ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ನ್ಯೂಸ್; ಲಡ್ಡು ವಿಚಾರಕ್ಕೆ ಸಂಬಂಧಿಸಿ ಹೊಸ ನಿಯಮ ಜಾರಿಗೆ ತಂದ ಟಿಟಿಡಿ
Sep 05, 2024 04:31 PM IST
ಲಡ್ಡು ವಿಚಾರಕ್ಕೆ ಸಂಬಂಧಿಸಿ ಹೊಸ ನಿಯಮ ಜಾರಿಗೆ ತಂದ ಟಿಟಿಡಿ
- Tirumala Tirupati Devasthanam: ತಿರುಪತಿ ತಿಲುಮಲ ದೇವಸ್ಥಾನದಲ್ಲಿ ಲಡ್ಡು ಪಡೆಯಲು ಆಧಾರ್ ಕಾರ್ಡ್‌ಗಳನ್ನು ನೋಂದಾಯಿಸುವ ಹೊಸ ವ್ಯವಸ್ಥೆ ಪರಿಚಯಿಸಿದೆ. ಇದು ಟೋಕನ್ ರಹಿತ ಭಕ್ತರಿಗೆ ಸುಲಭವಾಗಲಿದೆ. ಈ ಕುರಿತು ವಿವರ ಇಲ್ಲಿದೆ.
ಆಂಧ್ರಪ್ರದೇಶ: ತಿರುಮಲ ತಿರುಪತಿ ಲಡ್ಡುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದರ ರುಚಿ, ಸ್ವಾದ, ಸುವಾಸನೆ, ಘಮ, ಅದರ ಗುಣಮಟ್ಟತೆ ಬೇರೆ ಯಾವ ಲಡ್ಡುಗಳಲ್ಲೂ ಸಿಗಲ್ಲ. ತಿಮ್ಮಪ್ಪನ ದರ್ಶನ ಪಡೆದವರು ಲಡ್ಡು ಖರೀದಿಸದೆ ವಾಪಸ್ ಹೋಗುವುದು ವಿರಳ ಅಂದರೆ ಅತಿ ವಿರಳ. ಆದರೆ ತಮಗೆ ಬೇಕಾದಷ್ಟು ಲಡ್ಡು ಖರೀದಿಸಲು ಅವಕಾಶ ನೀಡಬೇಕು ಎಂಬುದು ಭಕ್ತರ ಬಹುದಿನದ ಬೇಡಿಕೆಯಾಗಿತ್ತು. ಇದೀಗ ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಟೋಕನ್ ಇಲ್ಲದ ಭಕ್ತರಿಗೂ ಲಡ್ಡು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ.
ಆಧಾರ್ ಕಾರ್ಡ್ ಇದ್ದರೆ ಸಾಕು…
ತಿರುಪತಿ ತಿರುಮಲ ದೇವಸ್ಥಾನದಲ್ಲಿ ಲಡ್ಡುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತುತ ಟೋಕನ್ ಪಡೆದು ದರ್ಶನ ಮುಗಿಸಿದ ಭಕ್ತರಿಗೆ 1 ಒಂದು ಉಚಿತ ಸೇರಿ ಐದು ಲಡ್ಡು ನೀಡುತ್ತಿದ್ದಾರೆ. ಟೋಕನ್ ಇಲ್ಲದವರಿಗೆ ಲಡ್ಡು ಖರೀದಿಸಲು ಅವಕಾಶ ಇರಲಿಲ್ಲ. ಇದನ್ನೇ ಲಾಭ ಮಾಡಿಕೊಂಡ ಮಧ್ಯವರ್ತಿಗಳು ಹೆಚ್ಚಿನ ಬೆಲೆಗೆ ಮಾರಿ ಲಾಭ ಮಾಡುತ್ತಿದ್ದಾರೆ. ಇದೀಗ ಇದಕ್ಕೆ ಕಡಿವಾಣ ಹಾಕಲು ಟಿಟಿಡಿ ಯತ್ನಿಸಿದ್ದು, ಸೆಪ್ಟೆಂಬರ್ 1 ಹೊಸ ನಿಯಮ ಜಾರಿಗೆ ತಂದಿದೆ. ವಿತೌಟ್ ಟೋಕನ್ 2 ಲಡ್ಡನ್ನು ಖರೀದಿಸಲು ಅವಕಾಶ ನೀಡಿದೆ. ಆಧಾರ್ ಕಾರ್ಡ್ ಕಡ್ಡಾಯ.
