Crime News: ಮೆಟಾವರ್ಸ್ ಗೇಮ್‌ನಲ್ಲಿ 16 ವರ್ಷ ಬಾಲಕಿಯ ಅವತಾರ್ ಮೇಲೆ ಸಾಮೂಹಿಕ ಅತ್ಯಾಚಾರ; ಬ್ರಿಟನ್ ಪೊಲೀಸರಿಂದ ತನಿಖೆ
Jan 04, 2024 09:29 AM IST
ವರ್ಚುವಲ್ ರಿಯಾಲಿಟಿ ಜಗತ್ತಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಬ್ರಿಟಿಷ್ ಪೊಲೀಸರು ನಡೆಸುತ್ತಿದ್ದಾರೆ. ಈ ರೀತಿ ತನಿಖೆ ಇದೇ ಮೊದಲನೆಯದು ಎಂದು ಹೇಳಲಾಗುತ್ತಿದೆ. (ಸಾಂಕೇತಿಕ ಚಿತ್ರ)
ವರ್ಚುವಲ್ ರಿಯಾಲಿಟಿ ಗೇಮ್‌ನಲ್ಲಿ 16 ವರ್ಷದ ಬಾಲಕಿಯ ಅವತಾರದ ಮೇಲೆ ಸಾಮೂಹಿಕ ಅತ್ಯಾಚಾರವಾಗಿರುವ ಪ್ರಕರಣ ಈಗ ಜಗತ್ತಿನಲ್ಲಿ ಕಳವಳಮೂಡಿಸಿದೆ. ಇಂತಹ ಪ್ರಕರಣಗಳನ್ನು ತಡೆಯಲು ಅಗತ್ಯ ಕಾನೂನುಗಳ ರಚನೆಯ ಅಗತ್ಯದ ವಿಚಾರವೂ ಈಗ ಮುನ್ನೆಲೆಗೆ ಬಂದಿದೆ.
ಮೆಟಾವರ್ಸ್ ಗೇಮ್‌ನಲ್ಲಿ 16 ವರ್ಷದ ಬಾಲಕಿಯ ಅವತಾರ್ ಅಥವಾ ಡಿಜಿಟಲ್ ರೂಪದ ಮೇಲೆ ಆನ್‌ಲೈನ್ ಅಪರಿಚಿತರಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ. ವರ್ಚುವಲ್ ರಿಯಾಲಿಟಿ ಗೇಮ್‌ನಲ್ಲಿ ನಡೆದಿದೆ ಎನ್ನಲಾದ ಈ ಸಾಮೂಹಿಕ ಅತ್ಯಾಚಾರದ ವಿರುದ್ಧ ಕೇಸ್ ದಾಖಲಿಸಿ ಬ್ರಿಟನ್ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಮೆಟಾವರ್ಸ್ ಗೇಮ್‌ನಲ್ಲಿ ಈ ರೀತಿ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. 16 ವರ್ಷದ ಬಾಲಕಿ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್ ಧರಿಸಿ ಮೆಟಾವರ್ಸ್ ಗೇಮ್‌ನಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ, ಪುರುಷರ ಗುಂಪು ಈಕೆಯ ಮೇಲೆ ದಾಳಿ ನಡೆಸಿ ಅತ್ಯಾಚಾರ ಎಸಗಿದೆ. ಬಾಲಕಿಯ ಮೇಲೆ ನೈಜ ಜಗತ್ತಿನಲ್ಲಿ ನೇರವಾಗಿ ಅತ್ಯಾಚಾರ ನಡೆದಿಲ್ಲ. ಆದರೆ ಹೆಡ್‌ಸೆಟ್ ಧರಿಸಿ ಆಟದಲ್ಲಿ ಮಗ್ನಳಾಗಿರುವಾಗ ಅಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣ ಇದು. ಇದರಿಂದಾಗಿ ಬಾಲಕಿ ಭಾವನಾತ್ಮಕವಗಿ ಆಘಾತವನ್ನು ಅನುಭವಿಸಿದ್ದಾಳೆ ಎಂದು ವರದಿ ವಿವರಿಸಿದೆ.
ಆದಾಗ್ಯೂ, ಆ ಬಾಲಕಿಯು ಅತ್ಯಾಚಾರಕ್ಕೆ ಒಳಗಾದ ಸಂದರ್ಭದಲ್ಲಿ ಯಾವ ಆಟ ಆಡುತ್ತಿದ್ದಳು ಎಂಬ ವಿವರವನ್ನು ವರದಿ ತಿಳಿಸಿಲ್ಲ.
