logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral News: ಬರೋಬ್ಬರಿ 27 ಮಿಲಿಯನ್ ಡಾಲರ್ ಪಿತ್ರಾರ್ಜಿತ ಸಂಪತ್ತು ದಾನಕ್ಕೆ ಮುಂದಾದ್ರು 31 ವರ್ಷದ ಆಸ್ಟ್ರೋ ಜರ್ಮನ್‌ ಯುವತಿ, ಕಾರಣ ಇಲ್ಲಿದೆ

Viral News: ಬರೋಬ್ಬರಿ 27 ಮಿಲಿಯನ್ ಡಾಲರ್ ಪಿತ್ರಾರ್ಜಿತ ಸಂಪತ್ತು ದಾನಕ್ಕೆ ಮುಂದಾದ್ರು 31 ವರ್ಷದ ಆಸ್ಟ್ರೋ ಜರ್ಮನ್‌ ಯುವತಿ, ಕಾರಣ ಇಲ್ಲಿದೆ

Umesh Kumar S HT Kannada

Jan 20, 2024 09:01 AM IST

google News

ಪಿತ್ರಾರ್ಜಿತವಾಗಿ ಸಿಕ್ಕಿದ 27 ಮಿಲಿಯನ್ ಡಾಲರ್ ಸಂಪತ್ತು ದಾನ ನೀಡಲು ನಿರ್ಧರಿಸಿದ ಆಸ್ಟ್ರೋ ಜರ್ಮನ್ ಯುವತಿ ಮರ್ಲೀನ್ ಎಂಗಲ್‌ಹಾರ್ನ್.

  • Trending News: ಸಾಮಾಜಿಕ ಕಳಕಳಿಯ ಇಂಥ ಒಳ್ಳೆಯ ಮನಸ್ಸು ಹೊಂದುವುದು ಸುಲಭವಲ್ಲ. 31 ವರ್ಷದ ಆಸ್ಟ್ರೋ ಜರ್ಮನ್‌ (Austro-German) ಯುವತಿ ಪಿತ್ರಾರ್ಜಿತವಾಗಿ ಸಿಕ್ಕಿದ ಬರೋಬ್ಬರಿ 27 ಮಿಲಿಯನ್ ಡಾಲರ್ ಸಂಪತ್ತು ದಾನ ಮಾಡಲು ಮುಂದಾಗಿದ್ದಾರೆ. 50 ಸದಸ್ಯರ ಸಮಿತಿ ರಚನೆಯ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ. ಇದೆಲ್ಲ ಯಾಕೆ ಮತ್ತು ಯಾವ ರೀತಿ ಎಂಬ ವಿವರ ಇಲ್ಲಿದೆ. 

ಪಿತ್ರಾರ್ಜಿತವಾಗಿ ಸಿಕ್ಕಿದ 27 ಮಿಲಿಯನ್ ಡಾಲರ್ ಸಂಪತ್ತು ದಾನ ನೀಡಲು ನಿರ್ಧರಿಸಿದ ಆಸ್ಟ್ರೋ ಜರ್ಮನ್ ಯುವತಿ ಮರ್ಲೀನ್ ಎಂಗಲ್‌ಹಾರ್ನ್.
ಪಿತ್ರಾರ್ಜಿತವಾಗಿ ಸಿಕ್ಕಿದ 27 ಮಿಲಿಯನ್ ಡಾಲರ್ ಸಂಪತ್ತು ದಾನ ನೀಡಲು ನಿರ್ಧರಿಸಿದ ಆಸ್ಟ್ರೋ ಜರ್ಮನ್ ಯುವತಿ ಮರ್ಲೀನ್ ಎಂಗಲ್‌ಹಾರ್ನ್. (Instagram/@goodnews_movement)

ಕೋಟ್ಯಂತರ ರೂಪಾಯಿ ಮೌಲ್ಯದ ಸಂಪತ್ತು ಕೈಗೆ ಬಂದಾಗ ಅದನ್ನು ದಾನ ನೀಡಲು ಮುಂದಾಗುವುದು ವಿರಳ. ಆದರೆ, 31 ವರ್ಷದ ಆಸ್ಟ್ರೋ ಜರ್ಮನ್‌ (Austro-German) ಯುವತಿಯೊಬ್ಬರು, ಅಜ್ಜಿಯ ನಿಧನಾನಂತರ ತನ್ನ ಅಧೀನಕ್ಕೆ ಬಂದ 27 ಮಿಲಿಯನ್ ಅಮೆರಿಕನ್ ಡಾಲರ್ (224.44 ಕೋಟಿ ರೂಪಾಯಿ) ಮೌಲ್ಯದ ಸಂಪತ್ತನ್ನು ಅರ್ಹರಿಗೆ ದಾನ ನೀಡಲು ಮುಂದಾಗಿದ್ದಾರೆ.

ಈ ಒಳ್ಳೆಯ ಮನಸ್ಸಿನ ಆಸ್ಟ್ರೋ ಜರ್ಮನ್ ಮಹಿಳೆಯ ಹೆಸರು ಮರ್ಲೀನ್ ಎಂಗಲ್‌ಹಾರ್ನ್ (Marlene Engelhorn,). ವಿಯೆನ್ನಾ ನಿವಾಸಿ. ಬೃಹತ್ ಪ್ರಮಾಣದ ಸಂಪತ್ತನ್ನು ದಾನ ನೀಡಬೇಕಾದರೆ ಅದಕ್ಕೊಂದು ಯೋಜನೆ ಬೇಕಲ್ಲವೇ? ಆದ್ದರಿಂದ ಸಂಪತ್ತನ್ನು ಮಾನವೀಯ ನೆಲೆಯಲ್ಲಿ ದಾನ ನೀಡುವುದಾದರೆ ಯಾರಿಗೆ ನೀಡಬಹುದು, ಹೇಗೆ ನೀಡಬಹುದು ಎಂಬ ಪ್ರಶ್ನೆಗಳೊಂದಿಗೆ ದಾನದ ವಿಚಾರವನ್ನು ಮರ್ಲೀನ್ ಎಂಗಲ್‌ಹಾರ್ನ್‌ ಹತ್ತು ಸಾವಿರಕ್ಕೂ ಹೆಚ್ಚು ಜನರೊಂದಿಗೆ ಶೇರ್ ಮಾಡಿದ್ದರು.

ಎಲ್ಲರಿಂದಲೂ ಸ್ಪಂದನೆ, ಪ್ರತಿಕ್ರಿಯೆ, ಸಲಹೆ ಸಿಕ್ಕಿದೆ. ಈ ಪೈಕಿ ಮರ್ಲೀನ್ ಎಂಗಲ್‌ಹಾರ್ನ್‌, 50 ಅಪರಿಚಿತರಾಗಿರುವ 16 ವರ್ಷಕ್ಕಿಂತ ಮೇಲ್ಪಟ್ಟವರು ನೀಡಿದ ಸಲಹೆಗಳನ್ನು ಪರಿಶೀಲನೆಗೆ ಪರಿಗಣಿಸಿದರು ಎಂದು ಬಿಬಿಸಿ ವರದಿ ಮಾಡಿದೆ.

“ ಅಜ್ಜಿಯ ನಿಧನಾನಂತರ ಅವರ ಸಂಪತ್ತನ್ನು ನಾನು ಆನುವಂಶಿಕವಾಗಿ ಪಡೆದಿದ್ದೇನೆ. ಅದರ ಮೂಲಕ ಅಧಿಕಾರವೂ ಬಂದಿದೆ. ಅದೇ ರೀತಿ ಏನನ್ನೂ ಮಾಡದೆ ಪಡೆದ ಸಂಪತ್ತು ಅದು. ಸರ್ಕಾರ ಕೂಡ ಅದರ ಮೇಲೆ ತೆರಿಗೆ ಬಯಸುವುದಿಲ್ಲ. ಸಂಪತ್ತನ್ನು ದಾನ ಮಾಡುವ ನಿರ್ಧಾರವು ಜನರ ನಡುವೆ ಸಂಪತ್ತು ಹಂಚಿ ಹೋಗಿರುವ ಅಸಮಾನತೆಯ ವಿರುದ್ಧ ಹೋರಾಟ ಮಾಡುವ ತನ್ನ ಮಾರ್ಗವಾಗಿದೆ” ಎಂದು ಮರ್ಲೀನ್ ಎಂಗಲ್‌ಹಾರ್ನ್‌ ತಿಳಿಸಿದ್ದಾಗಿ ವರದಿ ಹೇಳಿದೆ.

