logo
ಕನ್ನಡ ಸುದ್ದಿ  /  ಕ್ರೀಡೆ  /  Praggnanandhaa Profile: ಚದುರಂಗದ ಚತುರ ಈ 18ರ ಪೋರ; ಚೆಸ್ ಲೋಕದ ಧ್ರುವತಾರೆ ಪ್ರಜ್ಞಾನಂದ ನಡೆದು ಬಂದ ಹಾದಿ

Praggnanandhaa Profile: ಚದುರಂಗದ ಚತುರ ಈ 18ರ ಪೋರ; ಚೆಸ್ ಲೋಕದ ಧ್ರುವತಾರೆ ಪ್ರಜ್ಞಾನಂದ ನಡೆದು ಬಂದ ಹಾದಿ

HT Sports Desk HT Kannada

Aug 24, 2023 06:15 AM IST

google News

ವ್ಯಕ್ತಿ ಚಿತ್ರಣ; ಆರ್‌ ಪ್ರಜ್ಞಾನಂದ

    • R Praggnanandhaa Profile: ಅತ್ತ ಜಗತ್ತೇ ಭಾರತದ ಚಂದ್ರಯಾನದ ಯಶಸ್ಸನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದಾಗ, ಭಾರತೀಯರು ಸೇರಿದಂತೆ ಜಗತ್ತಿನ ಕ್ರೀಡಾಭಿಮಾನಿಗಳು 18 ವರ್ಷ ವಯಸ್ಸಿನ ಯುವ ಚೆಸ್‌ ಆಟಗಾರನ ಗೆಲುವಿಗೆ ಕಾಯುತ್ತಿದ್ದರು. ಚೆಸ್‌ ವಿಶ್ವಕಪ್‌ ಗೆಲ್ಲುವ ಫೇವರೆಟ್‌ ಆಟಗಾರ ಭಾರತದ ಪ್ರಜ್ಞಾನಂದನ ಕುರಿತ ವ್ಯಕ್ತಿಚಿತ್ರಣ ಇಲ್ಲಿದೆ ನೋಡಿ.
ವ್ಯಕ್ತಿ ಚಿತ್ರಣ; ಆರ್‌ ಪ್ರಜ್ಞಾನಂದ
ವ್ಯಕ್ತಿ ಚಿತ್ರಣ; ಆರ್‌ ಪ್ರಜ್ಞಾನಂದ

ಹಣೆಗೆ ವಿಭೂತಿ ಹಚ್ಚಿಕೊಂಡು ಪಕ್ಕಾ ಹಳ್ಳಿಯ ಹುಡುಗನಂತೆ ಮುಗ್ಧನಾಗಿ ಕುಳಿತು, ಎದುರುಗಡೆ ಎಂಥಾ ಚತುರನೇ ಚದುರಂಗದಾಟಕ್ಕೆ ಕುಳಿತರೂ ಸೋಲಿಸುವ ಸಾಮರ್ಥ್ಯ ಈ 18ರ ಹುಡುಗನಿಗಿದೆ. ಅರಳು ಹುರಿದಂಗೆ ನಿರರ್ಗಳವಾಗಿ ಇಂಗ್ಲೀಷ್‌ ಮಾತನಾಡಬಲ್ಲ ಈತನ ಸಂವಹನ ಕೌಶಲ ಕೂಡಾ ಎಷ್ಟೋ ಅನುಭವಿ ಕ್ರೀಡಪಟುಗಳಿಗೆ ಮಾದರಿ ಹಾಗೂ ಸ್ಫೂರ್ತಿ. ಸಣ್ಣ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ವೇದಿಕೆ ಮೇಲೆ ಕುಳಿತು ಬಲಿಷ್ಠ ಚೆಸ್‌ ಆಟಗಾರರನ್ನು ಸೋಲಿಸುವ ಈತನ ಚತುರತೆ ಚದುರಂಗದಾಟ ನುರಿತವರಿಗೂ ಮಾದರಿ. ಆತನೇ ಇದೀಗ ಚೆಸ್‌ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಗೆಲ್ಲುವ ಭರವಸೆ ಮೂಡಿಸಿರುವ ಭಾರತದ ಹೆಮ್ಮೆಯ ಯುವ ಆಟಗಾರ ಆರ್‌ ಪ್ರಜ್ಞಾನಂದ (Praggnanandhaa).

