Viral News: 300 ಕೋಟಿ ರೂ, ಆಸ್ತಿಗಾಗಿ 1ಕೋಟಿ ರೂ. ಸುಪಾರಿ ನೀಡಿ ಮಾವನನ್ನೇ ಕೊಲ್ಲಿಸಿದ ಮಹಿಳಾ ಅಧಿಕಾರಿ
Jun 12, 2024 07:54 PM IST
ಕೊಲೆಯಾದ ಪುರುಷೋತ್ತಮ್ ಹಾಗೂ ಬಂಧಿತ ಅರ್ಚನಾ
- Crime News ಹಣ, ಆಸ್ತಿಗಾಗಿ ಜನ ಏನು ಮಾಡಲು ಹೇಸುವುದಿಲ್ಲ ಎನ್ನುವುದಕ್ಕೆ ಮಹಾರಾಷ್ಟ್ರದಲ್ಲಿ ಅಧಿಕಾರಿಯೊಬ್ಬರು ತಮ್ಮ ಮಾವನನ್ನೇ ಕೊಲೆ ಮಾಡಿಸಿರುವ ಪ್ರಕರಣ. ಈಗ ಮಹಿಳಾ ಅಧಿಕಾರಿ ಬಂಧನವಾಗಿದೆ.
ನಾಗಪುರ: ಪತ್ನಿಗೆ ಶಸ್ತ್ರಚಿಕಿತ್ಸೆ ಆಗಿತ್ತು. ಅವರ ಆರೋಗ್ಯ ವಿಚಾರಿಸಿಕೊಂಡು ಮನೆಗೆ ಬರುತ್ತಿದ್ದ ವೃದ್ದರೊಬ್ಬರು ಕಾರು ಅಪಘಾತದಲ್ಲಿ ಮೃತಪಟ್ಟರು. ಮೇಲ್ನೋಟಕ್ಕೆ ಇದೊಂದು ಅಪಘಾತದಂತೆಯೇ ಕಂಡಿತ್ತು. ಆದರೂ ಅನುಮಾನಗೊಂಡ ಪೊಲೀಸರು ಸಿಸಿಟಿವಿ ಫೂಟೇಜ್‌ಗಳನ್ನು ತೆಗೆದು ವೀಕ್ಷಿಸಿದರು. ಆದರೆ ಆಘಾತಕಾರಿ ಮಾಹಿತಿ ಅದರಲ್ಲಿ ಸಿಕ್ಕಿತ್ತು. ಯುವಕರು ಸೇರಿ ವ್ಯಕ್ತಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುವುದು ಅದರಲ್ಲಿ ದಾಖಲಾಗಿತ್ತು.ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಭಾರೀ ಸಂಚು ಬಯಲಾಯಿತು. ಇಡೀ ಪ್ರಕರಣದ ಹಿಂದೆ ಇದ್ದುದು ಹಿರಿಯ ಮಹಿಳಾ ಅಧಿಕಾರಿಯೊಬ್ಬರು. ಇದರ ಹಿಂದೆ ಇದ್ದ ಉದ್ದೇಶ ಆಸ್ತಿ ಲಪಟಾಯಿಸುವುದು. ಅದೂ ಬರೋಬ್ಬರಿ 300 ಕೋಟಿ ರೂ. ಆಸ್ತಿ.
ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಪ್ರಮುಖ ನಗರ ನಾಗಪುರದಲ್ಲಿ. ಕೊಲೆ ಸಂಚಿನ ಪ್ರಕರಣದಲ್ಲಿ ಬಂಧಿತರಾಗಿರುವ ಅಧಿಕಾರಿ ನಾಗಪುರದ ನಗರ ಯೋಜನಾ ಸಹಾಯಕ ನಿರ್ದೇಶಕಿ ಅರ್ಚನಾ ಮನೀಷ್ ಪುಟ್ಟೇವಾರ್( 53). ಕೊಲೆಯಾದವರು ಆಕೆಯ ಪತಿಯ ತಂದೆ ಪುರುಷೋತ್ತಮ್ ಪುತ್ತೇವಾರ್.