ಆಸ್ಟ್ರೀಯಾ ದೇಶದಲ್ಲಿ 2008ರಲ್ಲಿ ಆನುವಂಶಿಕ ತೆರಿಗೆ (ಆನುವಂಶಿಕವಾಗಿ ಬಂದ ಸಂಪತ್ತುಗಳ ಮೇಲಿನ ತೆರಿಗೆ)ಯನ್ನು ರದ್ದುಗೊಳಿಸಲಾಗಿದೆ.

ಮರ್ಲೀನ್ ಎಂಗಲ್‌ಹಾರ್ನ್‌ ಅಪರಿಚಿತ 50 ಸಲಹೆಗಾರರನ್ನು ಆಯ್ಕೆ ಮಾಡಿದ್ದು ಹೇಗೆ

ಅಜ್ಜಿಯ ನಿಧನಾನಂತರ ತನಗೆ ಬಂದ ಸಂಪತ್ತನ್ನು ಹಂಚುವುದಕ್ಕಾಗಿ ತನಗೆ ಸಹಾಯ ಮಾಡುವ 50 ಜನರನ್ನು ಹುಡುಕುವ ಯೋಜನೆಗೆ ಅವರು ಗುಟರ್ ರಾಟ್ (Guter Rat) ಎಂದು ನಾಮಕರಣ ಮಾಡಿದರು. ಗುಡ್‌ ಕೌನ್ಸಿಲ್ ಎಂಬುದು ಇದರ ಅರ್ಥ.

ಈ ಯೋಜನೆಗೆ ಸಂಬಂಧಿಸಿದ ವೆಬ್‌ಸೈಟ್ ಕೂಡ ನಿರ್ಮಿಸಿದರು. ಅದರಲ್ಲಿರುವ ವಿವರಣೆ ಪ್ರಕಾರ, “ಯಾದೃಚ್ಛಿಕವಾಗಿ ಆಯ್ಕೆ ಮಾಡಲಾದ 10,000 ಜನರನ್ನು ಈ ವಿಚಾರವಾಗಿ ಸಂಪರ್ಕಿಸಲಾಗಿದೆ. ಭಾಗವಹಿಸಲು ಬಯಸುವವರು ಅದರಲ್ಲಿ ನೀಡಿದ ಅರ್ಜಿಗಳನ್ನು ಭರ್ತಿ ಮಾಡಿಕೊಟ್ಟಿದ್ದಾರೆ. ಇದೊಂದು ರೀತಿಯ ಸಮೀಕ್ಷೆಯಾಗಿದ್ದು, ಬಂದಿರುವ ಪ್ರತಿಕ್ರಿಯೆಗಳಿಂದ 50 ಜನರನ್ನು ಆಯ್ಕೆ ಮಾಡಿ ಒಂದು ಮಂಡಳಿಯನ್ನು ರಚಿಸಲಾಗುತ್ತದೆ. ಈ ಮಂಡಳಿಯು ಆಸ್ಟ್ರಿಯಾದ ಜನಸಂಖ್ಯೆಯನ್ನು ಲಿಂಗ, ವಯಸ್ಸು, ಶಿಕ್ಷಣ, ಉದ್ಯೋಗ ಇತ್ಯಾದಿ ಮಾನದಂಡಗಳೊಂದಿಗೆ ಸಾಧ್ಯವಾದಷ್ಟು ನಿಖರವಾಗಿ ಪ್ರತಿಬಿಂಬಿಸುತ್ತದೆ.”

