Telangana Election: ತೆಲಂಗಾಣ ಚುನಾವಣೆ ಕಾಂಗ್ರೆಸ್ 59, ಬಿಆರ್‌ಎಸ್ 52 ಸ್ಥಾನಗಳಿಗೆ ಸಟ್ಟಾ ಬಜಾರ್ ಬೆಟ್ಟಿಂಗ್
Nov 29, 2023 06:04 PM IST
ತೆಲಂಗಾಣ ಚುನಾವಣೆ ಕಾಂಗ್ರೆಸ್ 59, ಬಿಆರ್‌ಎಸ್ 52 ಸ್ಥಾನಗಳಿಗೆ ಸಟ್ಟಾ ಬಜಾರ್ ಬೆಟ್ಟಿಂಗ್ (ಸಾಂಕೇತಿಕ ಚಿತ್ರ)
ತೆಲಂಗಾಣದಲ್ಲಿ ಚುನಾವಣಾ ಪ್ರಚಾರ ಮುಗಿದ ಬೆನ್ನಿಗೆ ಸಟ್ಟಾ ಬಜಾರ್‌ನಲ್ಲಿ ಬೆಟ್ಟಿಂಗ್ ಜೋರಾಗಿದೆ. ಮಂಗಳವಾರ (ನ.28) ಸಂಜೆ 5 ಗಂಟೆ ಬಳಿಕ ಸಟ್ಟಾ ಬಜಾರ್ ಚುರುಕಾಗಿದ್ದು, ಅಲ್ಲಿ ಪಂಟರ್‌ಗಳಿಗೆ ಕಾಂಗ್ರೆಸ್ ಫೇವರಿಟ್ ಆಗಿ ಮೂಡಿಬಂದಿದೆ.
ಹೈದರಾಬಾದ್: ತೆಲಂಗಾಣ ಚುನಾವಣೆಯ ಪ್ರಚಾರ ಮುಗಿದ ಬೆನ್ನಿಗೆ ಸಟ್ಟಾ ಬಜಾರ್‌ನಲ್ಲಿ ಬೆಟ್ಟಿಂಗ್ ಜೋರಾಗಿದೆ. ಮಂಗಳವಾರ ಸಂಜೆಯ ಬಳಿಕ ಚುನಾವಣಾ ಬೆಟ್ಟಿಂಗ್ ಸಕ್ರಿಯವಾಗಿದ್ದು, ಕಾಂಗ್ರೆಸ್, ಬಿಆರ್‌ಎಸ್, ಬಿಜೆಪಿ, ಎಂಐಎಂ ಎಷ್ಟು ಸ್ಥಾನಗಳಲ್ಲಿ ವಿಜಯಿ ಆಗಲಿದೆ ಎಂಬ ವಿಷಯದ ಮೇಲೆ ಬೆಟ್ಟಿಂಗ್ ನಡೆದಿದೆ.
ಮೂಲಗಳ ಪ್ರಕಾರ ಸಟ್ಟಾ ಬಜಾರ್‌ನಲ್ಲಿ ನಡೆದಿರುವ ಬೆಟ್ಟಿಂಗ್ ಪ್ರಕಾರ, 100 ಸ್ಥಾನಗಳ ಪೈಕಿ ಆಡಳಿತಾರೂಢ ಬಿಆರ್‌ಎಸ್ 52, ಕಾಂಗ್ರೆಸ್ 59, ಬಿಜೆಪಿ 5, ಎಐಎಂಐಎಂ 6 ಸ್ಥಾನಗಳ ಮೇಲೆ ಬೆಟ್ಟಿಂಗ್ ಜೋರಾಗಿದೆ.
ಬೆಟ್ಟಿಂಗ್ ಕಟ್ಟುತ್ತಿರುವವರ ಪೈಕಿ ಸಾಮಾನ್ಯರಷ್ಟೇ ಅಲ್ಲ, ರಾಜಕಾರಣಿಗಳು, ವ್ಯಾಪಾರಿಗಳು, ಉದ್ಯಮಿಗಳು, ಸಿನಿಮಾ ನಟರು ಮತ್ತುಇತರರು ಇದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ದ ಇಂಡಿಯನ್ ಎಕ್ಸ್‌ಪ್ರೆಸ್ ವರದಿಮಾಡಿದೆ.
ಸಟ್ಟಾ ಬಜಾರ್‌ನಲ್ಲಿ ಬೆಟ್ಟಿಂಗ್ ಸ್ವಾರಸ್ಯ
1. ಬಹುತೇಕರು ಬಿಆರ್‌ಎಸ್ ಮತ್ತು ಕಾಂಗ್ರೆಸ್ ಮೇಲೆ ಬೆಟ್ಟಿಂಗ್ ಮಾಡುತ್ತಿದ್ದಾರೆ. ಎರಡೂ ಪಕ್ಷಗಳ ಮೇಲೆ ಒಂದೇ ಮೊತ್ತದ ಹಣ ಕಟ್ಟಿ ಬೆಟ್ಟಿಂಗ್ ಆಡುತ್ತ ಸೇಫ್ ಆಟ ಆಡುತ್ತಿದ್ದಾರೆ.
2. ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಬಹುತೇಕ ರಾಜಕಾರಣಿಗಳು ಕಾಂಗ್ರೆಸ್ ಸಾಧನೆ ಮೇಲೆ ಬೆಟ್ಟಿಂಗ್ ಮಾಡುತ್ತಿದ್ದಾರೆ. ತೆಲಂಗಾಣದಲ್ಲಿರುವವರು ಮತ್ತು ಕೆಲವು ಉದ್ಯಮಿಗಳು ಬಿಆರ್‌ಎಸ್ ಮೇಲೆ ಬೆಟ್ಟಿಂಗ್ ಮಾಡುತ್ತಿದ್ದಾರೆ.
3. ಬೆಟ್ಟಿಂಗ್ ಬಜಾರ್‌ನಲ್ಲಿ ಕಾಂಗ್ರೆಸ್ ಪಕ್ಷ ಬೆಟ್ಟಿಂಗ್‌ದಾರರ ಫೇವರಿಟ್ ಪಕ್ಷವಾಗಿ ಮೂಡಿಬಂದಿದೆ.
4. ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಸಟ್ಟಾ ಬಜಾರ್‌ನ ಬೆಟ್ಟಿಂಗ್ ವಹಿವಾಟು 2,500 ಕೋಟಿ ರೂಪಾಯಿ ವಹಿವಾಟು ನಡೆಸಿತ್ತು ಎಂದು ಮೂಲಗಳು ತಿಳಿಸಿವೆ. ಐದು ರಾಜ್ಯಗಳ ಪೈಕಿ ತೆಲಂಗಾಣ ಚುನಾವಣೆ ಮೇಲೆ ಹೆಚ್ಚು ಮೊತ್ತದ ಬೆಟ್ಟಿಂಗ್ ನಡೆಯುತ್ತಿದೆ.
5. ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿರುವ ಕಾರಣ, ತೆಲಂಗಾಣದಲ್ಲೂ ಪಂಟರ್‌ಗಳು ಕಾಂಗ್ರೆಸ್ ಪರ ಒಲವು ತೋರಿದ್ದಾರೆ. ಆಂಧ್ರ ಪ್ರದೇಶದ ಪಂಟರ್‌ಗಳು ಬಿಆರ್‌ಎಸ್ ಮೇಲೆ 1ಕ್ಕೆ 3 ಮತ್ತು ಕಾಂಗ್ರೆಸ್ ಮೇಲೆ 1ಕ್ಕೆ 5ರಂತೆ ಬೆಟ್ಟಿಂಗ್ ನಡೆಸಿದ್ದಾರೆ.