Rishi Sunak Speech: ಭವಿಷ್ಯದ ಪೀಳಿಗೆಗೆ ಸಾಲ ಉಳಿಸುವುದಿಲ್ಲ: 'ಆಂಗ್ಲೋದ್ಧಾರಕ' ರಿಷಿ ಸುನಕ್ ಭರವಸೆ
Oct 25, 2022 05:56 PM IST
ಕಿಂಗ್ ಚಾರ್ಲ್ಸ್ ಮತ್ತು ರಿಷಿ ಸುನಕ್
- ನನ್ನ ನೇತೃತ್ವದ ಸರ್ಕಾರ ಬ್ರಿಟನ್‌ನ ಭವಿಷ್ಯದ ಪೀಳಿಗೆಗೆ ಯಾವುದೇ ರೀತಿಯ ಸಾಲವನ್ನು ಉಳಿಸುವುದಿಲ್ಲ ಎಂದು ಭರವಸೆ ನೀಡಿರುವ ನೂತನ ಪ್ರಧಾನಮಂತ್ರಿ ರಿಷಿ ಸುನಕ್, ನಿಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ಋಣಭಾರದಲ್ಲಿ ನಲುಗುವುದಿಲ್ಲ ಎಂದು ಬ್ರಿಟನ್ ಜನರಿಗೆ ಭರವಸೆ ನೀಡಿದರು. ಭಾರತೀಯ ಮೂಲದ ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಅವರ ಮೊದಲ ಭಾಷಣದ ಪೂರ್ಣ ಪಠ್ಯ ಇಲ್ಲಿದೆ.
ಲಂಡನ್: ಬ್ರಿಟನ್‌ನ ನೂತನ ಪ್ರಧಾನಮಂತ್ರಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ಭಾರತವನ್ನು ಶತಮಾನಗಳ ಕಾಲ ಆಳಿದ ಬ್ರಿಟಿಷರನ್ನು ಆಳುವ ಅಪರೂಪದಲ್ಲೇ ಅಪರೂಪದ ಅವಕಾಶವನ್ನು ರಿಷಿ ಸುನಕ್ ಪಡೆದುಕೊಂಡಿದ್ದಾರೆ. ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ತಮ್ಮನ್ನು ಭೇಟಿಯಾದ ರಿಷಿ ಸುನಕ್ ಅವರಿಗೆ, ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವಂತೆ ಕಿಂಗ್ ಚಾರ್ಲ್ಸ್III ಆದೇಶ ನೀಡಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಬಕಿಂಗ್‌ಹ್ಯಾಮ್ ಅರಮನೆಯಿಂದ ನೇರವಾಗಿ ಬ್ರಿಟನ್ ಪ್ರಧಾನಿ ಕಚೇರಿ 10 ಡೌನಿಂಗ್ ಸ್ಟ್ರೀಟ್‌ಗೆ ಆಗಮಿಸಿದ ರಿಷಿ ಸುನಕ್, ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಹಲವು ವಿಷಯಗಳತ್ತ ತಮ್ಮ ಗಮನ ಕೇಂದ್ರೀಕರಿಸಿದ ರಿಷಿ ಸುನಕ್, ಪ್ರಮುಖವಾಗಿ ದೇಶವನ್ನು ಆರ್ಥಿಕ ಹಿಂಜರಿಕೆಯಿಂದ ಮೇಲೆತ್ತಲು ತಮ್ಮ ಸರ್ಕಾರ ಕೈಗೊಳ್ಳುಲಿರುವ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ನನ್ನ ನೇತೃತ್ವದ ಸರ್ಕಾರ ಬ್ರಿಟನ್‌ನ ಭವಿಷ್ಯದ ಪೀಳಿಗೆಗೆ ಯಾವುದೇ ರೀತಿಯ ಸಾಲವನ್ನು ಉಳಿಸುವುದಿಲ್ಲ ಎಂದು ಭರವಸೆ ನೀಡಿರುವ ರಿಷಿ ಸುನಕ್, ನಿಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ಋಣಭಾರದಲ್ಲಿ ನಲುಗುವುದಿಲ್ಲ ಎಂದು ಬ್ರಿಟನ್ ಜನರಿಗೆ ಭರವಸೆ ನೀಡಿದರು. ನಾವು ಈಗ ಎದುರಿಸುತ್ತಿರುವ ಸವಾಲುಗಳನ್ನು ನಮ್ಮ ಭವಿಷ್ಯದ ಪೀಳಿಗೆ ಎದುರಿಸುವುದಿಲ್ಲ ಎಂದು ರಿಷಿ ಸುನಕ್ ಘೋಷಿಸಿದರು.
