ಚೆಸ್ ವಿಶ್ವಕಪ್ನಲ್ಲಿ ಅಧಿಕ ಪ್ರಶಸ್ತಿ ಗೆದ್ದವರು ಯಾರು; ಭಾರತಕ್ಕೆ ಸಿಕ್ಕಿರುವುದೆಷ್ಟು?
Aug 24, 2023 08:10 PM IST
ಚೆಸ್ ವಿಶ್ವಕಪ್ ವಿಜೇತರ ಪಟ್ಟಿ.
- List of FIDE Chess World Cup Winners (2000-2023): ಪ್ರತಿ ಎರಡು ವರ್ಷಕ್ಕೊಮ್ಮೆ ಜರುಗುವ ಈ ಚೆಸ್ ವಿಶ್ವಕಪ್ನಲ್ಲಿ ಯಾರು? ಯಾವಾಗ? ಪ್ರಶಸ್ತಿ ಗೆದ್ದಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.
ಚೆಸ್ ವಿಶ್ವಕಪ್ (FIDE Chess World Cup) ಟೂರ್ನಿಯುದ್ದಕ್ಕೂ ಚದುರಂಗದ ಸಮರದಲ್ಲಿ ಆರ್ಭಟಿಸಿದ್ದ ಭಾರತದ ಆರ್ ಪ್ರಜ್ಞಾನಂದ (R Praggnanandhaa), ಫೈನಲ್ ಪಂದ್ಯದಲ್ಲಿ ಎಡವಿದರು. ಇದರೊಂದಿಗೆ ಚೆಸ್ ಆಟದಲ್ಲಿ ಹೊಸ ಚರಿತ್ರೆ ಬರೆಯುವ ಅವಕಾಶವನ್ನು ಕಳೆದುಕೊಂಡರು. ಫೈನಲ್ನಲ್ಲಿ ಗೆದ್ದ ವಿಶ್ವದ ನಂಬರ್ 1 ಆಟಗಾರ ನಾರ್ವೆ ದೇಶದ ಮಾಗ್ನಸ್ ಕಾರ್ಲ್ಸನ್ (Magnus Carlsen), ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಚೆಸ್ ವಿಶ್ವಕಪ್ ಫೈನಲ್ನ ಎರಡು ಸುತ್ತುಗಳಲ್ಲಿ ಪ್ರಜ್ಞಾನಂದ ಮತ್ತು ಮ್ಯಾಗ್ನಸ್ ಕಾರ್ಲ್ಸನ್ ಡ್ರಾ ಸಾಧಿಸಿದ್ದರು. ಆದರೆ ಗುರುವಾರ ನಡೆದ ಮೂರನೇ ಸುತ್ತಿನಲ್ಲಿ ಟೈ ಬ್ರೇಕರ್ನಲ್ಲಿ ಪ್ರಜ್ಞಾನಂದ ಸೋಲಿಗೆ ಶರಣಾದರು. ಈ ಟೈ ಬ್ರೇಕರ್ನ ಮೊದಲ ಗೇಮ್ನಲ್ಲಿ 1-0ರಲ್ಲಿ ಮುನ್ನಡೆ ಸಾಧಿಸಿದ್ದ ಕಾರ್ಲ್ಸನ್, 2ನೇ ಗೇಮ್ನಲ್ಲಿ ಡ್ರಾ ಸಾಧಿಸಿದರು. ಇದರಿಂದ ಮುನ್ನಡೆಯಲ್ಲಿದ್ದ ಕಾರ್ಲ್ಸನ್, ಜಯಭೇರಿ ಬಾರಿಸಿದರು. ಒಟ್ಟು ಚೆಸ್ ವಿಶ್ವಕಪ್ನಲ್ಲಿ 12 ಆವೃತ್ತಿಗಳು ಜರುಗಿದ್ದು, ಭಾರತಕ್ಕೆ 2 ಲಭಿಸಿದೆ. ಪ್ರಜ್ಞಾನಂದ ಗೆದ್ದಿದ್ದರೆ, ಭಾರತಕ್ಕೆ 3ನೇ ಪ್ರಶಸ್ತಿ ಸಿಗುತ್ತಿತ್ತು.