ಅಪ್ಪ ಆಟಕ್ಕೆಂದು ತಂದುಕೊಟ್ಟ ಚೆಸ್‌ಬೋರ್ಡ್‌ ಹಿಡಿದು ತನ್ನ ಸಹೋದರಿಯೊಂದಿಗೆ ಮಕ್ಕಳಾದಂತೆ ಚೆಸ್‌ ಆಟವಾಡುತ್ತಾ ಬೆಳೆದ ಹುಡುಗ, ಈಗ ಅದೇ ಚೆಸ್‌ಬೋರ್ಡ್‌ ಮುಂದೆ ಕುಳಿತು ವಿಶ್ವದ ಹಿರಿಯ, ಅನುಭವಿ, ದಿಗ್ಗಜ ಚೆಸ್‌ ಆಟಗಾರರನ್ನು ಆಡಿಸುತ್ತಿದ್ದಾನೆ. 'ಸ್ಪರ್ಧೆ'ಯಲ್ಲಿ ಸೋಲಿಸುವ ಮಟ್ಟಕ್ಕೆ ಬೆಳೆದಿದ್ದಾನೆ ಎಂದರೆ ಸಾಧನೆಯಲ್ಲದೆ ಮತ್ತೇನು? ಅಂದು ಮಕ್ಕಳಾಟವಾಗಿದ್ದ ಚೆಸ್‌, ಪ್ರಜ್ಞಾನಂದನಿಗೆ ಈಗ ಹೆಸರು, ಘನತೆ ಮತ್ತು ಗೌರವವನ್ನು ತಂದುಕೊಡುತ್ತಿದೆ. ಅಷ್ಟೇ ಅಲ್ಲ ಕೈತುಂಬಾ ಸಂಪಾದನೆಯೂ ಸಾಧ್ಯವಾಗುತ್ತಿದೆ. ಆತನ ಚಾಣಾಕ್ಷ ಆಟ ಈಗ ಭಾರತೀಯರಿಗೆ ಕ್ಷಣ ಕ್ಷಣಕ್ಕೂ ರೋಚಕ, ರೋಮಾಂಚಕ ಅನುಭವ ತಂದುಕೊಡುತ್ತಿದೆ. ಈಗಾಗಲೇ ಯುವ ಪ್ರತಿಭೆ ಆರ್ ಪ್ರಜ್ಞಾನಂದ ಚೆಸ್‌ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ವಿಶ್ವ ಚಾಂಪಿಯನ್‌ ವಿಶ್ವನಾಥನ್ ಆನಂದ್ (Viswanathan Anand) ಮಾತ್ರ ಈ ಸಾಧನೆ ಮಾಡಿದ್ದಾರೆ.

ಕಳೆದ ಎರಡು ದಶಕಗಳಲ್ಲಿ ಚೆಸ್ ವಿಶ್ವಕಪ್‌ನ ಫೈನಲ್‌ಗೆ ಲಗ್ಗೆ ಇಟ್ಟ ಮೊದಲ ಭಾರತೀಯ ಪ್ರಜ್ಞಾನಂದ. ಭಾರತ ಚೆಸ್ ರಂಗದಲ್ಲಿ ಅತ್ಯಂತ ಜನಪ್ರಿಯ ಹೆಸರು ವಿಶ್ವನಾಥನ್ ಆನಂದ್. ಆನಂದ್ ಅವರು 2000 ಮತ್ತು 2002ರಲ್ಲಿ ಮೊದಲ ಎರಡು ವಿಶ್ವಕಪ್‌ಗಳನ್ನು ಗೆದ್ದಿದ್ದರು. ಅದಾದ ಬಳಿಕ ಫೈನಲ್‌ ಪ್ರವೇಶಿಸಿದ ಮೊದಲ‌ ಭಾರತೀಯ ಈ ಹುಡುಗ. ಈತನ ಫೈನಲ್‌ ಗೆಲುವಿಗೆ ಭಾರತ ಮಾತ್ರವಲ್ಲದೆ ವಿಶ್ವವೇ ಕಾಯುತ್ತಿದೆ.

