ಕೇಂದ್ರ ಬಜೆಟ್ ಬಗ್ಗೆ ನೀವು ತಿಳಿಯಲೇ ಬೇಕಾದ 5 ಅಂಶಗಳಿವು: ಹೇಗೆ ರೆಡಿಯಾಗುತ್ತೆ? ಯಾವತ್ತು ಶುರುವಾಗುತ್ತೆ? ಯಾರೆಲ್ಲಾ ಎಫರ್ಟ್ ಹಾಕ್ತಾರೆ?
Jan 30, 2024 08:34 AM IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023- 24ರ ಬಜೆಟ್ ಮಂಡನೆಗೆ ಮೊದಲು ಹಣಕಾಸು ಖಾತೆ ರಾಜ್ಯ ಸಚಿವರಾದ ಪಂಕಜ್ ಚೌಧರಿ ಮತ್ತು ಡಾ. ಭಾಗವತ್ ಕಿಶನ್‌ರಾವ್ ಕರಾಡ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಂಸತ್ ಭವನದ ಸಮೀಪ ಬಜೆಟ್ ಪ್ರತಿಯೊಂದಿಗೆ ಹೀಗೆ ಕಾಣಿಸಿಕೊಂಡಿದ್ದರು.
Union Budget 2024: ಕೇಂದ್ರ ಬಜೆಟ್ ಫೆ.1ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಕೇಂದ್ರ ಬಜೆಟ್ ಎಂಬುದು ಕೇಂದ್ರ ಸರ್ಕಾರದ ವಾರ್ಷಿಕ ಹಣಕಾಸು ಹೇಳಿಕೆಯಾಗಿ ಪರಿಗಣಿಸಲ್ಪಡುತ್ತದೆ. ಈ ಕೇಂದ್ರ ಬಜೆಟ್ ಅನ್ನು ಸಿದ್ಧಪಡಿಸುವುದು ಹೇಗೆ ಎಂಬುದನ್ನು 5 ಅಂಶಗಳಲ್ಲಿ ಇಲ್ಲಿ ವಿವರಿಸಲಾಗಿದೆ.
ಬಜೆಟ್ ಎಂಬುದು ‘ವಾರ್ಷಿಕ ಹಣಕಾಸು ಹೇಳಿಕೆ’ಯಾಗಿದ್ದು, ಇದು ಮುಂಬರುವ ಹಣಕಾಸು ವರ್ಷಕ್ಕೆ ಸಂಬಂಧಿಸಿ ಸರ್ಕಾರದ ಉದ್ದೇಶಿತ ವೆಚ್ಚಗಳು ಮತ್ತು ಆದಾಯಗಳ ಪ್ರಸ್ತುತಿಯಾಗಿರುತ್ತದೆ. ಇದರಲ್ಲಿ ಹಣಕಾಸು ವರ್ಷ ಎಂಬುದು ಏಪ್ರಿಲ್ 1 ರಂದು ಶುರುವಾಗಿ ಮುಂದಿನ ವರ್ಷ ಮಾರ್ಚ್ 31ಕ್ಕೆ ಕೊನೆಯಾಗುತ್ತದೆ.
ಕೇಂದ್ರ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವರು ಸಂಸತ್ತಿನಲ್ಲಿ ಫೆ.1 ರಂದು ಮಂಡಿಸುತ್ತಾರೆ. ಕೇಂದ್ರ ಬಜೆಟ್ ಎಂಬುದು ಮುಂದಿನ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಸರ್ಕಾರದ ಆರ್ಥಿಕ ಮತ್ತು ಹಣಕಾಸಿನ ನೀತಿಗಳನ್ನು ವಿವರಿಸುವ ದಾಖಲೆಯಾಗಿ ಪರಿಗಣಿಸಲ್ಪಟ್ಟಿದೆ.
ಕೇಂದ್ರ ಬಜೆಟ್ ಅನ್ನು ತಯಾರಿಸುವುದು ಹೇಗೆ ?; 5 ಅಂಶಗಳ ವಿವರಣೆ ಹೀಗಿದೆ
1) ಕೇಂದ್ರ ಬಜೆಟ್ ಎಂಬುದು ಮುಂದಿನ ವರ್ಷಕ್ಕೆ (ಏಪ್ರಿಲ್ 1ರಿಂದ ಮಾರ್ಚ್ 31ರ ತನಕ) ಸಂಬಂಧಿಸಿದ ಸರ್ಕಾರದ ವಾರ್ಷಿಕ ಹಣಕಾಸು ಹೇಳಿಕೆಯಾಗಿದ್ದು, ಫೆ.1ರಂದು ಸಂಸತ್ತಿನಲ್ಲಿ ಮಂಡನೆಯಾಗಿ ಅನುಮೋದನೆ ಪಡೆದುಕೊಳ್ಳುತ್ತದೆ. ಇದು ಏಪ್ರಿಲ್ 1ರಿಂದ ಜಾರಿಗೆ ಬರುತ್ತದೆ.
2) ಕೇಂದ್ರ ಬಜೆಟ್ (ವಾರ್ಷಿಕ ಹಣಕಾಸು ಹೇಳಿಕೆ) ಅನ್ನು ಸಂಸತ್ತಿನಲ್ಲಿ ಮಂಡಿಸುವ 6 ತಿಂಗಳ ಮೊದಲು ಬಜೆಟ್ ರೂಪಿಸುವ ಪ್ರಕ್ರಿಯೆ ಶುರುವಾಗುತ್ತದೆ. ಸರಳವಾಗಿ ಹೇಳಬೇಕು ಎಂದರೆ ಈ ವರ್ಷ ಫೆಬ್ರವರಿ 1ಕ್ಕೆ ಮಂಡನೆಯಾಗುವ ಬಜೆಟ್ ಅನ್ನು ರೂಪಿಸುವ ಪ್ರಕ್ರಿಯೆ ಕಳೆದ ವರ್ಷ ಆಗಸ್ಟ್ ಸೆಪ್ಟೆಂಬರ್‌ನಲ್ಲಿ ಶುರುವಾಗಿರುತ್ತದೆ.