ಹಾಗಾದರೆ ಪ್ರತಿ ಎರಡು ವರ್ಷಕ್ಕೊಮ್ಮೆ ಜರುಗುವ ಈ ಚೆಸ್ ವಿಶ್ವಕಪ್ನಲ್ಲಿ ಯಾರು? ಯಾವಾಗ? ಪ್ರಶಸ್ತಿ ಗೆದ್ದಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.
- ಚೀನಾದ ಶೆನ್ಯಾಂಗ್ನಲ್ಲಿ 2000ರ ಸೆಪ್ಟೆಂಬರ್ನಲ್ಲಿ (ಸೆ.1 ರಿಂದ 13) ನಡೆದ ಚೊಚ್ಚಲ ಚೆಸ್ ವಿಶ್ವಕಪ್ನಲ್ಲೇ ಭಾರತದ ದಿಗ್ಗಜ ಆಟಗಾರ ವಿಶ್ವನಾಥನ್ ಆನಂದ್ ಚಾಂಪಿಯನ್ ಆಗಿದ್ದರು. ಈ ಆವೃತ್ತಿಯ ಫೈನಲ್ನಲ್ಲಿ ರಷ್ಯಾದ ಎವ್ಗೆನಿ ಬರೀವ್ ಅವರನ್ನು ಸೋಲಿಸಿದ್ದರು.
- ಭಾರತದ ಹೈದರಾಬಾದ್ನಲ್ಲಿ 2002ರ ಅಕ್ಟೋಬರ್ನಲ್ಲಿ (ಅ.9ರಿಂದ 22) ನಡೆದ ಎರಡನೇ ಆವೃತ್ತಿಯ ಚೆಸ್ ವಿಶ್ವಕಪ್ನಲ್ಲೂ ಭಾರತದ ವಿಶ್ವನಾಥನ್ ಆನಂದ್ ಅವರೇ ವಿಜೇತರಾಗಿದ್ದರು. ಅವರು ಉಜ್ಬೇಕಿಸ್ತಾನದ ರುಸ್ತಮ್ ಕಾಸಿಮ್ಜಾನೋವ್ ಎದುರು ಜಯಿಸಿದ್ದರು.
- ರಷ್ಯಾದ ಖಾಂಟಿ-ಮಾನ್ಸಿಸ್ಕ್ನಲ್ಲಿ 2005ರ ನವೆಂಬರ್-ಡಿಸೆಂಬರ್ನಲ್ಲಿ ಜರುಗಿದ 3ನೇ ಆವೃತ್ತಿಯ ಚೆಸ್ ವಿಶ್ವಕಪ್ನಲ್ಲಿ ಅಮೆರಿಕದ ಲೆವೊನ್ ಅರೋನಿಯನ್ ಅವರು ಉಕ್ರೇನ್ನ ರುಸ್ಲಾನ್ ಪೊನೊಮರಿವ್ ವಿರುದ್ಧ ಜಯಿಸಿ ಚಾಂಪಿಯನ್ ಆಗಿದ್ದರು.
- 2007ರಲ್ಲಿ ನಡೆದ ಟೂರ್ನಿಯಲ್ಲಿ ಅಮೆರಿಕದ ಗಾಟಾ ಕಾಮ್ಸ್ಕಿ ಅವರು ಪ್ರಶಸ್ತಿ ಗೆದ್ದಿದ್ದರು. ಈ ಟೂರ್ನಿ ಕೂಡ ರಷ್ಯಾದಲ್ಲೇ ನಡೆದಿತ್ತು. ಸ್ಪೇನ್ ಆಟಗಾರ ಅಲೆಕ್ಸಿ ಶಿರೋವ್ ರನ್ನರ್ ಅಪ್ ಆಗಿದ್ದರು.
- 2009ರಲ್ಲಿ ಇಸ್ರೇಲ್ನ ಬೋರಿಸ್ ಗೆಲ್ಫಾಂಡ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಉಕ್ರೇನ್ನ ರುಸ್ಲಾನ್ ಪೊನೊಮರಿವ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಈ ಟೂರ್ನಿಯೂ ರಷ್ಯಾದಲ್ಲೇ ನಡೆದಿತ್ತು.
