Cancer Medicines: ಜೀವ ಉಳಿಸುವ 3 ಕ್ಯಾನ್ಸರ್ ಔಷಧಗಳಿಗೆ ಸೀಮಾ ಸುಂಕವಿಲ್ಲ; ಬಜೆಟ್ ಘೋಷಣೆ ಸ್ವಾಗತಾರ್ಹ ಎಂದ ಆರೋಗ್ಯ ವಲಯದ ಪ್ರಮುಖರು
Jul 24, 2024 02:24 PM IST
Cancer Medicines: ಜೀವ ಉಳಿಸುವ 3 ಕ್ಯಾನ್ಸರ್ ಔಷಧಗಳಿಗೆ ಸೀಮಾ ಸುಂಕವಿಲ್ಲ
Budget 2024: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಮೂರು ಔಷಧಗಳನ್ನು ಬೇಸಿಕ್ ಕಸ್ಟಮ್ ಡ್ಯೂಟಿಯಿಂದ ಹೊರಗಿಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದು ಕ್ಯಾನ್ಸರ್ ಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡಲಿದ್ದು, ರೋಗಿಗಳ ಪಾಲಿಗೆ ಆಶಾಕಿರಣವಾಗಲಿದೆ.
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಇಂದು ಪಾರ್ಲಿಮೆಂಟ್‌ನಲ್ಲಿ ಕೇಂದ್ರ ಬಜೆಟ್ 2024-25 ಅನ್ನು ಮಂಡಿಸಿದ್ದಾರೆ. ಈ ಸಂದರ್ಬದಲ್ಲಿ ಮೂರು ಕ್ಯಾನ್ಸರ್ ಔಷಧಗಳನ್ನು ಮೂಲ ಸೀಮಾ ಸುಂಕದಿಂದ ಹೊರಗಿಡುವುದಾಗಿ ಘೋಷಿಸಿದ್ದಾರೆ. "ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು" ಹಂತ ಹಂತದ ಉತ್ಪಾದನಾ ಹೆಚ್ಚಳ ಕಾರ್ಯಕ್ರಮದ ಭಾಗವಾಗಿ ವೈದ್ಯಕೀಯ ಎಕ್ಸ್-ರೇ ಯಂತ್ರಗಳಲ್ಲಿ ಬಳಸುವ ಎಕ್ಸ್-ರೇ ಟ್ಯೂಬ್‌ಗಳು ಮತ್ತು ಫ್ಲಾಟ್ ಪ್ಯಾನಲ್ ಡಿಟೆಕ್ಟರ್‌ಗಳ ಮೇಲಿನ ಮೂಲ ಕಸ್ಟಮ್ಸ್ ಡ್ಯೂಟಿ (ಬಿಸಿಡಿ) ಮಾರ್ಪಾಡು ಮಾಡುವುದಾಗಿಯೂ ಅವರು ಹೇಳಿದ್ದಾರೆ.
"ಕ್ಯಾನ್ಸರ್ ರೋಗಿಗಳಿಗೆ ಅನುಕೂಲ ಒದಗಿಸುವ ಸಲುವಾಗಿ ನಾನು ಇನ್ನೂ ಮೂರು ಔಷಧಿಗಳನ್ನು ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ನೀಡುವ ಪ್ರಸ್ತಾಪ ಮಾಡುತ್ತಿದ್ದೇನೆ. ವೈದ್ಯಕೀಯ ಎಕ್ಸ್ ರೇ ಯಂತ್ರಗಳಲ್ಲಿ ಬಳಸುವ ಎಕ್ಸ್-ರೇ ಟ್ಯೂಬ್‌ಗಳು ಮತ್ತು ಫ್ಲಾಟ್ ಪ್ಯಾನೆಲ್ ಡಿಟೆಕ್ಟರ್‌ಗಳ ಬಿಸಿಡಿಯಲ್ಲಿ ಬದಲಾವಣೆಗಳನ್ನು ಸಹ ನಾನು ಪ್ರಸ್ತಾಪಿಸುತ್ತೇನೆ…” ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
"ಆರೋಗ್ಯ ಕಾಳಜಿ ದರಗಳು ಕೈಗೆಟುಕುವಂತೆ ಇರಬೇಕು ಎನ್ನುವ ಸಲುವಾಗಿ ಮತ್ತು ಆರೋಗ್ಯ ಸೇವೆ ದುಬಾರಿಯಾಗುವುದನ್ನು ತಡೆಯುವ ಸಲುವಾಗಿ ಸರಕಾರ ಈ ರೀತಿ ಬದಲಾವಣೆ ತರುತ್ತಿದೆ. ವೈದ್ಯಕೀಯ ವಲಯದಲ್ಲಿ ಸ್ಥಳೀಯ ಉತ್ಪಾದನೆ ಪ್ರೋತ್ಸಾಹಿಸುವುದು ಸಹ ಇದರ ಉದ್ದೇಶ" ಎಂದು ಅವರು ಹೇಳಿದ್ದಾರೆ.
