logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Amit Shah: ಬಿಜೆಪಿಗೆ ದ್ರೋಹ ಬಗೆದ ಉದ್ಧವ್‌ಗೆ ಪಾಠ ಕಲಿಸುವುದು ಅನಿವಾರ್ಯವಾಗಿತ್ತು: ಅಮಿತ್‌ ಶಾ!

Amit Shah: ಬಿಜೆಪಿಗೆ ದ್ರೋಹ ಬಗೆದ ಉದ್ಧವ್‌ಗೆ ಪಾಠ ಕಲಿಸುವುದು ಅನಿವಾರ್ಯವಾಗಿತ್ತು: ಅಮಿತ್‌ ಶಾ!

Nikhil Kulkarni HT Kannada

Sep 05, 2022 04:56 PM IST

google News

ಅಮಿತ್‌ ಶಾ

    • ಬಿಜೆಪಿಗೆ ದ್ರೋಹ ಬಗೆದಿದ್ದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನಾ ನಾಯಕ ಉದ್ಧವ್‌ ಠಾಕ್ರೆ ಅವರಿಗೆ ಪಾಠ ಕಲಿಸುವುದು ಅನಿವಾರ್ಯವಾಗಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿರುವುದು ದೇಶದ ಗಮನ ಸೆಳೆದಿದೆ. ಮುಂಬೈನಲ್ಲಿ ನಡೆದ ಬಿಜೆಪಿ ಪಕ್ಷದ ನಾಯಕರ ಸಭೆ ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ನಾವು ರಾಜಕೀಯದಲ್ಲಿ ಏನು ಬೇಕಾದರೂ ಸಹಿಸಿಕೊಳ್ಳಬಹುದು ಆದರೆ ದ್ರೋಹವನ್ನಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಅಮಿತ್‌ ಶಾ
ಅಮಿತ್‌ ಶಾ (PTI)

ಮುಂಬೈ: ಬಿಜೆಪಿಗೆ ದ್ರೋಹ ಬಗೆದಿದ್ದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನಾ ನಾಯಕ ಉದ್ಧವ್‌ ಠಾಕ್ರೆ ಅವರಿಗೆ ಪಾಠ ಕಲಿಸುವುದು ಅನಿವಾರ್ಯವಾಗಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿರುವುದು ದೇಶದ ಗಮನ ಸೆಳೆದಿದೆ. ಮುಂಬೈನಲ್ಲಿ ನಡೆದ ಬಿಜೆಪಿ ಪಕ್ಷದ ನಾಯಕರ ಸಭೆ ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ನಾವು ರಾಜಕೀಯದಲ್ಲಿ ಏನು ಬೇಕಾದರೂ ಸಹಿಸಿಕೊಳ್ಳಬಹುದು ಆದರೆ ದ್ರೋಹವನ್ನಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಶಿವಸೇನೆಯಲ್ಲಿ ನಡೆದ ಆಂತರಿಕ ದಂಗೆಗೆ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರೇ ಕಾರಣ ಎಂದು ಆರೋಪಿಸಿರುವ ಅಮಿತ್‌ ಶಾ, ಉದ್ಧವ್‌ ಅವರ ದುರಾಸೆ ಅವರ ಪಕ್ಷವನ್ನು ಒಡೆಯಿತು ಎಂದು ಆರೋಪಿಸಿದ್ದಾರೆ. ಅಲ್ಲದೇ ಏಕನಾಥ್‌ ಶಿಂಧೆ ಅವೆ ಬಂಡಾಯ ಮತ್ತು ಮಹಾ ವಿಕಾಸ್‌ ಅಘಾಡಿ ಸರ್ಕಾರದ ಪತನದಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ ಎಂದೂ ಅಮಿತ್‌ ಶಾ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣವೇ ನಿಜವಾದ ಶಿವಸೇನೆ ಎಂದು ಒತ್ತಿ ಹೇಳಿದ ಅಮಿತ್ ಶಾ, ಉದ್ಧವ್ ಠಾಕ್ರೆ ಅವರು ಬಿಜೆಪಿಗೆ ದ್ರೋಹ ಮಾಡಿದ್ದಲ್ಲದೆ, ತಮ್ಮ ಪಕ್ಷದ ಸಿದ್ಧಾಂತಕ್ಕೂ ದ್ರೋಹ ಮಾಡಿದ್ದಾರೆ. ಮಹಾರಾಷ್ಟ್ರದ ಜನಾದೇಶಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆ ಸೇರಿ ಸರ್ಕಾರ ರಚಿಸಿದ ಉದ್ಧವ್‌ ಠಾಕ್ರೆ, ಕೇವಲ ಅಧಿಕಾರಕ್ಕಾಗಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡರು ಎಂದು ಅಮಿತ್‌ ಶಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಉದ್ಧವ್‌ ಠಾಕೆ ಅವರ ಅಧಿಕಾರದ ದುರಾಸೆ ಯಿಂದ ಶಿವಸೇನೆ ಹೋಳಾಯಿತು. ನಾವು ಉದ್ಧವ್ ಠಾಕ್ರೆ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಭರವಸೆಯನ್ನು ಎಂದಿಗೂ ನೀಡಿರಲಿಲ್ಲ. ನಾವು ಬಹಿರಂಗವಾಗಿ ರಾಜಕೀಯ ಮಾಡುವವರಾಗಿದ್ದು, ಅಧಿಕಾರಕ್ಕಾಗಿ ತತ್ವ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳುವರಲ್ಲ ಎಂದು ಅಮಿತ್‌ ಶಾ ಹೇಳಿದ್ದಾರೆ.

