Joe Biden Wishes Rishi Sunak: ವಲಸಿಗ ಭಾರತೀಯ ಸಮುದಾಯದ ಸಾಧನೆಗೆ ಕಳಶ: ಸುನಕ್ ಅಭಿನಂದಿಸಿದ ಬೈಡನ್
Oct 25, 2022 02:59 PM IST
ಶ್ವೇತಭವನದಲ್ಲಿ ದೀಪಾವಳಿ ಆಚರಣೆ
- ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲಿರುವ ವೈಟ್‌ಹೌಸ್(ಶ್ವೇತಭವನ)ನಲ್ಲಿ ದೀಪಾವಳಿ ಆಚರಿಸಿ ಮಾತನಾಡಿರುವ ಜೋ ಬೈಡನ್, ಬ್ರಿಟನ್ ಪ್ರಧಾನಮಂತ್ರಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಅವರ ಆಯ್ಕೆಯು ಬಹಳ ದಿಗ್ಭ್ರಮೆಗೊಳಿಸುವ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದ್ದರೆ. ಸುನಕ್ ಅವರ ಆಯ್ಕೆ, ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ವಲಸಿಗ ಬಾರತೀಯ ಸಮುದಾಯದ ಸಾಧನೆಗೆ ಕಳಶ ಎಂದು ಬೈಡನ್ ಹೇಳಿದ್ದಾರೆ.
ವಾಷಿಂಗ್ಟನ್: ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್‌ನ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವುದು, ಇಡೀ ವಿಶ್ವವನ್ನು ದಿಗ್ಭ್ರಮೆಗೊಳಿಸಿದೆ. ಸಪ್ತಸಾಗರದಾಚೆಗೂ ಭಾರತೀಯರು ತಮ್ಮ ಪ್ರಭಾವ ಬೀರುತ್ತಿರುವುದನ್ನು ಕಂಡು, ಜಗತ್ತು ಅಚ್ಚರಿಕೊಂಡಿದೆ. ರಿಷಿ ಸುನಕ್ ಅವರಿಗೆ ವಿಶ್ವದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ರಿಷಿ ಸುನಕ್ ಅವರನ್ನು ಅಭಿನಂದಿಸಿದ್ಧಾರೆ.
ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲಿರುವ ವೈಟ್‌ಹೌಸ್(ಶ್ವೇತಭವನ)ನಲ್ಲಿ ದೀಪಾವಳಿ ಆಚರಿಸಿ ಮಾತನಾಡಿರುವ ಜೋ ಬೈಡನ್, ಬ್ರಿಟನ್ ಪ್ರಧಾನಮಂತ್ರಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಅವರ ಆಯ್ಕೆಯು ಬಹಳ ದಿಗ್ಭ್ರಮೆಗೊಳಿಸುವ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದ್ದರೆ. ಸುನಕ್ ಅವರ ಆಯ್ಕೆ, ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ವಲಸಿಗ ಬಾರತೀಯ ಸಮುದಾಯದ ಸಾಧನೆಗೆ ಕಳಶ ಎಂದು ಬೈಡನ್ ಹೇಳಿದ್ದಾರೆ.
ವಲಸಿಗ ಭಾರತೀಯ ಸಮುದಾಯದ ಸಾಧನೆಗಳನ್ನು ನಾವು ಮೆಚ್ಚಲೇಬೇಕು. ವಿಶ್ವದ ಹಲವು ರಾಷ್ಟ್ರಗಳ ಆಡಳಿತದಲ್ಲಿ ವಸಲಿಗ ಭಾರತೀಯರು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಭಾರತೀಯ ನಂಟನ್ನು ಹೊಂದಿದ್ದಾರೆ. ಇದೀಗ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗುತ್ತಿರುವುದು, ವಲಸಿಗೆ ಭಾರತೀಯ ಸಮುದಾಯದ ಸಾಧನೆಗೆ ಕಳಶವಿಟ್ಟಂತಾಗಿದೆ ಎಂದು ಬೈಡನ್ ಹೇಳಿದರು.
ತಮ್ಮ ಆಡಳಿತದಲ್ಲಿ ಏಷ್ಯನ್ ಅಮೆರಿಕನ್ನರು ಅದರಲ್ಲೂ ಭಾರತೀಯ ಮೂಲದ ಅಮೆರಿಕನ್ನರು ಈ ಹಿಂದೆಂದಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆರಿಕದ ಅಭಿವೃದ್ಧಿಯಲ್ಲಿ ಏಷ್ಯನ್ ಮತ್ತು ಭಾರತೀಯ ಸಮುದಾಯದ ಕೊಡಗೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಜೋ ಬೈಡನ್ ನುಡಿದರು.
