Chess World Cup: ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಪ್ರಜ್ಞಾನಂದಗೆ ವಿರೋಚಿತ ಸೋಲು; ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದ ಕಾರ್ಲ್ಸನ್
Aug 24, 2023 06:17 PM IST
ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಪ್ರಜ್ಞಾನಂದಗೆ ವಿರೋಚಿತ ಸೋಲು; ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದ ಕಾರ್ಲ್ಸನ್
- Chess World Cup 2023 Final: ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ ಫಿಡೆ ಚೆಸ್ ವಿಶ್ವಕಪ್ ರೋಚಕ ಫೈನಲ್ ಕದನದಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಭಾರತದ 18ರ ಪೋರ ಆರ್ ಪ್ರಜ್ಞಾನಂದ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಚಾಣಾಕ್ಷ ನಡೆ, ತಾಳ್ಮೆ, ಚತುರತೆ ಮತ್ತು ನಿಖರತೆಯ ಆಟವಾಡಿದರ ನಡುವೆಯೂ ಭಾರತದ ಕಿರಿಯ ಗ್ಯ್ರಾಂಡ್ ಮಾಸ್ಟರ್ ಪ್ರಜ್ಞಾನಂದ ವಿರೋಚಿತ ಸೋಲು ಕಂಡಿದ್ದಾರೆ. ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ ಫಿಡೆ ಚೆಸ್ ವಿಶ್ವಕಪ್ ರೋಚಕ ಫೈನಲ್ ಕದನದಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಭರ್ಜರಿ ಗೆಲುವು ದಾಖಲಿಸಿದ್ದು, ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ವಿಶ್ವದ ಚೆಸ್ ದಿಗ್ಗಜ, ನಂಬರ್ 1 ಶ್ರೇಯಾಂಕಿತ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಎದುರು ಎದೆಗುಂದದೆ ಕಾಯಿಗಳ ಚಲನೆ ನಡೆಸಿದ 18ರ ಪೋರ ಟೈ ಬ್ರೇಕರ್ ಸಮರದಲ್ಲಿ ಹೋರಾಡಿ ಶರಣಾದರು. ಪ್ರಜ್ಞಾನಂದ ಸೋತರೂ ಭಾರತದ ಕ್ರೀಡಾ ಪ್ರೇಮಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮ್ಯಾಗ್ನಸ್ ಕಾರ್ಲ್ಸನ್ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಪ್ರಜ್ಞಾನಂದ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಆರ್.ಪ್ರಜ್ಞಾನಂದ (R Praggnanandhaa) ಹಾಗೂ ಮ್ಯಾಗ್ನಸ್ ಕಾರ್ಲ್‌ಸೆನ್ ನಡುವಣ ಮೊದಲ ಎರಡು ಸುತ್ತಿನ ಪಂದ್ಯಗಳಲ್ಲಿ ಡ್ರಾ ಸಾಧಿಸಿತ್ತು. ಹೀಗಾಗಿ, ಫಲಿತಾಂಶ ನಿರ್ಧಾರಕ್ಕಾಗಿ ಇಂದು ನಡೆದ ಟೈ ಬ್ರೇಕರ್ನಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ವಿಶ್ವಕಪ್ ಫೈನಲ್‌ನಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾದ ಈ ಜೋಡಿಯ ಆಟ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತು. ಗೆಲುವು ಯಾರದ್ದಾಗುತ್ತದೆ ಎನ್ನುವುದನ್ನು ನಿರ್ಧರಿಸುವುದು ಕಷ್ಟವಾಗಿತ್ತು. ಅಷ್ಟರಮಟ್ಟಿಗೆ ಅಮೋಘ ಆಟವಾಡಿದರು. ಅದರಲ್ಲೂ ಭಾರತದ ಯುವ ಆಟಗಾರನ ಆಟ ಎಲ್ಲರನ್ನೂ ಮೋಡಿ ಮಾಡಿತು.
ಮೊದಲ ಗೇಮ್ನಲ್ಲಿ ಸೋಲು, 2ನೇ ಗೇಮ್ನಲ್ಲಿ ಡ್ರಾ
ಫೈನಲ್ ಪಂದ್ಯದ ಟೈಬ್ರೇಕರ್ ಪಂದ್ಯದ ಮೊದಲ ಗೇಮ್ ಸಮಬಲದ ಹೋರಾಟದಿಂದ ಕೂಡಿತ್ತು. 18ನೇ ಚಲನೆಯಲ್ಲಿ ಇಬ್ಬರೂ ಸಹ ತಮ್ಮ ರಾಣಿಯನ್ನು ಕಳೆದುಕೊಂಡರು. ಹಾಗಾಗಿ ಹೋರಾಟ ಬಿಗಿಯಾಯಿತು. 21 ನಡೆಗಳ ನಂತರ ಇಬ್ಬರೂ ಸುಸ್ಥಿತಿಯಲ್ಲಿದ್ದರು. ಆದರೆ, ಇಲ್ಲಿಂದ ಫಲಿತಾಂಶದಲ್ಲಿ ಕೊಂಚ ಏರುಪೇರಾಯಿತು. ಟೈಬ್ರೇಕರ್ನ ಕೊನೆಯ ಐದು ನಿಮಿಷಗಳಲ್ಲಿ ಪ್ರಜ್ಞಾನಂದ ಸಮತೋಲನ ಕಳೆದುಕೊಂಡರು.
ಆದರೆ ಈ ವೇಳೆ ಕಾರ್ಲ್ಸನ್ ಮುನ್ನಡೆ ಸಾಧಿಸಿದರು. ಪರಿಣಾಮ ಮತ್ತೆ ಅವರನ್ನು ಹಿಂದಿಕ್ಕಲು 18ರ ಪೋರ ಕಷ್ಟಪಡಬೇಕಾಯಿತು. ಹಾಗಾಗಿ ರೋಚಕತೆಯಿಂದ ಕೂಡಿದ್ದ ಸಮರದಲ್ಲಿ 47 ನಡೆಗಳಲ್ಲಿ ಪ್ರಜ್ಞಾನಂದ ಟೈ ಬ್ರೇಕರ್‌ನ ಮೊದಲ ಗೇಮ್ ಅನ್ನು ಕಳೆದುಕೊಂಡು 0-1ರಲ್ಲಿ ಹಿನ್ನಡೆ ಸಾಧಿಸಿದರು. ಎರಡನೇ ಗೇಮ್ನಲ್ಲೂ ಸಮಬಲದ ಹೋರಾಟ ಮುಂದುವರೆಯಿತು. ಇಬ್ಬರೂ ತಮ್ಮ ಕಾಯಿಗಳನ್ನು ಎಚ್ಚರಿಕೆಯಿಂದ ಮುನ್ನಡೆಸಿದರು. ಆದರೆ ಪ್ರಜ್ಞಾನಂದ ಗೆಲ್ಲುವಲ್ಲಿ ವಿಫಲರಾದರು.
2002ರಲ್ಲಿ ವಿಶ್ವನಾಥ್ ಆನಂದ್ ಗೆದ್ದಿದ್ದರು!
ವಿಶ್ವನಾಥನ್ ಆನಂದ್ ಬಳಿಕ ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದ 2ನೇ ಭಾರತೀಯ ಎನಿಸಿದ್ದ ಪ್ರಜ್ಞಾನಂದ ಅವರು 2000 ಹಾಗೂ 2002ರ ನಂತರ ಭಾರತಕ್ಕೆ ವಿಶ್ವಕಪ್ ಗೆದ್ದುಕೊಡುವಲ್ಲಿ ವಿಫಲರಾದರು. ಆದರೆ ಪ್ರಜ್ಞಾನಂದ ಅವರು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. 2000 ಮತ್ತು 2002ರಲ್ಲಿ ವಿಶ್ವನಾಥನ್ ಆನಂದ್ ವಿಶ್ವಕಪ್ ಗೆದ್ದಿದ್ದರು.
