Bike Racing: ಭಾರತೀಯ ರಾಷ್ಟ್ರೀಯ ರ‍್ಯಾಲಿ ಸ್ಪ್ರಿಂಟ್ ಚಾಂಪಿಯನ್‌ಷಿಪ್ ಗೆದ್ದ ಬೆಂಗಳೂರು ಹುಡುಗ; 120 ಬೈಕರ್ಗಳನ್ನ ಹಿಂದಿಕ್ಕಿದ ರಾಜೇಂದ್ರ
Jul 02, 2023 09:15 PM IST
ಬೆಂಗಳೂರಿನ ರಾಜೇಂದ್ರ ರ್ಯಾಲಿ ಸ್ಪ್ರಿಂಟ್ ಚಾಂಪಿಯನ್
- ಎಫ್‌ಎಂಎಸ್‌ಸಿಐ ರೇಸ್ ಐಎನ್‌ಆರ್‌ಎಸ್‌ಸಿ ದಕ್ಷಿಣ ವಲಯ ಸುತ್ತು ಭರ್ಜರಿ ಯಶಸ್ವಿಯಾಗಿದೆ. ಬೆಂಗಳೂರಿನ ರಾಜೇಂದ್ರ ರ್ಯಾಲಿ ಸ್ಪ್ರಿಂಟ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ಬೆಂಗಳೂರು: ಭಾರತದ ಅಗ್ರ ಬೈಕರ್‌ಗಳಲ್ಲಿ ಒಬ್ಬರಾದ ಬೆಂಗಳೂರಿನ ರಾಜೇಂದ್ರ ಆರ್, ಭಾನುವಾರ (ಜುಲೈ 02) ಇಲ್ಲಿ ನಡೆದ ಎಫ್‌ಎಂಎಸ್‌ಸಿಐ ರೇಸ್ ಇಂಡಿಯನ್ ನ್ಯಾಷನಲ್ ರ್ಯಾಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್ (ಐಎನ್‌ಆರ್‌ಎಸ್‌ಸಿ) ದಕ್ಷಿಣ ವಲಯ ಸುತ್ತಿನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಒಟ್ಟು ಭಾರತದ ಅಗ್ರ ಬೈಕರ್‌ಗಳು ಸೇರಿ ದಾಖಲೆಯ 120 ರೇಸರ್‌ಗಳು ಭಾಗವಹಿಸಿದ್ದರು.
550 ಸಿಸಿ ಮುಕ್ತ ವಿಭಾಗದಲ್ಲಿ ರಾಜೇಂದ್ರ ಅತ್ಯುತ್ತಮ ಸಮಯದೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. ಬೆಂಗಳೂರು ನಗರದ ಹೊರವಲಯ ಸರ್ಜಾಪುರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ 10 ಕಿಲೋ ಮೀಟರ್ ದೂರವನ್ನು ಕೇವಲ 7 ನಿಮಿಷ 33.59 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿದರು. ಆ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು.
ರ್ಯಾಲಿಯಿಂಗ್‌ನ ಟಿ20 ಮಾದರಿ ಎಂದೇ ಕರೆಸಿಕೊಳ್ಳುವ ಈ ಸ್ಪ್ರಿಂಟ್ ರೇಸ್‌ನಲ್ಲಿ ಭಾರತದ ಅಗ್ರ ಬೈಕರ್‌ಗಳು ಕಣಕ್ಕಿಳಿಯುವ ಮೂಲಕ ರೇಸನ್ನು ಯಶಸ್ವಿಗೊಳಿಸಿದರು. ಸುಹೇಲ್ ಅಹ್ಮದ್ 3 ಬಾರಿ ಪೋಡಿಯಂ ಮೇಲೆ ಕಾಣಿಸಿಕೊಂಡರು. ಮೊದಲು 550 ಸಿಸಿ ವರೆಗಿನ ವಿಭಾಗದ ‘ಎ’ ಗುಂಪಿನಲ್ಲಿ ಸುಹೇಲ್ ಮೊದಲ ಸ್ಥಾನ ಪಡೆದರು. ಆದರೆ ಆ ಬಳಿಕ ಬುಲೆಟ್ ವಿಭಾಗದಲ್ಲಿ 2ನೇ ಹಾಗೂ 261 ಸಿಸಿ ಯಿಂದ 400 ಸಿಸಿ ವರೆಗಿನ ರೇಸ್‌ನಲ್ಲಿ 3ನೇ ಸ್ಥಾನಕ್ಕೆ ಜಾರಿದರು.