ದೀಪಾವಳಿಯನ್ನು ಅಮೆರಿಕನ್ ಸಂಸ್ಕೃತಿಯ ಭಾಗವನ್ನಾಗಿ ಮಾಡಿದ್ದಕ್ಕಾಗಿ ಭಾರತೀಯ ಅಮೆರಿಕನ್ನರಿಗೆ ಧನ್ಯವಾದ. ನೀವು ಅಮೆರಿಕನ್ನರ ಜೀವನದ ಪ್ರತಿಯೊಂದು ಭಾಗದಲ್ಲೂ ಸಾಕಷ್ಟು ಕೊಡುಗೆ ನೀಡುತ್ತಿದ್ದೀರಿ. ದೀಪಾವಳಿ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಸ್ವಾಗತಿಸುವ ಹಬ್ಬ. ಈ ಹಬ್ಬವನ್ನು ಶ್ವೇತಭವನದಲ್ಲಿ ಭಾರತೀಯ ಸಮುದಾಯದೊಂದಿಗೆ ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ಜೋ ಬೈಡನ್ ಹೇಳಿದರು.
ಅಮೆರಿಕನ್ನರು ವಲಸಿಗ ಭಾರತೀಯ ಸಮುದಾಯದೊಂದಿಗೆ ಜೊತೆಗೂಡಿ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸುತ್ತಾರೆ. ಇದು ನಮ್ಮ ಒಳಗೊಳ್ಳುವಿಕೆಯ ಪ್ರತೀಕವಾಗಿದೆ. ಅಮೆರಿಕವು ಕೂಡುವಿಕೆಯಲ್ಲಿ ನಂಬಿಕೆ ಇರಿಸಿದೆಯೇ ಹೊರತು ಬೇರ್ಪಡುವುದರಲ್ಲಿ ಅಲ್ಲ. ಇದಕ್ಕೆ ಅಮೆರಿಕನ್ನರು ಮತ್ತು ಭಾರತೀಯರ ನಡುವಿನ ಗಟ್ಟಿ ಸಂಬಂಧವೇ ಸಾಕ್ಷಿ ಎಂದು ಜೋ ಬೈಡನ್ ಅಭಿಪ್ರಾಯಪಟ್ಟರು.
ಅಮೆರಿಕವು ವಲಸಿಗೆ ಭಾರತೀಯ ಸಮುದಾಯದ ಕ್ಷಮತೆಯನ್ನು ಆರಂಭದಲ್ಲೇ ಗುರುತಿಸಿದ ದೇಶವಾಗಿದೆ. ಇದೇ ಕಾರಣಕ್ಕೆ ಶತಮಾನಗಳಿಂದ ಇಲ್ಲಿ ನೆಲೆಸಿರುವ ವಲಸಿಗೆ ಭಾರತೀಯ ಸಮುದಾಯ, ಅಮೆರಿಕವನ್ನು ಪ್ರೀತಿಸುತ್ತಾರೆ. ಅಮೆರಿಕದ ಅಭಿವೃದ್ಧಿಯಲ್ಲಿ ವಲಸಿಗೆ ಭಾರತೀಯ ಸಮುದಾಯದ ಕೊಡುಗೆ ಅಪಾರ ಎಂದು ಜೋ ಬೈಡನ್ ಹೇಳಿದರು.
ಕೇವಲ ಅಮೆರಿಕ ಮಾತ್ರವಲ್ಲದೇ, ತಾನು ನೆಲೆಸಿರುವ ಎಲ್ಲಾ ದೇಶಗಳಲ್ಲೂ ವಲಸಿಗ ಭಾರತೀಯ ಸಮುದಾಯ ಅತ್ಯಂತ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ. ಬ್ರಿಟನ್ ಕೂಡ ಇದೀಗ ತನ್ನ ಪ್ರಧಾನಿಯನ್ನಾಗಿ ವಲಸಿಗೆ ಭಾರತೀಯ ಸಮುದಾಯದ ವ್ಯಕ್ತಿಯನ್ನು ಆರಿಸಿದೆ.
ಬ್ರಿಟನ್ ಪ್ರಧಾನಮಂತ್ರಿಯಾಗಿ ರಿಷಿ ಸುನಕ್ ಅವರ ಅಧಿಕೃತ ಘೋಷಣೆಯಾಗುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದರು. ಈ ಸಂದರ್ಭದಲ್ಲಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಉಪಸ್ಥಿತರಿದ್ದರು.
ಅಮೆರಿಕ, ಭಾರತ ಮತ್ತು ಪ್ರಪಂಚದಾದ್ಯಂತ ಬೆಳಕಿನ ಹಬ್ಬವನ್ನು ಆಚರಿಸುತ್ತಿರುವ ಒಂದು ಶತಕೋಟಿಗೂ ಹೆಚ್ಚು ಹಿಂದೂಗಳು, ಜೈನರು, ಸಿಖ್ ಮತ್ತು ಬೌದ್ಧರಿಗೆ ದೀಪಾವಳಿಯ ಶುಭಾಶಯಗಳನ್ನು ಕೋರುವುದಾಗಿ ಜೋ ಬೈಡನ್ ಹೇಳಿದರು.