logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Who On Covid: ಕೋವಿಡ್ ಕಾಲ ಇನ್ನೂ ಮುಗಿದಿಲ್ಲ, ವೈರಸ್‌ ವಿರುದ್ಧ ಹೋರಾಟಕ್ಕೆ ವಿಶ್ವ ಆರೋಗ್ಯ ಸಂಸ್ಥೆ 'ಪಂಚಸೂತ್ರ'

WHO on Covid: ಕೋವಿಡ್ ಕಾಲ ಇನ್ನೂ ಮುಗಿದಿಲ್ಲ, ವೈರಸ್‌ ವಿರುದ್ಧ ಹೋರಾಟಕ್ಕೆ ವಿಶ್ವ ಆರೋಗ್ಯ ಸಂಸ್ಥೆ 'ಪಂಚಸೂತ್ರ'

HT Kannada Desk HT Kannada

Oct 20, 2022 01:51 PM IST

google News

ಕೋವಿಡ್ ಸಾಂಕ್ರಾಮಿಕ ರೋಗದ ಕುರಿತು ವಿಶ್ವ ಆರೋಗ್ಯ ಸಂಸ್ಥೆ

    • ಕೋವಿಡ್ 19 ಸಾಂಕ್ರಾಮಿಕ ಕಾಲ ಅಂತ್ಯವಾಗಿಲ್ಲ. ಅದು ಜಾಗತಿಕ ತುರ್ತುಸ್ಥಿತಿಯಾಗಿ ಉಳಿದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 
ಕೋವಿಡ್ ಸಾಂಕ್ರಾಮಿಕ ರೋಗದ ಕುರಿತು ವಿಶ್ವ ಆರೋಗ್ಯ ಸಂಸ್ಥೆ
ಕೋವಿಡ್ ಸಾಂಕ್ರಾಮಿಕ ರೋಗದ ಕುರಿತು ವಿಶ್ವ ಆರೋಗ್ಯ ಸಂಸ್ಥೆ

ಕೋವಿಡ್‌ ಬಳಿಕ ಒಮಿಕ್ರಾನ್‌ ರೂಪಾಂತರಗಳಿಂದಾಗಿ ಕೊರೊನಾ ಭೀತಿ ಮತ್ತೆ ಹೆಚ್ಚಳವಾಗಿದೆ. ವೈರಸ್‌ ಕುರಿತಾಗಿ ಆರೋಗ್ಯ ಇಲಾಖೆ ಕೂಡಾ ಗಂಭೀರವಾಗಿ ಪರಿಗಣಿಸಿದ್ದು, ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದೆ. ಆ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಕೋವಿಡ್‌ ವಿರುದ್ಧ ಹೋರಾಟ ಮುಂದುವರಿಸುವಂತೆ ಗಂಭೀರ ಸಲಹೆ ನೀಡಿದೆ.

ಕೋವಿಡ್ 19 ಸಾಂಕ್ರಾಮಿಕ ಕಾಲ ಅಂತ್ಯವಾಗಿಲ್ಲ. ಅದು ಜಾಗತಿಕ ತುರ್ತುಸ್ಥಿತಿಯಾಗಿ ಉಳಿದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಡಬ್ಲ್ಯೂಹೆಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸು ಅವರು, “ಈ ಸಾಂಕ್ರಾಮಿಕ ರೋಗವು ನಮ್ಮನ್ನು ಈಗಾಗಲೇ ಆಶ್ಚರ್ಯಗೊಳಿಸಿದೆ. ಅದು ನಮ್ಮನ್ನು ಮತ್ತೊಮ್ಮೆ ಕಾಡಬಹುದು,” ಎಂದು ಹೇಳಿದ್ದಾರೆ.

ಸಾಂಕ್ರಾಮಿಕ ರೋಗ ಅಂತ್ಯದ ಹಂತದಲ್ಲಿದೆ ಎಂದು ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ ಒಂದು ತಿಂಗಳ ಬಳಿಕ, ಪ್ರಪಂಚದ ಕೆಲವು ಭಾಗಗಳಲ್ಲಿ ಹೊಸ ಉಪರೂಪಾಂತರ ವೈರಸ್‌ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ವಿಶ್ವಸಂಸ್ಥೆಯಿಂದ ಈ ಹೇಳಿಕೆ ಬಂದಿದೆ.