3) ಪ್ರತಿ ಇಲಾಖೆ, ಸಚಿವಾಲಯಗಳ ವಾರ್ಷಿಕ ಹಣಕಾಸು ಆಯ- ವ್ಯಯಗಳ ಅಂದಾಜು ತಯಾರಿಸುವ ಕೆಲಸ ನಡೆಯುತ್ತದೆ. ನೀತಿ ಆಯೋಗದ ಜತೆಗೆ ಹಲವು ಸುತ್ತುಗಳ ಸಮಾಲೋಚನೆ ನಡೆಯುತ್ತದೆ. ಅನುಮೋದಿತ ಪ್ರಸ್ತಾವನೆಗಳ ದತ್ತಾಂಶವನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಹಣಕಾಸು ಸಚಿವಾಲಯವು ಅದಕ್ಕೆ ತಕ್ಕಂತೆ ಆದಾಯವನ್ನು ಅನುದಾನ ಮತ್ತು ಇತರೆ ರೂಪದಲ್ಲಿ ಹಂಚಿಕೆ ಮಾಡುತ್ತದೆ. ಗೊಂದಲ ಅಥವಾ ಭಿನ್ನಮತ ಏರ್ಪಟ್ಟರೆ ಅಂಥವನ್ನು ಪ್ರಧಾನಿ ಅಥವಾ ಕೇಂದ್ರ ಸಚಿವ ಸಂಪುಟದ ಅವಗಾಹನೆಗೆ ಕಳುಹಿಸಲಾಗುತ್ತದೆ.
4) ಹಣಕಾಸು ಸಚಿವರು ಬಜೆಟ್ ಪೂರ್ವ ಸಭೆಗಳನ್ನು ನಡೆಸುತ್ತಾರೆ. ಸಂಬಂಧ ಪಟ್ಟ ಪಾಲುದಾರರ ಪ್ರಸ್ತಾವನೆ, ಬೇಡಿಕೆಗಳನ್ನು ಸ್ವೀಕರಿಸಿ ಅವರೊಂದಿಗೆ ಚರ್ಚಿಸುತ್ತಾರೆ. ಇಂತಹ ಪ್ರಸ್ತಾವನೆಗಳನ್ನು ಪ್ರಧಾನಿಯೊಂದಿಗೆ ಚರ್ಚಿಸಿದ ಬಳಿಕ ಅಂತಿಮಗೊಳಿಸಲಾಗುತ್ತದೆ.
5) ಬಜೆಟ್ ಮಂಡನೆಗೆ 9 ಅಥವಾ 10 ದಿನ ಮೊದಲು ಬಜೆಟ್ ಪ್ರತಿ ಅಂತಿಮಗೊಳಿಸಲಾಗುತ್ತದೆ. ಈ ಪ್ರತಿಗಳ ಅಂಶಗಳು ಸೋರಿಕೆಯಾಗದಂತೆ ತಡೆಯಲು ಅದನ್ನು ಸಿದ್ಧಪಡಿಸುವ ಎಲ್ಲ ಸಿಬ್ಬಂದಿಯನ್ನು ಒಂದೆಡೆ ಸೇರಿಸಲಾಗುತ್ತದೆ. ಆ 10 ದಿನ ಅವರು ಅಲ್ಲಿಂದ ಎಲ್ಲಿಗೂ ಹೋಗುವಂತೆ ಇಲ್ಲ. ಇದಕ್ಕೆ ಲಾಕ್ ಇನ್ ಎಂದು ಹೇಳುತ್ತಾರೆ. ಇದಕ್ಕೆ ಮೊದಲು ಹಲ್ವಾ ಹಂಚಿಕೆ ಸಮಾರಂಭ ನಡೆಯುತ್ತದೆ. ಪ್ರತಿ ವರ್ಷ ಫೆ.1ಕ್ಕೆ ಸಂಸತ್ತಿನ ಕೆಳಮನೆ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆಯಾಗುತ್ತದೆ. 2017ರಿಂದ ಫೆ.1ರಂದು ಬಜೆಟ್ ಮಂಡಿಸುವ ಪರಿಪಾಠ ಶುರುವಾಗಿದೆ.
ಕೇಂದ್ರ ಬಜೆಟ್‌ನ ಮಹತ್ವವೇನು
ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಮತ್ತು ಆದ್ಯತೆಗಳ ಬಗ್ಗೆ ಒಳನೋಟವನ್ನು ಒದಗಿಸುತ್ತದೆ. ಅದೂ ಅಲ್ಲದೆ, ಆರ್ಥಿಕತೆ ಮತ್ತು ಜನರ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಮಂಡಿಸುವ ಬಜೆಟ್ ಅನ್ನು ವ್ಯಾಪಾರೋದ್ಯಮಗಳು, ಹೂಡಿಕೆದಾರರು ಮತ್ತು ಸಾರ್ವಜನಿಕರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಜಿಎಸ್‌ಟಿಯಿಂದ ಹಿಡಿದು ಆದಾಯ ತೆರಿಗೆ ತನಕದ ಆರ್ಥಿಕ ನೀತಿಗಳ ಪರಿಷ್ಕರಣೆ, ಬದಲಾವಣೆಗಳೂ ಇದೇ ವಾರ್ಷಿಕ ಹಣಕಾಸು ಹೇಳಿಕೆಯಲ್ಲಿ ಘೋಷಣೆಯಾಗುವ ಕಾರಣ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.