Tirumala temple: ಹುಂಡಿ ಸಂಗ್ರಹದಲ್ಲಿ ದಾಖಲೆ ಬರೆದ ಸಪ್ತಗಿರಿ ಒಡೆಯ; ಒಂದೇ ದಿನ ಸಂಗ್ರಹವಾಯ್ತು ಈವರೆಗಿನ ಗರಿಷ್ಠ ಮೊತ್ತ
Jan 03, 2023 08:50 PM IST
ವೈಕುಂಠ ಏಕಾದಶಿಯಂದು ನಡೆದ ಸ್ವರ್ಣರಥೋತ್ಸವದ ದೃಶ್ಯ
- ಹೊಸ ವರ್ಷ ಬಂದ ಬೆನ್ನಲ್ಲೇ ವೈಕುಂಠ ಏಕಾದಶಿ ಮತ್ತು ವೈಕುಂಠ ದ್ವಾದಶಿ ಉತ್ಸವ ಏಕಕಾಲದಲ್ಲಿ ನಡೆದಿದೆ. ಹೀಗಾಗಿ ತಿರುಮಲ ದೇವಸ್ಥಾನದಲ್ಲಿ ಸೋಮವಾರದಂದು ಅತಿ ಹೆಚ್ಚು ಹುಂಡಿ ಸಂಗ್ರಹವಾಗಿದೆ.
ತಿರುಪತಿ: ವಿಶ್ವದ ಶ್ರೀಮಂತ ದೇವಾಲಯವಾದ ತಿರುಮಲಕ್ಕೆ ಪ್ರತಿನಿತ್ಯ ಕೋಟಿಗಟ್ಟಲೆ ಹುಂಡಿ ಹಣ ಹರಿದು ಬರುತ್ತದೆ. ಅದರಂತೆಯೇ, ವೈಕುಂಠ ಏಕಾದಶಿಯಾದ ಸೋಮವಾರದಂದು, ತಿಮ್ಮಪ್ಪನ ಸನ್ನಿಧಿಗೆ ಕೋಟಿಗಟ್ಟಲೆ ಹುಂಡಿ ಹಣ ಹರಿದು ಬಂದಿದೆ. ಏಳು ಬೆಟ್ಟಗಳ ಒಡೆಯನನ್ನು ಕಣ್ತುಂಬಿಕೊಳ್ಳಲು ವೈಕುಂಠ ಏಕಾದಶಿಯಂದು ಲಕ್ಷಾಂತರ ಭಕ್ತರು ತಿರುಪತಿಗೆ ಬಂದಿದ್ದು, ಭಾರಿ ಮೊತ್ತದಲ್ಲಿ ಹುಂಡಿ ಸಂಗ್ರಹವಾಗಿದೆ.
ಜನವರಿ 2ರ ಸೋಮವಾರ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿತ್ತು. ತಿರುಮಲದಲ್ಲಿ ವೆಂಕಟೇಶ್ವರನ ಸ್ವರ್ಣ ರಥೋತ್ಸವ ಕೂಡಾ ಅದ್ಧೂರಿಯಾಗಿ ನೆರವೇರಿತು. ಇದೇ ವೇಳೆ ಸಪ್ತಗಿರಿಯೊಡೆಯನಿಗೆ ಒಂದೇ ದಿನದಲ್ಲಿ 7.6 ಕೋಟಿ ರೂಪಾಯಿಗಳ ಹುಂಡಿ ಸಂದಾಯವಾಗಿದೆ. ಆ ಮೂಲಕ 2023ರ ಹೊಸ ವರ್ಷದ ಮೊದಲ ಮಂಗಳಕರ ದಿನದಂದು ಒಂದೇ ದಿನ ದೊಡ್ಡ ಮೊತ್ತದ ಹುಂಡಿ ಸಂಗ್ರಹವಾದಂತಾಗಿದೆ. ಇದು ಈವರೆಗಿನ ಒಂದೇ ದಿನದ ಅತಿಹೆಚ್ಚು ಹುಂಡಿ ಮೊತ್ತ ಎಂಬುದು ವಿಶೇಷ.
ಏಳು ಬೆಟ್ಟಗಳ ಅಧಿಪತಿಯನ್ನು ನೋಡಲು, ಹೊಸ ವರ್ಷದ ಹಿಂದಿನ ದಿನವೇ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಡಿಸೆಂಬರ್ 31ರಿಂದಲೇ ತಿರುಮಲದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಲ್ಲಲು ಪ್ರಾರಂಭಿಸಿದ್ದರು. ಕಾಲ್ನಡಿಗೆ ಮೂಲಕ ಬೆಟ್ಟ ಹತ್ತುವ ಭಕ್ತರ ಸಂಖ್ಯೆ ಕೂಡಾ ಅಧಿಕವಾಗಿತ್ತು.
ಹೊಸ ವರ್ಷ ಬಂದ ಬೆನ್ನಲ್ಲೇ ವೈಕುಂಠ ಏಕಾದಶಿ ಮತ್ತು ವೈಕುಂಠ ದ್ವಾದಶಿ ಉತ್ಸವ ಏಕಕಾಲದಲ್ಲಿ ನಡೆದಿದೆ. ಹೀಗಾಗಿ ತಿರುಮಲ ದೇವಸ್ಥಾನದಲ್ಲಿ ಸೋಮವಾರದಂದು ಅತಿ ಹೆಚ್ಚು ಹುಂಡಿ ಸಂಗ್ರಹವಾಗಿದೆ. ಈ ಹಿಂದೆ 2022ರ ಅಕ್ಟೋಬರ್ 23ರಂದು 6.3 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಇದು ಹಿಂದೆ ಒಂದೇ ದಿನ ಸಂಗ್ರಹವಾದ ಅತಿ ಹೆಚ್ಚು ಹುಂಡಿ ಮೊತ್ತವಾಗಿತ್ತು ಎಂದು ಟಿಟಿಡಿ ಮೂಲಗಳು ತಿಳಿಸಿವೆ.