ಜಾಗತಿಕ ಆರೋಗ್ಯ ಸಂಸ್ಥೆಯ ಸಮಿತಿಯು ತುರ್ತು ಪರಿಸ್ಥಿತಿಯನ್ನು ಕೊನೆಗೊಳಿಸಲು ಐದು ಆದ್ಯತೆಯ ಕ್ಷೇತ್ರಗಳನ್ನು ಎತ್ತಿ ಹಿಡಿದಿದೆ. ಅದರ ಬಗ್ಗೆ ಹೆಚ್ಚಿನ ಗಮನ ವಹಿಸುವಂತೆ ಸಲಹೆ ನೀಡಿದೆ. ಇದರಲ್ಲಿ ಕೋವಿಡ್‌ನ ರೂಪಾಂತರಗಳನ್ನು ಟ್ರ್ಯಾಕ್‌ ಮಾಡುವುದು, ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಾಮರ್ಥ್ಯದ ಹೆಚ್ಚಳ, ಲಸಿಕಾಕರಣದತ್ತ ಹೆಚ್ಚಿನ ಗಮನ, ಕೈಗೆಟುಕುವ ಚಿಕಿತ್ಸಾ ವಿಧಾನಗಳ ಲಭ್ಯತೆಯನ್ನು ಖಾತ್ರಿಪಡಿಸುವುದು ಮತ್ತು ಜಾಗತಿಕ ಸಾಂಕ್ರಾಮಿಕಕ್ಕೆ ಸನ್ನದ್ಧತೆಯಿಂದ ಇರುವುದು ಸೇರಿವೆ.

"ವಿಶ್ವದ ಕೆಲವು ಭಾಗಗಳಲ್ಲಿ ಸಾಂಕ್ರಾಮಿಕ ರೋಗ ಭೀತಿ ಅಂತ್ಯವಾಗಿದೆ ಎಂಬ ಅಭಿಪ್ರಾಯ ಅಥವಾ ಗ್ರಹಿಕೆ ಸಾರ್ವಜನಿಕರಲ್ಲಿ ಇದ್ದರೂ, ಇದು ಸಾರ್ವಜನಿಕ ಆರೋಗ್ಯ ಕಾಳಜಿಯಾಗಿ ಉಳಿದಿದೆ. ಇದು ವಿಶ್ವದ ಜನಸಂಖ್ಯೆಯ ಆರೋಗ್ಯದ ಮೇಲೆ ಪ್ರತಿಕೂಲ ಮತ್ತು ಗಂಭೀರ ಪರಿಣಾಮ ಬೀರುತ್ತದೆʼ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಇತ್ತ ಭಾರತದಲ್ಲಿ ಗುರುವಾರ 2,141 ಕೋವಿಡ್ ಪ್ರಕರಣಗಳು ವರದಿಯಾಗಿದೆ. ಸದ್ಯ ಒಟ್ಟು ಪ್ರಕರಣ 4,46,36,517ಕ್ಕೆ ತಲುಪಿದೆ. ಆದರೆ ಸಕ್ರಿಯ ಪ್ರಕರಣಗಳು 25,510ಕ್ಕೆ ಇಳಿದಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಒಂದೇ ದಿನದಲ್ಲಿ ಕೋವಿಡ್‌ ಸಂಬಂಧಿತ 20 ಜನರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 5,28,943ಕ್ಕೆ ಏರಿದೆ.

ದೇಶದಲ್ಲಿಯೂ ಹೊಸ ರೂಪಾಂತರ ವೈರಸ್‌ ಪತ್ತೆಯಾಗಿದೆ. ಒಮಿಕ್ರಾನ್ ರೂಪಾಂತರದ ಹೊಸ ಉಪತಳಿಯ ಹೆಸರು XBB. ಇದು ಕೇರಳ ಸೇರಿದಂತೆ ದೇಶದ ಇತರ ಕೆಲವು ಭಾಗಗಳಲ್ಲಿ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ಒಮಿಕ್ರಾನ್-ಬಿಎ.2.3.20 ಮತ್ತು ಬಿಕ್ಯೂ.1 ರೂಪಾಂತರದ ಉಪರೂಪಾಂತರಗಳು ಪತ್ತೆಯಾಗಿವೆ. ಗುಜರಾತ್‌​ನಲ್ಲಿ ಬಿಎಫ್​-7 ರೂಪಾಂತರಿ ಪತ್ತೆಯಾಗಿದೆ.

ಕೊರೊನಾ ಸಾಂಕ್ರಾಮಿಕದ ಸದ್ಯದ ಸ್ಥಿತಿಗತಿ ಕುರಿತು ಕೇಂದ್ರ ಆರೋಗ್ಯ ಸಚಿವ ಡಾ. ಮಾನ್ಸುಖ್ ಮಾಂಡವಿಯಾ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ನಡೆದಿದೆ. ಈ ಸಭೆಯಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ರಾಜೀವ್ ಬಹ್ಲ್, ಎನ್‌ಐಟಿಐ ಆಯೋಗ್ ಸದಸ್ಯ (ಆರೋಗ್ಯ) ವಿಕೆ ಪಾಲ್, ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಅಧ್ಯಕ್ಷ ಎನ್‌ಕೆ ಪಾಲ್ ಮತ್ತು ಇತರರು ಉಪಸ್ಥಿತರಿದ್ದರು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