logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral News: ಆಕಾಶದಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲು ತೆರೆಯಲು ಪ್ರಯತ್ನಿಸಿದ ಮಹಿಳೆ, ಆಕೆಗೆ ಹಾಗೆ ಮಾಡಲು ಜೀಸಸ್‌ ಹೇಳಿದ್ದಂತೆ!

Viral News: ಆಕಾಶದಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲು ತೆರೆಯಲು ಪ್ರಯತ್ನಿಸಿದ ಮಹಿಳೆ, ಆಕೆಗೆ ಹಾಗೆ ಮಾಡಲು ಜೀಸಸ್‌ ಹೇಳಿದ್ದಂತೆ!

HT Kannada Desk HT Kannada

Nov 30, 2022 04:38 PM IST

google News

ಸಾಂದರ್ಭಿಕ ಚಿತ್ರ

    • ಅಮೆರಿಕದಲ್ಲಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಏಕೆಂದರೆ, ಆಕೆ 35 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಳಂತೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (Unsplash)

ಅರ್ಕಾನಸ್‌ (ಅಮೆರಿಕ): ಒಮ್ಮೆ ಕಲ್ಪಿಸಿಕೊಳ್ಳಿ. ಆಕಾಶದಲ್ಲಿ ವಿಮಾನ ಹಾರುತ್ತಿದೆ. ನೀವೂ ಆ ವಿಮಾನದೊಳಗೆ ಇದ್ದೀರಿ. ಆ ಸಂದರ್ಭದಲ್ಲಿ ವಿಮಾನದ ಬಾಗಿಲನ್ನು ತೆರೆದರೆ ಏನಾಗಬಹುದು? ಈ ರೀತಿ ಬಾಗಿಲು ತೆರೆಯಲು ಅದು ಬಸ್‌ ಅಲ್ಲ. ಚಲಿಸುವ ಬಸ್‌, ಕಾರಿನ ಬಾಗಿಲು ತೆರೆದರೂ ಅಪಾಯ. ಹೀಗಿದ್ದಾಗ ಆಕಾಶದಲ್ಲಿ ಹಾರುವ ವಿಮಾನದ ಬಾಗಿಲು ತೆರೆದರೆ ಹೇಗಾಗಬಹುದು? ತಮಾಷೆಯಂತೆ ಕಾಣಿಸುವ ಇಂತಹ ಆಘಾತಕಾರಿ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ.

ಅಮೆರಿಕದಲ್ಲಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಏಕೆಂದರೆ, ಆಕೆ 35 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಳಂತೆ. ತಮಾಷೆ ಎಂದುಕೊಳ್ಳಬೇಡಿ. ಆಕೆಯ ಈ ಪ್ರಯತ್ನಕ್ಕೆ ವಿಮಾನದ ಪ್ರಯಾಣಿಕರೆಲ್ಲ ಬೆಚ್ಚಿಬಿದ್ದಿದ್ದು, ವಿಮಾನವನ್ನು ತುರ್ತಾಗಿ ಲ್ಯಾಂಡ್‌ ಮಾಡಲಾಗಿದೆ.

ಈ ಘಟನೆಯ ವಿವರವು ಅಮೆರಿಕದ ಅರ್ಕಾನಸ್‌ನ ಈಸ್ಟರ್ನ್‌ ಡಿಸ್ಟ್ರಿಕ್ಟ್‌ನ ಜಿಲ್ಲಾ ನ್ಯಾಯಾಲಯದ ದಾಖಲೆಗಳಿಂದ ಲಭ್ಯವಾಗಿದೆ. " ವಿಮಾನದ ತುರ್ತು ಲ್ಯಾಂಡಿಂಗ್‌ಗೆ ಕಾರಣವಾದ ಈ ಮಹಿಳೆಯನ್ನು ಬಂಧಿಸಲಾಗಿದೆ. ಜೀಸಸ್‌ ದೇವರು ಹೇಳಿದನೆಂದು ಬಾಗಿಲು ತೆರೆಯಲು ಪ್ರಯತ್ನಿಸಿರುವುದಾಗಿ ಆಕೆ ಹೇಳಿಕೆ ನೀಡಿದ್ದಾಳೆʼ ʼಎಂದು ಕ್ಲಿಕ್‌೨ಹೋಸ್ಟನ್‌ ವರದಿ ಮಾಡಿದೆ.