ಬೆಳೆಯುವ ಸಿರಿ ಮೊಳಕೆಯಲ್ಲಿ

ಭಾರತವನ್ನು ಚೆಸ್‌ ಆಟದಲ್ಲಿ ಜಾಗತಿಕ ಮಟ್ಟಕ್ಕೆ ಪರಿಚಯಿಸಿದ್ದ ಚೆಸ್‌ ದಿಗ್ಗಜ ವಿಶ್ವನಾಥನ್‌ ಆನಂದ್‌ ಅವರಂತೆಯೇ, ಪ್ರಜ್ಞಾನಂದ ಕೂಡಾ ತಮಿಳುನಾಡಿದ ಹುಡುಗ. 2005ರ ಆಗಸ್ಟ್ 10ರಂದು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಜನಿಸಿದ ಈ ಹುಡುಗ, ಇಂದಿಗೂ ನೋಡೋಕೇ ಪಕ್ಕಾ ಹಳ್ಳಿ ಹುಡುಗನ ಹಾಗೆಯೇ ಕಾಣಿಸುತ್ತಾನೆ. ಇವರದ್ದು ಮಧ್ಯಮ ವರ್ಗದ ಕುಟುಂಬ. ತಾಯಿ ಗೃಹಿಣಿ. ಮಗ ಆಟಕ್ಕೆಂದು ಹೋದಲ್ಲೆಲ್ಲಾ ಬಾಯಿ ತುಂಬಾ ಸಹಜ ನಗುವಿನೊಂದಿಗೆ ತಾಯಿ ಕೂಡಾ ಕಾಣಿಸಿಕೊಳ್ಳುತ್ತಾರೆ. ಮುಗ್ದ ನಗುವಿನ ತಾಯಿಯೊಂದಿಗೆ ಪ್ರಜ್ಞಾನಂದನ ಹಲವು ಫೋಟೋಗಳು ನೆಟ್ಟಿಗರ ಮನಸ್ಸಿಗೆ ಮುದ ನೀಡಿವೆ.

8 ವರ್ಷಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

ಕೇವಲ 10 ವರ್ಷ, 10 ತಿಂಗಳು ಮತ್ತು 19 ದಿನಗಳ ವಯಸ್ಸಿನಲ್ಲೇ ಕಿರಿಯ ಅಂತಾರಾಷ್ಟ್ರೀಯ ಮಾಸ್ಟರ್ ಆದ ಸಾಧನೆ ಪ್ರಜ್ಞಾನಂದನದ್ದು. ಅದಾದ ಎರಡು ವರ್ಷಗಳ ನಂತರ, ಅಂದರೆ 2018ರಲ್ಲಿ ಎರಡನೇ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆಗಿ ಮಿಂಚಿದ್ದು ಚೆನ್ನೈನ ಇದೇ ಹುಡುಗ.

2013ರಲ್ಲಿ ಕೇವಲ 8 ವರ್ಷ ವಯಸ್ಸಿನಲ್ಲಿಯೇ 8 ವರ್ಷದೊಳಗಿನ ವರ್ಲ್ಡ್ ಯೂತ್ ಚೆಸ್ ಚಾಂಪಿಯನ್‌ಶಿಪ್‌ ಪ್ರಶಸ್ತಿಯನ್ನು ಗೆದ್ದ ಪ್ರಜ್ಞಾನಂದ, ಕೇವಲ ಏಳು ವರ್ಷದವರಾಗಿದ್ದಾಗ FIDE ಮಾಸ್ಟರ್ ಸಾಧನೆ ಮಾಡಿದರು. ನಂತರ 2015ರಲ್ಲಿ 10 ವರ್ಷದೊಳಗಿನವರ ಪ್ರಶಸ್ತಿಯನ್ನು ಕೂಡಾ ಗೆದ್ದರು.

