logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Telangana Election: ತೆಲಂಗಾಣ ಚುನಾವಣೆ ಕಣದಲ್ಲಿ ರಾಜಕೀಯ ಭವಿಷ್ಯ ಪರೀಕ್ಷೆಗೆ ಒಡ್ಡಿರುವ ಕ್ರಾಂತಿಕವಿ ಗದ್ದರ್ ಪುತ್ರಿ ಜಿವಿ ವೆನ್ನೆಲಾ

Telangana Election: ತೆಲಂಗಾಣ ಚುನಾವಣೆ ಕಣದಲ್ಲಿ ರಾಜಕೀಯ ಭವಿಷ್ಯ ಪರೀಕ್ಷೆಗೆ ಒಡ್ಡಿರುವ ಕ್ರಾಂತಿಕವಿ ಗದ್ದರ್ ಪುತ್ರಿ ಜಿವಿ ವೆನ್ನೆಲಾ

HT Kannada Desk HT Kannada

Nov 29, 2023 03:56 PM IST

google News

ತೆಲಂಗಾಣ ಚುನಾವಣೆ 2023- ಕ್ರಾಂತಿಕವಿ ಗದ್ದರ್ ಪುತ್ರಿ ಡಾ. ಜಿವಿ ವೆನ್ನೆಲಾ

  • ತೆಲಂಗಾಣ ಚುನಾವಣೆಯಲ್ಲಿ ಗಮನಸೆಳೆಯುತ್ತಿರುವ ಅಭ್ಯರ್ಥಿಗಳ ಪೈಕಿ ಕ್ರಾಂತಿಕವಿ ಗದ್ದರ್ ಪುತ್ರಿ ಡಾ. ಜಿವಿ ವೆನ್ನೆಲಾ ಒಬ್ಬರು. ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಕಂದರಾಬಾದ್ ಕಂಟೋನ್ಮೆಂಟ್‌ನಿಂದ ಸ್ಪರ್ಧಿಸಿದ್ದಾರೆ. ಅವರ ಕಿರುಪರಿಚಯದ 5 ಅಂಶಗಳು ಇಲ್ಲಿವೆ.

ತೆಲಂಗಾಣ ಚುನಾವಣೆ 2023- ಕ್ರಾಂತಿಕವಿ ಗದ್ದರ್ ಪುತ್ರಿ ಡಾ. ಜಿವಿ ವೆನ್ನೆಲಾ
ತೆಲಂಗಾಣ ಚುನಾವಣೆ 2023- ಕ್ರಾಂತಿಕವಿ ಗದ್ದರ್ ಪುತ್ರಿ ಡಾ. ಜಿವಿ ವೆನ್ನೆಲಾ

ಪ್ರತ್ಯೇಕ ತೆಲಂಗಾಣ ರಚನೆ ಪರ ಹೋರಾಡಿದ್ದ, ಒಂದು ಕಾಲದ ನಕ್ಸಲ್ ಹಿತೈಷಿ ಕ್ರಾಂತಿ ಕವಿ ಗದ್ದರ್ (ಗುಮ್ಮಡಿ ವಿಠ್ಠಲ ರಾವ್‌) ಅವರ ಪುತ್ರಿ ಡಾ.ಜಿವಿ ವೆನ್ನೆಲಾ ಅವರು ಕೂಡ ತೆಲಂಗಾಣ ಚುನಾವಣೆಯ ಕಣದಲ್ಲಿದ್ದು ಗಮನಸೆಳೆದಿದ್ದಾರೆ.

ಗದ್ದರ್ ಮತ್ತು ಕುಟುಂಬ ಕಾಂಗ್ರೆಸ್ ಪರ ಒಲವು ಹೊಂದಿತ್ತು ಎಂಬ ವಿಚಾರ ಎಲ್ಲರಿಗೂ ತಿಳಿದಿರುವಂಥದ್ದೇ. ಗದ್ದರ್ ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದಾಗ ಅವರ ಅಂತ್ಯಕ್ರಿಯೆಗೆ ವ್ಯವಸ್ಥೆಯನ್ನೂ ಕಾಂಗ್ರೆಸ್ ನಾಯಕರು ಮಾಡಿದ್ದರು. ಆಗ ಗದ್ದರ್ ಕುಟುಂಬಕ್ಕೆ ವಿಧಾನ ಸಭೆ ಚುನಾವಣೆಗೆ ಟಿಕೆಟ್ ನೀಡುವುದಾಗಿ ಘೋಷಿಸಲಾಗಿತ್ತು.