“ಮಾರ್ಚ್ ಮತ್ತು ಜೂನ್ ನಡುವಿನ ಆರು ವಾರಾಂತ್ಯಗಳಲ್ಲಿ, ಈ 50 ಜನರು ಒಟ್ಟು ಸೇರುತ್ತಾರೆ. ಅವರು ವೈಜ್ಞಾನಿಕ ಮತ್ತು ಕ್ಷೇತ್ರ ತಜ್ಞರಿಂದ ತಜ್ಞರ ಮಾಹಿತಿ, ಸಲಹೆಗಳನ್ನು ಪಡೆಯುತ್ತಾರೆ. ವೃತ್ತಿಪರವಾಗಿ ಚರ್ಚೆ ನಡೆಸಿ, ಮುಂದಿನ ಕಾರ್ಯಗಳನ್ನು ನೆರವೇರಿಸುತ್ತಾರೆ. ಆಯ್ಕೆಯಾದ 50 ಜನ ತಮ್ಮ 'ಸಮಾಜಕ್ಕೆ ಸೇವೆ' ಸಲ್ಲಿಸುವ ಕಾರಣ ಅವರಿಗೆ ‘ಅವರ ಶ್ರಮ’ಕ್ಕೆ ಪ್ರತಿಫಲ ಇರಲಿದೆ” ಎಂದು ಮರ್ಲೀನ್ ಎಂಗಲ್‌ಹಾರ್ನ್‌ ತನ್ನ ಯೋಜನೆಯ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಶೀಘ್ರವೇ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡು, ಸಾಕಷ್ಟು ಸಂಚಲನ ಮೂಡಿಸಿದೆ. ಅನೇಕರು ಮರ್ಲೀನ್ ಎಂಗಲ್‌ಹಾರ್ನ್‌ ಅವರ ನಿರ್ಧಾರದಿಂದ ಆಶ್ಚರ್ಯಚಕಿತರಾದರೆ, ಕೆಲವರು ಸಂಪತ್ತನ್ನು ಖರ್ಚು ಮಾಡಬೇಕಾದ ಮಾರ್ಗಗಳನ್ನು ಸೂಚಿಸಿದರು.

ಕೋಟ್ಯಧಿಪತಿಯ ನಿರ್ಧಾರಕ್ಕೆ ಸಿಕ್ಕ ಪ್ರತಿಕ್ರಿಯೆ

"ಅದನ್ನು ಯಾವುದೇ 'ದತ್ತಿಗಳಿಗೆ' ದಾನ ಮಾಡಬೇಡಿ ಏಕೆಂದರೆ ಅದು ನೇರವಾಗಿ ಸರ್ಕಾರದ ಜೇಬಿಗೆ ಹೋಗುತ್ತದೆ. ಅದನ್ನು ಬಡವರಿಗೆ ನೀವೇ ಹಸ್ತಾಂತರಿಸಿ, ಅದು ಎಲ್ಲಿಗೆ ಹೋಗುತ್ತದೆ ಎಂಬುದು ನಿಮ್ಮ ಗಮನದಲ್ಲೇ ಇರುತ್ತದೆ" ಎಂದು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.

"ವಾಹ್. ಎಲ್ಲ ಶತಕೋಟ್ಯಧಿಪತಿಗಳು / ಮಿಲಿಯನೇರ್‌ಗಳು ಇದನ್ನು ಮಾಡಿದ್ದರೆ ಊಹಿಸಿ" ಎಂದು ಮತ್ತೊಬ್ಬರು ಹೇಳಿದರು.

"ಎಂತಹ ಅದ್ಭುತ ಮಹಿಳೆ. ಅವಳು ದೀರ್ಘ, ಆರೋಗ್ಯಕರ ಮತ್ತು ತೃಪ್ತಿದಾಯಕ ಜೀವನವನ್ನು ನಡೆಸಲಿ" ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.

"ಅಥವಾ ಅವಳು ಅದನ್ನು ಹೂಡಿಕೆ ಮಾಡಬಹುದು ಮತ್ತು ಬಡ್ಡಿಯನ್ನು ವರ್ಷಗಳವರೆಗೆ ದತ್ತಿ ಸಂಸ್ಥೆಗಳಿಗೆ ಸಹಾಯ ಮಾಡಲು ಬಳಸಬಹುದು. ದಯವಿಟ್ಟು ಯಾರಾದರೂ ಅವಳಿಗೆ ಸಹಾಯ ಮಾಡಿ" ಎಂದು ನಾಲ್ಕನೆಯವರು ಬರೆದಿದ್ದಾರೆ.
------------------------------------

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇತರರೂ ಬರೆಯುವಂತೆ ಪ್ರೇರೇಪಿಸಿ.. ನಮ್ಮ ಇಮೇಲ್: ht.kannada@htdigital.in

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