- 2011ರ ಚೆಸ್ ವಿಶ್ವಕಪ್ನಲ್ಲೂ ರಷ್ಯಾದ ಪೀಟರ್ ಸ್ವಿಡ್ಲರ್ ಗೆಲುವು ದಾಖಲಿಸಿದ್ದರು. ರಷ್ಯಾದವರೇ ಆದ ಅಲೆಕ್ಸಾಂಡರ್ ಗ್ರಿಸ್ಚುಕ್ ರನ್ನರ್ ಅಪ್ ಆಗಿದ್ದರು. ಈ ಟೂರ್ನಿಯೂ ರಷ್ಯಾದಲ್ಲೇ ನಡೆದಿತ್ತು ಎಂಬುದು ವಿಶೇಷ.
- 2013ರಲ್ಲಿ ರಷ್ಯಾದ ವ್ಲಾಡಿಮಿರ್ ಕ್ರಾಮ್ನಿಕ್ ಅವರು ಜಯಿಸಿದ್ದರು. ಡಿಮಿಟ್ರಿ ಆಂಡ್ರೇಕಿನ್ ರನ್ನರ್ ಅಪ್ ಆಗಿದ್ದರು. ಈತ ಕೂಡ ರಷ್ಯಾದ ಆಟಗಾರನೇ ಆಗಿದ್ದ. ನಾರ್ವೆಯ ಟ್ರೋಮ್ಸೋದಲ್ಲಿ ಈ ಆವೃತ್ತಿ ಚೆಸ್ ವಿಶ್ವಕಪ್ ಗೆದ್ದಿತ್ತು.
- 2015ರ ಟೂರ್ನಿ ಅಜರ್ಬೈಜಾನ್ನ ಬಾಕುವಿನಲ್ಲಿ ನಡೆದಿತ್ತು. ರಷ್ಯಾದ ಸೆರ್ಗೆಯ್ ಕರ್ಜಾಕಿನ್ ಚಾಂಪಿಯನ್ ಆಗಿದ್ದರೆ, ರಷ್ಯಾದವರೇ ಆದ ಪೀಟರ್ ಸ್ವಿಡ್ಲರ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
- 2017 ಜಾರ್ಜಿಯಾದ ಟಿಬಿಲಿಸಿಯಲ್ಲಿ ನಡೆದ ಈ ಟೂರ್ನಿಯಲ್ಲಿ ಅಮೆರಿಕದ ಲೆವೊನ್ ಅರೋನಿಯನ್ ಅವರು 2ನೇ ವಿಶ್ವಕಪ್ ಗೆದ್ದರು. ಚೀನಾದ ಡಿಂಗ್ ಲಿರೆನ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
- 2019ರಲ್ಲಿ ಮತ್ತೆ ರಷ್ಯಾದಲ್ಲಿ ಟೂರ್ನಿ ನಡೆದಿತ್ತು. ಅಜರ್ಬೈಜಾನ್ನ ಟೀಮರ್ ರಾಡ್ಜಬೊವ್ ಚಾಂಪಿಯನ್ ಆಗಿದ್ದರೆ, ಚೀನಾದ ಡಿಂಗ್ ಲಿರೆನ್ ಮತ್ತೆ ರನ್ನರ್ ಅಪ್ ಆದರು.
- 2021ರ ರಷ್ಯಾದ ಸೋಚಿಯಲ್ಲಿ ಜರುಗಿದ ಟೂರ್ನಿಯಲ್ಲಿ ಪೋಲ್ಯಾಂಡ್ನ ಜಾನ್-ಕ್ರಿಸ್ಜ್ಟೋಫ್ ದುಡಾ ಪ್ರಶಸ್ತಿ ಗೆದ್ದರು. ರಷ್ಯಾದ ಸೆರ್ಗೆಯ್ ಕರ್ಜಾಕಿನ್ ರನ್ನರ್ ಅಪ್ ಆದರು.
- 2023ರಲ್ಲಿ ಅಜರ್ಬೈಜಾನ್ನ ಬಾಕುವಿನಲ್ಲಿ ನಡೆದ ಈ ಟೂರ್ನಿಯಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಜಯಿಸಿದ್ದಾರೆ. ಭಾರತದ ಆರ್ ಪ್ರಜ್ಞಾನಂದ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.