UK Visa rules: ವಿದೇಶಿ ಕಾರ್ಮಿಕರನ್ನು ಸೆಳೆಯಲು ವೀಸಾ ನಿಯಮ ಸಡಿಲಿಕೆ ಮಾಡಿದ ಇಂಗ್ಲೆಂಡ್, ಫಾರಿನ್ ಜಾಬ್ ಬಯಸುವವರಿಗೆ ಡಿಮ್ಯಾಂಡ್
Jul 18, 2023 10:42 AM IST
UK Visa rules: ವಿದೇಶಿ ಕಾರ್ಮಿಕರನ್ನು ಸೆಳೆಯಲು ವೀಸಾ ನಿಯಮ ಸಡಿಲಿಕೆ ಮಾಡಿದ ಇಂಗ್ಲೆಂಡ್
UK relaxes visa rules: ಇಂಗ್ಲೆಂಡ್ ಇದೀಗ ತನ್ನ ಕೊರತೆ ಕಾರ್ಮಿಕರ ಪಟ್ಟಿಗೆ ನಿರ್ಮಾಣ ವಿಭಾಗದ ಹಲವು ಹುದ್ದೆಗಳನ್ನುshortage occupation listಗೆ ಸೇರ್ಪಡೆ ಮಾಡಿದೆ. ಇದರಿಂದ ಇಂಗ್ಲೆಂಡ್‌ನಲ್ಲಿ ಕೆಲಸ ಮಾಡುವ ಅವಕಾಶ ಇನ್ನಷ್ಟು ವಿದೇಶಿ ಕಾರ್ಮಿಕರಿಗೆ ದೊರಕಲಿದೆ.
ಲಂಡನ್: ಕಟ್ಟಡ ಕೆಲಸ, ನಿರ್ಮಾಣ ಕಾಮಗಾರಿ ಕೆಲಸಗಳಿಗೆ ವಿದೇಶಕ್ಕೆ ಹೋಗಲು ಬಯಸುವ ಭಾರತ ಮತ್ತು ಇತರೆ ದೇಶಗಳ ಕಾರ್ಮಿಕರು ಇಂಗ್ಲೆಂಡ್‌ನತ್ತ ಪ್ರಯಾಣ ಬೆಳೆಸಬಹುದು. ಇಂಗ್ಲೆಂಡ್‌ನಲ್ಲಿ ಕಟ್ಟಡ ಕಾಮಗಾರಿ ಕೆಲಸಗಳಿಗೆ ಉದ್ಯೋಗಿಗಳ ಕೊರತೆ ಉಂಟಾಗಿರುವುದನ್ನು ಸರಿದೂಗಿಸಲು ತನ್ನ ವೀಸಾ ನಿಯಮ ಸಡಿಲಿಕೆ ಮಾಡಿದೆ. "ಕೊರತೆ ಇರುವ ವೃತ್ತಿಗಳ ಪಟ್ಟಿಗೆ" ಹಲವು ಕನ್‌ಸ್ಟ್ರಕ್ಷನ್ ಹುದ್ದೆಗಳನ್ನು ಸೇರ್ಪಡೆ ಮಾಡಿದೆ.
ಬ್ರಿಕ್‌ಲೇಯರ್ಸ್, ಮಸೂನ್‌ಗಳು, ರೂಫರ್‌ಗಳು, ರೂಫ್ ಟೈಲೆರ್ಸ್, ಸ್ಲೇಟರ್ಸ್, ಕಾರ್ಪೆಂಟರ್ಸ್, ಜಾಯಿನರ್ಸ್, ಪ್ಲಾಸ್ಟರರ್ಸ್ ಇತ್ಯಾದಿ ಕಟ್ಟಡ ಕಾರ್ಮಿಕರಿಗೆ ಕಡಿಮೆ ದರದ ವೀಸಾ ಪ್ರಯೋಜನ ದೊರಕಲಿದೆ. ಕಟ್ಟಡ ನಿರ್ಮಾಣ ವಿಭಾಗದಲ್ಲಿ ಈ ವಿಭಾಗದ ಕೆಲಸಗಾರರಿಗೆ ಬೇಡಿಕೆ ಹೆಚ್ಚಾಗಿದ್ದು, ಭಾರತ ಸೇರಿದಂತೆ ವಿವಿಧ ದೇಶಗಳ ಕಾರ್ಮಿಕರಿಗೆ ಅನುಕೂಲವಾಗಲಿದೆ.
