ಒಲಿಂಪಿಕ್ಸ್ ಸಿದ್ಧತೆ; ಭಾರತದಲ್ಲಿ ಕುಸ್ತಿ ಚಟುವಟಿಕೆ ಪುನರಾರಂಭಿಸಲು ಕ್ರೀಡಾ ಸಚಿವಾಲಯಕ್ಕೆ ಬಜರಂಗ್ ಪುನಿಯಾ ಒತ್ತಾಯ
Dec 30, 2023 06:33 PM IST
ಬಜರಂಗ್ ಪುನಿಯಾ
- Bajrang Punia: ಸಂಜಯ್ ಸಿಂಗ್ ಅವರ ಆಯ್ಕೆಯನ್ನು ವಿರೋಧಿಸಿ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಲು ನಿರ್ಧರಿಸಿರುವ ಬಜರಂಗ್ ಪುನಿಯಾ, ಪ್ಯಾರಿಸ್ ಒಲಿಂಪಿಕ್ಸ್ ಸಿದ್ಧತೆಗೆ ತುರ್ತು ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಕೇವಲ ಏಳು ತಿಂಗಳುಗಳು ಮಾತ್ರ ಬಾಕಿ ಉಳಿದಿವೆ. ಹೀಗಾಗಿ ಭಾರತದಲ್ಲಿ ಕುಸ್ತಿ ಚಟುವಟಿಕೆಗಳನ್ನು ಪುನರಾರಂಭಿಸುವಂತೆ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ (Bajrang Punia) ಕ್ರೀಡಾ ಸಚಿವಾಲಯಕ್ಕೆ ಒತ್ತಾಯಿಸಿದ್ದಾರೆ. ಕ್ರೀಡಾಕ್ಷೇತ್ರದ ಅದ್ದೂರಿ ಚತುರ್ವಾರ್ಷಿಕ ಕೂಟಕ್ಕೆ ನಡೆಸಬೇಕಿರುವ ಸಿದ್ಧತೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪುನಿಯಾ ಎಚ್ಚರಿಸಿದ್ದಾರೆ.
ಪ್ರಸಕ್ತ ವರ್ಷ ಭಾರತದಲ್ಲಿ ಕುಸ್ತಿ ಕ್ಷೇತ್ರವು ವ್ಯಾಪಕ ಸುದ್ದಿಯಲ್ಲಿದೆ. ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆಯಿಂದಾಗಿ, ಕಳೆದ ಹಲವು ತಿಂಗಳುಗಳಿಂದ ಕುಸ್ತಿ ಸಂಬಂಧಿತ ಚಟುವಟಿಕೆಗಳು ಸ್ಥಗಿತಗೊಂಡಿವೆ.
ರಾಷ್ಟ್ರೀಯ U-15 ಮತ್ತು U-20 ಚಾಂಪಿಯನ್‌ಶಿಪ್‌ಗಳನ್ನು ಘೋಷಿಸುವಲ್ಲಿ ನಿಯಮ ಉಲ್ಲಂಘಿಸಿದ ಆರೋಪದಡಿ ಕ್ರೀಡಾ ಸಚಿವಾಲಯವು ಸಂಜಯ್ ಸಿಂಗ್ ನೇತೃತ್ವದ ಡಬ್ಲ್ಯುಎಫ್‌ಐ ಸಮಿತಿಯನ್ನು ಅಮಾನತುಗೊಳಿಸಿತು. ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಚುನಾವಣೆ ನಡೆದರೂ, ಅದರ ಬೆನ್ನಿಗೆ ನಡೆದ ಅಮಾನತು ಪ್ರಕ್ರಿಯೆಯಿಂದಾಗಿ ಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಗಳು ಸಹಜಸ್ಥಿತಿಗೆ ಬಂದಿಲ್ಲ.
ಇದನ್ನೂ ಓದಿ | ಡಬ್ಲ್ಯುಎಫ್‌ಐ ಅಮಾನತು ಮಾಡುವಲ್ಲಿ ಸರ್ಕಾರ ಸೂಕ್ತ ಕಾರ್ಯವಿಧಾನ ಅನುಸರಿಸಿಲ್ಲ; ಸಂಜಯ್ ಸಿಂಗ್
“ಕಳೆದ ಹಲವಾರು ತಿಂಗಳುಗಳಿಂದ ದೇಶದಲ್ಲಿ ಕುಸ್ತಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಆಟಗಾರರನ್ನು ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧಪಡಿಸಲು ಯಾವುದೇ ರಾಷ್ಟ್ರೀಯ ಕೂಟ ಅಥವಾ ಶಿಬಿರಗಳನ್ನು ಆಯೋಜಿಸಲಾಗಿಲ್ಲ,” ಎಂದು ಪುನಿಯಾ ತಮ್ಮ 'ಎಕ್ಸ್' ಖಾತೆಯಲ್ಲಿ ಬರೆದಿದ್ದಾರೆ.
ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿ ಬ್ರಿಜ್ ಭೂಷಣ್ ಅವರ ಆಪ್ತ ಸಂಜಯ್ ಸಿಂಗ್ ಅವರ ಆಯ್ಕೆಗೆ ಪ್ರತಿಭಟಿಸಿ, ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಲು ಪುನಿಯಾ ನಿರ್ಧರಿಸಿದ್ದಾರೆ.
“ಏಳು ತಿಂಗಳಲ್ಲಿ ಒಲಿಂಪಿಕ್ ಕ್ರೀಡಾಕೂಟ ನಡೆಯಲಿದೆ. ಆದರೆ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಳೆದ ನಾಲ್ಕು ಒಲಿಂಪಿಕ್ಸ್ ಆವೃತ್ತಿಗಳಲ್ಲಿ ಕುಸ್ತಿಯಲ್ಲಿ ದೇಶಕ್ಕೆ ಸತತ ಪದಕಗಳು ಬಂದಿವೆ. ಆಟಗಾರರ ಭವಿಷ್ಯವನ್ನು ಉಳಿಸಲು ಸಾಧ್ಯವಾದಷ್ಟು ಬೇಗ ಎಲ್ಲಾ ಕುಸ್ತಿ ಚಟುವಟಿಕೆಗಳನ್ನು ಪ್ರಾರಂಭಿಸಲು ನಾನು ಕ್ರೀಡಾ ಸಚಿವಾಲಯವನ್ನು ವಿನಂತಿಸುತ್ತೇನೆ,” ಎಂದು ಪುನಿಯಾ ನೆನಪಿಸಿದ್ದಾರೆ.
ಇದನ್ನೂ ಓದಿ | ಅಸ್ತಿತ್ವದಲ್ಲಿದ್ದ ನಿಯಮ ನಿರ್ಲಕ್ಷ್ಯ, ಭಾರತೀಯ ಕುಸ್ತಿ ಫೆಡರೇಷನ್ ಅಮಾನತು; ಕ್ರೀಡಾ ಸಚಿವಾಲಯ ಆದೇಶ
ಟೋಕಿಯೊ ಒಲಿಂಪಿಕ್ಸ್‌ನಲ್ಲಿ 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚು ಗೆದ್ದಿರುವ ಅವರು, ಅಧಿಕಾರಿಗಳು ಆಟಗಾರರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮುಂದುವರೆಯಬೇಕು ಎಂದು ಹೇಳಿದ್ದಾರೆ.
ವಿಭಾಗ