UPI Transactions: ಗಮನಿಸಿ..2,000 ರೂ.ಗಿಂತ ಮೇಲ್ಪಟ್ಟ ಯುಪಿಐ ವಹಿವಾಟುಗಳಿಗೆ ಶೇ. 1.1ರಷ್ಟು ಬರೆ: ಯಾರಿಗೆ ಹೊರೆ?
Mar 30, 2023 09:12 AM IST
ಸಾಂದರ್ಭಿಕ ಚಿತ್ರ
ಇದೇ ಏಪ್ರಿಲ್ 1ರಿಂದ ಮರ್ಚಂಟ್ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ವಹಿವಾಟುಗಳ ಮೇಲೆ, ಶೇ. 1.1ರಷ್ಟು ವಿನಿಮಯ ಶುಲ್ಕ ವಿಧಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಘೋಷಿಸಿದೆ. 2,000 ರೂ.ಗಿಂತ ಹೆಚ್ಚಿನ ವಹಿವಾಟು ನಡೆಸಿದಾಗ ಮಾತ್ರ ವಿನಿಮಯ ಶುಲ್ಕ ವಿಧಿಸಲಾಗುವುದು ಎಂದು ಎನ್‌ಪಿಸಿಐ ಸ್ಪಷ್ಟಪಡಿಸಿದೆ.
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಇದೇ ಏಪ್ರಿಲ್ 1ರಿಂದ ಮರ್ಚಂಟ್ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ವಹಿವಾಟುಗಳ ಮೇಲೆ, ಶೇ. 1.1ರಷ್ಟು ವಿನಿಮಯ ಶುಲ್ಕ ವಿಧಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಘೋಷಿಸಿದೆ.
ಯುಪಿಐ ವಹಿವಾಟುಗಳಿಗೆ ಬಳಸುವ ಪ್ರಿಪೇಯ್ಡ್ ಪಾವತಿ ಉಪಕರಣ (ಪಿಪಿಐ)ಗಳಿಗೆ, ವಿನಿಮಯ ಶುಲ್ಕವನ್ನು ವಿಧಿಸಲಾಗುತ್ತದೆ. 2,000 ರೂ.ಗಿಂತ ಹೆಚ್ಚಿನ ವಹಿವಾಟು ನಡೆಸಿದಾಗ ಮಾತ್ರ ವಿನಿಮಯ ಶುಲ್ಕ ವಿಧಿಸಲಾಗುವುದು ಎಂದು ಎನ್‌ಪಿಸಿಐ ಸ್ಪಷ್ಟಪಡಿಸಿದೆ. ವಿವಿಧ ವರ್ಗದ ವ್ಯಾಪಾರಿಗಳಿಗೆ ಶೇ. 0.5ರಿಂದ ಶೇ. 1.1ರವರೆಗಿನ ವಿನಿಮಯ ಶುಲ್ಕ ಇದ್ದು, ನಿರ್ದಿಷ್ಟ ವರ್ಗಗಳಿಗೆ ಕೆಲವು ಮಿತಿಗಳನ್ನು ಹೇರಲಾಗಿದೆ.
ಈ ಕುರಿತು ನಿನ್ನೆ(ಮಾ.29-ಬುಧವಾರ) ಅಧಿಸೂಚನೆ ಹೊರಡಿಸಿರುವ ಎನ್‌ಪಿಸಿಐ, ಈ ವಿನಿಮಯ ಶುಲ್ಕವು ಪ್ರಿಪೇಯ್ಡ್ ಪಾವತಿ ಸಾಧನಗಳ ಮೂಲಕ ಮಾಡಿದ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ತಿಳಿಸಿದೆ. "ಬ್ಯಾಂಕ್ ಖಾತೆಯಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವ ಮತ್ತು ಸಾಮಾನ್ಯ ಯುಪಿಐ ಪಾವತಿಗಳ ಮೇಲೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಹಾಗೆಯೇ ಜನರು ವ್ಯಾಪಾರಿಗಳಿಗೆ ಯುಪಿಐ ಮೂಲಕ ಪಾವತಿಸುವ ಹಣದ ಮೇಲೂ ಯಾವುದೇ ಶುಲ್ಕ ಇರುವುದಿಲ್ಲ.." ಎಂದು ಎನ್‌ಪಿಸಿಐ ಖಚಿತಪಡಿಸಿದೆ.
ಟೆಲಿಕಾಂ, ಶಿಕ್ಷಣ, ಮತ್ತು ಪೋಸ್ಟ್ ಆಫೀಸ್‌ಗಳಿಗೆ ಇಂಟರ್‌ಚೇಂಜ್ ಶುಲ್ಕವು ಶೇ. 0.7 ಆಗಿದ್ದರೆ, ಸೂಪರ್‌ಮಾರ್ಕೆಟ್‌ಗಳಿಗೆ ವಹಿವಾಟಿನ ಮೌಲ್ಯದ ಶೇ. 0.9ರಷ್ಟು ಶುಲ್ಕ ವಿಧಿಸಲಾಗಿದೆ. ಜೊತೆಗೆ ವಿಮೆ, ಮ್ಯೂಚುವಲ್ ಫಂಡ್‌ಗಳು ಮತ್ತು ರೈಲ್ವೆ ಇಲಾಖೆಗಳ ವಹಿವಾಟುಗಳಿಗೆ ಗಳಿಗೆ ಶೇ. 1ರಷ್ಟು ಶುಲ್ಕವನ್ನು ನಿಗದಿಪಡಿಸಲಾಗಿದೆ. ಇಂಧನ ಶೇ. 0.5 ಮತ್ತು ಕೃಷಿ ಶೇ. 0.7ರಷ್ಟು ವಿನಿಮಯ ಶುಲ್ಕ ಭರಿಸಬೇಕಾಗುತ್ತದೆ.
