CM KCR Trailing: ತೆಲಂಗಾಣ ಚುನಾವಣೆ ಫಲಿತಾಂಶ, ಕಾಮರೆಡ್ಡಿಯಲ್ಲಿ ಮುಖ್ಯಮಂತ್ರಿ ಕೆಸಿಆರ್ ಹಿನ್ನಡೆ, ಕಾಂಗ್ರೆಸ್‌ನ ರೇವಂತ ರೆಡ್ಡಿ ಮುನ್ನಡೆ
Dec 03, 2023 12:40 PM IST
ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಆಯ್ಕೆ ಮಾಡಿಕೊಂಡ ಎರಡನೇ ಕ್ಷೇತ್ರ ಕಾಮರೆಡ್ಡಿಯಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಹಿನ್ನಡೆ ಅನುಭವಿಸುತ್ತಿದ್ದಾರೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಎ ರೇವಂತ ರೆಡ್ಡಿ ಮುನ್ನಡೆಯಲ್ಲಿದ್ದು, ಬಿಜೆಪಿ ಅಭ್ಯರ್ಥಿಯಿಂದಲೂ ಪೈಪೋಟಿ ಎದುರಿಸಿದ್ದಾರೆ ಕೆಸಿಆರ್.
ತೆಲಂಗಾಣ ಚುನಾವಣೆ ಫಲಿತಾಂಶ (Telangana Election Results 2023) ಪ್ರಕಟವಾಗತ್ತಿದ್ದ, ಕಾಮರೆಡ್ಡಿಯಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಹಿನ್ನಡೆ ಅನುಭವಿಸಿದ್ದಾರೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಎ ರೇವಂತ ರೆಡ್ಡಿ ಸ್ಪಷ್ಟ ಮುನ್ನಡ ಕಾಯ್ದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಕೂಡ ಕೆಸಿಆರ್‌ಗೆ ಪೈಪೋಟಿ ನೀಡಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಮರೆಡ್ಡಿ ಮತ್ತು ಗಜ್ವೇಲ ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದು, ಈ ಪೈಕಿ ಕಾಮರೆಡ್ಡಿಯಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಎ ರೇವಂತ ರೆಡ್ಡಿ ವಿರುದ್ಧ ಭಾರಿ ಹಿನ್ನಡೆ ಅನುಭವಿಸಿದ್ದಾರೆ.
ತೆಲಂಗಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಆರಂಭದ 5 ಸುತ್ತಿನ ಪ್ರಕಟಿತ ಫಲಿತಾಂಶ(ಮಧ್ಯಾಹ್ನ 12.15ರ ಪ್ರಕಾರ) ದಲ್ಲಿ ಕಾಂಗ್ರೆಸ್ ಅಧ್ಯಕ್ಷ ಎ. ರೇವಂತ ರೆಡ್ಡಿ ಅವರು ಕಾಮರೆಡ್ಡಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ವಿರುದ್ಧ 2133 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. 12 ಸುತ್ತಿನ ಮತ ಎಣಿಕೆ ಇದ್ದು, ಉಳಿದ 7 ಸುತ್ತುಗಳ ಫಲಿತಾಂಶ ಪ್ರಕಟವಾಗುತ್ತ ಹೋದಂತೆ ಸೋಲು ಗೆಲುವು ಸ್ಪಷ್ಟವಾಗುತ್ತ ಸಾಗಲಿದೆ. ವಿಶೇಷ ಎಂದರೆ ಬಿಜೆಪಿಯ ಅಭ್ಯರ್ಥಿ ಕಾಟಿಪಳ್ಳಿ ವೆಂಕಟ ರಮಣರೆಡ್ಡಿ ಅವರು ಕೂಡ ಕೆಸಿಆರ್ ಅವರಿಗೆ ಪೈಪೋಟಿ ನೀಡಿದ್ದಾರೆ.
5 ಸುತ್ತುಗಳ ಪ್ರಕಟಿತ ಫಲಿತಾಂಶ ಪ್ರಕಾರ, ಎ. ರೇವಂತ ರೆಡ್ಡಿ (16266 (+ 2133)), ಕೆ.ಚಂದ್ರ ಶೇಖರ ರಾವ್ 14133 ( -2133), ಕಾಟಿಪಳ್ಳಿ ವೆಂಕಟರಮಣ ರೆಡ್ಡಿ 13605 ( -2661) ಮತ ಗಳಿಸಿದ್ದರು.