ಐತಿಹಾಸಿಕ ವೆಂಕಟೇಶ್ವರ ದೇವಸ್ಥಾನ ಮತ್ತು ದೇಶಾದ್ಯಂತ 50ಕ್ಕಿಂತ ಹೆಚ್ಚು ದೇವಾಲಯಗಳ ವ್ಯವಹಾರಗಳನ್ನು ನಿರ್ವಹಿಸುವ ಟಿಟಿಡಿ, ಅದರ ಹುಂಡಿ ಸಂಗ್ರಹದಲ್ಲಿ ಒಂದು ಮಾದರಿಯ ಬದಲಾವಣೆಯನ್ನು ಕಂಡಿದೆ. ಇದು 2012-2022ರ ನಡುವಿನ ದಶಕದಲ್ಲಿ ಬಹುತೇಕ ದ್ವಿಗುಣಗೊಂಡಿದೆ.
ಒಂದು ತಿಂಗಳಿನಲ್ಲಿ ದೇಶದ ಇತರ ಹಲವಾರು ಪ್ರಮುಖ ಹಿಂದೂ ದೇವಾಲಯಗಳಲ್ಲಿ ಸಂಗ್ರಹವಾದ ಸರಾಸರಿ ಹುಂಡಿ ಸಂಗ್ರಹ ಅಥವಾ ದೇಣಿಗೆಯು ತಿಂಗಳಿಗೆ ಸರಿಸುಮಾರು 4ರಿಂದ 5 ಕೋಟಿ ರೂಪಾಯಿಗಿಂತ ಕಡಿಮೆ. ಇದೇ ವೇಳೆ ತಿರುಮಲ ದೇವಸ್ಥಾನದಲ್ಲಿ ಒಂದೇ ದಿನದಲ್ಲಿ ಸಂಗ್ರಹವಾಗುವ ಸರಾಸರಿ ಹುಂಡಿ ಸಂಗ್ರಹವು ಸರಿಸುಮಾರು 4 ರಿಂದ 6 ಕೋಟಿ ರೂಪಾಯಿ.
ಕೋವಿಡ್ 19 ಆರ್ಭಟಕ್ಕೂ ಮುನ್ನ ತಿರುಮಲ ದೇವಸ್ಥಾನದಲ್ಲಿ ಸರಾಸರಿ ಮಾಸಿಕ ಹುಂಡಿ ಸಂಗ್ರಹವು ಸುಮಾರು 90 ರಿಂದ 115 ಕೋಟಿ ರೂಪಾಯಿಗಳಾಗಿತ್ತು. ಆದರೆ, ಕಳೆದ ವರ್ಷ ಏಪ್ರಿಲ್‌ನಿಂದ ವೆಂಕಟೇಶ್ವರ ದೇಗುಲದ ಮಾಸಿಕ ಹುಂಡಿ ಸಂಗ್ರಹವು ಹೆಚ್ಚಿನ ಪ್ರಮಾಣದಲ್ಲಿದೆ. ಈಗ ಕೋವಿಡ್ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
ಸೋಮವಾರ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ನಿಮಿತ್ತ ಸ್ವರ್ಣರಥೋತ್ಸವ ಅದ್ಧೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ತಿರುಮಲದ ಬೀದಿಗಳು ಗೋವಿಂದ ನಾಮಸ್ಮರಣೆಯಿಂದ ತುಂಬಿದ್ದವು. ಬೆಳಗ್ಗೆ 9 ರಿಂದ 11 ಗಂಟೆಯ ನಡುವೆ, ಚಿನ್ನದ ರಥದಲ್ಲಿ ಏಳು ಬೆಟ್ಟಗಳ ಒಡೆಯ ಭಕ್ತರಿಗೆ ದರ್ಶನ ನೀಡಿದ. ಸುಂದರವಾಗಿ ಅಲಂಕೃತವಾದ ಚಿನ್ನದ ರಥವನ್ನು ಟಿಟಿಡಿ ಮಹಿಳಾ ನೌಕರರು ಹಾಗೂ ಅನೇಕ ಮಹಿಳಾ ಭಕ್ತರು ಭಕ್ತಿಯಿಂದ ಗೋವಿಂದನ ಸ್ಮರಣೆಯೊಂದಿಗೆ ಎಳೆದರು.
ತಿರುಮಲಕ್ಕೆ ಅಪಾರ ಸಂಖ್ಯೆಯ ಭಕ್ತರು ದೇಶ ವಿದೇಶಗಳಿಂದ ಬರುತ್ತಾರೆ. ಪ್ರತಿದಿನವೂ ಇಲ್ಲಿಗೆ ಲಕ್ಷ ಹಾಗೂ ಕೋಟಿ ಮೊತ್ತದಲ್ಲಿ ಹುಂಡಿ ಮತ್ತು ದೇಣಿಗೆ ಸಂಗ್ರಹವಾಗುತ್ತದೆ. ಹಣದ ರೂಪದಲ್ಲಿ ಮಾತ್ರವಲ್ಲದೆ, ಚಿನ್ನ, ಬೆಳ್ಳಿಯ ರೂಪದಲ್ಲಿ ದೇಣಿಗೆ ನೀಡಲಾಗುತ್ತದೆ.