ಕಾರ್ಲ್‌ಸೆನ್‌ ಬೆರಗಾಗಿಸಿದ ಚತುರ

ಕಳೆದ ವರ್ಷ ಚೆಸ್‌ ಚಾಂಪಿಯನ್‌ ಕಾರ್ಲ್‌ಸೆನ್ ವಿರುದ್ಧ ರೋಮಾಂಚನಕಾರಿ ಪ್ರದರ್ಶನ ನೀಡಿ ಅವರನ್ನೇ ಬೆರಗಾಗಿಸಿದ್ದರು. ನಾರ್ವೇ ಚೆಸ್ ಗ್ರ್ಯಾಂಡ್‌ಮಾಸ್ಟರ್ ಅನ್ನು ಸತತ ಮೂರು ಬಾರಿ ಸೋಲಿಸಿ ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದರು. ಹೀಗೆ ಒಬ್ಬರಲ್ಲಾ ಇಬ್ಬರಲ್ಲಾ. ಕಪ್ಪು ಬಿಳಿಯ ಚದುರಂಗದ ಮನೆಯಲ್ಲಿ ಎದುರಾಳಿಗೆ ಚೆಕ್‌ ಕೊಡುವುದರಲ್ಲಿ ಈ ಹುಡುಗ ಚತುರ. ಆತನ ಸ್ಮರಣ ಶಕ್ತಿ, ತಂತ್ರಗಾರಿಗೆ, ನಿಖರತೆ ಹಾಗೂ ವೇಗಕ್ಕೆ ಬಲಿಷ್ಠ ಆಟಗಾರರೇ ಮೂಗಿನ ಮೇಲೆ ಬೆರಳಿಡುತ್ತಾರೆ.

ಅದ್ಭುತ ಸ್ಮರಣಶಕ್ತಿ

ಈ ಹಿಂದೊಮ್ಮೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪ್ರಜ್ಞಾನಂದ ಅವರ ಕೋಚ್ ಆರ್‌ಬಿ ರಮೇಶ್, “ಅವನಿಗೆ ಅದ್ಭುತ ಸ್ಮರಣಶಕ್ತಿ ಇದೆ. ಹೀಗಾಗಿ ಹಳೆಯ ಪಂದ್ಯಗಳನ್ನು ಸುಲಭವಾಗಿ ನೆನಪಿಸಿಕೊಳ್ಳುತ್ತಾನೆ. ಅವನು ಮಾಡಿದ ತಪ್ಪುಗಳು ಏನೆಂಬುದು ಅವನಿಗೆ ಹೇಳುವ ಮುನ್ನವೇ ಅರ್ಥಮಾಡಿಕೊಳ್ಳುತ್ತಾನೆ. ಅವನು ತನ್ನ ಆಟಗಳನ್ನು ವಿಶ್ಲೇಷಿಸುವ ವಿಧಾನವು ಅವನ ವಯಸ್ಸನ್ನೂ ಮೀರಿಸುತ್ತದೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಿಂದ ದೂರವಿರುವ ಈ ಚತುರ, ಐದು ಬಾರಿಯ ವಿಶ್ವ ಚಾಂಪಿಯನ್ ಮತ್ತು ಭಾರತದ ಮೊದಲ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರೇ ತನಗೆ ಸ್ಫೂರ್ತಿ ಎಂದು ಹೇಳುತ್ತಾನೆ. ಖ್ಯಾತ ಚೆಸ್ ಆಟಗಾರ್ತಿಯಾಗಿರುವ ವೈಶಾಲಿ ರಮೇಶಬಾಬು ಪ್ರಜ್ಞಾನಂದನ ಅಕ್ಕ. ಈ ಹಿಂದೆ ಅವರು 14 ವರ್ಷದೊಳಗಿನ ಮತ್ತು 12 ವರ್ಷದೊಳಗಿನ ಬಾಲಕಿಯರ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಸಾಧನೆಯನ್ನು ವೈಶಾಲಿ ರಮೇಶಬಾಬು ಮಾಡಿದ್ದಾರೆ ಕಳೆದ ವರ್ಷ ಚೆನ್ನೈನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಈ ಸಹೋದರ-ಸಹೋದರಿ ಜೋಡಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಕಂಚಿನ ಪದಕ ಗೆದ್ದಿದ್ದರು.

ಸದ್ಯ ಗುರುವಾರ ನಡೆಯುತ್ತಿರುವ ಚೆಸ್‌ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಭಾರತದ ಯುವ ಚಿಲುಮೆ ಆರ್ ಪ್ರಜ್ಞಾನಂದ ಟೈ ಬ್ರೇಕರ್‌ನಲ್ಲಿ ಆಡುತ್ತಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ, ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ನಿರ್ಮಾಣವಾಗಲಿದೆ. ಆ ಕ್ಷಣಕಾಗಿ ಭಾರತೀಯರು ಬೆರಗುಗಣ್ಣಿನಿಂದ ಕಾಯುತ್ತಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