Telangana results: ತೆಲಂಗಾಣ ಚುನಾವಣೆ ಫಲಿತಾಂಶ- ಟ್ರೆಂಡ್ ಹೇಗಿದೆ ಯಾರಿಗೆ ಮುನ್ನಡೆ, ಯಾರಿಗೆ ಹಿನ್ನಡೆ
Dec 03, 2023 11:31 AM IST
ತೆಲಂಗಾಣ ವಿಧಾನಸಭಾ ಚುನಾವಣೆ ಫಲಿತಾಂಶ, ಇವಿಎಂ ಇರಿಸಿದ್ದ ಸ್ಟ್ರಾಂಗ್ ರೂಮ್ ಸುತ್ತ ಭದ್ರತೆ (ಕಡತ ಚಿತ್ರ)
ತೆಲಂಗಾಣ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಆರಂಭಿಕ ಟ್ರೆಂಡ್ ಪ್ರಕಾರ, ಎರಡು ಸಲ ಆಡಳಿತ ನಡೆಸಿದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ಗೆ ಭಾರಿ ಹಿನ್ನಡೆ ಉಂಟಾಗಿದೆ. ಕಾಂಗ್ರೆಸ್ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ ತನ್ನ ಸಾಧನೆಯನ್ನು ಸುಧಾರಿಸಿದಂತೆ ಕಾಣಿಸುತ್ತಿದೆ.
ತೆಲಂಗಾಣ ವಿಧಾನಸಭಾ ಚುನಾವಣೆ ಫಲಿತಾಂಶ (Telangana assembly election results 2023) ಕಟವಾಗುತ್ತಿದ್ದು, ಆರಂಭಿಕ ಟ್ರೆಂಡ್ ಪ್ರಕಾರ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ ಹಿನ್ನಡೆ ಉಂಟಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಭಾರಿ ಮುನ್ನಡೆಯಲ್ಲಿದೆ. ಬಿಜೆಪಿ ಕೂಡ ತನ್ನ ಫಲಿತಾಂಶವನ್ನು ಸುಧಾರಿಸಿದಂತೆ ಕಂಡ ಬಂದಿದೆ.
ತೆಲಂಗಾಣ ವಿಧಾನ ಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು (ಡಿ.3) ಬೆಳಗ್ಗೆ 8 ಗಂಟೆಗೆ ಶುರುವಾಗಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಯಿತು. ಈ ಮಾಹಿತಿ ಪ್ರಕಾರ ಅಂಚೆ ಮತಪತ್ರಗಳಲ್ಲಿ ಬಹುತೇಕ ಸ್ಥಾನಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಜಂಟಿ ಖಮ್ಮಂ ಮತ್ತು ಜಂಟಿ ನಲ್ಗೊಂಡ ಜಿಲ್ಲೆಗಳ ಎಲ್ಲಾ ಸ್ಥಾನಗಳಲ್ಲಿ ಅಂಚೆ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ತೆಲಂಗಾಣ ಫಲಿತಾಂಶದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ, ಬಿಆರ್‌ಎಸ್‌ಗೆ ಹಿನ್ನಡೆ, ಸುಧಾರಿಸಿದ ಬಿಜೆಪಿ
ಇವಿಎಂ ಮತ ಎಣಿಕೆ ಕೂಡ ಪಗ್ರತಿಯಲ್ಲಿದ್ದು, ಕಾಂಗ್ರೆಸ್ ಪಕ್ಷ 69 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಆರ್‌ಎಸ್ 39 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿಗೆ ಭಾರಿ ಲಾಭವಾಗಿದ್ದು, 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 2018ರಲ್ಲಿ ಬಿಜೆಪಿ ಒಂದೇ ಒಂದು ಸ್ಥಾನದಲ್ಲಿ ಗೆಲುವು ಕಂಡಿತ್ತು.
