NEET Kerala: ವಿದ್ಯಾರ್ಥಿನಿಗೆ ಒಳ ಉಡುಪು ತೆಗೆದು ಪರೀಕ್ಷೆ ಬರೆಯುವಂತೆ ಹೇಳಿದ್ಯಾಕೆ? ಶೇಮ್ ಶೇಮ್ ನೀಟ್!
Jul 18, 2022 08:34 PM IST
ಸಾಂದರ್ಭಿಕ ಚಿತ್ರ (iStockphoto)
- ಕೇರಳದಲ್ಲಿ ಇಂದು ನಡೆದ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ (ನೀಟ್) ಕೆಟ್ಟ ಕಾರಣಕ್ಕಾಗಿ ಸುದ್ದಿಯಾಗಿದೆ. ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಒಳಉಡುಪು ಧರಿಸಿ ಪರೀಕ್ಷೆ ಬರೆಯುವಂತೆ ತಿಳಿಸಿರುವುದಕ್ಕೆ ದೇಶದೆಲ್ಲೆಡೆ "ಶೇಮ್ ಶೇಮ್ ನೀಟ್ʼʼ ಎಂಬ ಆಕ್ರೋಶ ವ್ಯಕ್ತವಾಗಿದೆ.
ತಿರುವನಂತಪುರ: ಕೇರಳದಲ್ಲಿ ಇಂದು ನಡೆದ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ (ನೀಟ್) ಕೆಟ್ಟ ಕಾರಣಕ್ಕಾಗಿ ಸುದ್ದಿಯಾಗಿದೆ. ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಒಳಉಡುಪು ಧರಿಸಿ ಪರೀಕ್ಷೆ ಬರೆಯುವಂತೆ ತಿಳಿಸಿರುವುದಕ್ಕೆ ದೇಶದೆಲ್ಲೆಡೆ "ಶೇಮ್ ಶೇಮ್ ನೀಟ್ʼʼ ಎಂಬ ಆಕ್ರೋಶ ವ್ಯಕ್ತವಾಗಿದೆ.
ನೀಟ್ ಪರೀಕ್ಷೆಯನ್ನು ಪ್ರತಿಬಾರಿಯೂ ಕಟ್ಟುನಿಟ್ಟಾಗಿ ನಡೆಸುವುದು ಸಾಮಾನ್ಯ. ವಿದ್ಯಾರ್ಥಿಗಳ ವಾಚ್, ಆಭರಣ ಇತ್ಯಾದಿಗಳನ್ನು ತೆಗೆದಿರಿಸುವಂತೆ ಹೇಳಲಾಗುತ್ತದೆ. ಇದರೊಂದಿಗೆ ಉದ್ಯ ಕೈ ಶರ್ಟ್ ಇತ್ಯಾದಿಗಳಿಗೂ ನಿರ್ಬಂಧ ಇರುತ್ತದೆ. ಆದರೆ, ಈ ಬಾರಿ ಕೇರಳದಲ್ಲಿ ನೀಟ್ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯ ಒಳಉಡುಪನ್ನೇ ತೆಗೆದು ಪರೀಕ್ಷೆ ಬರೆಯುವಂತೆ ತಿಳಿಸಲಾಗಿದೆ.
ಎನ್‌ಟಿಎ ನಡೆಸುವ ನೀಟ್ ಪರೀಕ್ಷೆಗೆ ಕೇರಳದಲ್ಲಿ ಇಂದು ಹಲವು ಸಾವಿರ ವಿದ್ಯಾರ್ಥಿಗಳು ಹಾಜರಿದ್ದರು. ಆ ಸಮಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕಟ್ಟುನಿಟ್ಟಾದ ಪರಿಶೀಲನಾ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಸ್ಕ್ರೀನಿಂಗ್ ಮಾಡುವ ಸಮಯದಲ್ಲಿ ಒಳಉಡುಪಿನಲ್ಲಿ ಮೆಟಲ್ ಡಿಟೆಕ್ಟ್ ಆಗಿದೆ.
