Mamata Banerjee: ಜಂಟಿ ಹೋರಾಟವೆಂದರೆ ನನಗೆ ಅಲರ್ಜಿ: ಕಾಂಗ್ರೆಸ್ 'ಮಮತೆ'ಯ ಕರೆಯೋಲೆ ಬೇಡ ಎಂದ ಬ್ಯಾನರ್ಜಿ!
Mar 03, 2023 08:37 AM IST
ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ)
- 2024ರ ಲೋಕಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಏಕಾಂಗಿ ಹೋರಾಟ ನಡೆಸಲಿದ್ದು, ಕಾಂಗ್ರೆಸ್, ಸಿಪಿಎಂ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಜನರ ಬೆಂಬಲದೊಂದಿಗೆ ನಾವು ರಾಜ್ಯದ ಎಲ್ಲಾ 42 ಲೋಕಸಭಾ ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದ್ದೇವೆ ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ.
ಕೋಲ್ಕತ್ತಾ:2024ರ ಲೋಕಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಏಕಾಂಗಿ ಹೋರಾಟ ನಡೆಸಲಿದ್ದು, ಕಾಂಗ್ರೆಸ್, ಸಿಪಿಎಂ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ಪಶ್ಚಿಮ ಬಂಗಾಳದ ಸರ್ದಿಘಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದು, ಇದರಿಂದ ಮಮತಾ ಬ್ಯಾನರ್ಜಿ ಅಕ್ಷರಶ: ಕೆಂಡಾಮಂಡಲರಾಗಿದ್ದಾರೆ. ಸಿಪಿಎಂ-ಕಾಂಗ್ರೆಸ್ ನಡುವಿನ ಮೈತ್ರಿಯಿಂದಾಗಿ ಈ ಅನೈತಿಕ ಜಯ ಲಭಿಸಿದ್ದು, ಈ ಎರಡೂ ಪಕ್ಷಗಳು ಬಿಜೆಪಿಯೊಂದಿಗೆ ಅಪವಿತ್ರ ಮಾಡಿಕೊಂಡಿವೆ ಎಂದು ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.
'ತೃಣಮೂಲ ಕಾಂಗ್ರೆಸ್ ಮುಂದಿನ ವರ್ಷದ ರಾಷ್ಟ್ರೀಯ ಚುನಾವಣೆಯಲ್ಲಿ ಜನರ ಬೆಂಬಲದೊಂದಿಗೆ ಏಕಾಂಗಿಯಾಗಿ ಹೋರಾಡಲಿದೆ. ರಾಜ್ಯದ ಎಲ್ಲಾ 42 ಲೋಕಸಭಾ ಸ್ಥಾನಗಳಲ್ಲಿ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ. ಬಿಜೆಪಿಯೊಂದಿಗೆ ಸಿಪಿಎಂ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದ್ದು, ಈ ಪಕ್ಷಗಳು ತಮ್ಮನ್ನು ಬಿಜೆಪಿ ವಿರೋಧಿ ಎಂದು ಕರೆದುಕೊಳ್ಳುವುದನ್ನು ನಿಲ್ಲಿಸಬೇಕು..' ಎಂದು ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
'ಕಾಂಗ್ರೆಸ್, ಎಡಪಕ್ಷಗಳು ಮತ್ತು ಬಿಜೆಪಿ ಸೇರಿ ಸರ್ದಿಘಿಯಲ್ಲಿ ಕೋಮುವಾದದ ದಾಳ ಉರುಳಿಸಿದ್ದಾರೆ. ಬಿಜೆಪಿ ಈ ದಾಳವನ್ನು ಬಹಿರಂಗವಾಗಿ ಉರುಳಿಸಿದರೆ, ಸಿಪಿಎಂ ಮತ್ತು ಕಾಂಗ್ರೆಸ್ ಇದನ್ನು ಅಪರೋಕ್ಷವಾಗಿ ಬಳಸಿಕೊಂಡಿದೆ..' ಎಂದು ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
'ನಾವು ಸಿಪಿಎಂ ಅಥವಾ ಕಾಂಗ್ರೆಸ್ ಮಾತನ್ನು ಕೇಳಬಾರದು. ಬಿಜೆಪಿ ಜೊತೆ ಕೆಲಸ ಮಾಡುವವರೊಂದಿಗೆ ನಾವು ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಈ ಉಪಚುನಾವಣೆ ನಮಗೆ ಪಾಠ ಕಲಿಸಿದೆ..' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
'2024 ರಲ್ಲಿ ನಾವು ತೃಣಮೂಲ ಕಾಂಗ್ರೆಸ್ ಮತ್ತು ಜನರ ನಡುವೆ ಮೈತ್ರಿಯನ್ನು ನೋಡುತ್ತೇವೆ. ನಾವು ಇತರ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸುವುದಿಲ್ಲ. ನಾವು ಜನರ ಬೆಂಬಲದೊಂದಿಗೆ ನಾವು ಏಕಾಂಗಿಯಾಗಿ ಹೋರಾಡುತ್ತೇವೆ..' ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ.