ಇನ್ಮುಂದೆ ಎಷ್ಟು ಬೇಕಾದರೂ ಖರೀದಿಸಬಹುದು
ನೂತನ ನಿಯಮದ ಕುರಿತು ಟಿಟಿಡಿ ದೇವಾಲಯ ಆದೇಶ ಹೊರಡಿಸಿದೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಂತರ ಟೋಕನ್ ತೋರಿಸಿದರೆ ಬೇಕಾದಷ್ಟು ಅಂದರೆ ಅನಿಯಮಿತ ಲಡ್ಡು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ಒಂದು ಲಡ್ಡು ಬೆಲೆ 50 ರೂಪಾಯಿ. ಟೋಕನ್ ಹೊಂದಿದ್ದರೆ ಒಂದು ಉಚಿತ ಲಡ್ಡು ಕೂಡ ಸಿಗಲಿದೆ. ಆದರೆ, ದರ್ಶನ ಪಡೆಯದ ಭಕ್ತರಿಗೆ ಆಧಾರ್ ಆಧಾರದಲ್ಲಿ 2 ಲಡ್ಡು ಖರೀದಿಸಲು ಅವಕಾಶ ನೀಡಲಾಗಿದೆ. ಈ ಕುರಿತು ದೇವಸ್ಥಾನದ ಆಡಳಿತಾಧಿಕಾರಿ ಶ್ಯಾಮಲಾ ರಾವ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಟೋಕನ್ ಇಲ್ಲದ ಭಕ್ತರು ತಮ್ಮ ಆಧಾರ್ ಕಾರ್ಡ್ ಲಡ್ಡೂ ಕೌಂಟರ್‌ಗಳಲ್ಲಿ ತೋರಿಸಿ 48 ರಿಂದ ಕೌಂಟರ್ 62 ರವರೆಗಿನ ಕೌಂಟರ್‌ಗಳಲ್ಲಿ ಲಡ್ಡು ಖರೀದಿಸಬಹುದು. ಪ್ರತಿ ನಿತ್ಯ ಒಂದು ಲಕ್ಷಕ್ಕಿಂತ ಹೆಚ್ಚು ಲಡ್ಡುಗಳನ್ನು ಮಧ್ಯವರ್ತಿಗಳು ಮೂಲಕ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಇದು ಗಮನಕ್ಕೆ ಬಂದ ಕಾರಣ ಇದರ ಕಡಿವಾಣಕ್ಕೆ ಈಗ ಆಧಾರ್ ವ್ಯವಸ್ಥೆ ಕಡ್ಡಾಯಗೊಳಿಸಿದೆ. ಟೋಕನ್ನೊಂದಿಗೆ ದರ್ಶನ ಪಡೆದವರು ಎಷ್ಟು ಲಾಡು ಬೇಕಾದರೂ ಖರೀದಿಸಬಹುದು ಎಂದು ಟಿಟಿಡಿ ತಿಳಿಸಿದೆ. ಆ ಮೂಲಕ ಭಕ್ತರಿಗೆ ಶುಭ ಸುದ್ದಿ ಸಿಕ್ಕಿದೆ.
ದೇವಾಲಯದ ನೀತಿಗಳ ಪ್ರಕಾರ, ಯಾತ್ರಾರ್ಥಿಗಳು ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ನೋಡಲು ಅನುಮತಿಸುವ ಸ್ಲಾಟೆಡ್ ಸೇವಾ ದರ್ಶನವು ಉಚಿತ ದರ್ಶನವಾಗಿದೆ. ಅದಕ್ಕಾಗಿ ಭಕ್ತರಿಗೆ ಟೋಕನ್ಸ್ ಬೇಕಾಗುತ್ತವೆ. ಈ ದರ್ಶನಕ್ಕಾಗಿ ಟೋಕನ್‌ಗಳನ್ನು ತಿರುಪತಿಯಲ್ಲಿರುವ 109 ಎಸ್ಎಸ್ಡಿ ಟಿಕೆಟ್ ಕೌಂಟರ್‌ಗಳಲ್ಲಿ ಪಡೆಯಬಹುದು. ಅಲ್ಲದೆ, ಶ್ರೀವಾರಿ ಮೆಟ್ಟು ಮತ್ತು ಅಲಿಪಿರಿ ಬಳಿಯೂ ಉಚಿತ ಟಿಕೆಟ್ ಕೌಂಟರ್‌ಗಳಿವೆ. ದರ್ಶನಕ್ಕೆ ಟೋಕನ್ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ; ಆದಾಗ್ಯೂ, ಹೊಸ ಆದೇಶದಂತೆ ದರ್ಶನವೇ ಪಡೆಯದ ಭಕ್ತರು ತಮ್ಮ ಆಧಾರ್ ಕಾರ್ಡ್ ತೋರಿಸಿದರೆ ಸಾಕು, ಎರಡು ಲಾಡು ಪಡೆಯಲು ಅವಕಾಶ ಇದೆ.