logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Mamata Banerjee: ಅಮಿತ್‌ ಶಾ ಜೊತೆಗಿನ ದೂರವಾಣಿ ಸಂಭಾಷಣೆ ಸಾಬೀತಾದರೆ ರಾಜೀನಾಮೆ: ಮಮತಾ ಬ್ಯಾನರ್ಜಿ ಘೋಷಣೆ

Mamata Banerjee: ಅಮಿತ್‌ ಶಾ ಜೊತೆಗಿನ ದೂರವಾಣಿ ಸಂಭಾಷಣೆ ಸಾಬೀತಾದರೆ ರಾಜೀನಾಮೆ: ಮಮತಾ ಬ್ಯಾನರ್ಜಿ ಘೋಷಣೆ

Nikhil Kulkarni HT Kannada

Apr 19, 2023 10:20 PM IST

google News

ಸಂಗ್ರಹ ಚಿತ್ರ

    • ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟಿಎಂಸಿ ತನ್ನ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿರುವ ಆರೋಪವನ್ನು ಅಲ್ಲಗಳೆದಿದ್ದಾರೆ. ಅಲ್ಲದೇ ಒಂದು ವೇಳೆ ತಾವು ಅಮಿತ್‌ ಶಾ ಅವರಿಗೆ ಕರೆ ಮಾಡಿರುವುದು ಸಾಬೀತಾದರೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (ANI)

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ತೃಣಮೂಲ ಕಾಂಗ್ರೆಸ್(ಟಿಎಂಸಿ) ತನ್ನ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿರುವ ಆರೋಪವನ್ನು ಅಲ್ಲಗಳೆದಿದ್ದಾರೆ. ಅಲ್ಲದೇ ಒಂದು ವೇಳೆ ತಾವು ಅಮಿತ್‌ ಶಾ ಅವರಿಗೆ ಕರೆ ಮಾಡಿರುವುದು ಸಾಬೀತಾದರೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

" ಈ ಆರೋಪದಿಂದ ನನಗೆ ಆಶ್ಚರ್ಯ ಮತ್ತು ಆಘಾತವಾಗಿದೆ. ತೃಣಮೂಲ ಪಕ್ಷದ ರಾಷ್ಟ್ರೀಯ ಪಕ್ಷದ ಸ್ಥಾನಮಾನದ ಬಗ್ಗೆ ನಾನು ಅಮಿತ್ ಶಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿಲ್ಲ. ಹಾಗೊಂದು ವೇಳೆ ನಾನು ಕರೆ ಮಾಡಿರುವುದು ಸಾಬೀತಾದರೆ, ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ.." ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ರಾಷ್ಟೀಯ ಸ್ಥಾನಮಾನದ ಅರ್ಹತೆಯನ್ನು ಪರಿಶೀಲಿಸಿದ ನಂತರ, ಚುನಾವಣಾ ಆಯೋಗವು ತೃಣಮೂಲ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ತೆಗೆದುಹಾಕಿತು. ಈ ಕಾರಣಕ್ಕೆ ಮಮತಾ ಬ್ಯಾನರ್ಜಿ ಅವರು ದೂರವಾಣಿ ಕರೆ ಮಾಡಿ, ಅಮಿತ್‌ ಶಾ ಅವರಲ್ಲಿ ಪಕ್ಷದ ರಾಷ್ಟ್ರೀಯ ಸ್ಥಾನಮಾನ ಮರುಸ್ಥಾಪನೆಗಾಗಿ ಮನವಿ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಈ ಕುರಿತು ಮಾತನಾಡಿದ್ದ ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ, ಮಮತಾ ಬ್ಯಾನರ್ಜಿ ಅವರು ಟಿಎಂಸಿಯ ರಾಷ್ಟ್ರೀಯ ಸ್ಥಾನಮಾನದ ಮರುಸ್ಥಾಪನೆಗಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದರು.