ಈ ಕೇಸ್‌ಗೆ ಸಂಬಂಧಿಸಿದ ತನಿಖೆ ಗಮನಿಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದ ಮಾಹಿತಿ ಪ್ರಕಾರ, ಪೊಲೀಸ್ ಇತಿಹಾಸದಲ್ಲಿ ಈ ವರ್ಚುವಲ್ ಸಾಮೂಹಿಕ ಅತ್ಯಾಚಾರ ಪ್ರಕರಣ ಮೊದಲನೇಯದ್ದು ಎಂದು ನಂಬಲಾಗಿದೆ. ಇಂತಹ ಅತ್ಯಾಚಾರ ಪ್ರಕರಣಕ್ಕೆ ಪ್ರತ್ಯೇಕ ಕಾನೂನು ರಚನೆಯಾಗಿಲ್ಲ. ಹೀಗಾಗಿ ಈ ಕೇಸ್ ಮುನ್ನಡೆಸುವುದು ಬಹಳ ಸವಾಲಿನ ಕೆಲಸ.
ಬ್ರಿಟನ್‌ನಲ್ಲಿ ನೈಜ ಜಗತ್ತಿನಲ್ಲಿ ನಡೆದ ಬಹಳಷ್ಟು ಅತ್ಯಾಚಾರ ಪ್ರಕರಣಗಳ ತನಿಖೆ ಬಾಕಿ ಇದೆ. ಕೆಲವು ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದ್ದರೆ, ಇನ್ನು ಹಲವು ಪೊಲೀಸ್ ತನಿಖೆಯ ಹಂತದಲ್ಲಿವೆ. ಇವುಗಳ ನಡುವೆ ಇನ್ನು ವರ್ಚುವಲ್ ಜಗತ್ತಿನ ಅಪರಾಧ ಪ್ರಕರಣಗಳ ತನಿಖೆಯೂ ಎದುರಾದರೆ ಅದರ ಹೊರೆಯನ್ನು ಹೊರಲು ಪೊಲೀಸ್ ಇಲಾಖೆ ಸಜ್ಜಾಗಬೇಕಷ್ಟೆ ಎಂದು ವರದಿ ವಿವರಿಸಿದೆ.
ಆದಾಗ್ಯೂ, ವರ್ಚುವಲ್ ಜಗತ್ತಿನಲ್ಲಿ ನಡೆದ ಅಪರಾಧ ಪ್ರಕರಣದ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸ್ ಇಲಾಖೆಯ ಕ್ರಮವನ್ನು ಬ್ರಿಟನ್‌ನ ಗೃಹ ಕಾರ್ಯದರ್ಶಿ ಜೇಮ್ಸ್ ಸಮರ್ಥಿಸಿಕೊಂಡಿದ್ದು, ಮಗು ‘ಲೈಂಗಿಕ ಆಘಾತ’ ಅನುಭವಿಸಿದೆ. ಆದ್ದರಿಂದಲೇ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಈ ದುಷ್ಕೃತ್ಯದ ಕುರಿತು ಪ್ರತಿಕ್ರಿಯಿಸಿದ ಮೆಟಾ ವಕ್ತಾರರು, ಆ ರೀತಿಯ ವರ್ತನೆಗೆ ಮೆಟಾವರ್ಸ್ ವೇದಿಕೆಯಲ್ಲಿ ಯಾವುದೇ ಸ್ಥಾನವಿಲ್ಲ. ಅದಕ್ಕಾಗಿಯೇ ಅವರು ಪ್ರತಿ ಬಳಕೆದಾರರಿಗೆ ವೈಯಕ್ತಿಕ ಮಿತಿಯನ್ನು ಸ್ವಯಂಚಾಲಿತವಾಗಿ ಜಾರಿಗೊಳಿಸಲಾಗಿದೆ. ಅದು ಅಪರಿಚಿತರನ್ನು ಬಳಕೆದಾರರಿಂದ ಸುರಕ್ಷಿತ ದೂರದಲ್ಲಿರಿಸುತ್ತದೆ ಎಂದು ಹೇಳಿದ್ದಾರೆ.
