logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಂದು ಹಕ್ಕಿ ಮತ್ತು ಮೀನು, ಈಗ ಅಳಿಲು; ಅಮೆರಿಕದಲ್ಲಿ ಭಾರಿ ವಿದ್ಯುತ್ ಕಡಿತಕ್ಕೆ ಇವರೇ ಕಾರಣರು

ಅಂದು ಹಕ್ಕಿ ಮತ್ತು ಮೀನು, ಈಗ ಅಳಿಲು; ಅಮೆರಿಕದಲ್ಲಿ ಭಾರಿ ವಿದ್ಯುತ್ ಕಡಿತಕ್ಕೆ ಇವರೇ ಕಾರಣರು

Vrinda Jain HT Kannada

Dec 22, 2023 05:43 PM IST

google News

ಯುಎಸ್ಎಯಲ್ಲಿ ವಿದ್ಯುತ್ ಕಡಿತಕ್ಕೆ ಅಳಿಲುಗಳು ಕಾರಣವಾಗಿವೆ (ಸಾಂದರ್ಭಿಕ ಚಿತ್ರ)

    • ಅಳಿಲುಗಳಿಂದಾಗಿ ವಿದ್ಯುತ್ ಕಡಿತ ಉಂಟಾಗಿದೆ ಎಂದು ಅಮೆರಿಕದ ಇಂಧನ ಕಂಪನಿ ದೂರಿದೆ. ಇದರಿಂದಾಗಿ ಸುಮಾರು 15,000 ಜನರು ವಿದ್ಯುತ್‌ ಸಮಸ್ಯೆ ಅನುಭವಿಸಿದ್ದಾರೆ.
ಯುಎಸ್ಎಯಲ್ಲಿ ವಿದ್ಯುತ್ ಕಡಿತಕ್ಕೆ ಅಳಿಲುಗಳು ಕಾರಣವಾಗಿವೆ (ಸಾಂದರ್ಭಿಕ ಚಿತ್ರ)
ಯುಎಸ್ಎಯಲ್ಲಿ ವಿದ್ಯುತ್ ಕಡಿತಕ್ಕೆ ಅಳಿಲುಗಳು ಕಾರಣವಾಗಿವೆ (ಸಾಂದರ್ಭಿಕ ಚಿತ್ರ) (Unsplash )

ಸಾಮಾನ್ಯವಾಗಿ ಭಾರಿ ಗಾಳಿ ಮಳೆಗೆ ಮರಗಳು ವಿದ್ಯುತ್‌ ತಂತಿ ಮೇಲೆ ಉರುಳಿ ಬಿದ್ದಾಗ ವಿದ್ಯುತ್‌ ಪೂರೈಕೆ ನಿಲ್ಲುತ್ತದೆ. ಗುಡುಗು-ಮಿಂಚು ಬಂದಾಗಲೂ, ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ದುರಸ್ತಿ ಕಾರ್ಯಗಳಿದ್ದಾಗ ವಿದ್ಯುತ್‌ ಪೂರೈಕೆ ಕಂಪನಿಗಳು ಮುಂಚಿತವಾಗಿ ತಿಳಿಸಿ ವಿದ್ಯುತ್‌ ಕಡಿತ ಮಾಡುತ್ತವೆ. ಆದರೆ, ದೂರದ ಅಮೆರಿಕದಲ್ಲಿ ವಿದ್ಯುತ್‌ ಕಡಿತಕ್ಕೆ ಕಾರಣವಾಗಿದ್ದು ಮಾತ್ರ ಅಚ್ಚರಿಯ ವ್ಯಕ್ತಿ.

ಯುನೈಟೆಡ್‌ ಸ್ಟೇಟ್ಸ್‌ನ ಮೊಂಟಾನಾ (Montana) ರಾಜ್ಯದಲ್ಲಿ ಆಗಿರುವ ವಿದ್ಯುತ್‌ ಪೂರೈಕೆಯಲ್ಲಿನ ವ್ಯತ್ಯಯಕ್ಕೆ ಅಳಿಲುಗಳು ಆರೋಪಿ ಸ್ಥಾನದಲ್ಲಿ ನಿಂತಿವೆ. ಅವುಗಳು ಎಸೆಗಿದ ತಪ್ಪಿನಿಂದ ಅಮೆರಿಕದ ಜನರು ಕರೆಂಟ್‌ ಇಲ್ಲದೆ ಪರದಾಡಬೇಕಾಗಿ ಬಂದಿದೆ. ಇದಕ್ಕೆ ಕಾರಣ, ಅಳಿಲುಗಳಿಂದಾಗಿ ಒಂದಲ್ಲ ಎರಡಲ್ಲ, ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ಬೃಹತ್ ಪ್ರಮಾಣದಲ್ಲಿ ವಿದ್ಯುತ್ ಕಡಿತ ಸಮಸ್ಯೆ ಉಂಟಾಗಿದೆ. ಈ ವಿದ್ಯುತ್‌ ಕಡಿತಕ್ಕೆ ಪ್ರಮುಖ ಕಾರಣವೇ ಅಳಿಲುಗಳು ಎಂದು ಶಂಕಿಸಲಾಗಿದೆ. ಹೀಗಾಗಿ ವಿದ್ಯುತ್‌ ಇಲ್ಲದೆ ಅಮೆರಿಕದ ಸಾವಿರಾರು ನಿವಾಸಿಗಳು ಬಿಸಿಲಿನ ತಾಪಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.