ಆರ್ಥಿಕ ಸ್ಥಿರತೆಯೇ ನನ್ನ ಸರ್ಕಾರದ ಪ್ರಮುಖ ಕಾರ್ಯಸೂಚಿಯಾಗಿರಲಿದೆ. ಆದರೆ ಆರ್ಥಿಕ ಸ್ಥಿರತೆ ಸಾಧಿಸಲು ನಾವು ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವೂ ಆಗಿರಲಿದೆ ಎಂದು ರಿಷಿ ಸುನಕ್ ಸೂಚ್ಯವಾಗಿ ಹೇಳಿದರು. ಕೆಲವು ಇತಿಮಿತಿಗಳ ಒಳಗೆ ನಾವು ಕಾರ್ಯ ಮಾಡಬೇಕಿದ್ದು, ಆರ್ಥಿಕ ಸ್ಥಿರತೆಯನ್ನು ಸಾಧಿಸಲು ನನಗೆ ಬ್ರಿಟಿಷ್ ಜನರ ಸಹಕಾರ ದೊರೆಯಲಿದೆ ಎಂಬ ವಿಶ್ವಾಸ ಇರುವುದಾಗಿ ರಿಷಿ ಸುನಕ್ ಹೇಳಿದರು.
ಈ ಹಿಂದಿನ ಲಿಜ್ ಟ್ರಸ್ ನೇತೃತ್ವದ ಸರ್ಕಾರ ಮಾಡಿದ ತಪ್ಪುಗಳನ್ನು ನಾವು ಮೊದಲು ಸರಿಪಡಿಸಬೇಕಿದೆ. ಇದಕ್ಕೆ ಪ್ರಥಮ ಆದ್ಯತೆ ನೀಡಲಿದ್ದು, ನಾನು ಕೇವಲ ಮಾತಿನಿಂದಲ್ಲ ಬದಲಿಗೆ ಕೆಲಸದಿಂದ ಇಡೀ ದೇಶವನ್ನು ಒಗ್ಗೂಡಿಸುತ್ತೇನೆ ಎಂದು ರಿಷಿ ಸುನಕ್ ಭರವಸೆ ನೀಡಿದರು. ನನ್ನ ಸರ್ಕಾರ ಸಮಗ್ರತೆ, ವೃತ್ತಿಪರತೆ ಮತ್ತು ಪ್ರತಿ ಹಂತದಲ್ಲೂ ಹೊಣೆಗಾರಿಕೆಯನ್ನು ಪ್ರದರ್ಶಿಸಲಿದೆ ಎಂದೂ ರಿಷಿ ಸುನಕ್ ನುಡಿದರು.
ಇದೇ ವೇಳೆ ಪ್ರಧಾನಿ ಪಟ್ಟಕ್ಕಾಗಿ ನಡೆಯಬೇಕಿದ್ದ ಕನ್ಸರ್ವೇಟಿವ್ ಪಕ್ಷದ ಆಂತರಿಕ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೂ ಧನ್ಯವಾದ ಅರ್ಪಿಸಿದ ರಿಷಿ ಸುನಕ್, ಸ್ಪರ್ಧೆಯಿಂದ ಹಿಂದೆ ಸರಿದು ನನ್ನ ಆಯ್ಕೆಯನ್ನು ಮತ್ತಷ್ಟು ಸುಲಭಗೊಳಿಸಿದ ಬೋರಿಸ್ ಜಾನ್ಸನ್ ಅಭಿನಂದನೆಗೆ ಅರ್ಹರು ಎಂದು ಹೇಳಿದರು.
ದೇಶದ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ನಾನು ಮಾಜಿ ಪ್ರಧಾನಿಗಳಾದ ಲಿಜ್ ಟ್ರಸ್, ಬೋರಿಸ್ ಜಾನ್ಸನ್ ಸೇರಿದಂತೆ ಎಲ್ಲರ ಸಹಕಾರ ಕೋರುತ್ತೇನೆ. ವಿಪಕ್ಷಗಳು ಕೂಡ ನನಗೆ ಅಗತ್ಯ ನೆರವು ನೀಡುವ ಭರವಸೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಬ್ರಿಟನ್ ಜನರ ಸಹಕಾರದ ಅವಶ್ಯಕತೆ ಇದೆ ಎಂದು ರಿಷಿ ಸುನಕ್ ಹೇಳಿದರು.
ಒಟ್ಟಿನಲ್ಲಿ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಇತಿಹಾಸ ಸೃಷ್ಟಿಸಿರುವ ಭಾರತೀಯ ಮೂಲದ ರಿಷಿ ಸುನಕ್, ಬ್ರಿಟನ್ ಆರ್ಥಿಕತೆ ಸುಧಾರಣೆಗಾಗಿ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಮುನ್ಸೂಚನೆ ನೀಡಿರುವುದು ಗಮನ ಸೆಳೆದಿದೆ. ರಿಷಿ ಸುನಕ್, ಭಾರತದ ಹೆಮ್ಮೆಯ ಸಂಸ್ಥೆ ಇನ್ಫೋಸಿಸ್ ಸಂಸ್ಥಾಪಕ ಮುಖ್ಯಸ್ಥ ನಾರಾಯಣಮೂರ್ತಿ ಅವರ ಅಳಿಯ ಎಂಬುದು ವಿಶೇಷ.