ಈ ಬಗ್ಗೆ ಮಾತನಾಡಿದ ರೇಸ್ ಆಯೋಜಕ ಹಾಗೂ ಪ್ರಚಾರಕ ಮೋಟರ್ ಸ್ಪೋರ್ಟ್ ಐಎನ್‌ಸಿಯ ಜೈದಾಸ್ ಮೆನನ್, ಬಹಳ ಉತ್ಸಾಹದಿಂದ ಕೂಡಿದ್ದ ದಿನವಿದು. ಸುಮಾರು 120 ಬೈಕರ್‌ಗಳು ಸ್ಪರ್ಧಿಸಿದ್ದರು. ರ್ಯಾಲಿ ಸ್ಪ್ರಿಂಟ್ ಪ್ರೇಕ್ಷಕರಿಗೆ ತುಂಬಾ ಮನರಂಜನೆ ಕೊಟ್ಟಿತು. ಅಭಿಮಾನಿಗಳಿಗೆ ಬಹಳ ಹತ್ತಿರದಿಂದ ಭಾರತದ ಅಗ್ರ ರೈಡರ್‌ಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತು’ ಎಂದು ಸಂತಸ ವ್ಯಕ್ತಪಡಿಸಿದರು.
550 ಸಿಸಿ ಓಪನ್ ವಿಭಾಗ ಸೇರಿ ಎರಡು ವಿಭಾಗಗಳಲ್ಲಿ ಸಿನಾನ್ ಫ್ರಾನ್ಸಿಸ್ ಸಹ ಅಮೂಲ್ಯ ಅಂಕಗಳನ್ನು ಕಲೆ ಹಾಕಿದರು. ಮಹಿಳೆಯರ 260 ಸಿಸಿ ವರೆಗಿನ ವಿಭಾಗದಲ್ಲಿ ಯುವ ಹಾಗೂ ಉತ್ಸಾಹಿ ಸ್ಪರ್ಧಿಗಳನ್ನು ಹಿಂದಿಕ್ಕಿ ರಿಹಾನಾ ಪ್ರಶಸ್ತಿಗೆ ಮುತ್ತಿಕ್ಕಿದರು. ರೀಹಾನಾ 8 ನಿಮಿಷ 49.29 ಸೆಕೆಂಡ್‌ಗಳಲ್ಲಿ ರೇಸ್ ಪೂರ್ತಿಗೊಳಿಸುವಲ್ಲಿ ಯಶಸ್ವಿಯಾದರು.
ಫಲಿತಾಂಶಗಳು
- ಮುಕ್ತ ವಿಭಾಗ 550 ಸಿಸಿವರೆಗೂ: 1. ರಾಜೇಂದ್ರ ಆರ್ (07:33.59) 2.ಸ್ಯಾಮುಯಲ್ ಜೇಕಬ್ 3.ಸಿನಾನ್ ಫ್ರಾನ್ಸಿಸ್
- ಗುಂಪು ‘ಎ’ 550 ಸಿಸಿವರೆಗೂ: 1. ಸುಹೇಲ್ ಅಹ್ಮದ್(07:51.57), 2.ಸಿನಾನ್ ಫ್ರಾನ್ಸಿಸ್, 3.ಕೌಸ್ತುಭ ಎಂ.
- ಗುಂಪು ‘ಬಿ’ 261 ಸಿಸಿಯಿಂದ 400 ಸಿಸಿ: 1. ನರೇಶ್ ವಿ.ಎಸ್(08:09.32), 2.ಅಖಂಡ ಪ್ರತಾಪ್ ಸಿಂಗ್, 3.ಸುಹೇಲ್ ಅಹ್ಮದ್
- ಗುಂಪು ‘ಸಿ’ 166 ಸಿಸಿಯಿಂದ 260 ಸಿಸಿ: 1. ಸಚಿನ್ ಡಿ (07:51.61 ), 2. ಯೋಗೇಶ್ ಪಿ., 3.ನಿತ್ಯನ್ ಎಲ್.
- ಶುಂಪು ‘ಡಿ’ 131 ಸಿಸಿಯಿಂದ 165 ಸಿಸಿ: 1.ವರುಣ್ ಕುಮಾರ್(08:12.09), 2. ಅಬ್ರಾರ್ ಪಾಷಾ, 3.ಭರತ್ ಎಲ್.
- ಬುಲೆಟ್ ಕ್ಲಾಸ್: 1.ನರೇಶ್ ವಿ.ಎಸ್.(08:03.35), 2.ಸುಹೇಲ್ ಅಹ್ಮದ್, 3.ಅಸಾದ್ ಖಾನ್
- ಸ್ಕೂಟರ್ ಕ್ಲಾಸ್: 1. ಸುಬ್ರಮಣ್ಯ(08:39.07), 2. ಪಿಂಕೇಶ್ ಥಾಕ್ಕರ್, 3.ಕಾರ್ತಿಕ್ ನಾಯ್ಡು
- ಮಹಿಳೆಯರ ವಿಭಾಗ 260 ಸಿಸಿವರೆಗೂ: 1. ರೀಹಾನಾ(08:49.29), 2.ಸ್ನೇಹಾ ಸಿ.ಸಿ, 3.ಶತಾಬ್ದಿ ಸಮಂತಾ
- ವಲಯ ಸ್ಟಾರ್: 1.ಯೋಗೇಶ್ ಪಿ.(07:53.90), 2.ಸಂಜಯ್ ಸೋಮಶೇಖರ್, 3.ವಿನಯ್ ಪ್ರಸಾದ್
ವಿಭಾಗ