ಕಡಿಮೆ ಆದಾಯದವರಿಗೆ ಹೆಚ್ಚಿನ ಪ್ರಯೋಜನವಿಲ್ಲ
ʼಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ ಮೂರು ಔಷಧಿಗಳಾದ ಟ್ರಾಸ್ಟುಜುಮಾಬ್ ಡೆರುಕ್ಸ್‌ಟೆಕಾನ್, ಒಸಿಮರ್ಟಿನಿಬ್ ಮತ್ತು ಡುರ್ವಾಲುಮಾಬ್‌ಗಳಿಗೆ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯ್ತಿ ನೀಡಿರುವುದು ಸ್ವಾಗತಾರ್ಹವಾಗಿದ್ದರೂ, ಅವುಗಳ ದುಬಾರಿ ಬೆಲೆಗಳ ಕಾರಣಕ್ಕೆ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಅದರಲ್ಲೂ ಕಡಿಮೆ ಆದಾಯದವರಿಗೆ ಇದರಿಂದ ಹೆಚ್ಚಿನ ಪ್ರಯೋಜನ ದೊರೆಯುವುದಿಲ್ಲʼ ಎಂದು ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ.ಬಿ.ಎಸ್. ಅಜೈಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಜೀವರಕ್ಷಕ ಔಷಧಕ್ಕೆ ತೆರಿಗೆ ವಿನಾಯಿತಿ ಸ್ವಾಗತಾರ್ಹ
ಸರಕಾರದ ಈ ಕ್ರಮವನ್ನು ಉದ್ಯಮದ ಹಲವು ಪ್ರಮುಖರು ಸ್ವಾಗತಿಸಿದ್ದಾರೆ. "ಇದು ಅಂತರ್ಗತ ಬೆಳವಣಿಗೆಯ ಬಜೆಟ್" ಎಂದು ಮಹಾಜನ್ ಇಮೇಜಿಂಗ್ ಮತ್ತು ಲ್ಯಾಬ್ಸ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಮತ್ತು ಎಫ್‌ಐಸಿಸಿಐ ಆರೋಗ್ಯ ಸೇವೆಗಳ ಸಮಿತಿಯ ಅಧ್ಯಕ್ಷ ಡಾ ಹರ್ಷ್ ಮಹಾಜನ್ ಹೇಳಿದ್ದಾರೆ.
“ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸುವ ಮೂರು ಜೀವರಕ್ಷಕ ಔಷಧಿಗಳಿಗೆ ವಿನಾಯಿತಿ ನೀಡಿರುವುದು ಸ್ವಾಗತಾರ್ಹ ಹೆಜ್ಜೆ. ಎಕ್ಸ್‌ರೇ ಟ್ಯೂಬ್‌ಗಳು ಮತ್ತು ಡಿಜಿಟಲ್ ಡಿಟೆಕ್ಟರ್‌ಗಳ ಘಟಕಗಳ ಮೇಲಿನ ಕಸ್ಟಮ್ಸ್ ಸುಂಕದ ವಿನಾಯಿತಿಯು ಭಾರತದಲ್ಲಿ ಡಿಜಿಟಲ್ ಎಕ್ಸ್‌ರೇ ಯಂತ್ರಗಳ ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಕಾರಣವಾಗುತ್ತದೆ, ”ಎಂದು ಅವರು ಲೈವ್‌ಮಿಂಟ್‌ಗೆ ತಿಳಿಸಿದರು.
ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಸಹಕಾರಿ
"ಈ ಕ್ರಮವು ಕ್ಯಾನ್ಸರ್ ವಿರುದ್ಧ ಹೋರಾಡುವ ರೋಗಿಗಳಿಗೆ ಪ್ರಯೋಜನಕಾರಿ. ಈ ರೀತಿಯ ಔಷಧಗಳ ದರ ಇಳಿಕೆಯಿಂದ ರೋಗಿಗಳಿಗೆ ಪ್ರಯೋಜನವಿದೆ. ಸುಲಭವಾಗಿ ಈ ಔಷಧಗಳು ಕೈಗೆಟುಕುವಂತೆ ಮಾಡುವ ಗುರಿಯನ್ನು ಸರಕಾರ ಹೊಂದಿರುವುದು ಸ್ವಾಗತಾರ್ಹ. ಸಾರ್ವಜನಿಕ ಆರೋಗ್ಯ ಸುಧಾರಿಸುವ ಸರಕಾರದ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ" ಎಂದು ನ್ಯೂಬರ್ಗ್ ಸೆಂಟರ್ ಫಾರ್ ಜೀನೋಮಿಕ್ ಸೆಂಟರ್‌ನ ಆಣ್ವಿಕ ಆಂಕೊಪಾಥಾಲಜಿಸ್ಟ್ ಡಾ.ಕುಂಜಲ್ ಪಟೇಲ್ ಹೇಳಿದ್ದಾರೆ. "ಇದು ದೇಶದ ಜನರ ಆರೋಗ್ಯದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ರಾಷ್ಟ್ರಾದ್ಯಂತ ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಬೆಂಬಲಿಸಲು ನೆರವಾಗಲಿದೆ" ಎಂದು ಅವರು ಹೇಳಿದ್ದಾರೆ.
ಔಷಧ ಬೆಲೆ ಸ್ಥಿರತೆಗೆ ನೆರವು ನೀಡಲಿದೆ
“ಎಪಿಐಗಳ ಮೇಲಿನ ಜಿಎಸ್‌ಟಿ ಮತ್ತು ಆಮದು ಸುಂಕದ ಕಡಿತವು ದೇಶದಲ್ಲಿ ಫಾರ್ಮಾ ಬೆಲೆಗಳನ್ನು ಸ್ಥಿರಗೊಳಿಸಲು, ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಸಾಮಾನ್ಯ ಜನರಿಗೆ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ಲಭ್ಯವಾಗುವಂತೆ ಮಾಡಲು ಸಹಾಯ ಮಾಡುತ್ತದೆ" ಎಂದು ಪಿಎಚ್‌ಡಿಸಿಸಿಐ ಮಾಜಿ ಅಧ್ಯಕ್ಷ ಮತ್ತು ಮುಲ್ತಾನಿ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಅಧ್ಯಕ್ಷ ಡಾ. ಪ್ರದೀಪ್ ಮುಲ್ತಾನಿ ಹೇಳಿದ್ದಾರೆ.
ಕ್ಯಾನ್ಸರ್ ಕಾಳಜಿ ಹೆಚ್ಚಬೇಕಿದೆ
"30 ರಿಂದ 69 ವಯೋಮಾನದವರಲ್ಲಿ ಶೇಕಡ 71 ಸಾವುಗಳಿಗೆ ಕ್ಯಾನ್ಸರ್ ಕಾರಣ. ಶೇಕಡ 15ರಷ್ಟು ಕ್ಯಾನ್ಸರ್ ರೋಗಿಗಳು ಭಾರತದಲ್ಲಿ ಮಕ್ಕಳು ಮತ್ತು ಹದಿಹರೆಯದವರಾಗಿದ್ದಾರೆ, ಸಮಯೋಚಿತ ರೋಗನಿರ್ಣಯ ಮತ್ತು ವೈಯಕ್ತಿಕ ಆರೈಕೆ ಅತ್ಯಗತ್ಯ" ಎಂದು ರೆಡ್‌ಕ್ಲಿಫ್ ಲ್ಯಾಬ್ಸ್‌ನ ಅಧ್ಯಕ್ಷ ಧೀರಜ್ ಜೈನ್ ಹೇಳಿದ್ದಾರೆ.
"ಕ್ಯಾನ್ಸರ್ ಔಷಧಿಗಳ ಮೇಲಿನ ಕಸ್ಟಮ್ ಸುಂಕದ ವಿನಾಯಿತಿಯು ಅನೇಕರಿಗೆ ಅವುಗಳ ಲಭ್ಯತೆ ಹೆಚ್ಚಿಸುತ್ತದೆ. ಮುಂದುವರಿದ ಹಂತದ ರೋಗಿಗಳಿಗೆ ತಕ್ಷಣ ಚಿಕಿತ್ಸೆ ಒದಗಿಸಲು ಪೂರಕವಾದ ವಾತಾವರಣ ನಿರ್ಮಿಸುವ ಮೂಲಕ ನಾವು ದೇಶಾದ್ಯಂತ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯನ್ನು ಸುಧಾರಿಸಬಹುದು ”ಎಂದು ಅವರು ಹೇಳಿದ್ದಾರೆ.
ಮೂಲ ಲೇಖನ: ಲೈವ್ ಮಿಂಟ್