ಮೆಟಾ ಕಂಪನಿ ನಡೆಸುತ್ತಿರುವ ವಿಆರ್ ಗೇಮ್ ಹಾರಿಝೋನ್ ವರ್ಲ್ಡ್ಸ್ ನಲ್ಲಿ ಹಲವು ಬಾರಿ ವರ್ಚುವಲ್ ಲೈಂಗಿಕ ಅಪರಾಧಗಳು ವರದಿಯಾಗಿವೆ. ಮೆಟಾ ಎಂಬುದು ಫೇಸ್‌ಬುಕ್‌ನ ಮೂತೃ ಕಂಪನಿಯಾಗಿದೆ.
ಏನಿದು ಮೆಟಾವರ್ಸ್ ಮತ್ತು ಮೆಟಾವರ್ಸ್ ಗೇಮಿಂಗ್
ಮೆಟಾ ಕಂಪನಿಯ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಮೆಟಾವರ್ಸ್ ಎಂಬುದು ಸಾಮಾಜಿಕ ಸಂಪರ್ಕದ ವಿಕಸಿತ ಜಗತ್ತು. ವರ್ಸ್ ಎಂದರೆ ಜಗತ್ತು ಎಂಬರ್ಥದಲ್ಲಿ ಬಳಕೆಯಾಗಿದೆ. ಮೊಬೈಲ್ ಇಂಟರ್ನೆಟ್ ಜಗತ್ತಿನಲ್ಲಿ ಮೆಟಾವರ್ಸ್ ಒಂದು ಅದ್ಭುತ. ಫೇಸ್‌ಬುಕ್‌ನಲ್ಲಿ ಹೇಗೆ ಜಗತ್ತಿನಲ್ಲಿ ಎಲ್ಲೆಲ್ಲೋ ಇರುವವರು ಪರಸ್ಪರ ಪರಿಚಿತರಾಗುತ್ತಾರೋ, ಹಾಗೆಯೇ ನಮ್ಮದೇ ಬೊಂಬೆಗಳನ್ನು ಸೃಷ್ಟಿಸಿಕೊಂಡು ಅದಕ್ಕೊಂದು ಹೆಸರುಕೊಟ್ಟು ಸುತ್ತಾಡುವ ಜಾಗ ಈ ಮೆಟಾವರ್ಸ್.
ಈ ಜಗತ್ತಿನಲ್ಲಿ ನೀವು ಭೌತಿಕವಾಗಿ ಒಂದೇ ಸ್ಥಳದಲ್ಲಿ ಇಲ್ಲದಿರುವಾಗ ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಒಟ್ಟಿಗೆ ಇರುವ ಭಾವನೆಗೆ ನಮ್ಮನ್ನು ಇನ್ನಷ್ಟು ಹತ್ತಿರವಾಗಿಸಲು ಮೆಟಾವರ್ಸ್ ಸ್ವತಃ ನಿಮಗೆ ಸಹಾಯ ಮಾಡುತ್ತದೆ. ಅಲ್ಲಿ ಹೊರ ಜಗತ್ತಿನಲ್ಲಿ ನಡೆಯುವ ಎಲ್ಲ ರೀತಿಯ ವ್ಯವಹಾರಗಳು ನಡೆಯುತ್ತವೆ. ಹಣದ ಬದಲು ಅಲ್ಲಿ ವರ್ಚುವಲ್ ಕರೆನ್ಸಿ (ಬಿಟ್‌ಕಾಯಿ ಇತ್ಯಾದಿ) ಬಳಕೆಯಲ್ಲಿದೆ. ಮೆಟಾವರ್ಸ್ ಹೆಚ್ಚು ಬಳಕೆಯಾಗುತ್ತಿರುವುದು ಫೇಸ್‌ಬುಕ್ ಮಾದರಿಯಲ್ಲೇ ಅಂದರೆ ಮನರಂಜನೆಗಾಗಿ.
ಮೆಟಾವರ್ಸ್ ಎಂಬುದು ಫೇಸ್‌ಬುಕ್ ಕಂಪನಿ ಸೃಷ್ಟಿಸಿದ ಜಗತ್ತು. ಮೈಕ್ರೋಸಾಫ್ಟ್ ಕಂಪನಿ ಔದ್ಯೋಗಿಕ ಬಳಕೆಗಾಗಿ ಟೀಮ್ಸ್‌ನಲ್ಲಿ ಮೆಷ್ ಎಂಬ ಲೋಕವನ್ನು ಸೃಷ್ಟಿಸಿದೆ. ಇದೇ ರೀತಿ ಇನ್ನು ಕೆಲವು ಕಂಪನಿಗಳು ತಮ್ಮದೇ ಆದ ವರ್ಸ್‌ಗಳನ್ನು ಸೃಷ್ಟಿಸಿವೆ.