ಭಾರತ ಹಾಕಿ ಆಟಗಾರ ವರುಣ್ ಕುಮಾರ್ ಮೇಲೆ ಅತ್ಯಾಚಾರ ಆರೋಪ; ಪೋಕ್ಸೋ ಕಾಯ್ದೆಯಡಿ ಬೆಂಗಳೂರಿನಲ್ಲಿ ಪ್ರಕರಣ ದಾಖಲು
Feb 06, 2024 06:30 PM IST
ಭಾರತ ಹಾಕಿ ಆಟಗಾರ ವರುಣ್ ಕುಮಾರ್ ಮೇಲೆ ಅತ್ಯಾಚಾರ ಆರೋಪ;
- Varun Kumar: ಭಾರತ ಹಾಕಿ ತಂಡದ ಆಟಗಾರ ವರುಣ್ ಕುಮಾರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿಯೊಬ್ಬರು ದೂರು ನೀಡಿದ್ದಾರೆ.
ಭಾರತ ಹಾಕಿ ತಂಡದ ಖ್ಯಾತ ಆಟಗಾರ ವರುಣ್ ಕುಮಾರ್ (Varun Kumar) ಅತ್ಯಾಚಾರ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಆಟಗಾರನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
2021ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ವರುಣ್, ಇತ್ತೀಚೆಗಷ್ಟೇ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿಯಾಗಿ ಬಡ್ತಿ ಪಡೆದಿದ್ದರು. ಹಿಮಾಚಲ ಪ್ರದೇಶದವರಾದ ವರುಣ್, 2017ರಲ್ಲಿ ಭಾರತ ಹಾಕಿ ತಂಡಕ್ಕೆ ಪದಾರ್ಪಣೆ ಮಾಡಿದ್ದರು.
“ಯುವತಿಯಿಂದ ಸ್ವೀಕರಿಸಿದ ದೂರಿನ ಆಧಾರದ ಮೇಲೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸೂಕ್ತ ಸೆಕ್ಷನ್ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರಚೋದನೆ) ಅಡಿಯಲ್ಲಿ ಹಾಕಿ ಆಟಗಾರನ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ” ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ | ಬೆನ್ ಸ್ಟೋಕ್ಸ್ ರನೌಟ್ ಬಳಿಕ ಶ್ರೇಯಸ್ ಅಯ್ಯರ್ ಸನ್ನೆ ಮಾಡಿದ್ದೇಕೆ; ಸೇಡಿನ ಹಿಂದಿನ ಮಾಸ್ಟರ್ ಮೈಂಡ್ ರೋಹಿತ್ ಶರ್ಮಾ
2018ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ವರುಣ್ ಅವರ ಪರಿಚಯವಾಯ್ತು. ತಾನು 17 ವರ್ಷದವಳಿದ್ದಾಗ ಮದುವೆಯಾಗುವುದಾಗಿ ಭರವಸೆ ನೀಡಿದ್ದ ಆಟಗಾರ, ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು 22 ವರ್ಷದ ಯುವತಿ ದೂರು ನೀಡಿದ್ದಾರೆ.
ವರುಣ್ ಅವರು ಬೆಂಗಳೂರಿನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್) ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾಗ ಅವರನ್ನು ಭೇಟಿಯಾದೆ ಎಂದು ಯುವತಿ ಹೇಳಿದ್ದಾಳೆ.
ಇದನ್ನೂ ಓದಿ | ಕ್ರಿಸ್ಟಿಯಾನೊ ರೊನಾಲ್ಡೊ 39ನೇ ಹುಟ್ಟುಹಬ್ಬ; ಪೋರ್ಚುಗಲ್ ಫುಟ್ಬಾಲ್ ದೈತ್ಯನ 5 ವಿಶ್ವದಾಖಲೆಗಳು ಹೀಗಿವೆ
2022 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ತಂಡದಲ್ಲಿದ್ದ ವರುಣ್ ಪರಾರಿಯಾಗಿದ್ದಾರೆ ಎಂಬ ಊಹಾಪೋಹಗಳು ಇದ್ದವು. ಆದರೆ ಈ ವದಂತಿಯನ್ನು ಹಾಕಿ ಇಂಡಿಯಾ ತಳ್ಳಿಹಾಕಿದೆ. “ಅವರು ತಲೆಮರೆಸಿಕೊಂಡಿಲ್ಲ. ಅವರು ತಂಡದೊಂದಿಗೆ ಭುವನೇಶ್ವರದಲ್ಲಿದ್ದಾರೆ,” ಎಂದು ಹಾಕಿ ಇಂಡಿಯಾ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.
ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದ ಸ್ಟ್ಯಾಂಡ್‌ಬೈ ಆಟಗಾರರ ಪಟ್ಟಿಯಲ್ಲಿದ್ದ ವರುಣ್, ಪ್ರಸ್ತುತ ಮುಂಬರುವ ಎಫ್ಐಎಚ್ ಪ್ರೊ ಲೀಗ್‌ಗಾಗಿ ಭುವನೇಶ್ವರದಲ್ಲಿ ರಾಷ್ಟ್ರೀಯ ತಂಡದೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಫೆಬ್ರವರಿ 10ರಂದು ಸ್ಪೇನ್ ತಂಡವನ್ನು ಎದುರಿಸಲಿದೆ.
ಕ್ರೀಡೆ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವಿಭಾಗ