PV Narasimha Rao: ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್‌ಗೆ ಭಾರತ ರತ್ನ ಘೋಷಣೆ; ಭಾರತ ಅಭಿವೃದ್ಧಿಯ ವಾಸ್ತುಶಿಲ್ಪಿಯ ಸಾಧನೆಯ ಶಿಖರ ಹೀಗಿತ್ತು
Feb 09, 2024 01:39 PM IST
ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಘೋಷಿಸಿದೆ.
ದೇಶದ ಆರ್ಥಿಕ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟ ಭಾರತಕ್ಕೆ ಆರ್ಥಿಕ ಸುಧಾರಣೆಗಳನ್ನು ತಂದ ಕೀರ್ತಿ ಕಾಂಗ್ರೆಸ್ ಹಿರಿಯ ನಾಯಕನಿಗೆ ಸಲ್ಲುತ್ತದೆ. ಪಿವಿ ನರಸಿಂಹ ರಾವ್ ಅವರ ರಾಜಕೀಯ ಚಿತ್ರಣ ಇಲ್ಲಿದೆ.
ದೆಹಲಿ: ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರಿಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ಪ್ರಶಸ್ತಿಯನ್ನು ಘೋಷಿಸಿ ಗೌರವಿಸಲಾಗಿದೆ. ದೇಶದ ಆರ್ಥಿಕ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟ ಭಾರತಕ್ಕೆ ಆರ್ಥಿಕ ಸುಧಾರಣೆಗಳನ್ನು ತಂದ ಕೀರ್ತಿ ಕಾಂಗ್ರೆಸ್ ಹಿರಿಯ ನಾಯಕ ಪಿವಿಎನ್ ಅವರಿಗೆ ಸಲ್ಲುತ್ತದೆ.
"ನಮ್ಮ ಮಾಜಿ ಪ್ರಧಾನಿ ಶ್ರೀ ಪಿ.ವಿ.ನರಸಿಂಹ ರಾವ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಗುವುದು ಎಂದು ಹಂಚಿಕೊಳ್ಳಲು ಸಂತೋಷವಾಗಿದೆ. ಪ್ರಖ್ಯಾತ ವಿದ್ವಾಂಸ ಮತ್ತು ರಾಜನೀತಿಜ್ಞರಾಗಿ, ನರಸಿಂಹ ರಾವ್ ಅವರು ವಿವಿಧ ಸಾಮರ್ಥ್ಯಗಳಲ್ಲಿ ಭಾರತಕ್ಕೆ ವ್ಯಾಪಕವಾಗಿ ಸೇವೆ ಸಲ್ಲಿಸಿದರು. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಮತ್ತು ಸಂಸತ್ತು ಮತ್ತು ವಿಧಾನಸಭೆಯ ಸದಸ್ಯರಾಗಿ ಅವರು ಅನೇಕ ವರ್ಷಗಳ ಕಾಲ ಮಾಡಿದ ಕೆಲಸಕ್ಕಾಗಿ ಅವರನ್ನು ಸಮಾನವಾಗಿ ಸ್ಮರಿಸಲಾಗುತ್ತದೆ. ಅವರ ದೂರದೃಷ್ಟಿಯ ನಾಯಕತ್ವವು ಭಾರತವನ್ನು ಆರ್ಥಿಕವಾಗಿ ಮುಂದುವರಿದಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತು, ದೇಶದ ಸಮೃದ್ಧಿ ಮತ್ತು ಬೆಳವಣಿಗೆಗೆ ಭದ್ರ ಅಡಿಪಾಯವನ್ನು ಹಾಕಿತು" ಎಂದು ಪ್ರಧಾನಿ ನರೇಂದ್ರ ಮೋದಿ ಬರೆದಿದ್ದಾರೆ.
"ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಭಾರತವನ್ನು ಜಾಗತಿಕ ಮಾರುಕಟ್ಟೆಗಳಿಗೆ ತೆರೆದಿಟ್ಟ, ಆರ್ಥಿಕ ಅಭಿವೃದ್ಧಿಯ ಹೊಸ ಯುಗವನ್ನು ಪೋಷಿಸಿದ ಮಹತ್ವದ ಕ್ರಮಗಳಿಂದ ಗುರುತಿಸಲ್ಪಟ್ಟಿದೆ. ಇದಲ್ಲದೆ, ಭಾರತದ ವಿದೇಶಾಂಗ ನೀತಿ, ಭಾಷೆ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಅವರ ಕೊಡುಗೆಗಳು ಭಾರತವನ್ನು ನಿರ್ಣಾಯಕ ರೂಪಾಂತರಗಳ ಮೂಲಕ ಮುನ್ನಡೆಸಿದ್ದಲ್ಲದೆ ಅದರ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯನ್ನು ಶ್ರೀಮಂತಗೊಳಿಸಿದ ನಾಯಕರಾಗಿ ಅವರ ಬಹುಮುಖಿ ಪರಂಪರೆಯನ್ನು ಒತ್ತಿಹೇಳುತ್ತವೆ" ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.
ಅತ್ಯುನ್ನತ ಗೌರವ ಭಾರತ ರತ್ನ ಪುರಸ್ಕೃತ ಪಿವಿ ನರಸಿಂಹ ರಾವ್ ಯಾರು?
