ಅಯೋಧ್ಯೆಯ ಹನುಮಾನ್ ದೇವಸ್ಥಾನದ ಅರ್ಚಕ ಶವವಾಗಿ ಪತ್ತೆ; ಕತ್ತು ಸೀಳಿ ಹತ್ಯೆ
Oct 19, 2023 12:19 PM IST
ಹತ್ಯೆಯಾದ ಅರ್ಚಕ ರಾಮ್ ಸಹ್ರೇ ದಾಸ್ (ಎಡಚಿತ್ರ)
- Hanumangarhi Temple priest murder:ಉತ್ತರ ಪ್ರದೇಶದ ಅಯೋಧ್ಯೆಯ ಹನುಮಾನ್ಗರ್ಹಿ ದೇವಸ್ಥಾನದ ಅರ್ಚಕ ಶವವಾಗಿ ಪತ್ತೆಯಾಗಿದ್ದಾರೆ. ಬೆಳಗ್ಗೆ ದೇಗುಲದ ಪ್ರಾರ್ಥನೆಗೆ ಇವರು ಹಾಜರಾಗದೇ ಇದ್ದಾಗ ಘಟನೆ ಬೆಳಕಿಗೆ ಬಂದಿದೆ.
ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯ ರಾಮ ಜನ್ಮಭೂಮಿ ಆವರಣದ ಹೈ-ಸೆಕ್ಯುರಿಟಿ ವಲಯದ ಕೊಠಡಿಯೊಂದರಲ್ಲಿ ಹನುಮಾನ್ಗರ್ಹಿ ದೇವಸ್ಥಾನದ ಅರ್ಚಕ ಶವವಾಗಿ ಪತ್ತೆಯಾಗಿದ್ದಾರೆ.
ಇಂದು (ಅ.19,ಗುರುವಾರ) ಬೆಳಗ್ಗೆ ರಕ್ತದ ಮಡುವಿನಲ್ಲಿ ಶವವಾಗಿ ಅರ್ಚಕ ರಾಮ್ ಸಹ್ರೇ ದಾಸ್ (44) ಅವರು ಕಂಡುಬಂದಿದ್ದಾರೆ. ಬೆಳಗ್ಗೆ ದೇಗುಲದ ಪ್ರಾರ್ಥನೆಗೆ ಇವರು ಹಾಜರಾಗದೇ ಇದ್ದಾಗ ಘಟನೆ ಬೆಳಕಿಗೆ ಬಂದಿದೆ.
ಇವರ ಕೋಣೆಗೆ ಇವರ ಇಬ್ಬರು ಶಿಷ್ಯರು ಬಿಟ್ಟರೆ ಬೇರೆಯವರಿಗೆ ಪ್ರವೇಶವಿರಲಿಲ್ಲ. ಹೀಗಾಗಿ ಇವರಿಬ್ಬರೇ ಶಂಕಿತ ಆರೋಪಿಗಳಾಗಿದ್ದಾರೆ. ಓರ್ವ ಶಿಷ್ಯನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೊಬ್ಬ ಶಿಷ್ಯ ಕಾಣೆಯಾಗಿದ್ದಾನೆ. ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕರಣ್ ನಯ್ಯರ್ ತಿಳಿಸಿದ್ದಾರೆ.
ಅರ್ಚಕ ರಾಮ್ ಸಹ್ರೇ ದಾಸ್ ಅವರನ್ನು ಹರಿತವಾದ ಆಯುಧದಿಂದ ಕೊಲೆ ಮಾಡಲಾಗಿದೆ. ನಿನ್ನೆ ರಾತ್ರಿ ರಾಮ್ ಸಹ್ರೇ ದಾಸ್ ಅವರಿಗೂ ಹಾಗೂ ಅವರ ಶಿಷ್ಯರಿಗೂ ಜಗಳ ಆಗಿತ್ತು ಎಂದು ತಿಳಿದುಬಂದಿದೆ. ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಲಿದೆ ಎಂದು ನಯ್ಯರ್ ಹೇಳಿದ್ದಾರೆ.