2021ರ ವಿಧಾನಸಭಾ ಚುನಾವಣೆಗೆ ಮೊದಲು ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಸುವೇಂದು ಅಧಿಕಾರಿ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಸುವೇಂದು ಅಧಿಕಾರಿ, ಇದೀಗ ದೀದಿ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗಾಗಿ, ಬಿಜೆಪಿ ವಿರೋಧಿ ರಾಷ್ಟ್ರೀಯ ಮಟ್ಟದ ಮಹಾ ಮೈತ್ರಿಕೂಟ ರಚನೆಯ ಕಸರತ್ತು ನಡೆಸುತ್ತಿರುವ ಮಮತಾ ಬ್ಯಾನರ್ಜಿ, ಇಂತಹ ಆರೋಪಗಳು ಈ ಪ್ರಯತ್ನವನ್ನು ವಿಫಲಗೊಳಿಸುವ ಹುನ್ನಾರ ಎಂದು ಕಿಡಿಕಾರಿದ್ದಾರೆ.

"ಕೆಲವೊಮ್ಮೆ ಮೌನವು ಬಂಗಾರವಾಗಿರುತ್ತದೆ. ವಿರೋಧ ಪಕ್ಷಗಳು ಒಂದೇ ವೇದಿಕೆಯಡಿ ಬರುವುದಿಲ್ಲ ಎಂದು ಯಾರೀ ಭಾವಿಸಬಾರದು. ನಾವೆಲ್ಲರೂ ಅಸ್ತಿತ್ವದಲ್ಲಿದ್ದೇವೆ ಮತ್ತು ಎಲ್ಲರೂ ಪರಸ್ಪರ ಸಂಬಂಧವನ್ನು ನಿರ್ವಹಿಸುತ್ತಿದ್ದೇವೆ. ನಮ್ಮ ಒಗ್ಗಟ್ಟು ಬಲಗೊಂಡಾಗ ಸುಂಟರಗಾಳಿಯ ರೂಪ ತಳೆದು, ಬಿಜೆಪಿಯನ್ನು ನಿರ್ನಾಮಗೊಳಿಸುತ್ತದೆ.." ಎಂದು ಮಮತಾ ಬ್ಯಾನರ್ಜಿ ಮಾರ್ಮಿಕವಾಗಿ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ಸಂಭಾವ್ಯ ಒಗ್ಗಟ್ಟು ಬಿಜೆಪಿಯ ನಿದ್ದೆಗೆಡೆಸಿದೆ. ಇದೇ ಕಾರಣಕ್ಕೆ ಅದು ಟಿಎಂಸಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ. ಇಂತಹ ಆರೋಪಗಳನ್ನು ಮಾಡುವ ಮೂಲಕ, ಪ್ರತಿಪಕ್ಷಗಳ ಒಗ್ಗಟ್ಟನ್ನು ಮುರಿಯಬಹುದು ಎಂದು ಸುವೇಂದು ಅಧಿಕಾರಿ ಭಾವಿಸಿದ್ದರೆ, ಅದು ಅವರ ತಪ್ಪು ಕಲ್ಪನೆ ಎಂದು ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.

ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವುದರ ಕುರಿತಾದ ಸುಪ್ರೀಂಕೋರ್ಟ್ ವಿಚಾರಣೆ ಬಗ್ಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, " ಈ ವಿಷಯ ಸದ್ಯ ನ್ಯಾಯಾಲಯದಲ್ಲಿರುವುದರಿಂದ ನಾನು ಏನನ್ನೂ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಇತರರನ್ನು ಪ್ರೀತಿಸುವ ಜನರನ್ನು ಪ್ರೀತಿಸುತ್ತೇನೆ. ಈ ವಿಷಯ ಸೂಕ್ಷ್ಮವಾಗಿದ್ದು, ಜನರ ಅಭಿಪ್ರಾಯಕ್ಕೆ ನಾವು ತಲೆಬಾಗಬೇಕು. ನಾನು ನ್ಯಾಯಾಲಯದ ಆದೇಶವನ್ನು ಮೊದಲು ಅಧ್ಯಯನ ಮಾಡಿದ ಬಳಿಕವೇ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ ಎಂದು ಮಮತಾ ಬ್ಯಾನರ್ಜಿ ಸೂಚ್ಯವಾಗಿ ತಿಳಿಸಿದ್ದಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