Attack on Azad: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮೇಲೆ ಗುಂಡಿನ ದಾಳಿ: ಅಪಾಯದಿಂದ ಪಾರು, ನಾಲ್ವರು ವಶಕ್ಕೆ
Jun 29, 2023 11:21 AM IST
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಅಪಾಯದಿಂದ ಪಾರಾಗಿದ್ದಾರೆ.
- ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ಬುಧವಾರ ಸಂಜೆ ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ಸಹೋದರ ಹಾಗೂ ಇತರೆ ಮೂವರ ಜತೆಗೂಡಿ ಕಾರಿನಲ್ಲಿ ಹೊರಟಿದ್ದರು. ಉತ್ತರಪ್ರದೇಶದ ಸಹರನ್‌ಪುರ ಜಿಲ್ಲೆಯಲ್ಲಿ ಹೊರಟಿದ್ದಾಗ ಕಾರಿನಲ್ಲಿ ಬಂದವರು ಏಕಾಏಕಿ ಗುಂಡಿನ ದಾಳಿ ನಡೆಸಿದರು. ಈ ವೇಳೆ ಆಜಾದ್ ಹೊಟ್ಟೆಯ ಭಾಗಕ್ಕೆ ಗುಂಡೇಟು ತಾಗಿದ್ದು ಗಾಯವಾಗಿದೆ
ಹೊಸದಿಲ್ಲಿ: ದಲಿತ ಮುಖಂಡ ಹಾಗೂ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರಾವಣ್ ಮೇಲೆ ಉತ್ತರಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಘಟನೆ ಸಂಬಂಧ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ಧಾರೆ. ದಾಳಿಗೆ ನಿಖರ ಕಾರಣ ಈವರೆಗೂ ತಿಳಿದುಬಂದಿಲ್ಲ. ದಾಳಿ ಮಾಡಿದವರು ಯಾರು ಎನ್ನುವ ಕುರಿತು ತನಿಖೆ ನಡೆಯುತ್ತಿದೆ.
ಚಂದ್ರಶೇಖರ್ ಆಜಾದ್ ಅವರು ಬುಧವಾರ ಸಂಜೆ ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ಸಹೋದರ ಹಾಗೂ ಇತರೆ ಮೂವರ ಜತೆಗೂಡಿ ಕಾರಿನಲ್ಲಿ ಹೊರಟಿದ್ದರು. ಉತ್ತರಪ್ರದೇಶದ ಸಹರನ್‌ಪುರ ಜಿಲ್ಲೆಯಲ್ಲಿ ಹೊರಟಿದ್ದಾಗ ಕಾರಿನಲ್ಲಿ ಬಂದವರು ಏಕಾಏಕಿ ಗುಂಡಿನ ದಾಳಿ ನಡೆಸಿದರು.
ಈ ವೇಳೆ ಆಜಾದ್ ಹೊಟ್ಟೆಯ ಭಾಗಕ್ಕೆ ಗುಂಡೇಟು ತಾಗಿದ್ದು ಗಾಯವಾಗಿದೆ. ಗುಂಡುಗಳು ಕಾರಿನ ಸೀಟುಗಳ ಮೇಲೆ ಬಿದ್ದಿವೆ. ಇದರಿಂದ ಅಪಾಯದಿಂದ ಆಜಾದ್ ಪಾರಾದರು. ದಾಳಿ ನಡೆಸಿದವರು ಹಿಮ್ಮುಖವಾಗಿ ಚಲಿಸಿಕೊಂಡು ಪರಾರಿಯಾದರು ಎಂದು ಆಜಾದ್ ವಿವರಿಸಿದ್ದಾರೆ.
ಕೂಡಲೇ ಆಜಾದ್ ಅವರನ್ನು ಸಹರನ್‌ಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ. ಈ ಕುರಿತು ತನಿಖೆಯೂ ಚುರುಕುಗೊಂಡಿದೆ. ನಾಲ್ಕರಿಂದ ಐದು ಮಂದಿ ದಾಳಿ ವೇಳೆ ಇದ್ದರು ಎನ್ನುವ ಮಾಹಿತಿ ಇದ್ದು ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಎಸ್ಪಿ ವಿಪಿನ್ ತಾಡಾ ಹಾಗೂ ಎಸ್ಪಿ ಅಭಿಮನ್ಯು ಮಂಗಲಿಕ್ ತಿಳಿಸಿದ್ಧಾರೆ.
ಕಾರಿನಲ್ಲಿ ಹೊರಟಿದ್ದಾಗ ಏಕಾಏಕಿ ದಾಳಿಯಾಗಿದ್ದು ಕಂಡು ಗಾಬರಿಯಾಯಿತು. ಗುಂಡು ಎಡಭಾಗದ ಸೊಂಟಕ್ಕೆ ತಗುಲಿ ಅಪಾಯ ತಪ್ಪಿದೆ. ಯಾರು, ಏಕೆ ದಾಳಿ ಮಾಡಿದರು ಎನ್ನುವುದು ತಿಳಿಯುತ್ತಿಲ್ಲ. ಅಭಿಮಾನಿಗಳು ಶಾಂತಿ ಕಾಪಾಡಬೇಕು ಎಂದು ಚಂದ್ರಶೇಖರ್ ಆಜಾದ್ ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಹಾಡಹಗಲೇ ಹೋರಾಟಗಾರರ ಮೇಲೆ ಗುಂಡು ಹಾರಿಸಿರುವುದನ್ನು ನೋಡಿದರೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸರಿಯಲ್ಲ ಎನ್ನುವುದು ಸಾಬೀತಾಗುತ್ತದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಟೀಕಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಭೀಮ್ ಆರ್ಮಿಯ ಸಾವಿರಾರು ಕಾರ್ಯಕರ್ತರು ಆಸ್ಪತ್ರೆ ಬಳಿ ಜಮಾಯಿಸಿದ್ದರು. ಚಂದ್ರಶೇಖರ್ ಆಜಾದ್ ಅವರ ಜೀವಕ್ಕೆ ಅಪಾಯವಿದ್ದು. ಕೂಡಲೇ ಝಡ್ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ನ್ಯಾಯವಾದಿಯಾಗಿರುವ ಚಂದ್ರಶೇಖರ್ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳ ಮೇಲೆ ಒಂದು ದಶಕದಿಂದ ಹೋರಾಟ ರೂಪಿಸಿಕೊಂಡು ಗಮನ ಸೆಳೆದಿದ್ದಾರೆ.ಸಹರನ್‌ಪುರದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಆಜಾದ್ ರನ್ನು ಬಂಧಿಸಲಾಗಿತ್ತು. ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿ ಮೊಕದ್ದಮೆನ್ನೂ ದಾಖಲಿಸಲಾಗಿತ್ತು.ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ನಾಗರೀಕ ಕಾಯಿದೆ ವಿರೋಧಿಸಿ ದಿಲ್ಲಿಯಲ್ಲಿ ಆಜಾದ್ ಆಯೋಜಿಸಲು ಉದ್ದೇಶಿಸಿದ್ದ ಹೋರಾಟಕ್ಕೂ ಪೊಲೀಸರು ಅನುಮತಿ ನೀಡಿರಲಿಲ್ಲ. ಅವರನ್ನು ಬಂಧಿಸಿ ಇರಿಸಲಾಗಿತ್ತು.
ವಿಭಾಗ