ಫೈನಲ್ನ ಮೊದಲೆರಡು ಸುತ್ತುಗಳು ಡ್ರಾ
ಬುಧವಾರ ನಡೆದಿದ್ದ ದ್ವಿತೀಯ ಸುತ್ತಿನಲ್ಲಿ ಕಾರ್ಲ್ಸನ್ ಬಿಳಿ ಕಾಯಿಗಳೊಂದಿಗೆ ಪಂದ್ಯವನ್ನು ಆರಂಭಿಸಿದ್ದರು. ಒಂದು ರೀತಿ ಯುದ್ಧದಂತೆ ಸಾಗಿದ ಈ ಪಂದ್ಯದಲ್ಲಿ ಆರಂಭಿಕ ಹಂತದಲ್ಲಿ ಕಾರ್ಲ್ಸನ್ ಉತ್ತಮ ನಡೆಗಳ ಮೂಲಕ ಭಾರತದ ಆಟಗಾರನಿಗೆ ತೀವ್ರ ಒತ್ತಡ ಹಾಕಿದ್ದರು. ಆದರೆ, 22 ನಡೆಗಳ ನಂತರವೂ ಪಂದ್ಯ ಸಮಬಲದಲ್ಲೇ ಸಾಗಿತ್ತು. ಕೊನೆಗೆ 30 ಚಲನೆಗಳ ನಂತರ ಪಂದ್ಯ ಡ್ರಾ ಆಯಿತು. ಮಂಗಳವಾರ ನಡೆದಿದ್ದ ಮೊದಲ ಸುತ್ತಿನಲ್ಲಿ ಒಂದು ಗಂಟೆಗೂ ಹೆಚ್ಚು ಪೈಪೋಟಿ ನಡೆದಿತ್ತು. ಕಾರ್ಲ್ಸನ್ಗೆ ಸೋಲುವ ಭೀತಿ ಹುಟ್ಟಿಸಿದ್ದ ಪ್ರಜ್ಞಾನಂದ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಆದರೆ 35 ನಡೆಗಳ ಬಳಿಕ ಇಬ್ಬರೂ ಆಟಗಾರರು ಡ್ರಾಗೊಳಿಸಿದ್ದರು.
3 ಟೈ ಬ್ರೇಕರ್ ಗೆದ್ದಿದ್ದ ಪ್ರಜ್ಞಾನಂದ
ಚೆಸ್ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಪ್ರಜ್ಞಾನಂದ 3 ಸಲ ಟೈ ಬ್ರೇಕರ್ನಲ್ಲಿ ಜಯಿಸಿದ್ದಾರೆ. ಲೀಗ್ ಹಂತದಲ್ಲಿ ವಿಶ್ವ ನಂಬರ್ 2 ಹಿಕರು ನಕಮುರಾ ಎದುರು, ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಅರ್ಜುನ್ ಎರಿಗೈಸಿ ವಿರುದ್ಧ ಟೈ ಬ್ರೇಕರ್‌ನ ಸಡನ್ ಡೆತ್‌ನಲ್ಲಿ ಜಯಿಸಿದ್ದರು. ನಂತರ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವ ನಂಬರ್ 3 ಫ್ಯಾಬಿಯಾನೋ ವಿರುದ್ಧ ಟೈ ಬ್ರೇಕರ್‌ನಲ್ಲೇ ಜಯಿಸಿ ಫೈನಲ್ಗೆ ಲಗ್ಗೆ ಇಟ್ಟಿದ್ದರು. ಆದರೆ, ಫೈನಲ್‌ನಲ್ಲಿ ಪ್ರಜ್ಞಾನಂದನಿಗೆ ಅದೃಷ್ಟ ಒಲಿಯಲಿಲ್ಲ.