'ಬಿಜೆಪಿಯನ್ನು ಸೋಲಿಸಲು ಬಯಸುವವರು, ಅವರು ನಮಗೆ ಮತ ಹಾಕುತ್ತಾರೆ ಎಂದು ನಾನು ನಂಬುತ್ತೇನೆ. ರಾಜ್ಯದಲ್ಲಿ ಸಿಪಿಎಂ, ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಒಟ್ಟಾಗಿ ಹೋರಾಡಲು ತೃಣಮೂಲ ಕಾಂಗ್ರೆಸ್ ಸಾಕು. ನಾವು ಅದನ್ನು 2021ರ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸಾಬೀತು ಮಾಡಿದ್ದೇವೆ. ಹೀಗಾಗಿ ಟಿಎಂಸಿ ಕಾರ್ಯಕರ್ತರು ಚಿಂತಿಸುವ ಅಗತ್ಯವಿಲ್ಲ'.. ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದ ಮೈತ್ರಿಗೆ ಕರೆಕೊಟ್ಟಿದ್ದ ಮಮತಾ ಬ್ಯಾನರ್ಜಿ, ಇದೀಗ ರಾಜ್ಯದಲ್ಲಿ ಏಕಾಂಗಿ ಹೋರಾಟದ ಘೋಷಣೆ ಮಾಡಿರುವುದು ದೇಶದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ 42 ಸ್ಥಾನಗಳ ಪೈಕಿ ಬಿಜೆಪಿ 18 ಕ್ಷೇತ್ರಗಳಲ್ಲಿ ಜಯಗಳಿಸಿದೆ ಎಂಬುದು ಗಮನಾರ್ಹ.
2021ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಮೂರನೇ ಬಾರಿಗೆ ದೊರೆತ ಜಯ, ಪಕ್ಷವನ್ನು ರಾಜ್ಯದ ಆಚೆಗೂ ವಿಸ್ತರಿಸುವಂತೆ ಅವರನ್ನು ಪ್ರೆರೇಪಿಸಿತು. ಆದರೆ ಅವರ ಈ ಪ್ರಯತ್ನ ಸಕಾರಾತ್ಮಕ ಫಲಿತಾಂಶ ತಂದುಕೊಟಿಲ್ಲ. ಆದರೆ ಗೋವಾ ಮತ್ತು ತ್ರಿಪುರಾದಲ್ಲಿ ಖಾತೆ ತೆರೆಯಲು ವಿಫಲವಾಗಿರುವ ಟಿಎಂಸಿ, ಮೇಘಾಲಯದಲ್ಲಿ ಐದು ಸ್ಥಾನಗಳನ್ನು ಗೆದ್ದಿದೆ.
2021ರಿಂದ ಪ್ರಧಾನಮಂತ್ರಿ ಪಟ್ಟದ ಆಸೆಯನ್ನು ಹೊರಹಾಕುತ್ತಿರುವ ಮಮತಾ ಬ್ಯಾನರ್ಜಿ, ಇದಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ವಿರೋಧಿ ಮಹಾಮೈತ್ರಿಕೂಟ ರಚಿಸುವ ಪ್ರಯತ್ನ ಆರಂಭಿಸಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಕೂಡ ಇದೇ ಆಸೆ ಹೊತ್ತು ಮಹಾಮೈತ್ರಿಕೂಟ ರಚನೆಯ ಕಸರತ್ತು ಆರಂಭಿಸಿದ್ದಾರೆ.