ರಿ ಕೆಸಿಆರ್ ಮತ್ತು ಅವರ ಪುತ್ರ ಮತ್ತು ಸಚಿವ, ಕೆ.ಟಿ.ರಾಮರಾವ್ ಜನಸಾಮಾನ್ಯರನ್ನು ಬಿಡಿ, ಸಚಿವರು ಮತ್ತು ಶಾಸಕರಿಗೂ ಅಲಭ್ಯರಾಗಿದ್ದಾರೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.
ಕರ್ನಾಟಕದ ಫಲಿತಾಂಶ ಹೊರಬಿದ್ದ ನಂತರ ಈ ತಿಂಗಳ ಆರಂಭದಲ್ಲಿ ಬಿಆರ್‌ಎಸ್ ಪಕ್ಷದ ಪ್ರಮುಖ ನಾಯಕರಾದ ಮಾಜಿ ಸಚಿವ ಜೂಪಲ್ಲಿ ಕೃಷ್ಣರಾವ್, ಮಾಜಿ ಸಂಸದ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಮತ್ತು ಇತರ 30 ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 1 ಸ್ಥಾನದಲ್ಲಿ ಮಾತ್ರ ಗೆಲುವು ಸಿಕ್ಕಿದ್ದು, 9 ಕ್ಷೇತ್ರಗಳಲ್ಲಿ ಮಾತ್ರ ಎರಡನೇ ಸ್ಥಾನಕ್ಕೆ ಬಂದಿತ್ತು. ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಮತ್ತು ಕಾಂಗ್ರೆಸ್ 3 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದವು. ಈಗ ಹಿಂದುತ್ವ ಅನುಸರಿಸಬೇಕೇ ಬೇಡವೇ ಎಂಬ ಭಿನ್ನಾಭಿಪ್ರಾಯದಲ್ಲಿ ಬಿಜೆಪಿ ನಾಯಕರು ಸಿಲುಕಿದ್ದಾರೆ. ಗ್ಯಾರಂಟಿಗಳನ್ನು ಘೋಷಿಸುವ ಪರಿಸ್ಥಿತಿಯಲ್ಲಿ ಬಿಜೆಪಿ ಇಲ್ಲ. ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ನೆಲೆ ಕಂಡುಕೊಳ್ಳಬಹುದೇ ಹೊರತು ಇತರೆ ರಾಜ್ಯಗಳಲ್ಲಿ ಅಸಾಧ್ಯ. ಕರ್ನಾಟಕದ ಸೋಲಿನ ನಂತರ ಸ್ಥಳಿಯ ಬಿಜೆಪಿ ಮುಖಂಡರು ಭರವಸೆ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
2014ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ತೆಲಂಗಾಣ ರಾಜ್ಯವನ್ನು ಸೃಷ್ಟಿ ಮಾಡಿತ್ತು. ಆದರೆ ಅಧಿಕಾರ ಸಿಕ್ಕದ್ದು ಕೆಸಿಆರ್ ಅವರಿಗೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ 19 ವಿಧಾನಸಭಾ ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆ ಕರ್ನಾಟಕದಂತೆ ತೆಲಂಗಾಣದಲ್ಲಿಯೂ ಪಕ್ಷಕ್ಕೆ ನವ ಚೈತನ್ಯ ತುಂಬಿದೆ. ಅಲ್ಲಿನ ರಾಜಕೀಯ ವಾತಾವರಣವನ್ನು ಅರ್ಥ ಮಾಡಿಸಲು ಇವಿಷ್ಟೂ ವಿವರಗಳನ್ನು ಕೊಡಬೇಕಾಯಿತು.
ಐದು ಗ್ಯಾರಂಟಿಗಳ ಜತೆಗೆ ಮತ್ತಷ್ಟು ಗ್ಯಾರಂಟಿಗಳ ಸೇರ್ಪಡೆ
ಮತ್ತೆ ಗ್ಯಾರಂಟಿಗಳ ವಿಷಯಕ್ಕೆ ಬರೋಣ. ಕರ್ನಾಟಕದಲ್ಲಿ ಅನುಸರಿಸಿದ ಮಾದರಿಯನ್ನೇ ತೆಲಂಗಾಣದಲ್ಲೂ ಅನುಸರಿಲು ಕಾಂಗ್ರೆಸ್ ಮುಂದಾಗಿದೆ. ಅಷ್ಟೇ ಏಕೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಐದು ಗ್ಯಾರಂಟಿಗಳ ಜತಗೆ ಇನ್ನೂ ಕೆಲವನ್ನು ಸೇರ್ಪಡೆ ಮಾಡಿದೆ.