ಅದರಂತೆ, ಗದ್ದರ್ ಅವರ ಪುತ್ರ ಡಾ. ಜಿವಿ ವೆನ್ನೆಲಾ ಅವರಿಗೆ ಸಿಕಂದರಾಬಾದ್ ಕಂಟೋನ್ಮೆಂಟ್ ಕ್ಷೇತ್ರದ ಟಿಕೆಟ್ ಅನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಜಿವಿ ವೆನ್ನೆಲಾ ಅವರು ಎಂಬಿಎ ಪ್ರೊಫೆಸರ್ ಆಗಿದ್ದು, ಕಾಂಗ್ರೆಸ್ ಟಿಕೆಟ್‌ ಮೂಲಕ ಸ್ಪರ್ಧಿಸುತ್ತಿರುವುದು ಅವರ ಹುಮ್ಮಸ್ಸನ್ನು ಹೆಚ್ಚಿಸಿದೆ. ಗಲ್ಲಿಗಲ್ಲಿ ತಿರುಗುತ್ತ ತನ್ನ ಬಾಲ್ಯದಿಂದ ಹಿಡಿದು ಈ ಕ್ಷೇತ್ರದ ಒಡನಾಟದ ವಿವರಗಳನ್ನು ಅವರು ಹೇಳುತ್ತ ಮತಯಾಚನೆ ಮಾಡಿದ್ದರು. ಅಷ್ಟೇ ಅಲ್ಲದೆ, ಕಾಂಗ್ರೆಸ್ ಆಡಳಿತ ಸಾಧನೆಗಳನ್ನೂ ಜನರಿಗೆ ಮುಟ್ಟಿಸಿದ್ದಾರೆ.

ತೆಲಂಗಾಣ ಚುನಾವಣೆ ಸ್ಪರ್ಧೆ ಕುರಿತು ವೆನ್ನೆಲಾ ಹೇಳಿರುವುದು ಇಷ್ಟು

ಚುನಾವಣೆ ಸ್ಪರ್ಧಿಸಲು ಅವಕಾಶ ಸಿಕ್ಕಿರುವುದು ಸೌಭಾಗ್ಯ. ನಾನು ಇಲ್ಲೇ ಬೆಳೆದೆ. ನನ್ನ ಶಾಲೆಯು ಇದೇ ಕ್ಷೇತ್ರದ ಒಂದು ಮೂಲೆಯಲ್ಲಿದೆ. ನಾನು ಇದಕ್ಕಿಂತ ಉತ್ತಮವಾದದ್ದನ್ನು ಕೇಳಲು ಸಾಧ್ಯವಾಗಲ್ಲ ಎನ್ನುತ್ತ ವೆನ್ನೆಲ ಹುಮ್ಮಸ್ಸು ಲವಲವಿಕೆಯೊಂದಿಗೆ ಮತಪ್ರಚಾರ ಮಾಡುತ್ತ ಸಾಗುತ್ತಿದ್ದರು. ಈ ನಡುವೆ, ಅವರ ಧ್ವನಿ ತಂದೆ ಗದ್ದರ್ ಅವರ ಧ್ವನಿಯಂತೆಯೇ ಗಡುಸಾಗಿದ್ದು, ಆನುವಂಶಿಕ ಎಂದು ಹೇಳುವುದರ ಜತೆಗೆ, ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಸ್ಥಳೀಯರ ಫೋನ್ ಕರೆ ಸ್ವೀಕರಿಸಿ ಹೀಗಾಗಿದೆ ಎಂದು ಲಘು ದಾಟಿಯಲ್ಲಿ ಹೇಳುತ್ತ ಹಾಸ್ಯ ಪ್ರಜ್ಞೆಯನ್ನೂ ಮೆರೆಯುತ್ತಿದ್ದಾರೆ.

ಡಾ. ಜಿವಿ ವೆನ್ನೆಲಾ ಅವರ ಕಿರು ಪರಿಚಯದ 5 ಅಂಶಗಳು

1. ವೆನ್ನೆಲಾ ಅವರು ಒಸ್ಮಾನಿಯಾ ವಿಶ್ವವಿದ್ಯಾಲಯದ ಪದವೀಧರೆ. ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅದೇ ರೀತಿ ಸ್ಕೂಲ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಪೋಸ್ಟ್ ಗ್ರಾಜುವೇಟ್ ಡಿಪ್ಲೋಮಾ ಪಡೆದಿದ್ದಾರೆ. 43 ವರ್ಷ ವಯಸ್ಸು. ಎರಡು ಮಕ್ಕಳ ತಾಯಿ. ಒಂದು ಮಗುವಿಗೆ 4 ವರ್ಷ. ಇನ್ನೊಂದು ಮಗು 2 ವರ್ಷದ್ದು.