ಬ್ರಿಟನ್‌ನಲ್ಲಿ ದೀರ್ಘಕಾಲದಿಂದ ಕೆಲವು ವಲಯದ ಕಾರ್ಮಿಕರ ಕೊರತೆಯಿದೆ. ಇದೇ ಕಾರಣಕ್ಕೆ ವಿದೇಶಿ ಕಾರ್ಮಿಕರನ್ನು ಕಂಪನಿಗಳು ನೇಮಕ ಮಾಡಿಕೊಳ್ಳುತ್ತಿವೆ. ಆದರೆ, ವಿದೇಶಿ ಕಾರ್ಮಿಕರಿಗೆ ಅವಕಾಶ ನೀಡುವುದು ಬ್ರಿಟನ್‌ನ ಪ್ರಧಾನ ಮಂತ್ರಿ ರಿಷಿ ಸುನಕ್‌ಗೆ ತಲೆ ನೋವು ಉಂಟು ಮಾಡಲಿದೆ. ಏಕೆಂದರೆ, ಕಳೆದ ದಶಕಕ್ಕಿಂತ ಈ ದಶಕದಲ್ಲಿ ವಿದೇಶಿ ವಲಸಿಗರನ್ನು ಕಡಿಮೆ ಮಾಡುವುದಾಗಿ ಅವರು ಪ್ರಾಮೀಸ್ ಮಾಡಿದ್ದರು.
ಹೊಸ ಹುದ್ದೆಗಳ ಸೇರ್ಪಡೆಯಿಂದ ರಾಷ್ಟ್ರದ ಪ್ರಮುಖ ಮೂಲಸೌಕರ್ಯ ವ್ಯವಸ್ಥೆಗೆ ಸಹಾಯವಾಗಲಿದೆ. ಸಂಬಂಧಪಟ್ಟ ಕೈಗಾರಿಕೆಗಳ ಬೆಳವಣಿಗೆಯನ್ನು ಇದು ಉತ್ತೇಜಿಸಲಿದೆ ಎಂದು ಬ್ರಿಟನ್ ಸರಕಾರ ಸೋಮವಾರ ತಿಳಿಸಿದೆ.
ನಿರ್ಮಾಣ ವಿಭಾಗದ ಹುದ್ದೆಗಳನ್ನು ಶಾರ್ಟೆಜ್ ಆಕ್ಯಪೇಷನ್ ಲಿಸ್ಟ್‌ಗೆ ಸೇರಿಸಬೇಕೆಂದು ಸ್ವತಂತ್ರ ವಲಸೆ ಸಲಹಾ ಸಮಿತಿಯು ಕಳೆದ ಮಾರ್ಚ್ ತಿಂಗಳಲ್ಲಿ ಶಿಫಾರಸು ಮಾಡಿತ್ತು. ಕೊರತೆ ಉದ್ಯೋಗ ಪಟ್ಟಿಯಲ್ಲಿ ಈಗಾಗಲೇ ಕೇರ್ ವರ್ಕರ್‌ಗಳು, ಸಿವಿಲ್ ಎಂಜಿನಿಯರ್‌ಗಳು, ಲ್ಯಾಬೋರೇಟರಿ ಟೆಕ್ನಿಷಿಯನ್‌ಗಳು ಮತ್ತು ವಿವಿಧ ಆರೋಗ್ಯ ಸೇವಾ ಹುದ್ದೆಗಳು ಇವೆ. ಇದೀಗ ನಿರ್ಮಾಣ ವಿಭಾಗದ ಹಲವು ಹುದ್ದೆಗಳನ್ನು ಸೇರ್ಪಡೆ ಮಾಡಲಾಗಿದೆ.
ಬ್ರಿಟನ್‌ನ ನಿವ್ವಳ ವಲಸೆ ಪ್ರಮಾಣವು ಕಳೆದ ವರ್ಷ 6,06,000ಕ್ಕೆ ತಲುಪಿದೆ. ಇದೇ ಕಾರಣದಿಂದ ವಲಸೆ ಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸುವುದಾಗಿ ಪ್ರಧಾನಿ ಸುನಕ್ ಭರವಸೆ ನೀಡಿದ್ದರು.
ಅಂದಹಾಗೆ ಈ ರೀತಿಯ ಉದ್ಯೋಗಕ್ಕೆ ಬ್ರಿಟನ್‌ಗೆ ಬರುವ ಅಭ್ಯರ್ಥಿಗಳಿಗೆ ಯಾವುದಾದರೂ ಕಂಪನಿಯೊಂದು ಉದ್ಯೋಗದ ಆಫರ್ ನೀಡಿರಬೇಕು. ಇಂಗ್ಲಿಷ್ ಭಾಷಾ ಅಗತ್ಯಗಳನ್ನು ಅಭ್ಯರ್ಥಿಗಳು ಪೂರೈಸಿರಬೇಕು.