Aakash Chopra: 'ಅದು ಪ್ಲೇಆಫ್‌ಗೆ ಅರ್ಹತೆ ಪಡೆಯುವುದಿಲ್ಲ'; ಈ ತಂಡದ ಬಗ್ಗೆ ಚೋಪ್ರಾ ನಿಷ್ಠುರ ಭವಿಷ್ಯ!
Mar 27, 2023 02:19 PM IST
ಆಕಾಶ್ ಚೋಪ್ರಾ
ಡೆಲ್ಲಿಯ ಆಡುವ ಬಳಗದ ಬಗ್ಗೆ ಹೆಚ್ಚು ಪ್ರಭಾವಿತರಾಗದ ಚೋಪ್ರಾ, ಫ್ರಾಂಚೈಸಿ ಪರ ನಿಷ್ಠುರ ಭವಿಷ್ಯ ನುಡಿದರು. ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ವಿಶ್ವದ ಬಹುನಿರೀಕ್ಷಿತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್‌ನ 2023ರ ಆವೃತ್ತಿಯ ಆರಂಭಕ್ಕೆ ಕೆಲವೇ ದಿನಗಳು ಉಳಿದಿವೆ. ಮಾರ್ಚ್ 31ರಂದು ಶ್ರೀಮಂತ ಕ್ರಿಕೆಟ್ ಪ್ರಾರಂಭವಾಗಲಿದ್ದು, ಅಭಿಮಾನಿಗಳು ರೋಮಾಂಚಕ ಕ್ರಿಕೆಟ್ ನೋಡಲು ಸಜ್ಜಾಗುತ್ತಿದ್ದಾರೆ. ಕಳೆದ ಋತುವಿನಲ್ಲಿ, ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಐಪಿಎಲ್‌ಗೆ ಕಾಲಿಟ್ಟ ಮೊದಲ ಪ್ರಯತ್ನದಲ್ಲೇ ಫೈನಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ಸೋಲಿಸಿತ್ತು. ಇದೀಗ ಹಾಲಿ ಚಾಂಪಿಯನ್‌ಗಳು ಐಪಿಎಲ್ 2023ರ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಐಪಿಎಲ್ 2023ರ ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಾ ಬಲಿಷ್ಠವಾಗಿ ಮೈದಾನಕ್ಕಿಳಿಯುವ ಯೋಜನೆ ರೂಪಿಸಿದೆ. ಕಳೆದ ವರ್ಷ ತಂಡವನ್ನು ಮುನ್ನಡೆಸಿದ್ದ ನಾಯಕ ರಿಷಬ್ ಪಂತ್, ಈ ಬಾರಿ ಮೈದಾನಕ್ಕಿಳಿಯುತ್ತಿಲ್ಲ. ಅವರ ಬದಲಿಗೆ ಈ ಬಾರಿ ಡೇವಿಡ್ ವಾರ್ನರ್ ಡೆಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
ಐಪಿಎಲ್‌ನ 2022ರ ಆವೃತ್ತಿಯಲ್ಲಿ ಡೆಲ್ಲಿ ತಂಡವು ಪ್ಲೇಆಫ್ ಪ್ರವೇಶಿಸಲು ವಿಫಲವಾಗಿತ್ತು. ಆಡಿದ 14 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದರಲ್ಲಿ ತಲಾ ಏಳು ಗೆಲುವು ಮತ್ತು ಏಳು ಸೋಲುಗಳು ಸೇರಿವೆ. ಐಪಿಎಲ್ 2023ರ ಹರಾಜಿನ ಸಮಯದಲ್ಲಿ ಫ್ರಾಂಚೈಸಿಯು ಕೆಲ ಬಲಿಷ್ಠ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿತು. 5.50 ಕೋಟಿ ರೂಪಾಯಿಗೆ ಬೌಲರ್ ಮುಖೇಶ್ ಕುಮಾರ್ ಅವರನ್ನು ಬಿಡ್ ಮಾಡಿತು. ಈ ನಡುವೆ ರಿಲೀ ರೊಸ್ಸೌವ್ (ರೂ. 4.60 ಕೋಟಿ), ಮನೀಶ್ ಪಾಂಡೆ (ರೂ. 2.40 ಕೋಟಿ) ಮತ್ತು ಫಿಲ್ ಸಾಲ್ಟ್ (ರೂ. 2 ಕೋಟಿ) ಮೇಲೂ ಹಣ ಸುರಿಯಿತು.
ಪಂದ್ಯಾವಳಿಯ ಆರಂಭಕ್ಕೂ ಮುನ್ನ, ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಡಿಸಿ ತಂಡದ ಆಡುವ ಬಳಗದ ಬಗ್ಗೆ ಮಾತನಾಡಿದರು. ಈ ವೇಳೆ ಪರಿಪೂರ್ಣ ತಂಡ ರಚಿಸಲು ಅವರು ಗೊಂದಲಕ್ಕೊಳಗಾದರು. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, “ದೆಹಲಿಯ ಆಡುವ ಬಳಗ ಹೇಗಿರಬಹುದು? ಡೇವಿಡ್ ವಾರ್ನರ್ ಅವರು ಪೃಥ್ವಿ ಶಾ ಜೊತೆಗೆ ಓಪನಿಂಗ್ ಮಾಡಬಹುದು. ಹೀಗಾಗಿ ಮಿಚೆಲ್ ಮಾರ್ಷ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಬಹುದು ಎಂದು ಅವರು ಹೇಳಿದ್ದಾರೆ.