"ನಾವು ಹನ್ನೆರಡು ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಹೋದೆವು. ಆ ಸಂದರ್ಭದಲ್ಲಿ ಪರಿಶೀಲನೆ ನಡೆಸುವ ಸ್ಥಳಕ್ಕೆ ತೆರಳಿದೆವು. ಅಲ್ಲಿ ಮೆಟಲ್ ಡಿಟೆಕ್ಟರ್ ಇತ್ತು. ಈಕೆಯನ್ನು ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಬೀಪ್ ಎಂದು ಮೆಟಲ್ ಡಿಟೆಕ್ಟರ್ ಸದ್ದು ಮಾಡಿತ್ತುʼʼ ಎಂದು ಘಟನೆಯ ಕುರಿತು ವಿದ್ಯಾರ್ಥಿನಿಯ ಪೋಷಕರು ವಿವರಿಸಿದ್ದಾರೆ.
"ನಿಮ್ಮ ಒಳ ಉಡುಪಿನಲ್ಲಿ ಲೋಹ ಇದೆ. ಅದನ್ನು ತೆಗೆದು ಪರೀಕ್ಷೆ ಬರೆಯಲು ತೆರಳುವಂತೆ ಅಲ್ಲಿದ್ದವರು ತಿಳಿಸಿದರು. ಈ ಸಂದರ್ಭದಲ್ಲಿ ಅಂತಹ ಯಾವುದೇ ವಸ್ತು ಒಳ ಉಡುಪಿನಲ್ಲಿ ಇಲ್ಲ ಎಂದು ನನ್ನ ಮಗಳು ವಾದಿಸಿದಳು. ಒಳ ಉಡುಪು ತೆಗೆದು ಪರೀಕ್ಷೆ ಬರೆಯುವುದು ಅವಳಿಗೆ ಮಾನಸಿಕ ಹಿಂಸೆಯ ಸಂಗತಿʼʼ ಎಂದು ಅವರು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.
ಇದರಿಂದ ಅನುಮಾನಗೊಂಡ ಅಧಿಕಾರಿಗಳು ಒಳಉಡುಪು ತೆಗೆದು ಪರೀಕ್ಷೆ ಬರೆಯುವಂತೆ ತಿಳಿಸಿದ್ದಾರೆ. ಒಳಉಡುಪು ತೆಗೆದ ಬಳಿಕವಷ್ಟೇ ಪರೀಕ್ಷೆ ಬರೆಯಲು ಆ ವಿದ್ಯಾರ್ಥಿನಿಗೆ ಅನುಮತಿ ನೀಡಲಾಗಿದೆ ಎಂದು ಎಲ್ಲೆಡೆ ಸುದ್ದಿಯಾಗಿದೆ.
ವಿದ್ಯಾರ್ಥಿನಿಗೆ ಆದ ಅಪಮಾನಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ವಿದ್ಯಾರ್ಥಿನಿಯ ಪೋಷಕರು ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆಯಿಂದ ವಿದ್ಯಾರ್ಥಿನಿ ಗಲಿಬಿಲಿಗೊಂಡಿದ್ದು, ಮಾನಸಿಕ ಒತ್ತಡಕ್ಕೆ ಈಡಾಗಿದ್ದಾರೆ ಎನ್ನಲಾಗಿದೆ.
ನೀಟ್ ಪರೀಕ್ಷೆ ಸಂದರ್ಭ ನಡೆದ ಈ ಘಟನೆಯು ರಾಜಕೀಯ ಕೆಸರಾಟಕ್ಕೂ ಕಾರಣವಾಗಿದೆ. ಕೆಲವೊಂದು ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿ ಈ ಶೇಮ್ ಶೇಮ್ ಘಟನೆಯನ್ನು ಖಂಡಿಸಿವೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ. ಈ ಘಟನೆ ಕುರಿತು ಮಾನವ ಹಕ್ಕುಗಳ ಕಾರ್ಯಕರ್ತರೂ ಧ್ವನಿ ಎತ್ತಿದ್ದಾರೆ.