ಕಳೆದ ವಾರ ನಾಗಪುರ ನಗರದಲ್ಲಿ ಭೀಕರ ರಸ್ತೆ ಅಪಘಾತ ನಡೆದಿತ್ತು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 82 ವರ್ಷದ ವೃದ್ದರೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರು. ಗುದ್ದಿದ ರಭಸಕ್ಕೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪತ್ನಿ ನೋಡಿಕೊಂಡು ಮನೆಗೆ ಹಿಂದಿರುಗುವಾಗ ಅಪಘಾತ ನಡೆದಿತ್ತು. ನಾಗಪುರ ಸಂಚಾರ ಪೊಲೀಸರು ಅಪಘಾತ ಮೊಕದ್ದಮೆ ದಾಖಲಿಸಿಕೊಂಡಿದ್ದರು.ಅಪಘಾತದ ಶೈಲಿ ನೋಡಿದರೆ ಇದು ಬೇರೆ ಇರಬಹುದು ಎನ್ನುವ ಅನುಮಾನ ಪೊಲೀಸರನ್ನು ಕಾಡಿತ್ತು. ಈ ಹಿನ್ನೆಯಲ್ಲಿ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದಾಗ ಇದು ಅಪಘಾತವಲ್ಲ ಕೊಲೆ ಎನ್ನುವುದು ಖಚಿತವಾಗಿತ್ತು. ಅಪಘಾತವಾದ ಸ್ಥಳ, ವಾಹನ ಬಂದ ಮಾರ್ಗದ ಮಾಹಿತಿಯನ್ನು ಕಲೆ ಹಾಕಿದಾಗ ಮೂವರು ಇದರ ಹಿಂದೆ ಇರುವುದು ಬಯಲಾಗಿತ್ತು. ಆದರೆ ಇದರ ಹಿಂದೆ ಇದ್ದ ಮಾಸ್ಟರ್ ಮೈಂಡ್ ಕೊಲೆಯಾಗಿದ್ದ ಪುರುಷೋತ್ತಮ್ ಅವರ ಸೊಸೆ ಅರ್ಚನಾ ಎನ್ನುವುದು ತನಿಖೆಯಿಂದ ಗೊತ್ತಾಗಿತ್ತು. ಮೊದಲು ಕಾರಿನ ಚಾಲಕ ಬಗಾಡೆ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನೀರಜ್ ನಿಮ್ಜೆ ಹಾಗೂ ಸಚಿನ್ ಧರ್ಮಿಕ್ ಎನ್ನುವವರು ಇದಕ್ಕೆ ಸಾಥ್ ನೀಡಿದ್ದನ್ನು ಬಯಲುಪಡಿಸಿದ್ದ. ಗುದ್ದಿ ಕೊಲೆ ಮಾಡಲು ಕಾರಣವನ್ನು ಹುಡುಕಿದಾಗ ಅವರ ಸೊಸೆ ಅರ್ಚನಾ ಇದರ ಹಿಂದೆ ಇರುವುದು ಬಯಲಾಗಿತ್ತು.
ಅವರನ್ನು ಕೊಲೆ ಮಾಡಲು ಒಂದು ಕೋಟಿ ರೂ. ಸುಪಾರಿ ನೀಡಿದ್ದಾಗಿಯೂ ಬಗಾಡೆ ಬಾಯಿ ಬಿಟ್ಟಿದ್ದ. ಇದಕ್ಕಾಗಿ ಕಾರು ಬಾಡಿಗೆ ಪಡೆದು, ಇಬ್ಬರ ಸಹಾಯವನ್ನೂ ಪಡೆದು ಪುರುಷೋತ್ತಮ್ ಅವರನ್ನು ಗುದ್ದಿ ಸಾಯಿಸಿದ್ದಾಗಿಯೂ ಹೇಳಿದ್ದ. ಆತ ನೀಡಿದ ಮಾಹಿತಿ ಮೇರೆಗೆ ಅರ್ಚನಾ ಪುಟ್ಟೇವಾರ್ ವಶಕ್ಕೆ ವಿಚಾರಣೆ ನಡೆಸಿದಾಗ ಆಸ್ತಿ ವಿಚಾರದಲ್ಲಿ ಮನೆಯಲ್ಲಿ ಜಗಳವಿತ್ತು. ವಯಸ್ಸಾದರೂ ನಮಗೆ ಆಸ್ತಿಯನ್ನು ಮಾವ ನೀಡಿರಲಿಲ್ಲ. ಇದರಿಂದ 300 ಕೋಟಿ ರೂ. ಆಸ್ತಿ ಲಪಟಾಯಿಸಲು ಈ ಸಂಚು ರೂಪಿಸಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಅಧಿಕಾರಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈಗಾಗಲೇ ಎರಡು ಕಾರು, ಆಭರಣ, ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಈಕೆಯ ಪತಿ ಮನೀಷ್ ವೈದ್ಯ. ಆತನಿಗೂ ಈ ಕೊಲೆಯ ಹಿಂದಿರುವ ಉದ್ದೇಶ, ಕೊಲೆ ಸಂಚು ಕೂಡ ಗೊತ್ತಾಗಲಿಲ್ಲ. ಆಕೆ ಇದಕ್ಕೆಲ್ಲಾ ಬಳಸಿಕೊಂಡಿದ್ದು ಪತಿಯ ಕಾರು ಚಾಲಕನಾಗಿದ್ದ ಬಗಾಡೆಯನ್ನು.
ಆಕೆ ನಗರ ಯೋಜನಾ ಸಹಾಯಕ ನಿರ್ದೇಶಕಿಯಾಗಿ ಸರಿಯಾಗಿ ಕೆಲಸ ಕೂಡ ಮಾಡುತ್ತಿರಲಿಲ್ಲ ಎನ್ನುವ ಆರೋಪಗಳಿದ್ದವು. ಹಲವಾರು ದೂರುಗಳು ಹಿರಿಯ ಅಧಿಕಾರಿಗಳಿಗೆ ನೀಡಿದರೂ ಆಕೆಯ ರಾಜಕೀಯ ನಂಟಿನ ಕಾರಣಕ್ಕೆ ಯಾವುದೇ ಕ್ರಮ ಆಗಿರಲಿಲ್ಲ. ಅದರಲ್ಲೂ ಕೆಲವು ಅಕ್ರಮ ಬಡಾವಣೆ ನಿರ್ಮಾಣಕ್ಕೆ ಅರ್ಚನಾ ಸಹಕರಿಸಿದ ಆರೋಪಗಳೂ ಇದ್ದವು. ಈಗ ಆಕೆಯ ಅಕ್ರಮಗಳ ಕುರಿತು ತನಿಖೆಗೂ ಸೂಚನೆಯನ್ನು ನೀಡಲಾಗಿದೆ.