ನೈಸರ್ಗಿಕ ಅನಿಲ ಮತ್ತು ಇಂಧನ ಕಂಪನಿಯಾದ ನಾರ್ತ್‌ವೆಸ್ಟರ್ನ್ ಎನರ್ಜಿ (NorthWestern Energy), ವಿದ್ಯುತ್ ಕಡಿತಕ್ಕೆ ಅಳಿಲುಗಳೇ ಕಾರಣ ಎಂದು ದೂರಿದೆ. ಅಲ್ಲದೆ ಅವುಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ. ಇದು ಅಚ್ಚರಿಯಾದರೂ ಸತ್ಯ.

ಕಂಪನಿಯ ಯುಟಿಲಿಟಿ ಕೆಲಸಗಾರರು ಕಂಪನಿಯ ಸಬ್‌ಸ್ಟೇಷನ್‌ಗಳಲ್ಲಿ ಅಳಿಲನ್ನು ಕಂಡುಹಿಡಿದಿದ್ದಾರೆ ಎಂದು ಕಂಪನಿ ಹಂಚಿಕೊಂಡಿದೆ. ಅಳಿಲುಗಳು ವಿದ್ಯುತ್‌ಗೆ ಸಂಬಂಧಿಸಿದ ಕೆಲವೊಂದು ಉಪಕರಣಗಳನ್ನು ಹಾಳು ಮಾಡಿದ್ದು, ಅವುಗಳ ಅಸಮರ್ಪಕ ಕಾರ್ಯಕ್ಕೆ ಕಾರಣವಾಗಿದೆ ಎಂದು ಎನ್‌ಬಿಸಿ ಮೊಂಟಾನಾ (NBC Montana) ವರದಿ ಮಾಡಿದೆ. ಇದೇ ಕಾರಣದಿಂದ ವಿದ್ಯುತ್‌ ಪೂರೈಕೆಗೆ ಅಡಚಣೆಯಾಗಿದೆ.

45 ನಿಮಿಷಗಳ ಕಾಲ ವಿದ್ಯುತ್ ಕಡಿತ

ಆಕಸ್ಮಿಕವಾಗಿ ವಿದ್ಯುತ್‌ ಉಪಕೇಂದ್ರವನ್ನು ಅಳಿಲುಗಳು ಹಾನಿಗೊಳಿಸಿದ ಕಾರಣದಿಂದಾಗಿ, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ನಾರ್ತ್ ವೆಸ್ಟರ್ನ್ ಎನರ್ಜಿ ಕಂಪನಿಯ ಸುಮಾರು 15,000 ಗ್ರಾಹಕರುಗಳಿಗೆ ವಿದ್ಯುತ್‌ ಸಮಸ್ಯೆಯಾಗಿದೆ. ಸುಮಾರು 45 ನಿಮಿಷಗಳ ವಿದ್ಯುತ್ ಕಡಿತದಿಂದ ಜನರು ಪರದಾಡಿದ್ದಾರೆ.

ಪಕ್ಷಿ ಮತ್ತು ಮೀನಿನಿಂದಲೂ ಆಗಿತ್ತು ವಿದ್ಯುತ್‌ ಕಡಿತ

ಪ್ರಾಣಿ ಅಥವಾ ಪಕ್ಷಿಗಳಿಂದಾಗಿ ಜನರು ವಿದ್ಯುತ್ ಇಲ್ಲದೆ ಪರದಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ಆಗಸ್ಟ್‌ ತಿಂಗಳಲ್ಲಿ, ನ್ಯೂಜೆರ್ಸಿ ನಿವಾಸಿಗಳು ಕೂಡಾ ಕರೆಂಟ್‌ ಇಲ್ಲದೆ ಪರದಾಡಿದ್ದರು. ಟ್ರಾನ್ಸ್‌ಫಾರ್ಮರ್‌ ಮೇಲೆ ಹಕ್ಕಿಯೊಂದು ಮೀನನ್ನು ಬೀಳಿಸಿದ್ದರಿಂದ ವಿದ್ಯುತ್ ಕಡಿತವಾಗಿತ್ತು. ಇದು ಅಚ್ಚರಿಯಾದರೂ ಸತ್ಯ.

ಜೆರ್ಸಿ ಸೆಂಟ್ರಲ್ ಇಲೆಕ್ಟ್ರಿಸಿಟಿ ಅಂಡ್ ಲೈಟ್ (Jersey Central Electricity and Light) ಪ್ರಕಾರ, ವಿದ್ಯುತ್ ಸಿಬ್ಬಂದಿ ರಿಪೇರಿ ಕೆಲಸ ಮಾಡುವಾಗ ಇದನ್ನು ಕಂಡಿದ್ದಾರೆ. ಟ್ರಾನ್ಸ್‌ಫಾರ್ಮರ್ ಮೇಲೆ ಮೀನು ಬಿದ್ದ ನಂತರ ಅದು ಸ್ಫೋಟಗೊಂಡು ವಿದ್ಯುತ್‌ ಪೂರೈಕೆ ನಿಂತಿದೆ. ಹೀಗಾಗಿ ಆಗಲೂ ಸಾವಿರಾರು ಜನ ವಿದ್ಯುತ್‌ ಇಲ್ಲದೆ ಸಮಯ ಕಳೆಯಬೇಕಾಗಿ ಬಂದಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