2. ಶಿಕ್ಷಕ ವೃತ್ತಿಯಲ್ಲಿ ಹದಿನೆಂಟು ವರ್ಷದ ಅನುಭವ ಇದ್ದು, ಆ ಪ್ರದೇಶದಲ್ಲಿ ತಕ್ಕಮಟ್ಟಿನ ಜನಪ್ರಿಯತೆ ಹೊಂದಿದ್ದಾರೆ. ಕಂಟೋನ್ಮೆಂಟ್ ಪ್ರದೇಶದ ಜನರ ಸಮಸ್ಯೆಯನ್ನು ಬೇಗ ಗುರುತಿಸಿ ಅದಕ್ಕೆ ಸ್ಪಂದಿಸುವ ಕೆಲಸವನ್ನು ಈಗಾಗಲೇ ಶುರುಮಾಡಿದ್ದು, ಜನರೂ ಅದನ್ನು ಗುರುತಿಸಿದ್ದಾರೆ.

3. ಈ ಪ್ರದೇಶದಲ್ಲಿ ಸಾಕಷ್ಟು ನಾಗರಿಕ ಸಮಸ್ಯೆಗಳಿವೆ. ರಸ್ತೆಗಳು ಹೊಂಡಗಳಿಂದ ಕೂಡಿವೆ. ಈ ಪ್ರದೇಶವು ಕಸದ ಡಂಪಿಂಗ್ ಯಾರ್ಡ್‌ ಆಗಿ ಮಾರ್ಪಟ್ಟಿದೆ ಮತ್ತು ಯುವಕರು ನಿರುದ್ಯೋಗಿಗಳಾಗಿದ್ದಾರೆ ಎಂದು ವೆನ್ನೆಲ ಪಟ್ಟಿ ಮಾಡುತ್ತ ಹೋಗುತ್ತಾರೆ. ಅವರು ಕೇಂದ್ರದಿಂದ ಸಿಕಂದರಾಬಾದ್‌ನ ಸೈನ್ಯ-ಗಸ್ತು ಪ್ರದೇಶಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾದಾಗ ಅದನ್ನು ಆಕ್ಷೇಪಿಸಿದ್ದರು.

4. ಸಿಕಂದರಾಬಾದ್‌ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮೊದಲ ಮಹಿಳೆ ಎಂಬ ಕೀರ್ತಿಗೆ ವೆನ್ನೆಲಾ ಅವರು ಭಾಜನರಾಗಿದ್ದಾರೆ. ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌)ಯ ಲಾಸ್ಯ ನಂದಿತಾ ಅವರಿಗೆ ಪ್ರತಿಸ್ಪರ್ಧಿಯಾಗಿದ್ದಾರೆ. ನಂದಿತಾ ಅವರು ಐದು ಬಾರಿ ಶಾಸಕರಾಗಿದ್ದ ದಿವಂಗತ ಜಿ. ಸಾಯಣ್ಣ ಅವರ ಪುತ್ರಿ.

5. ದಶಕಗಳಿಂದ ಸಾಮಾಜಿಕ-ಸಾಂಸ್ಕೃತಿಕ ಐಕಾನ್ ಆಗಿದ್ದ ಗದ್ದರ್ ಅವರು ಚುನಾವಣಾ ರಾಜಕೀಯಕ್ಕೆ ಇಳಿದಿರಲಿಲ್ಲ. ಆದರೆ 2010 ರಲ್ಲಿ, ಅವರು ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಲು ಮತ್ತು ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ತೆಲಂಗಾಣ ಪ್ರಜಾ ಫ್ರಂಟ್ ಅನ್ನು ಪ್ರಾರಂಭಿಸಿದರು. ವೆನ್ನೆಲಾ ಮತ್ತು ಆಕೆಯ ಸಹೋದರ ಜಿ ವಿ ಸೂರ್ಯಂ, ಇಬ್ಬರೂ ಇದರಿಂದಲೂ ದೂರ ಉಳಿದಿದ್ದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