ರೈತರ 2 ಲಕ್ಷ ರೂಪಾಯಿ ವರೆಗಿನ ಸಾಲ ಮನ್ನಾ, 500 ರೂಪಾಯಿಗೆ ಅಡುಗೆ ಅನಿಲ ಸಿಲಿಂಡರ್, ನಿರುದ್ಯೋಗಿ ಯುವ ಜನಾಂಗ, ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವಿಕಲರಿಗೆ ಮಾಸಿಕ 4000 ರೂಪಾಯಿ ವರೆಗೆ ಭತ್ಯೆ, ಇಂದಿರಮ್ಮ ಹೆಸರಿನಲ್ಲಿ ವಸತಿ ಯೋಜನೆ, ರಾಜೀವ್ ಗಾಂಧಿ ಹೆಸರಿನಲ್ಲಿ 5 ಲಕ್ಷ ರೂ.ವರೆಗೆ ಆರೋಗ್ಯಶ್ರೀ ಯೋಜನೆ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ರೈತು ಬಂಧು ಯೋಜನೆ, ಶಾಲಾ ಬಾಲಕಿಯರಿಗೆ ಇ ಬೈಕ್ ಮತ್ತು ಅಧಿಕಾರಕ್ಕೆ ಬಂದ ವರ್ಷದಲ್ಲಿ 2 ಲಕ್ಷ ಸರಕಾರಿ ಹುದ್ದೆಗಳ ಭರ್ತಿ ಸೇರಿದಂತೆ ಹಲವು ಭರವಸೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಸೇರಿಸಲು ಕಾಂಗ್ರೆಸ್ ಉದ್ದೇಶಿಸಿದೆ.
ಚುನಾವಣಾ ಅಖಾಡಕ್ಕೆ ಡಿ.ಕೆ.ಶಿವಕುಮಾರ್ ಎಂಟ್ರಿ
ಕಾಂಗ್ರೆಸ್‌ನ ತೆಲಂಗಾಣ ಘಟಕದ ಅಧ್ಯಕ್ಷ ರೇವಂತ್ ರೆಡ್ಡಿ ಸೆಪ್ಟೆಂಬರ್ 17 ರಂದು ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಪ್ರಣಾಳಿಕೆ ಕುರಿತು ತೆಲಂಗಾಣ ಕಾಂಗ್ರೆಸ್ ಮುಖಂಡರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿ ಮಾರ್ಗದರ್ಶನ ಪಡೆದಿದ್ದಾರೆ ಎಂದು ಡಿಕೆಶಿ ಆಪ್ತರು ಖಚಿತಪಡಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣಾ ತಂತ್ರಗಾರಿಕೆ ನಿರ್ವಹಿಸಿದ ಸುನಿಲ್ ಕನುಗೋಲು ಅವರ ಮಾರ್ಗದರ್ಶನ ಪಡೆಯಲೂ ತೀರ್ಮಾನಿಸಲಾಗಿದೆ. ಸುನಿಲ್ ಸಹ ಈಗಾಗಲೇ ಹಲವು ಸುತ್ತಿನ ಚರ್ಚೆಯ ಮೂಲಕ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ಶರ್ಮಿಳಾ ತೆಲಂಗಾಣದಲ್ಲಿ ಯುವಜನ ಶ್ರಮಿಕ ರೈತು ತೆಲಂಗಾಣ ಪಕ್ಷ ಸ್ಥಾಪಿಸಿದ್ದು, ಕೆಲವು ಜಿಲ್ಲೆಗಳಲ್ಲಿ ಅಸ್ತಿತ್ವ ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಈ ಪಕ್ಷವನ್ನು ವಿಲೀನಗೊಳಿಸುವ ಸಂಬಂಧ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಶರ್ಮಿಳಾ ಅವರೊಂದಿಗೆ ಮಾತುಕತೆ ನಡೆಸಿದ್ದು ಫಲಪ್ರದವಾಗಿದೆ ಎಂದು ಹೇಳಲಾಗುತ್ತಿದೆ. ಗ್ಯಾರಂಟಿಗಳ ಎಫೆಕ್ಟ್ ದೇಶಾದ್ಯಂತ ಆಗುತ್ತಿದ್ದು ಮತದಾರರ ಮೇಲೆ ಗಾಢವಾದ ಪರಿಣಾಮ ಬೀರುತ್ತಿದೆ. ಕರ್ನಾಟಕದ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಹುರುಪು ತುಂಬಿದೆ. ಇಲ್ಲಿ ಅನುಸರಿಸಿದ ತಂತ್ರಗಳನ್ನೇ ಎಲ್ಲಾ ರಾಜ್ಯಗಳಲ್ಲೂ ಪ್ರಯೋಗ ಮಾಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.
(ಬರಹ: ಎಚ್.ಮಾರುತಿ)