ಮಹಿಳೆಯು ಹಾರುತ್ತಿದ್ದ ವಿಮಾನದೊಳಗಿನಿಂದ ಬಾಗಿಲು ತೆಗೆಯಲು ಪ್ರಯತ್ನಿಸಿದ ಘಟನೆಯು ಟೆಕ್ಸಾಸ್‌ನಿಂದ ಕೊಲಂಬೊದ ಓಹಿಯೊಗೆ ಪ್ರಯಾಣ ಬೆಳೆಸುತ್ತಿದ್ದ ವಿಮಾನದಲ್ಲಿ ನಡೆದಿತ್ತು. ಅಗ್ಬೆಗ್ನಿನೌ ಎಂಬಾಕೆ ಬಾಗಿಲು ತೆರೆಯಲು ಪ್ರಯತ್ನಿಸಿದಾಗ ವಿಮಾನದ ಅಟೆಂಡೆಂಟ್‌ಗಳು ಅವರನ್ನು ಹಿಂದಕ್ಕೆ ಎಳೆದುಕೊಂಡರು ಮತ್ತು ವಿಮಾನದ ತುರ್ತು ನಿರ್ಗಮನ ತೆರೆಯದಂತೆ ತಡೆದಿದ್ದಾರೆ ಎಂದು ವರದಿ ತಿಳಿಸಿದೆ.

ವಿಮಾನವು 35 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಸಂದರ್ಭದಲ್ಲಿ ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಈಕೆ ಪ್ರಯತ್ನಿಸುವುದನ್ನು ಕಂಡು ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ. ಪ್ರಯಾಣಿಕನೊಬ್ಬ ಆಕೆಯನ್ನು ತಡೆಯಲು ಪ್ರಯತ್ನಿಸಿದಾಗ ಆತನಿಗೆ ಕಚ್ಚಿದ್ದಾಳೆ. ಈ ಸಮಯದಲ್ಲಿ ಆಕೆಯ ದವಡೆಗೆ ಕೈ ಹಾಕಿ ಆತನು ಆಕೆಯ ಬಾಯಿಯಿಂದ ಬಿಡಿಸಿಕೊಳ್ಳಬೇಕಾಯಿತು ಎಂದು ವರದಿ ತಿಳಿಸಿದೆ.

"ಆ ಸಂದರ್ಭದಲ್ಲಿ ಮಹಿಳೆಯು ವಿಮಾನದ ಹಿಂಭಾಗಕ್ಕೆ ತೆರಳಿದರು. ವಿಮಾನದ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದರು. ತಕ್ಷಣ ಫ್ಲೈಟ್‌ ಅಟೆಂಡೆಂಟ್‌ ಅಲ್ಲಿಗೆ ತಲುಪಿದರುʼʼ ಎಂದು ನ್ಯಾಯಾಲಯದ ದಾಖಲೆ ತಿಳಿಸಿದೆ.

ಈ ಸಂದರ್ಭದಲ್ಲಿ ಈಕೆಯು ಇನ್ನೊಬ್ಬ ಫ್ಲೈಟ್‌ ಅಟೆಂಡೆಂಟ್‌ ಬಳಿ "ನಾನು ಕಿಟಿಕಿಯಿಂದ ಹೊರಕ್ಕೆ ನೋಡಬಹುದೇ?ʼʼ ಎಂದು ಕೇಳಿದರು. ಅದಕ್ಕೆ ಅಟೆಂಡೆಂಟ್‌, ಬೇಡ ಎಂದರು. ತಕ್ಷಣ ಈಕೆ ತುರ್ತು ನಿರ್ಗಮನ ಬಾಗಿಲನ್ನು ಎಳೆಯಲು ಆರಂಭಿಸಿದರು. ಈ ಸಂದರ್ಭದಲ್ಲಿ ಪ್ರಯಾಣಿಕರು "ಈಕೆ ತುರ್ತು ನಿರ್ಗಮನ ತೆರೆಯಲು ಪ್ರಯತ್ನಿಸುತ್ತಿದ್ದಾಳೆʼʼ ಎಂದು ಕಿರುಚಿಕೊಂಡರು. ಈ ಸಂದರ್ಭದಲ್ಲಿ ಪ್ರಯಾಣಿಕನೊಬ್ಬ ಆಕೆಯನ್ನು ತಡೆಯಲು ಪ್ರಯತ್ನಿಸಿದಾಗ ಆತನಿಗೆ ಕಚ್ಚಿದಳು ಎಂದು ಕೋರ್ಟ್‌ ದಾಖಲೆಯಲ್ಲಿ ಬರೆಯಲಾಗಿದೆ.

ಬಳಿಕ ಆಕೆ ತನ್ನ ತಲೆಯನ್ನು ವಿಮಾನದ ನೆಲದ ಮೇಲೆ ಹೊಡೆಯಲು ಆರಂಭಿಸಿದಳು. ಜೀಸಸ್‌ ಹೇಳುತ್ತಿದ್ದಾನೆ, ಬಾಗಿಲು ತೆರೆಯಿರಿ ಎಂದು ಆಕೆ ಕಿರುಚುತ್ತಿದ್ದಳು. ಇದರಿಂದ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು ಎಂದು ವರದಿಗಳು ತಿಳಿಸಿವೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