ಪೀರ್ ಟು ಪೀರ್ (ಪಿ2ಪಿ) ಮತ್ತು ಪೀರ್-ಟು-ಪೀರ್-ಮರ್ಚೆಂಟ್ (ಪಿ2ಪಿಎಂ) ವಹಿವಾಟುಗಳ ಸಂದರ್ಭದಲ್ಲಿ, ಯಾವುದೇ ವಿನಿಯಮ ಶುಲ್ಕ ಅನ್ವಯಿಸಲಾಗುವುದಿಲ್ಲ. ಪಿಪಿಪಿ ವಿತರಕರು 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳನ್ನು ಮಾಡಿದಾಗ, ವಾಲೆಟ್ ಲೋಡಿಂಗ್ ಶುಲ್ಕವಾಗಿ ರವಾನೆ ಮಾಡುವ ಬ್ಯಾಂಕ್‌ಗೆ 15 ಮೂಲ ಅಂಶಗಳಷ್ಟು (ಬಿಪಿಎಸ್) ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಯಾವುದೇ ಗ್ರಾಹಕರು ಬ್ಯಾಂಕ್ ಖಾತೆಯಿಂದ 2,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ವ್ಯಾಲೆಟ್‌ಗೆ ವರ್ಗಾಯಿಸಿದರೆ, ಆಗ ಈ ವ್ಯಾಲೆಟ್ ನಿರ್ವಹಿಸುವ ಫೋನ್‌ಪೇ, ಗೂಗಲ್‌ಪೇ, ಪೇಟಿಎಂ ಮೊದಲಾದ ಸಂಸ್ಥೆಗಳು ಬ್ಯಾಂಕ್‌ಗಳಿಗೆ ಸಣ್ಣ ಮೊತ್ತವನ್ನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಸೆಪ್ಟೆಂಬರ್ 30, 2023ರೊಳಗಾಗಿ ಈ ವಿನಿಮಯ ಶುಲ್ಕಗಳನ್ನು ಪರಿಶೀಲಿಸಲಾಗುತ್ತದೆ.
ಯುಪಿಐ ಡಿಜಿಟಲ್ ಸಾರ್ವಜನಿಕ ಸರಕಾಗಿದ್ದು, ಇದರ ಮೂಲಕ ಮಾಡಿದ ವಹಿವಾಟುಗಳ ಮೇಲೆ ಯಾವುದೇ ಶುಲ್ಕವನ್ನು ವಿಧಿಸುವ ಆಯ್ಕೆ ನಮ್ಮ ಮುಂದೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಕಳೆದ ಆಗಸ್ಟ್‌ನಲ್ಲಿ ಹೇಳಿತ್ತು.
"ಯುಪಿಐ ಸಾರ್ವಜನಿಕರಿಗೆ ಅಪಾರ ಅನುಕೂಲತೆ ಮತ್ತು ಆರ್ಥಿಕತೆಗೆ ಉತ್ಪಾದಕತೆಯ ಲಾಭ ತಂದುಕೊಡುವ ಡಿಜಿಟಲ್ ಸಾರ್ವಜನಿಕ ಉತ್ಪನ್ನವಾಗಿದೆ. ಯುಪಿಐ ಸೇವೆಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲು ಸರ್ಕಾರ ಚಿಂತನೆ ನಡೆಸುತ್ತಿಲ್ಲ. ಸೇವಾ ಪೂರೈಕೆದಾರರ ವೆಚ್ಚ ವಸೂಲಿಯ ಕಳವಳವನ್ನು ಬೇರೆ ವಿಧಾನಗಳ ಮೂಲಕ ಪೂರೈಸಬೇಕಾಗಿದೆ..” ಎಂದು ಕೇಂದ್ರ ಹಣಕಾಸು ಸಚಿವಾಲಯ ಟ್ವೀಟ್ ಮಾಡಿತ್ತು.
ನಿಧಿ ವರ್ಗಾವಣೆ ವ್ಯವಸ್ಥೆಯಾಗಿ ಯುಪಿಐ ಕೂಡ ಬ್ಯಾಂಕ್‌ಗಳ ತಕ್ಷಣದ ಪಾವತಿ ಸೇವೆ ( ಐಎಂಪಿಎಸ್ ) ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಆರ್‌ಬಿಐ ಹೇಳಿತ್ತು. ಯುಪಿಐ ಶುಲ್ಕಗಳು ಐಎಂಪಿಎಸ್ ನಿಧಿ ವರ್ಗಾವಣೆಯ ಮೇಲೆ ವಿಧಿಸುವ ಶುಲ್ಕಗಳಿಗೆ ತಾಳೆಯಾಗುತ್ತದೆ ಎಂದು ಆರ್‌ಬಿಐ ತಿಳಿಸಿತ್ತು.
ವಿಭಾಗ