ಮಧ್ಯಮ ಕ್ರಮಾಂಕವನ್ನು ಆಯ್ಕೆ ಮಾಡುವಾಗ, ಪಂತ್ ಅನುಪಸ್ಥಿತಿಯ ಕಾರಣದಿಂದಾಗಿ ಚೋಪ್ರಾ ಗೊಂದಲಕ್ಕೊಳಗಾದರು. ವಿಕೆಟ್ ಕೀಪರ್ ಆಯ್ಕೆಯ ಬಗ್ಗೆ ಖಚಿತವಾಗಿಲ್ಲದ ಕಾರಣ ತಂಡದ ಮಧ್ಯಮ ಕ್ರಮಾಂಕ ಗೊಂದಲಮಯವಾಗಿದೆ. “ಹಾಗಾದರೆ ನಾಲ್ಕನೇ ಕ್ರಮಾಂಕಲ್ಲಿ ಮನೀಶ್ ಪಾಂಡೆಯನ್ನು ಆಡಿಸಬೇಕು. ಇಲ್ಲಿಯವರೆಗೆ ಕೀಪರ್ ಯಾರೆಂಬುದು ಖಚಿತವಾಗಿಲ್ಲ. ಹೀಗಾಗಿ ರಿಲೀ ರೊಸ್ಸೌವ್ ಅಥವಾ ರೋವ್ಮನ್ ಪೊವೆಲ್ 5ನೇ ಕ್ರಮಾಂಕಕ್ಕೆ ಬರುತ್ತಾರೆ. 6ನೇ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ ಅಥವಾ ಯಾವುದೇ ಇತರ ಕೀಪರ್ ಆಡಬಹುದು. ಕೀಪರ್ ಆಗಿ ಸರ್ಫರಾಜ್ ಖಾನ್ ಆಡುತ್ತಾರೆ ಎಂದು ನನ್ನ ಅಭಿಪ್ರಾಯ. ಆದರೆ ನನಗೆ ಖಚಿತ ಮಾಹಿತಿ ಇಲ್ಲ,” ಎಂದು ಅವರು ಹೇಳಿದರು.
ತಂಡದ ಬೌಲಿಂಗ್ ದಾಳಿಯ ಕುರಿತು ಮಾತನಾಡಿದ ಚೋಪ್ರಾ, ಅಕ್ಷರ್ ಪಟೇಲ್ 7ನೇ ಸ್ಥಾನದಲ್ಲಿದ್ದಾರೆ. ಅವರ ನಂತರ ಕುಲದೀಪ್ ಯಾದವ್ ಇರುತ್ತಾರೆ. ಇರುವ ನಾಲ್ಕು ಬೌಲರ್‌ಗಳಲ್ಲಿ ಮೂವರು ವೇಗಿಗಳು ನಂತರದ ಸ್ಥಾನದಲ್ಲಿರುತ್ತಾರೆ. ಅನ್ರಿಚ್ ನಾರ್ಟ್ಜೆ, ಚೇತನ್ ಸಕರಿಯಾ ಮತ್ತು ಮುಖೇಶ್ ಕುಮಾರ್ ಅಥವಾ ಇಶಾಂತ್ ಶರ್ಮಾರನ್ನು ಕಣಕ್ಕಿಳಿಸಬಹುದು ಎಂದು ಚೋಪ್ರಾ ವಿವರಿಸಿದ್ದಾರೆ.
ಡೆಲ್ಲಿಯ ಆಡುವ ಬಳಗದ ಬಗ್ಗೆ ಹೆಚ್ಚು ಪ್ರಭಾವಿತರಾಗದ ಚೋಪ್ರಾ, ಫ್ರಾಂಚೈಸಿ ಪರ ನಿಷ್ಠುರ ಭವಿಷ್ಯ ನುಡಿದರು. ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. “ಇಲ್ಲಿಯವರೆಗೆ ಕೇವಲ ಮೂರು ತಂಡಗಳು ಟ್ರೋಫಿಯನ್ನು ಎತ್ತಿ ಹಿಡಿದಿಲ್ಲ. ಅದುವೇ ಪಂಜಾಬ್, ಡೆಲ್ಲಿ ಮತ್ತು ಆರ್‌ಸಿಬಿ. ಡೆಲ್ಲಿ ಟ್ರೋಫಿ ಹತ್ತಿರಕ್ಕೆ ಬಂದಿದೆ. ಆದರೆ, ಈ ಬಾರಿ ಟ್ರೋಫಿ ಸಮೀಪಕ್ಕೂ ತಂಡ ಬರುತ್ತದೆ ಎಂದು ನಾನು ಭಾವಿಸುವುದಿಲ್ಲ”, ಅವರು ಹೇಳಿದರು.
ಐಪಿಎಲ್ 2020ರ ಆವೃತ್ತಿಯಲ್ಲಿ ದೆಹಲಿಯು ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.