ರಾಜಕೀಯದಲ್ಲಿ ಮೋಸ ಮಾಡುವವರಿಗೆ ಶಿಕ್ಷೆಯಾಗಬೇಕು. ಇದೇ ಶಿಕ್ಷೆಯನ್ನು ಇದೀಗ ಉದ್ಧವ್‌ ಠಾಕ್ರೆ ಅನುಭವಿಸುತ್ತಿದ್ದಾರೆ. ಅವರ ಇಂದಿನ ಸ್ಥಿತಿಗೆ ಬಿಜೆಪಿಯನ್ನು ದೂಷಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅಮಿತ್‌ ಶಾ ಅಭಿಪ್ರಾಯಪಟ್ಟಿದ್ದಾರೆ. ಬೃಹನ್‌ಮುಂಬೈ ಪಾಲಿಕೆ ದೇಶದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯಾಗಿದ್ದು, ಈ ಬಾರಿ ಪಾಲಿಕೆಯಲ್ಲಿ ಬಿಜೆಪ-ಶಿವಸೇನೆ ಮೈತ್ರಿಕೂಟದ ಸೀಟುಗಳ ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಳ್ಳುವುದು ರಾಜ್ಯ ನಾಯಕತ್ವದ ಜವಾಬ್ದಾರಿ ಎಂದೂ ಅಮಿತ್‌ ಶಾ ಸ್ಪಷ್ಟಪಡಿಸಿದ್ಧಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಮತ್ತು ನಿಜವಾದ ಶಿವಸೇನೆ ಮೈತ್ರಿಕೂಟದ ಗುರಿ ಬಿಎಂಸಿ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವುದು. ಮುಂಬೈ ಮಹಾ ಜನತೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಜೊತೆಗಿದ್ದಾರೆಯೇ ಹೊರತು,ಸಿದ್ಧಾಂತಕ್ಕೆ ದ್ರೋಹ ಬಗೆದ ಉದ್ಧವ್ ಠಾಕ್ರೆ ಅವರ ಪಕ್ಷದೊಂದಿಗೆ ಅಲ್ಲ ಎಂದು ಇದೇ ವೇಳೆ ಅಮಿತ್‌ ಶಾ ಗುಡುಗಿದ್ದಾರೆ.

2014ರಲ್ಲಿ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಶಿವಸೇನೆ ನಡುವಿನ ಮೈತ್ರಿ ಹಳಸಿತ್ತು. 2019 ರ ವಿಧಾನಸಭಾ ಚುನಾವಣೆಯ ನಂತರ, ಶಿವಸೇನೆಯು ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಂಡು, ಕಾಂಗ್ರೆಸ್‌ ಮತ್ತು ಶಿವಸೇನೆ ಜೊತೆಗೂಡಿ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ರಚಿಸಿತು. ಶಿವಸೇನೆಯ ಉದ್ಧವ್‌ ಠಾಕೆ ಮೈತ್ರಿ ಸರ್ಕಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಆದರೆ ಈ ವರ್ಷದ ಆರಂಭದಲ್ಲಿ ಏಕನಾಥ್‌ ಶಿಂಧೆ ನೇತೃತ್ವದಲ್ಲಿ ಶಿವಸೇನೆ ನಾಯಕರು ಬಂಡಾಯ ಎದ್ದು, ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದರು. ಬಳಿಕ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಲಾಯಿತು.ಏಕನಾಥ್‌ ಶಿಂಧೆ ಅವರು ಮುಖ್ಯಮಂತ್ರಿಯಾಗಿಯೂ, ದೇವೇಂದ್ರ ಫಡ್ನವೀಸ್‌ ಅವರು ಉಪಮುಖ್ಯಮಂತ್ರಿಯಾಗಿಯೂ ಮಹಾರಾಷ್ಟ್ರ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