ಪಮುಲಪರ್ತಿ ವೆಂಕಟ ನರಸಿಂಹ ರಾವ್ ಭಾರತದ ವಕೀಲರಾಗಿದ್ದವರು, ಅವಿಭಜಿತ ಆಂಧ್ರಪ್ರದೇಶದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಇವರು ಭಾರತದ 9ನೇ ಪ್ರಧಾನ ಮಂತ್ರಿಯಾಗಿ 1991 ರಿಂದ 1996 ರವರೆಗೆ ಸೇವೆ ಸಲ್ಲಿಸಿದ್ದಾರೆ. 1991 ರಲ್ಲಿ ಭಾರತವು ವಿದೇಶಿ ಮೀಸಲು ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ, ನರಸಿಂಹ ರಾವ್ ಅವರ ಸರ್ಕಾರವು ಎಲ್‌ಪಿಜಿ ಎಂಬ ಮೂರು ದೊಡ್ಡ ಆರ್ಥಿಕ ಸುಧಾರಣೆಗಳಾದ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣವನ್ನು ಜಾರಿಗೆ ತಂದಿದೆ.
ಪಿ.ವಿ ನರಸಿಂಹ ರಾವ್ ಅವರು ದಕ್ಷಿಣ ಭಾರತದಿಂದ ಭಾರತದ ಪ್ರಧಾನಿಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇವರು ವಾರಂಗಲ್‌ನ ನರಸಂಪೇಟ್ ಮಂಡಲದ ಲಕ್ನೆಪಲ್ಲಿ ಗ್ರಾಮದಲ್ಲಿ ತೆಲುಗು ನಿಯೋಗಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಈ ಜಿಲ್ಲೆಯು ಪ್ರಸ್ತುತ ತೆಲಂಗಾಣದಲ್ಲಿದೆ. ಅವರು 1930 ರ ದಶಕದ ಉತ್ತರಾರ್ಧದಲ್ಲಿ ಹೈದರಾಬಾದ್‌ನ ವಂದೇ ಮಾತರಂ ಚಳವಳಿಯಲ್ಲಿ ಭಾಗವಹಿಸಿದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರು ವೃತ್ತಿಯಲ್ಲಿ ವಕೀಲರಾಗಿದ್ದರು.
ಇಂದಿರಾ ಗಾಂಧಿಗೆ ನಿಷ್ಠಾವಂತರಾಗಿದ್ದ ತೋರಿಸಿದ್ದ ಪಿವಿ ನರಸಿಂಹ ರಾವ್
ಸ್ವಾತಂತ್ರ್ಯದ ನಂತರ, ಪಿ.ವಿ ನರಸಿಂಹ ರಾವ್ ಪೂರ್ಣ ಸಮಯದ ರಾಜಕಾರಣಿಯಾದರು. 1957ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1971 ರವರೆಗೆ ಅವರು ರಾಜ್ಯ ಸರ್ಕಾರದಲ್ಲಿ ಅನೇಕ ಮಂತ್ರಿ ಸ್ಥಾನಗಳನ್ನು ಅಲಂಕರಿಸಿದರು. 1971ರಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾದರು. ಇಂದಿರಾ ಗಾಂಧಿ ನಿಷ್ಠಾವಂತ ಎಂದು ಕರೆಸಿಕೊಂಡಿದ್ದರು. 1969 ರಲ್ಲಿ ಕಾಂಗ್ರೆಸ್ ಎರಡು ಭಾಗಗಳಾಗಿ ವಿಭಜನೆಯಾದಾಗ ರಾವ್ ಅವರು ಇಂದಿರಾ ಗಾಂಧಿ ಅವರನ್ನು ಬೆಂಬಲಿಸಿದ್ದರು.
ರಾವ್ ಅವರು ಆಂಧ್ರಪ್ರದೇಶದ ಸಂಸತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು ಮತ್ತು ಕೇಂದ್ರ ಸಚಿವರಾಗಿ ಗೃಹ, ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆಗಳನ್ನು ನಿರ್ವಹಿಸಿದರು.1991ರಲ್ಲಿ ಅವರು ಬಹುತೇಕ ರಾಜಕೀಯದಿಂದ ನಿವೃತ್ತರಾಗಿದ್ದರು. ಆದಾಗ್ಯೂ, ಕಾಂಗ್ರೆಸ್ ಅಧ್ಯಕ್ಷ ಮತ್ತು ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ಅವರು ಸಕ್ರಿಯ ರಾಜಕೀಯಕ್ಕೆ ಮರಳಿದರು. 1921ರ ಜೂನ್ 28 ರಂದು ಜನಿಸಿದ್ದ ಪಿವಿ ನರಸಿಂಹ ರಾವ್ ಅವರು 2004ರ ಡಿಸೆಂಬರ್ 23 ರಂದು ವಿಧಿವಶರಾಗಿದ್ದಾರೆ. ರಾವ್ ಅವರಿಗೆ ಮರಣೋತ್ತರವಾಗಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿಯನ್ನು ಇಂದು (ಫೆಬ್ರವರಿ 9, ಶುಕ್ರವಾರ) ಘೋಷಣೆ ಮಾಡಿದೆ. (This copy first appeared in Hindustan Times Kannada website. To read more like this please logon to kannada.hindustantime.com).