ಹೈದರಾಬಾದ್ ಪ್ರದೇಶದಲ್ಲಿ ಬಿಆರ್‌ಎಸ್ ಮುನ್ನಡೆ ಸಾಧಿಸಿದ್ದರೆ, ಇತರ ಪ್ರದೇಶಗಳಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಕಾಂಗ್ರೆಸ್ ಸುಮಾರು 46 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಆರ್‌ಎಸ್ 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಆರಂಭದಲ್ಲಿ ಕಂಡುಬಂದಿರುವ ಇದೇ ಟ್ರೆಂಡ್ ಮುಂದುವರಿದರೆ, ಕೆ ಚಂದ್ರಶೇಖರ ರಾವ್ ಅವರಿಗೆ ಮುಖಭಂಗವಾಗುವುದು ಖಚಿತ. ತೆಲಂಗಾಣ ರಾಜ್ಯ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೆ ಚಂದ್ರಶೇಖರ ರಾವ್ (ಕೆಸಿಆರ್) ಅವರಿಗೆ ಮತದಾರರು ಎರಡು ಅವಧಿಗೆ ಚಾನ್ಸ್ ಕೊಟ್ಟಿದ್ದರು.
ತೆಲಂಗಾಣ ಮತಗಟ್ಟೆ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಂಡುಬಂದಿತ್ತು. ಬಿಆರ್‌ಎಸ್ ಅಧಿಕಾರ ಕಳೆದುಕೊಳ್ಳಲಿದೆ ಎಂಬ ಸುಳಿವನ್ನೂ ಬಹುತೇಕ ಮತಗಟ್ಟೆ ಸಮೀಕ್ಷೆಯ ಫಲಿತಾಂಶಗಳು ನೀಡಿದ್ದವು.
ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ, ಕೆಸಿಆರ್ ಪಾಳಯದಲ್ಲಿ ಕಳವಳ
ರಾಹುಲ್ ಗಾಂಧಿ ಅವರ ನಾಯಕತ್ವ ಮತ್ತು ಭಾರತ್ ಜೋಡೋ ಯಾತ್ರೆಯನ್ನು ಶ್ಲಾಘಿಸಿದ ಕಾಂಗ್ರೆಸ್ ಪಕ್ಷದ ವೀಕ್ಷಕ ಮಾಣಿಕ್ ರಾವ್ ಠಾಕ್ರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ 70 ಸ್ಥಾನ ಗೆಲ್ಲಲಿದೆ. ನಮ್ಮ ಪಕ್ಷದ ಮುಖ್ಯಸ್ಥೆ ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ನೀತಿಗಳ ಬಗ್ಗೆ ಜನರಿಗೆ ಅರ್ಥವಾಗುವಂತೆ ಮಾಡಿದರು. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಭೇಟಿ ಹೆಚ್ಚಿನ ಪ್ರಭಾವ ಬೀರಿದೆ. ಕೆಸಿಆರ್ ತೆಲಂಗಾಣದಲ್ಲಿ ರಾಜ ಮತ್ತು ಚಕ್ರವರ್ತಿಯಂತೆ ವರ್ತಿಸಿದರು. ಕಾಂಗ್ರೆಸ್ ತೆಲಂಗಾಣಕ್ಕೆ ರಾಜ್ಯ ಸ್ಥಾನಮಾನವನ್ನು ನೀಡಿತ್ತು ಮತ್ತು ಅದು ಉತ್ತಮ ರಾಜ್ಯವಾಗಬೇಕೆಂದು ಎಲ್ಲರೂ ಬಯಸಿದ್ದರು, ಆದರೆ ಅದು ಆಗಲಿಲ್ಲ. ಹೀಗಾಗಿ ಜನ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಲಿದ್ದಾರೆ ಎಂದು ಹೇಳಿದ್ದರು.
ತೆಲಂಗಾಣ ಚುನಾವಣಾ ಕಣದ ಚಿತ್ರಣ ಹೀಗಿತ್ತು
ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ 109 ಪಕ್ಷಗಳ 119 ಕ್ಷೇತ್ರಗಳಲ್ಲಿ ಒಟ್ಟು 2290 ಅಭ್ಯರ್ಥಿಗಳು ಕಣದಲ್ಲಿದ್ದರು. ನವೆಂಬರ್ 30ರಂದು ನಡೆದ ಮತದಾನದಲ್ಲಿ 35,655 ಮತಗಟ್ಟೆಗಳಿದ್ದವು. ಶೇಕಡ 70.28 ಮತದಾನವಾಗಿದೆ.