ತೆಲಂಗಾಣ ಸಿಎಂ ಕೆಸಿಆರ್ ಗಜ್ವೇಲ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. 2014 ರಲ್ಲಿ ರಾಜ್ಯ ರಚನೆಯಾದಾಗಿನಿಂದ, ಕೆಸಿಆರ್ ಮುಖ್ಯಮಂತ್ರಿಯಾಗಿ ಬಿಆರ್‌ಎಸ್ ಅಧಿಕಾರವನ್ನು ಹಿಡಿದಿದೆ.
ಗಜ್ವೇಲ್‌ನಲ್ಲಿ 12 ಸುತ್ತುಗಳ ಪೈಕಿ 4 ಸುತ್ತುಗಳ ಮತ ಎಣಿಕೆ ಆಗಿದ್ದು ( ಮಧ್ಯಾಹ್ನ 12.30) ಕೆಸಿಆರ್ 18568 (+ 5777) ಮತ್ತು ಬಜೆಪಿ ಅಭ್ಯರ್ಥಿ ಏಟಲ ರಾಜೇಂದ್ರ ಅವರು 12791 ( -5777) ಮತಗಳಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೂರನೆ ಸ್ಥಾನದಲ್ಲಿದ್ದು ಧೂಮಕುಂಟ ನರಸಾ ರೆಡ್ಡಿ 6250 ( -12318) ಮತ ಗಳಿಸಿದ್ದಾರೆ.
ರೇವಂತ ರೆಡ್ಡಿ ಅವರು ಕೋಡಂಗಲ್ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದು ಅಲ್ಲಿ 24139 (+ 5832) ಮತಗಳಿಸಿದ್ದು ಮುನ್ನಡೆಯಲ್ಲಿದ್ದಾರೆ.
ಎ ರೇವಂತ ರೆಡ್ಡಿ ಸ್ಪರ್ಧೆ ಮತ್ತು ರಾಜಕೀಯ ಬದುಕಿನ ಹಾದಿ
ಕಾಮರೆಡ್ಡಿ ವಿಧಾನಸಭಾ ಕ್ಷೇತ್ರವು ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಪ್ರಮುಖ ಕ್ಷೇತ್ರಗಳ ಪೈಕಿ ಒಂದು. ಇದು ಜಹೀರಾಬಾದ್ ಲೋಕಸಭೆಯ ಭಾಗವಾಗಿದೆ. ಟಿಆರ್‌ಎಸ್ (ಈಗ ಬಿಆರ್‌ಎಸ್) ಸ್ಥಾನದ ಮೇಲೆ ಪ್ರಬಲ ಶಕ್ತಿಯಾಗಿದೆ. 2009, 2011, 2014 ಮತ್ತು 2018ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷದ ಗಂಪ ಗೋವರ್ಧನ್ ಗೆಲುವು ಸಾಧಿಸಿದ್ದರು. 2023ರಲ್ಲಿ ಕೆಸಿಆರ್ ಅವರು ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ವಿರುದ್ಧ ಸ್ಪರ್ಧಿಸಿದ್ದು, ಹಿನ್ನಡೆ ಕಂಡಿದ್ದಾರೆ.
ರೇವಂತ್ ರೆಡ್ಡಿ ಅವರು ಲೋಕಸಭೆಯಲ್ಲಿ ಮಲ್ಕಾಜ್‌ಗಿರಿ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ಸಂಸದ. ಇದಕ್ಕೂ ಮೊದಲು, ಅವರು 2009 ಮತ್ತು 2014 ರಲ್ಲಿ ಟಿಡಿಪಿಯಿಂದ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಎರಡು ಬಾರಿ ಶಾಸಕರಾಗಿದ್ದರು ಮತ್ತು 2014 ಮತ್ತು 2018 ರ ನಡುವೆ ತೆಲಂಗಾಣ ವಿಧಾನಸಭೆಯಲ್ಲಿ ಕೊಡಂಗಲ್ ಕ್ಷೇತ್ರವನ್ನು ಪ್ರತಿನಿಧಿಸಿದರು. ಅವರು ಟಿಡಿಪಿ ತೊರೆದು 2017 ರಲ್ಲಿ ಕಾಂಗ್ರೆಸ್ ಸೇರಿದರು.
ಅವರು ಜೂನ್ 2021 ರಲ್ಲಿ, ಎನ್. ಉತ್ತಮ್ ಕುಮಾರ್ ರೆಡ್ಡಿ ಅವರ ಉತ್ತರಾಧಿಕಾರಿಯಾಗಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು.